ಅಂತಾರಾಷ್ಟ್ರೀಯ ವಲಯ ಅಫ್ಘನ್ ಬಿಕ್ಕಟ್ಟನ್ನು ಬಗೆಹರಿಸಲಿ

Afghan 1
Published on

ಇಪ್ಪತ್ತು ವರ್ಷಗಳ ಹಿಂದೆ (2001 ಸೆಪ್ಟೆಂಬರ್ 11ರಂದು ) ಅಲ್ ಕೈದಾ ಉಗ್ರ ಸಂಘಟನೆಯು ನಾಲ್ಕು ವಿಮಾನಗಳನ್ನು ಅಪಹರಿಸಿ ಜಗತ್ತಿನ ಅತೀ ಎತ್ತರದ ಕಟ್ಟಡ ನ್ಯೂಯಾರ್ಕ್​ನ ವರ್ಲ್ಡ್ ಟ್ರೇಡ್ ಸೆಂಟರ್ ಮತ್ತು ವಾಷಿಂಗ್​ಟನ್ ಡಿ.ಸಿ.ಯ ಪೆಂಟಗಾನ್​ನ್ನು ಧ್ವಂಸಗೊಳಿಸಿತು. ವಿಶ್ವವನ್ನೇ ಬೆಚ್ಚಿಬೀಳಿಸಿದ ಈ ಭಯೋತ್ಪಾದಕ ದಾಳಿಯಲ್ಲಿ ಸಾವಿರಾರು ಅಮಾಯಕರು ಪ್ರಾಣ ಕಳೆದುಕೊಂಡರು.

ಅಮೆರಿಕದ ಆಗಿನ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಭಯೋತ್ಪಾದನೆ ವಿರುದ್ಧ ಸಮರವನ್ನು ಘೋಷಿಸಿದರು. ಅದರ ಭಾಗವಾಗಿ ಅಮೆರಿಕದ ಸೇನಾಪಡೆಯನ್ನು ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಲು, ಅಲ್ ಕೈದಾವನ್ನು ಹತ್ತಿಕ್ಕಲು ನಿಯೋಜಿಸಲಾಯಿತು. ಅಫ್ಘಾನ್ ಪುನರ್ ನಿರ್ವಣಕ್ಕಾಗಿ ಅಮೆರಿಕ ಸರ್ಕಾರ 2001 ರಿಂದ 2009ರವರೆಗೆ 38 ಶತಕೋಟಿ ಡಾಲರ್​ನ್ನು ಖರ್ಚು ಮಾಡಿತು. ಅಮೆರಿಕದ 33 ಸಾವಿರ ಸೈನಿಕರು ಅತ್ಯಾಧುನಿಕ ಯುದ್ಧೋಪಕರಣಗಳ ಮೂಲಕ ಸರಣಿ ಕಾರ್ಯಾಚರಣೆ ನಡೆಸಿದರು. ಈ ಮೂಲಕ ಉಗ್ರರನ್ನು ಸದೆಬಡಿದರು. ಪಾಕಿಸ್ತಾನದಲ್ಲೇ ಅವಿತುಕೊಂಡಿದ್ದ ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್​ನನ್ನು ಅಮೆರಿಕದ ಸೇನೆ 2011ರಲ್ಲಿ ಹೊಡೆದುರುಳಿಸುವಲ್ಲಿ ಯಶಸ್ವಿಯಾಯಿತು. ಆ ಬಳಿಕ ಅಂದಿನ ರಾಷ್ಟ್ರಪತಿ ಬರಾಕ್ ಒಬಾಮ 33 ಸಾವಿರ ಸೈನಿಕರನ್ನು ಹಂತ ಹಂತವಾಗಿ ವಾಪಸ್ ಕರೆಸಿಕೊಳ್ಳುವುದರ ಬಗ್ಗೆ ಮಾತುಕತೆ ಆರಂಭಿಸಿದರು. ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕಾರ್ಯಚರಣೆಗೆ ‘ಪೊಲೊಜ್ಡ್ ಅಫ್ಘಾನ ವಾರ್’ ಎಂದು ಮರುನಾಮಕರಣ ಮಾಡಿ ಅಫ್ಘಾನಿಸ್ತಾನದ ಪುನರ್ ನಿರ್ಮಾಣ ಮಾಡಲು ಭಾರತ ಸಹಾಯ ಮಾಡಬೇಕೆಂದು ಕೋರಿದರು.

ತನ್ನ ಎಲ್ಲ ಸೈನಿಕರನ್ನು ಹಿಂಪಡೆಯಲು ಅಮೆರಿಕ 2020 ನವೆಂಬರ್ 17ರಂದು ಯೋಜನೆ ರೂಪಿಸಿತು. ಟ್ರಂಪ್ ಬಳಿಕ ಅಧಿಕಾರಕ್ಕೇರಿದ ಜೋ ಬೈಡೆನ್ ಈ ವರ್ಷದ ಏಪ್ರಿಲ್ 14ರಂದು ಸೇನಾ ವಾಪಸಾತಿ ಬಗ್ಗೆ ಅಧಿಕೃತವಾಗಿ ಘೊಷಿಸಿದರು. ‘ನಾವು 20 ವರ್ಷಗಳ ಹಿಂದೆ ಒಂದು ಕಾರ್ಯಾಚರಣೆಗಾಗಿ ಅಫ್ಘಾನಿಸ್ಥಾನಕ್ಕೆ ತೆರಳಿದ್ದೆವು. ಅದು ಇವಾಗ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬಂದಾಗಿದೆ’ ಎಂದು ಅಮೆರಿಕ ಸಮಜಾಯಿಷಿ ನೀಡುತ್ತಿದೆ. ಆದರೆ ಒಂದು ದೇಶದ ಈ ‘ಯಶಸ್ಸು’ ಮತ್ತೊಂದು ದೇಶವನ್ನು ಸಂಕಷ್ಟಕ್ಕೆ ದೂಡಿ ಹೋಗಿದೆ. ಇದು ಎಷ್ಟರ ಮಟ್ಟಿಗೆ ಸರಿ?

ಭಾರತದ ಮುಂದಿನ ಹೆಜ್ಜೆ: ಭಾರತ ಮತ್ತು ಅಫ್ಘಾನಿಸ್ತಾನ ಐತಿಹಾಸಿಕ ಹಾಗೂ ಸಾಂಸ್ಕೃತಿಕವಾಗಿ ಬಹಳ ಆಳವಾದ ಸಂಬಂಧ ಹೊಂದಿವೆ. ಈ ಸಂಬಂಧ ಇನ್ನೂ ಗಟ್ಟಿಯಾಗಿದ್ದು, 2011 ಅಕ್ಟೋಬರ್​ನಲ್ಲಿ ಉಭಯ ದೇಶಗಳು ‘ದಿ ಸ್ಟ್ರೇಟಜಿಕ್ ಪಾಟ್ನರಶಿಪ್ ಅಗ್ರಿಮೆಂಟ್’ (ಖಕಅ) ಮಾಡಿಕೊಂಡಾಗ. ಉಭಯ ದೇಶಗಳ ಈ ಒಪ್ಪಂದದ ಪ್ರಕಾರ ಅಫ್ಘಾನಿಸ್ತಾನದ ಪುನರ್​ನಿರ್ವಣಕ್ಕೆ ಶಿಕ್ಷಣ ಮತ್ತು ತಾಂತ್ರಿಕ ನೆರವು ನೀಡುವುದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಅಫ್ಘಾನ್ ಸಾಮರ್ಥ್ಯ ಹೆಚ್ಚಿಸುವುದು, ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳಿಗೆ ಉತ್ತೇಜನ ನೀಡಿ ಭಾರತದಲ್ಲಿ ಸುಂಕಮುಕ್ತವಾಗಿ ರಫ್ತು ಮಾರುಕಟ್ಟೆಗೆ ಪರಿಚಯಿಸುವುದು, ಅಫ್ಘಾನಿಸ್ತಾನದ ಕರಕುಶಲ ವಸ್ತುಗಳ ಮಾರುಕಟ್ಟೆಯನ್ನು ವ್ಯಾಪಕವಾಗಿ ವಿಸ್ತರಿಸುವುದು ಮತ್ತು ಶಾಂತಿ, ಸೌಹಾರ್ದ, ಸಮನ್ವಯದೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೀರ್ಘಕಾಲದ ಬದ್ಧತೆ ಇರಿಸುವುದು. ಕ್ರಿಕೆಟ್ ಕೂಡ ಈ ಒಪ್ಪಂದದಲ್ಲಿ ಮುಖ್ಯವಾದ ಪಾತ್ರ ವಹಿಸಿತ್ತು. ತಾಲಿಬಾನ್ ಅಧಿಕಾರಕ್ಕೆ ಬರುವುದರೊಂದಿಗೆ ಅಫ್ಘಾನಿಸ್ತಾನದೊಂದಿಗಿನ ಭಾರತ ಬಾಂಧವ್ಯಕ್ಕೆ ಧಕ್ಕೆ ತರಲು ಚೀನಾ, ಪಾಕಿಸ್ತಾನ ಯತ್ನಿಸುತ್ತಿವೆ.

ತಾಲಿಬಾನಿಗಳ ಜಿಹಾದ್​ನ್ನು ಅನುಸರಿಸುವ ಉಗ್ರ ಸಂಘಟನೆಗಳಾದ ಜೈಶೆ ಮೊಹಮ್ಮದ್, ಲಷ್ಕರ್ ಇ ತೊಯ್ಬಾ, ಉಜಬೇಕಿಸ್ತಾನದ ಸೆಂಟ್ರಲ್ ಇಸ್ಲಾಮಿಕ್ ಮೂವಮೆಂಟ್ ಮತ್ತು ಹಿಜ್ ಉಬ್ ತಾಹಿರ್​ನಂಥ ಸಂಘಟನೆಗಳು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಗಡಿಭಾಗಗಳಲ್ಲಿ ತಮ್ಮದೇ ಆದ ಜಾಲ ಹೊಂದಿದ್ದು, ಭಾರತಕ್ಕೆ ಚಿಂತೆಗಿಡು ಮಾಡಿದೆ. ಈಗಾಗಲೇ ಚೀನಾ ತಾಲಿಬಾನ್ ಆಡಳಿತಕ್ಕೆ ಮಾನ್ಯತೆ ನೀಡಿದೆ. ಏಕೆಂದರೆ, ತಾಲಿಬಾನಿಗಳು ವಶಪಡಿಸಿಕೊಂಡಿರುವ ಬಹಳಷ್ಟು ಪ್ರದೇಶಗಳಲ್ಲಿ ಸಿಪಿಇಸಿಯಂಥ ಯೋಜನೆಗಳು ಪ್ರಗತಿಯಲ್ಲಿವೆ. ಇನ್ನೊಂದು ವರದಿ ಪ್ರಕಾರ, ಎರಡು ವಾರಗಳ ಹಿಂದೆ ಚೀನಾದ ಕಮ್ಯುನಿಸ್ಟ್ ಪಕ್ಷದ ಅಧಿಕಾರಿಗಳು ತಾಲಿಬಾನ್ ಮುಖಂಡರೊಂದಿಗೆ ಹಲವು ಸುತ್ತಿನ ರಹಸ್ಯ ಸಭೆಗಳನ್ನು ಈಶಾನ್ಯ ವಲಯದ ತಿನಂಜಿನ್​ನಲ್ಲಿ ನಡೆಸಿದ್ದಾರೆ. ಚೀನಾ ಈಗಾಗಲೇ ತಾಲಿಬಾನಿಗಳೊಂದಿಗೆ ಎಷ್ಟೊಂದು ನಿಕಟವಾಗಿದೆ ಎಂಬುದಕ್ಕೆ ಇದು ನಿದರ್ಶನ.

ಭವಿಷ್ಯ ನಿರ್ವಣ: ಅಪ್ಘಾನ್ ತಾಲಿಬಾನ್ ಕೈವಶವಾಗಿರುವುದರಿಂದ ನಾಳೆಗಳು ಹೇಗೆ ಎಂಬ ಆತಂಕ ಕಾಡುತ್ತಿದೆ. ಇದು ಪರಿಹಾರ ಶೋಧಿಸಬೇಕಾದ ಹೊತ್ತು. ಮುಖ್ಯವಾಗಿ, ಭಾರತ, ಇರಾನ್, ಮಧ್ಯ ಏಷ್ಯಾದ ದೇಶಗಳು ನಿರಾಶ್ರಿತರ ಹಿತ ಕಾಪಾಡಬೇಕು. ಮಾದಕದ್ರವ್ಯ ಜಾಲಗಳು ಹಾಗೂ ಜಿಹಾದಿಗಳ ಮೇಲೆ ನಿಗಾವಹಿಸಬೇಕು. ಪಾಕಿಸ್ತಾನದ ಮೇಲೆ ಒತ್ತಡ ಹೇರಿ ಅದು ತನ್ನ ಹಳೆಯ ಚಾಳಿಯನ್ನು ಮುಂದುವರಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು.

ಪಾಕಿಸ್ತಾನದ ಮೇಲೆ ಪ್ರಾದೇಶಿಕ ಶಕ್ತಿಗಳು ಒತ್ತಡ ಹೇರದಿದ್ದರೆ ಅಫ್ಘಾನಿಸ್ತಾನದಲ್ಲಿ 1990 ದಶಕದ ಸ್ಥಿತಿ ಮರುಕಳಿಸುತ್ತದೆ. ಅಫ್ಘಾನಿಸ್ತಾನದ ಜನತೆ ಭಾರತದ ಕಡೆ ನಿರೀಕ್ಷೆಯ ಕಂಗಳಿಂದ ನೋಡುತ್ತಿದ್ದು, ಜಗತ್ತಿನ ಬಹುತೇಕ ದೇಶಗಳು ಕೂಡ ಈ ಬಿಕ್ಕಟ್ಟನ್ನು ಭಾರತ ಯಾವ ರೀತಿಯಾಗಿ ಬಗೆಹರಿಸುತ್ತದೆ ಎಂದು ಗಮನಿಸುತ್ತಿವೆ. ಈ ಹೊತ್ತಲ್ಲಿ ಅಂತಾರಾಷ್ಟ್ರಿಯ ಮಟ್ಟದಲ್ಲಿ ಭಾರತ ಪ್ರಮುಖ ಪಾತ್ರವಹಿಸಬೇಕಿದೆ.

(ಲೇಖಕರು ಅಂತಾರಾಷ್ಟ್ರೀಯ ವಿದ್ಯಮಾನ ವಿಭಾಗದ ಪದವಿ ವಿದ್ಯಾರ್ಥಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net