ಹಣತೆಯ ಬೆಳಕು ಬದುಕಿಗೆ ಸ್ಪೂರ್ತಿ ತರಲಿ

ವಿಜಯವಾಣಿ (2)
Published on
(ಲೇಖಕರು, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ದೀಪಾವಳಿ ಬೆಳಕಿನ ಹಬ್ಬ, ಆನಂದದ ಹಬ್ಬ. ಜೀವನದಲ್ಲಿ ಹೊಸ ಉತ್ಸಾಹ, ಚೈತನ್ಯ ತುಂಬುವ ಹಬ್ಬ. ಅಂಧಕಾರವನ್ನು ದೂರೀಕರಿಸಿ, ಸುಜ್ಞಾನದ ಬೆಳಕನ್ನು ಜಗತ್ತಿಗೆ ಪಸರಿಸುವ ಹಬ್ಬ. ಇದು ಕೇವಲ ಧಾರ್ವಿುಕ ಅಥವಾ ಸಾಂಸ್ಕೃತಿಕ ಹಬ್ಬವಷ್ಟೇ ಅಲ್ಲ, ಭಾರತೀಯ ಸನಾತನ ಪದ್ಧತಿಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಹಬ್ಬವಾಗಿದೆ. ಒಂದು ಪುಟ್ಟ ಹಣತೆಯಲ್ಲಿ ಬೆಳಗುವ ದೀಪ ಬಾಹ್ಯ ಕತ್ತಲೆಯನ್ನು ಹೋಗಲಾಡಿಸುವ ಪ್ರಕ್ರಿಯೆ ಮಾತ್ರವಲ್ಲ, ನಮ್ಮ ಅಂತರಾತ್ಮದ ಕತ್ತಲೆಯನ್ನು ದೂರೀಕರಿಸಿ ಬೆಳಕನ್ನು ಪ್ರಜ್ವಲಿಸುವ ಆಧ್ಯಾತ್ಮಿಕ ಕ್ರಿಯೆಯೂ ಆಗಿದೆ. ಹಣತೆ ಬೆಳಗಿಸುವ ಕ್ಷಣದಲ್ಲಿ, ನಾವು ಕೇವಲ ಕತ್ತಲೆಯನ್ನು ದೂರಮಾಡುವುದಲ್ಲ ನಮ್ಮ ದುಃಖ, ದ್ವೇಷ ಮತ್ತು ಅಜ್ಞಾನವನ್ನೂ ಹೋಗಲಾಡಿಸುತ್ತೇವೆ. ಜೀವನದ ಉಜ್ವಲ ಮಾರ್ಗವನ್ನು ಹಣತೆ ಪ್ರತಿಬಿಂಬಿಸುತ್ತದೆ.

ಪುರಾಣೇತಿಹಾಸಗಳ ಮೂಲಕ ದೀಪಾವಳಿ ಹಬ್ಬದ ಪ್ರಾಮುಖ್ಯವನ್ನು ಗಮನಿಸುವುದಾದರೆ ದೀಪಾವಳಿಗೆ ಸಂಬಂಧಿಸಿದ ಅನೇಕ ಕಥೆಗಳು ಕಾಣುತ್ತವೆ. ರಾಮಾಯಣದಲ್ಲಿ ಶ್ರೀರಾಮನು ರಾವಣನನ್ನು ಸಂಹರಿಸಿ, ಸೀತಾಮಾತೆಯೊಂದಿಗೆ ಅಯೋಧ್ಯೆಗೆ ಹಿಂದಿರುಗುತ್ತಾನೆ. ಆ ಸಮಯದಲ್ಲಿ ಜನರು ಸಂತೋಷದಿಂದ ದೀಪ ಬೆಳಗಿಸಿ, ನಗರವನ್ನು ಬೆಳಕಿನಿಂದ ಅಲಂಕರಿಸುತ್ತಾರೆ. ಕತ್ತಲೆ, ಕಷ್ಟ-ಕಾರ್ಪಣ್ಯ ದೂರವಾಯಿತು, ಅಯೋಧ್ಯೆ ಬೆಳಗಿತು ಎಂಬ ಸಂಕೇತವೂ ಇದರಲ್ಲಿ ಅಡಗಿದೆ. ಇನ್ನು ಮಹಾಭಾರತದಲ್ಲಿ ಶ್ರೀಕೃಷ್ಣನು ಸತ್ಯಭಾಮೆಯ ಸಹಾಯದಿಂದ, ಜನರನ್ನು ಪೀಡಿಸುತ್ತಿದ್ದ ನರಕಾಸುರನನ್ನು ಸಂಹಾರ ಮಾಡುತ್ತಾನೆ. ಆ ದಿನವನ್ನು ನರಕ ಚತುರ್ದಶಿ ಎಂದು ಆಚರಿಸಿ, ಬೆಳಕಿನ ಹಬ್ಬವನ್ನು ಆರಂಭಿಸಿದರು ಎನ್ನುವ ಹಿನ್ನೆಲೆಯೂ ಇದೆ.

ಸಮುದ್ರಮಥನದ ಸಂದರ್ಭದಲ್ಲಿ ದೀಪಾವಳಿ ದಿನವೇ ಶ್ರೀ ಮಹಾಲಕ್ಷ್ಮೀ ಸಮುದ್ರದಿಂದ ಉದಯಿಸಿ ದೇವತೆಗಳಿಗೆ ಪ್ರತ್ಯಕ್ಷಳಾದಳು ಎಂಬ ಉಲ್ಲೇಖವಿದೆ. ಆದುದರಿಂದ ಈ ದಿನ ಲಕ್ಷ್ಮಿಪೂಜೆ ಮಾಡುವ ಸಂಪ್ರದಾಯವಾಗಿದೆ. ಇದು ಸಮೃದ್ಧಿ, ಶಾಂತಿ ಮತ್ತು ಧನಾತ್ಮಕತೆಯ ಪ್ರತೀಕವಾಗಿದೆ. ವಿಶೇಷವಾಗಿ ಕರಾವಳಿಯಲ್ಲಿ ಬಲಿ ಪಾಡ್ಯ ಆಚರಿಸಲಾಗುತ್ತದೆ. ವಾಮನ ಅವತಾರದಲ್ಲಿ ವಿಷ್ಣು ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತಳ್ಳಿ ಆತನ ಅಹಂಕಾರದ ನಾಶ ಮಾಡಿ, ವಿಜಯ ಸಾಧಿಸಿದ ಸಂಕೇತವಾಗಿದೆ. ಹೀಗೆ ದೀಪಾವಳಿ ಹಬ್ಬ ಪುರಾಣಗಳಲ್ಲಿ ವಿವಿಧ ರೂಪಗಳಲ್ಲಿ ಕಂಡುಬಂದರೂ, ಅದರ ಮೂಲ ತತ್ವ ಹಾಗೂ ಸಂದೇಶ ತಮಸೋ ಮಾ ಜ್ಯೋತಿರ್ಗಮಯ -ಅಂಧಕಾರದಿಂದ ಬೆಳಕಿನೆಡೆ ಸಾಗುವುದೇ ಆಗಿದೆ. ಅಧರ್ಮದ ಸೋಲು, ಅಸುರಿ ಶಕ್ತಿಗಳ ವಿನಾಶವಾಗಿದೆ.

ದೀಪಾವಳಿ ಹಬ್ಬ ಪ್ರಕೃತಿಯೊಂದಿಗೆ ಸಮ್ಮಿಳಿತವಾಗಿದೆ. ದೀಪಾವಳಿ ಸಮಯದಲ್ಲಿ ಕೃಷಿ ಕಾರ್ಯ ಮುಗಿದಿರುತ್ತದೆ. ಫಲದ ಅಪೇಕ್ಷೆಯಲ್ಲಿ ರೈತರು ಕಾತರರಾಗಿರುತ್ತಾರೆ. ಸಮೃದ್ಧಿಯ ಸಂಭ್ರಮವಿರುತ್ತದೆ. ಹಾಗಾಗಿ ಕೃಷಿ ಉಪಕರಣಗಳಿಗೆ, ಎತ್ತುಗಳು, ಗೋವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಗದ್ದೆಗಳಲ್ಲಿ ದೀಪಗಳನ್ನು ಬೆಳಗಿಸುವ ಸಂಪ್ರದಾಯವಿದೆ. ಮಣ್ಣಿನ ಹಣತೆಗಳನ್ನು ಬೆಳಗಿಸುವುದು ಪ್ರಕೃತಿ ಪೂಜೆಯ ಭಾಗವಾಗಿದೆ. ಪಂಚ ಭೂತಾತ್ಮಕವಾದ ಈ ಶರೀರದಿಂದ ಭೂಮಿ, ವಾಯು, ಜಲ, ಅಗ್ನಿ ಮತ್ತು ಆಕಾಶ ಎಂಬ ಪಂಚತತ್ವಕ್ಕೆ ಕೃತಜ್ಞತೆ ಸಲ್ಲಿಸುವ ಪ್ರತೀತಿ ಇದೆ. ಶುದ್ಧವಾದ ಪ್ರಕೃತಿಯಲ್ಲಿ ದೀಪ ಬೆಳಗಿಸಿ, ಮನಸ್ಸಿನಲ್ಲಿ ಶಾಂತಿ ಬೆಳಗಿಸುವುದೇ ನಿಜವಾದ ದೀಪಾವಳಿ.

ಸನಾತನ ಸಂಸ್ಕೃತಿಯ ಈ ಹಬ್ಬ ಈಗ ಜಗದಗಲ ಪಸರಿಸಿದೆ. ‘ವಸುಧೈವ ಕುಟುಂಬಕಂ’ ಎಂಬ ತತ್ವದ ಅನ್ವಯ ದೀಪಾವಳಿಯ ಬೆಳಕು ದೇಶದ ಗಡಿಗಳನ್ನು ದಾಟಿ, ವಿಶ್ವದ ಜನರ ಹೃದಯದಲ್ಲಿ ಬೆಳಗುತ್ತಿದೆ. ಈ ಹಬ್ಬವನ್ನು ಅಮೆರಿಕಾ, ಇಂಗ್ಲೆಂಡ್, ಕೆನಡಾ, ಆಸ್ಟ್ರೇಲಿಯಾ, ಮಲೇಶಿಯಾ, ನೇಪಾಳ ಸೇರಿದಂತೆ ಅನೇಕ ದೇಶಗಳಲ್ಲಿ ಉತ್ಸಾಹದಿಂದ ಆಚರಿಸುತ್ತಾರೆ. ನಾನು ಹಿಂದೆ ಸಿಂಗಾಪುರ ಪ್ರವಾಸ ಕೈಗೊಂಡಿದ್ದಾಗ ಅಲ್ಲಿ ‘ಲಿಟಲ್ ಇಂಡಿಯಾ’ ಪ್ರದೇಶಕ್ಕೆ ಭೇಟಿ ನೀಡಿದ್ದೆ. ಅಲ್ಲಿಯೂ ದೀಪಾವಳಿಯನ್ನು ಭಾರತೀಯ ಸಂಸ್ಕೃತಿ-ಸಂಪ್ರದಾಯದಂತೆ ವಿಜೃಂಭಣೆಯಿಂದ ಆಚರಿಸುತ್ತಾರೆ. ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ದೀಪಾವಳಿ ಆಚರಣೆಯಲ್ಲಿ ಭಾಗಿಯಾಗುತ್ತಾರೆ.

ಆರ್ಥಿಕತೆಗೆ ಉತ್ತೇಜನ: ದೀಪಾವಳಿ ದೇಶದ ಆರ್ಥಿಕತೆಗೂ ಹೊಸ ಉತ್ತೇಜನ ಒದಗಿಸುತ್ತದೆ. ದೇಶ ಮಾತ್ರವಲ್ಲದೆ ವಿದೇಶದ ಮಾರುಕಟ್ಟೆಗೂ ಜೀವ ತುಂಬುತ್ತದೆ. ವ್ಯಾಪಾರಿಗಳಿಗೆ ಹೊಸ ಹೂಡಿಕೆ, ಹೊಸ ಭರವಸೆ ಒದಗಿಸುತ್ತದೆ. ಹೂವು-ಹಣ್ಣು, ಬಟ್ಟೆ-ಬರೆ, ಪಟಾಕಿ-ಹಣತೆ, ಬಂಗಾರ, ವಜ್ರ-ವೈಢೂರ್ಯ, ಕಾರ್, ಬೈಕ್ ಇತರೆ ವಾಹನಗಳ ಖರೀದಿ ಹೀಗೆ ಕೋಟ್ಯಂತರ ರೂಪಾಯಿ ವ್ಯವಹಾರ ಈ ಸಂದರ್ಭದಲ್ಲಿ ನಡೆಯುತ್ತದೆ. ಹಬ್ಬದ ಅಂಗವಾಗಿ ರಿಯಾಯಿತಿ ದರದ ವ್ಯಾಪಾರ ಬಲು ಜೋರಾಗಿ ನಡೆಯುತ್ತದೆ. ಸಣ್ಣ ವ್ಯಾಪಾರಿಗಳಿಂದ ಹಿಡಿದು ದೊಡ್ಡ ಉದ್ದಿಮೆದಾರರವರೆಗೂ ದೀಪಾವಳಿ ಮಾರುಕಟ್ಟೆ ಒದಗಿಸುತ್ತದೆ.

ನಮ್ಮ ಮಾರುಕಟ್ಟೆಯ ಮೌಲ್ಯ, ವಿಸ್ತಾರ, ವ್ಯವಹಾರ, ಲಾಭವನ್ನು ಅರಿತು ಚೀನಾ, ಅಮೇರಿಕ ಇತರೆ ದೇಶಗಳು ತಮ್ಮ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡಿ ಲಾಭ ಗಳಿಸುತ್ತವೆ. ಭಾರತದ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಟಾಕಿ, ಗೂಡುದೀಪ, ವಿಶೇಷ ಆಲಂಕಾರಿಕ ವಸ್ತುಗಳನ್ನು ಚೀನಾ ಅತಿ ಅಗ್ಗವಾಗಿ ಮಾರಾಟ ಮಾಡಿ ಅತೀ ಹೆಚ್ಚು ಹಣ ಸಂಪಾದಿಸುತ್ತಿದೆ. ಇದರಿಂದಾಗಿ ದೇಸೀ ಮಾರುಕಟ್ಟೆಗೆ ಹೊಡೆತ ಬೀಳುತ್ತಿದೆ. ಮುಖ್ಯವಾಗಿ ಕರಕುಶಲ ಕಾರ್ವಿುಕರು, ಗುಡಿಕೈಗಾರಿಕೆ, ಸ್ವ ಉದ್ಯೋಗಿಗಳಿಗೆ, ಸಣ್ಣಪುಟ್ಟ ವ್ಯಾಪಾರಸ್ಥರಿಗೆ ವಿದೇಶಿ ಮಾರುಕಟ್ಟೆ ಜೊತೆ ಪೈಪೋಟಿ ನಡೆಸಲಾಗದೆ ಸಂಕಷ್ಟ ಎದುರಿಸುವ ಪರಿಸ್ಥಿತಿ ಒದಗಿದೆ. ಇದಕ್ಕೆ ಪರಿಹಾರವೆಂದರೆ ದೇಸೀ ಉತ್ಪನ್ನಗಳನ್ನು ಬೆಂಬಲಿಸಿ, ಖರೀದಿಸುವುದು, ಬಳಸುವುದು.

ದೇಸೀ ಉತ್ಪನ್ನಗಳನ್ನು ಖರೀದಿಸುವುದರಿಂದ ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುವುದಷ್ಟೇ ಅಲ್ಲ, ನಮ್ಮ ಸಂಸ್ಕೃತಿ ಮತ್ತು ಕೌಶಲಕ್ಕೆ ಮನ್ನಣೆ ಒದಗಿಸಿದಂತಾಗುತ್ತದೆ. ಹೊಸ ಬಟ್ಟೆ, ಅಲಂಕಾರ ವಸ್ತುಗಳು, ಸಿಹಿತಿಂಡಿಗಳು, ದೀಪಗಳು, ಮತ್ತು ಉಡುಗೊರೆಗಳನ್ನು ಖರೀದಿಸುವಾಗ ದೇಸೀ ವಸ್ತುಗಳೇ ನಮ್ಮ ಮೊದಲ ಆಯ್ಕೆಯಾದರೆ ಆ ವಸ್ತುಗಳ ಮೌಲ್ಯ ವೃದ್ಧಿ ಆಗುತ್ತದೆ ಮತ್ತು ಸಾವಿರಾರು ಸಣ್ಣ ಉದ್ಯಮಗಳು, ಸ್ಥಳೀಯ ಕಾರ್ವಿುಕರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ವ್ಯಾಪಾರಿಗಳು ಉದ್ಯೋಗ ಮತ್ತು ಆದಾಯ ಪಡೆಯುತ್ತಾರೆ. ಈ ಮೂಲಕ ದೇಸಿ ವಸ್ತುಗಳ ಮಾರುಕಟ್ಟೆ, ಕೈಗಾರಿಕೆಗೆ ವಿಶೇಷ ಚೈತನ್ಯ, ಉತ್ತೇಜನ ಒದಗಿಸಿದಂತಾಗುತ್ತದೆ. ಹೀಗೆ ಆತ್ಮನಿರ್ಭರ ಭಾರತ ಸಾಕ್ಷಾತ್ಕಾರವಾಗುವುದು.

ಗ್ರಾಮೀಣ ಮಹಿಳೆಯರಿಗೆ ಸ್ವ-ಉದ್ಯೋಗ ಕಲ್ಪಿಸಿ, ಅವರ ಮೂಲಕ ಉತ್ಕೃಷ್ಟ ಗುಣಮಟ್ಟದ ತಿಂಡಿ-ತಿನಿಸು, ದಿನಬಳಕೆ ವಸ್ತುಗಳು, ಬಟ್ಟೆ ಇತ್ಯಾದಿಗಳನ್ನು ಉತ್ಪಾದಿಸಿ ಅವುಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಕಾರ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳವು ‘ಸಿರಿ’ ಸಂಸ್ಥೆಯ ಮೂಲಕ ದಶಕಗಳ ಹಿಂದೆಯೇ ಪ್ರಾರಂಭಿಸಿದೆ. ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಅವಕಾಶ ಕಲ್ಪಿಸುವುದರ ಜೊತೆಗೆ ಗ್ರಾಹಕರಿಗೆ ಸ್ವದೇಶಿ ಉತ್ಪನ್ನಗಳನ್ನು ಪೂರೈಸಲಾಗುತ್ತಿದೆ. ಇದರಿಂದ ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗಿದೆ. ಹೀಗೆ ದೇಸೀ ಉತ್ಪನ್ನಗಳನ್ನು ಜನರು ಹೆಚ್ಚೆಚ್ಚು ಖರೀದಿಸಿದರೆ ದೇಶದ ಆರ್ಥಿಕತೆಗೆ ಬಲ ದೊರೆಯುವುದು. ಇದು ದೇಶದ ಪ್ರಗತಿಗೆ ಹೊಸ ಬೆಳಕು.

ದೀಪಾವಳಿ ಬೆಳಕಿನ ಹಬ್ಬ. ಅದು ಬದುಕನ್ನು ಬೆಳಗಿಸಬೇಕೆ ಹೊರತು ಅಂಧಕಾರಕ್ಕೆ ದೂಡಬಾರದು. ಯಾಕೆ ಈ ವಿಚಾರ ಹೇಳುತ್ತಿದ್ದೇನೆ ಎಂದರೆ, ಕೆಲವರು ಬೆಳಕಿನ ಹಬ್ಬದಂದು ಪಟಾಕಿ ಹೊಡೆಯುವ ನೆಪದಲ್ಲಿ ಅಜಾಗರೂಕತೆಯಿಂದ, ಸುರಕ್ಷತೆಯನ್ನು ನಿರ್ಲಕ್ಷಿಸಿ ಬದುಕನ್ನೇ ಅಪಾಯಕ್ಕೊಡ್ಡಿ ಅಂಧಕಾರವನ್ನು ಆಹ್ವಾನಿಸುತ್ತಾರೆ.

ರವಿ ಎಂಬ ಬಾಲಕನಿಗೆ ದೀಪಾವಳಿ ಬಂದ್ರೆ ತುಂಬ ಖುಷಿ. ದೀಪ ಹಚ್ಚುವುದು, ಸಿಹಿ ತಿನ್ನುವುದು, ಪಟಾಕಿ ಹೊಡೆಯುವುದು ಎಲ್ಲವನ್ನೂ ಅವನು ತುಂಬ ಇಷ್ಟಪಟ್ಟು ಮಾಡುತ್ತಿದ್ದ. ಕಳೆದ ವರ್ಷ ದೀಪಾವಳಿಯಲ್ಲಿ ಅವರ ಮನೆ ಹಣತೆಗಳ ಬೆಳಕಿನಿಂದ ಕಂಗೊಳಿಸಿತ್ತು. ಅಮ್ಮ, ಅಪ್ಪ, ಅಕ್ಕ ಎಲ್ಲರೂ ಸಂತೋಷದಿಂದ ಹಬ್ಬ ಆಚರಿಸುತ್ತಿದ್ದರು.

ರವಿ ತನ್ನ ಸ್ನೇಹಿತರ ಜೊತೆ ಪಟಾಕಿ ಹೊಡೆಯಲು ಹೊರಟ. ಎಲ್ಲರೂ ಸಣ್ಣ ಪಟಾಕಿಗಳನ್ನು ಹೊಡೆದು ಸಂತೋಷ ಪಡುತ್ತಿದ್ದರು. ಆದರೆ ರವಿ, ನಾನು ದೊಡ್ಡ ಬಾಂಬ್ ಹೊಡೆಯುತ್ತೇನೆ ಎಂದು ಹೇಳಿ, ತುಂಬಾ ಹತ್ತಿರ ಹೋಗಿ ಬೆಂಕಿ ಹಚ್ಚಲು ಮುಂದಾದ. ಆಗ ಅವನ ಅಕ್ಕ ಕಿರುಚಿದಳು, ‘ರವಿ! ಹತ್ತಿರ ಹೋಗಬೇಡ! ಪಟಾಕಿಗೆ ಬೆಂಕಿ ಹಚ್ಚಿ ದೂರ ನಿಲ್ಲಬೇಕು.’ ರವಿ ತಕ್ಷಣ ಹಿಂದಕ್ಕೆ ಸರಿದ. ಕೆಲ ಕ್ಷಣಗಳಲ್ಲಿ ಬಾಂಬ್ ಭಾರಿ ಸದ್ದು ಮಾಡಿತು. ರವಿ ಬೆಚ್ಚಿಬಿದ್ದ, ಅದೃಷ್ಟವಶಾತ್ ಗಾಯವಾಗಲಿಲ್ಲ. ಆ ರಾತ್ರಿ ಆತನ ಅಮ್ಮ ಹೇಳಿದರು, ‘ದೀಪಾವಳಿ ಬೆಳಕಿನ ಹಬ್ಬ, ಆದರೆ ಪಟಾಕಿ ಹೊಡೆಯುವಾಗ ಜಾಗರೂಕರಾಗಬೇಕು. ಬೆಳಕು ಸಂತೋಷ ಕೊಡಬೇಕು, ನೋವು ಕೊಡಬಾರದು’. ಅದಾದ ನಂತರ ರವಿ ಯಾವಾಗಲೂ ಪಟಾಕಿ ಹೊಡೆಯುವಾಗ ದೂರ ನಿಂತು, ಮುಂಜಾಗ್ರತೆ ವಹಿಸುತ್ತಿದ್ದ. ಅಲ್ಲದೆ, ಸಣ್ಣ ಮಕ್ಕಳು ಪಟಾಕಿಯಿಂದ ಅಪಾಯ ತಂದುಕೊಳ್ಳದಂತೆ ನೋಡಿಕೊಳ್ಳುತ್ತಿದ್ದ. ಇದು ಕಥೆಯಲ್ಲ. ನಮ್ಮ ಸುತ್ತಮುತ್ತ ನಡೆಯುವ ಪ್ರಸಂಗಗಳೇ ಆಗಿವೆ. ದೀಪಾವಳಿ ಸಂದರ್ಭದಲ್ಲಿ ಮಾಧ್ಯಮಗಳು ಎಷ್ಟೇ ಜಾಗೃತಿ ಮೂಡಿಸಿದರೂ ಪಟಾಕಿ ಸಿಡಿತದಿಂದ ಸಾವು-ನೋವುಗಳು, ಚಿಕ್ಕಮಕ್ಕಳು ದೃಷ್ಟಿ ಕಳೆದುಕೊಳ್ಳುವ ಬಗ್ಗೆ ಪ್ರತಿವರ್ಷ ವರದಿಯಾಗುತ್ತಲೇ ಇವೆ. ಎಲ್ಲರೂ ಇನ್ನಷ್ಟು ಜಾಗೃತರಾಗಬೇಕಾದ ಅಗತ್ಯವಿದೆ. ಪಟಾಕಿಯೊಂದಿಗೆ ಮೋಜು-ಮಸ್ತಿ ಸಲ್ಲದು. ಪಟಾಕಿ ಕ್ಷಣಿಕ ಆನಂದ ನೀಡಿದರೂ, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಉಸಿರಾಟದ ತೊಂದರೆ, ಕಣ್ಣಿಗೆ ಹಾನಿ ಮತ್ತು ಚರ್ಮದ ಅಲರ್ಜಿ ಉಂಟುಮಾಡುತ್ತದೆ. ಅಸ್ತಮಾ, ಹೃದಯದ ತೊಂದರೆ ಇರುವವರಿಗೆ, ಹಿರಿಯ ನಾಗರಿಕರಿಗೆ, ಎಳೆಯ ಮಕ್ಕಳಿಗೆ ಇದು ಅಪಾಯಕಾರಿ ಎಂಬುದು ಮರೆಯಬಾರದು. ಹಾಗಾಗಿ ಆರೋಗ್ಯಕ್ಕೂ-ಪರಿಸರಕ್ಕೂ ಹಿತವಾದ ಪರಿಸರಸ್ನೇಹಿ ಪಟಾಕಿಗಳ ಬಳಕೆ ಒಳ್ಳೆಯದು.

ದೀಪಾವಳಿಯು ಕುಟುಂಬ, ಬಂಧು-ಬಳಗ ಹಾಗೂ ಸಮುದಾಯದ ಸ್ನೇಹ, ಒಗ್ಗಟ್ಟನ್ನು ಹೆಚ್ಚಿಸುವ ಸಂದರ್ಭವಾಗಿದೆ. ನಾವು ಮನೆಗಳನ್ನು ದೀಪದಿಂದ, ಮನಗಳನ್ನು ಪ್ರೀತಿಯಿಂದ ಬೆಳಗಿಸಿ ಸಂತೋಷ, ಶಾಂತಿ ಹಂಚಬೇಕು. ಸತ್ಯ, ಧರ್ಮ ಮತ್ತು ನಂಬಿಕೆಯ ಬೆಳಕಿನಿಂದ ಜೀವನ ಮತ್ತು ಸಮಾಜವನ್ನು ಪ್ರಕಾಶಿಸುವಂತೆ ಮಾಡುವುದು ದೀಪಾವಳಿಯ ನಿಜವಾದ ಅರ್ಥ. ನಾವು ಬೆಳಗುವ ಪ್ರತಿಯೊಂದು ಹಣತೆಯ ಬೆಳಕು ಬದುಕಿಗೆ ಸ್ಪೂರ್ತಿ ತರಲಿ ಎಂದು ಆಶಿಸುತ್ತೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net