

ಶ್ರೀರಾಮಚಂದ್ರ-ಸೀತೆ ಎದುರಿಸಿದ ಸಂದರ್ಭಗಳು, ಅವರ ತಾಳ್ಮೆ, ಸಹನೆ ಹಾಗೂ ಪರಿಸ್ಥಿತಿಯನ್ನು ನಿಭಾಯಿಸುವ ಮನಃಸ್ಥಿತಿ ಎಲ್ಲವೂ ಮೆಚ್ಚುವಂಥವುಗಳು ಮತ್ತು ನಮಗೂ ಪ್ರೇರಣೆ ಉಂಟು ಮಾಡುವಂಥವುಗಳು. ಕಷ್ಟಗಳು ಹೇಗೆ ಬರುತ್ತವೆ ಎಂಬುದನ್ನು ಸ್ವತಃ ಅನುಭವಿಸಿದ್ದರ ಪರಿಣಾಮವಾಗಿಯೇ ಆತನಿಗೆ ರಾಮರಾಜ್ಯ ನಿರ್ಮಾಣ ಮಾಡಲು ಸಾಧ್ಯವಾಯಿತು.
ಅಯೋಧ್ಯೆಯಲ್ಲಿ ನಿರ್ವಿುಸಲಾದ ರಾಮ ಮಂದಿರವು ಬಹಳ ಆಕರ್ಷಕ ವಾಗಿದೆ ಮಾತ್ರವಲ್ಲದೆ ಹಲವು ವೈವಿಧ್ಯತೆಯನ್ನು ಹೊಂದಿದೆ. ಭಾರತೀಯ ನಾಗರ ಶೈಲಿಯ ವಾಸ್ತು್ತಶೈಲಿಯನ್ನು ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನದ ಮಿಳಿತದೊಂದಿಗೆ ನಿರ್ವಿುಸಲಾಗಿದೆ. ಇದರಲ್ಲಿ ಕಬ್ಬಿಣವನ್ನು ಬಳಸಲಾಗಿಲ್ಲ.
ರಾಮಮಂದಿರವು 2.7 ಎಕರೆ ಭೂ ಪ್ರದೇಶದಲ್ಲಿ 161 ಅಡಿ ಎತ್ತರ, 235 ಅಡಿ ಅಗಲ ಮತ್ತು ಒಟ್ಟು 360 ಅಡಿ ಉದ್ದವಿದೆ. ಕಟ್ಟಡವು ಮೂರು ಅಂತಸ್ತಿನ ರಚನೆಯಾಗಿದೆ. ಪ್ರಾಚೀನ ಭಾರತದ ಎರಡು ವಿಶಿಷ್ಟ ದೇವಾಲಯ-ನಿರ್ವಣ ಶೈಲಿಗಳಲ್ಲಿ ಈ ನಾಗರ ಶೈಲಿ ಒಂದಾಗಿದೆ. ಕಳೆದ 30 ವರ್ಷದಿಂದ ಸಂಗ್ರಹಿಸಿದ ಇಟ್ಟಿಗೆಗಳನ್ನು ಬಳಸಲಾಗಿದೆ. ಮತ್ತು ಅವುಗಳ ಮೇಲೆ ವಿವಿಧ ಭಾಷೆಗಳಲ್ಲಿ ರಾಮ ದೇವರ ಹೆಸರನ್ನು ಕೆತ್ತಲಾಗಿದೆ. ಅಮೃತಶಿಲೆಯನ್ನು ಬಳಸಿಕೊಂಡು ಗರ್ಭಗುಡಿಯ ಒಳಭಾಗವನ್ನು ಸುಂದರವಾಗಿ ನಿರ್ವಿುಸಲಾಗಿದೆ. 1000 ವರ್ಷಗಳವರೆಗೆ ಬಾಳ್ವಿಕೆ ಬರುವಂತೆ ಹಾಗೂ ಭೂಕಂಪ ಮತ್ತಿತರ ಪ್ರಾಕೃತಿಕ ವಿಕೋಪಗಳು ಉಂಟಾದರೂ ಮಂದಿರವು ಹಾನಿಯಾಗದಂತೆ ನಿರ್ಮಾಣ ಕಾರ್ಯ ಮಾಡಿದ್ದಾರೆ. ವಿಶೇಷವೆಂದರೆ ಪ್ರತಿ ರಾಮನವಮಿ ದಿನದಂದು ಮಧ್ಯಾಹ್ನ ವಿಗ್ರಹದ ಹಣೆಯ ಮೇಲೆ ಸೂರ್ಯನ ಬೆಳಕು ತಿಲಕದಂತೆ ಬೀಳುವ ಹಾಗೆ ಮಂದಿರವನ್ನು ವಿನ್ಯಾಸಗೊಳಿಸಿರುವುದು ಭಾರತೀಯ ವಾಸ್ತುಶಿಲ್ಪಿಗಳ ಚಾಕಚಕ್ಯತೆ ಎನ್ನಬಹುದು.
ಮಂದಿರದ ಎದುರುಗಡೆ ಗರುಡ ಮತ್ತು ಆಂಜನೇಯನ ಮೂರ್ತಿಯನ್ನು ಇರಿಸಿದ್ದಾರೆ. ಗರ್ಭಗುಡಿಯಲ್ಲಿ ನಮ್ಮ ಮೈಸೂರಿನವರೇ ಆದ ಅರುಣ್ ಅವರು ಕಡೆದ ಬಾಲರಾಮ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಆ ಮೂರ್ತಿಯ ಮುಖಲಕ್ಷಣ ತುಂಬ ಚೆನ್ನಾಗಿದೆ. ರಾಮಲಲ್ಲಾ ರೀತಿಯಲ್ಲಿ ಮೂರ್ತಿಯನ್ನು ಕಡೆದಿದ್ದರೂ ಮೂರ್ತಿಯ ಮುಖವು ತಾಳ್ಮೆ, ಶಾಂತಿ, ದಯೆ, ಸಹನೆ ಎಲ್ಲವನ್ನೂ ಹೊಂದಿರುವ ನಗುಮೊಗವಾಗಿದೆ. ಕಣ್ಣುಗಳು ಆಕರ್ಷಕವಾಗಿದ್ದು ಮತ್ತೆ ಮತ್ತೆ ನೋಡಬೇಕೆಂಬ ದಿವ್ಯ ಅನುಭೂತಿ ಉಂಟಾಗುತ್ತದೆ. ನಮಗರಿವಿಲ್ಲದಂತೆ ಭಕ್ತಿ-ಭಾವ ಸ್ಪುರಿಸುತ್ತದೆ. ಅರುಣ್ರವರು ಬಹಳಷ್ಟು ಕಷ್ಟಪಟ್ಟು, ಸವಾಲುಗಳನ್ನು ಎದುರಿಸಿ ಮೂರ್ತಿಗೆ ಜೀವ ತುಂಬಿದ್ದಾರೆ.
ರಾಮ ಎಲ್ಲರಿಂದಲೂ ಪೂಜಾರ್ಹ, ಗೌರವಾರ್ಹ ಮತ್ತು ಎಲ್ಲರಿಂದಲೂ ಆದರ್ಶ ಪುರುಷನೆಂದು ಏಕೆ ಕರೆಸಿಕೊಳ್ಳುತ್ತಾನೆಂದರೆ ಸಹನೆ, ತಾಳ್ಮೆ ಮತ್ತು ಪಿತೃವಾಕ್ಯ ಪರಿಪಾಲನೆ ಮುಂತಾದ ಸದ್ಗುಣಗಳಿಂದಾಗಿ. ಇರಲು ಅರಮನೆ, ಸಾಕಷ್ಟು ಪರಿಚಾರಕರು, ಐಷಾರಾಮಿ ಜೀವನ ನಡೆಸಿದ ರಾಜಕುಮಾರನಿಗೆ ಇದ್ದಕ್ಕಿದ್ದಂತೆ ಎಲ್ಲವನ್ನೂ ತೊರೆದು ಕಾಷಾಯ ಧರಿಸಿ ಕಾಡಿಗೆ ಹೋಗು ಎಂದಾಗ ಹೇಗೆ ಆಗಿರಬೇಡ?. ನಮಗೆಯೇ ದಿನವೂ ಬೈಕ್-ಕಾರ್ನಲ್ಲಿ ಓಡಾಡುತ್ತಿದ್ದರೆ ಒಂದು ದಿನ ಕಾರು, ಬೈಕ್ ಇಲ್ಲವೆಂದರೆ ಕೈ ಕಾಲೇ ಓಡುವುದಿಲ್ಲ. ಇನ್ನು ಆತನ ಪರಿಸ್ಥಿತಿಯನ್ನು ಒಮ್ಮೆ ಊಹಿಸಿಕೊಳ್ಳಿ. ಬಹುಶಃ ಈಗಿನ ಕಾಲದಲ್ಲಿ ತಂದೆ ಮಗನನ್ನು ಮನೆ ಬಿಟ್ಟು ಹೊರಡು ಎಂದಾಗ ಅಲ್ಲಿ ಜಗಳ, ಗುಂಪುಗಾರಿಕೆ ಮಾತ್ರವಲ್ಲದೆ ಕೋರ್ಟು, ಪೊಲೀಸ್ ಸ್ಟೇಷನ್ ಎಂದೆಲ್ಲ ಬರಬಹುದೋ ಏನೋ. ಆದರೆ ಶ್ರೀರಾಮನು ತಂದೆ ದಶರಥನ ಮಾತಿನಂತೆ ಎಲ್ಲವನ್ನೂ ತೊರೆದು ವನವಾಸಕ್ಕೆ ಮುಂದಾದ.
ಆಗ ರಾಮನ ಬಳಿ ದಶರಥನು ಗೋಳಾಡುತ್ತಾನೆ. ‘ನಿನಗೆ ನಾನು ಅನ್ಯಾಯ ಮಾಡಿದೆ. ಕೈಕೇಯಿಗೆ ಕೊಟ್ಟ ಮಾತಿನಂತೆ ನಾನು ನಡೆಯಲೇ ಬೇಕಾಗಿದೆ. ಇಲ್ಲವಾದಲ್ಲಿ ನಾನು ವಚನಭ್ರಷ್ಟನಾಗುತ್ತೇನೆ ಮತ್ತು ಅದಕ್ಕಾಗಿ ಘೊರ ನರಕವನ್ನು ಅನುಭವಿಸಬೇಕಾಗುತ್ತದೆ. ಆಕೆಗೆ ಕೊಟ್ಟ ಮಾತಿನಂತೆ ನಿನ್ನನ್ನು ವನವಾಸಕ್ಕೆ ಕಳುಹಿಸದೆ ವಿಧಿಯಿಲ್ಲ ಏನು ಮಾಡಲಿ’ ಎಂದಾಗ, ರಾಮನು ಸ್ವತಃ ತಂದೆಗೆ ಸಮಾಧಾನದ ಮಾತುಗಳನ್ನು ಹೇಳುತ್ತಾನೆ. ‘ನೀವು ಅದರ ಬಗ್ಗೆ ಚಿಂತೆ ಮಾಡಬೇಡಿ. ನಾನು ನಿಮ್ಮ ಗೌರವ, ವಂಶದ ಗೌರವ ಮತ್ತು ರಾಜಮಾತೆಗೆ ಕೊಟ್ಟ ಮಾತಿನ ಗೌರವವನ್ನು ಉಳಿಸುವುದಕ್ಕಾಗಿ ವನವಾಸಕ್ಕೆ ಹೋಗುತ್ತೇನೆ’ ಎಂದು ಹೇಳುತ್ತಾನೆ.
ಶ್ರೀರಾಮ ವನವಾಸ ಹೋಗುತ್ತಿದ್ದಾನೆ ಎಂದು ಸುದ್ದಿ ತಿಳಿದ ಅನೇಕರು ರಾಮನನ್ನು, ‘ವನವಾಸ ಮಾಡುವಂಥ ಯಾವ ಮಹಾಪರಾಧ ನಿನ್ನಿಂದ ಆಗಿದೆ? ಯಾಕಾಗಿ ಈ ವನವಾಸ?’ ಎಂದೆಲ್ಲ ಪ್ರಶ್ನಿಸತೊಡಗುತ್ತಾರೆ. ಆಗ ರಾಮನು, ‘ನನಗೆ ಅದ್ಯಾವುದೂ ತಿಳಿದಿಲ್ಲ. ನನ್ನ ತಂದೆ ಕೊಟ್ಟ ಮಾತನ್ನು ನೆರವೇರಿಸುವುದಕ್ಕಾಗಿ ವನವಾಸ ಕೈಗೊಳ್ಳುತ್ತಿದ್ದೇನೆ’ ಎಂದೆನ್ನುತ್ತಾನೆ.
ರಾಜಕುಮಾರನಾಗಿದ್ದ ಶ್ರೀರಾಮ ಡೇರೆ, ಆಳು-ಕಾಳುಗಳೊಂದಿಗೆ ವನವಾಸ ಮಾಡಲಿಲ್ಲ. ರಾಜಪೋಷಾಕನ್ನು ಬಿಟ್ಟು ಸಾಧಾರಣ ಬಟ್ಟೆಯನ್ನು ಧರಿಸಿ ಮೃದುವಾದ ಬರಿಗಾಲಲ್ಲಿಯೇ ಸೀತೆ, ಲಕ್ಷ್ಮಣನೊಂದಿಗೆ ಕಾಡಿನತ್ತ ಹೊರಟ. ಕಾಡಿನಲ್ಲಿ ಅಲ್ಲಲ್ಲಿ ಲಕ್ಷ್ಮಣನು ಕುಟೀರಗಳನ್ನು ನಿರ್ವಿುಸುತ್ತಾನೆ. ನೆಲದ ಮೇಲೆ ಮಲಗಿ ಅಭ್ಯಾಸವಿಲ್ಲದ ಸೀತಾರಾಮರು ಸೊಪ್ಪುಗಳನ್ನು ಹಾಸಿ ಅದರ ಮೇಲೆ ಮಲಗುತ್ತಿದ್ದರು. ಪ್ರಶಾಂತ ವಾತಾವರಣದಲ್ಲಿ ಮಲಗು ತ್ತಿದ್ದವರು ವನ್ಯಮೃಗಗಳ ಕೂಗುಗಳ ನಡುವೆ ಭಯದಿಂದ ಇರಬೇಕಿತ್ತು.
ಶ್ರೀರಾಮನು ಸಾಮಾನ್ಯರಲ್ಲಿ ತೋರುತ್ತಿದ್ದ ಪ್ರೀತಿಯ ಸಂದರ್ಭಗಳು ನೆನಪಿಗೆ ಬರುತ್ತವೆ. ಶ್ರೀರಾಮನು ಅಯೋಧ್ಯೆಯಿಂದ ವನವಾಸಕ್ಕೆ ಹೋಗುತ್ತಿದ್ದ ಆರಂಭದಲ್ಲಿ, ನದಿಯನ್ನು ದಾಟಿ ಹೋಗಬೇಕಿತ್ತು. ಆಗ ಅಲ್ಲಿ ಗುಹಾ ಎಂಬಾತನೊಬ್ಬ ದೋಣಿ ನಡೆಸುವವನಿದ್ದ. ಆತನಲ್ಲಿ ನದಿಯ ಆ ದಡಕ್ಕೆ ದೋಣಿಯಲ್ಲಿ ಸಾಗಿಸುವಂತೆ ಕೇಳಿಕೊಂಡಾಗ ಗುಹಾ, ‘ದೋಣಿ ಹತ್ತುವ ಮುನ್ನ ನಿಮ್ಮ ಪಾದ ತೊಳೆಯುತ್ತೇನೆ’ ಎಂದೆನ್ನುತ್ತಾನೆ. ಆಗ ರಾಮನು ಯಾಕೆ? ಎಂದಾಗ ‘ನಿಮ್ಮ ಕಾಲಿನ ಸ್ಪರ್ಶದಿಂದ ಕಲ್ಲೊಂದು ಹೆಣ್ಣಾದ ಬಗ್ಗೆ ನನಗೆ ತಿಳಿದಿದೆ. ಒಂದು ವೇಳೆ ನಿಮ್ಮ ಕಾಲು ತಾಗಿ ನನ್ನ ದೋಣಿ ಕೂಡ ಹೆಣ್ಣಾದರೆ...’ ಎಂದನು. ರಾಮನು ನಕ್ಕು- ‘ಹಾಗೇನೂ ಆಗದು. ಅದು ಬೇರೊಂದು ಸಂದರ್ಭ’ ಎಂದು ಅಹಲ್ಯೆಯ ಶಾಪ ವಿಮೋಚನೆಯ ಬಗ್ಗೆ ಹೇಳಿ ಆತನ ಮನದಲ್ಲಿದ್ದ ದುಗುಡವನ್ನು ದೂರ ಮಾಡುತ್ತಾನೆ. ಜೊತೆಗೆ ತನ್ನ ಪಾದಪೂಜೆ ಮಾಡಲು ಆತ ಹೀಗೆ ಮಾಡುತ್ತಿದ್ದಾನೆ ಎಂದು ಅರ್ಥ ಮಾಡಿಕೊಳ್ಳುತ್ತಾನೆ. ಗುಹಾ ತನ್ನ ಮೇಲಿಟ್ಟಿರುವ ಮುಗ್ಧಭಕ್ತಿಯನ್ನು ರಾಮನು ಮೆಚ್ಚಿಕೊಳ್ಳುತ್ತಾನೆ. ಸೀತೆ, ಲಕ್ಷ್ಮಣರೊಂದಿಗೆ ರಾಮನು ನದಿಯನ್ನು ದಾಟುತ್ತಾನೆ.
ಶಬರಿ ವೃದ್ಧ ಮಹಿಳೆ. ಒಂದಲ್ಲ ಒಂದು ದಿನ ಶ್ರೀರಾಮನು ತನಗೆ ದರ್ಶನ ನೀಡಿಯೇ ನೀಡುತ್ತಾನೆ ಎಂದು ಕಾಯುತ್ತಿದ್ದ ಹಿರಿಯ ಜೀವವದು. ದಿನವೂ ಶಬರಿಯು ಊರುಗೋಲಿನ ಸಹಾಯದಿಂದ ಹೊರಗೆ ಹೋಗಿ ಹಣ್ಣುಗಳನ್ನು ತರುತ್ತಿದ್ದಳು. ಹೀಗೆ ಒಂದಿಷ್ಟು ಹಣ್ಣುಗಳನ್ನು ಸಂಗ್ರಹಿಸಿ ಶಬರಿಯು ಆಶ್ರಮಕ್ಕೆ ಹಿಂತಿರುಗಿ ರಾಮನ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದಳು. ಶ್ರೀರಾಮನು ಶಬರಿಯ ಪುಟ್ಟ ಗುಡಿಸಿಲಿನತ್ತ ತೆರಳುತ್ತಾನೆ. ಆಗ ಶಬರಿಯು ರಾಮನನ್ನು ಕೈ ಹಿಡಿದುಕೊಂಡು ಪ್ರೀತಿಯಿಂದ ಜಗಲಿಯಲ್ಲಿ ಕುಳ್ಳಿರಿಸುತ್ತಾಳೆ. ತಾನು ಕೊಯ್ದು ತಂದ ಹಣ್ಣುಗಳನ್ನು ಕಚ್ಚಿ, ಸಿಹಿಯಾಗಿದೆಯೇ ಎಂದು ಪರೀಕ್ಷಿಸಿ ರಾಮನಿಗೆ ತಿನ್ನಲು ನೀಡುತ್ತಾಳೆ. ಆಗ ಲಕ್ಷ್ಮಣನಿಗೆ ಕೋಪ ಬರುತ್ತದೆ. ಎಂಜಲು ಮಾಡಿದ ಹಣ್ಣನ್ನು ತಿನ್ನುವುದೇ ಎಂದಾಗ, ಶ್ರೀರಾಮನು ‘ನಾನು ಇದುವರೆಗೆ ಸವಿದ ಹಣ್ಣುಗಳಲ್ಲಿ ಇಷ್ಟು ರುಚಿಯಾಗಿರುವಂಥದ್ದನ್ನು ತಿಂದೇ ಇರಲಿಲ್ಲ. ಅಲ್ಲದೆ ನನಗೆ ನೀಡುವ ಹಣ್ಣು ಸಿಹಿಯಾಗಿರಬೇಕು, ಕಹಿ-ಹುಳಿಯಾಗಿರಬಾರದು, ನನಗೆ ಒಂದಿನಿತೂ ಕಷ್ಟವಾಗಬಾರದು ಎಂದು ಪರೀಕ್ಷಿಸಿ ಕೊಡುತ್ತಿದ್ದಾಳೆ’ ಎಂದೆನ್ನುತ್ತಾನೆ. ಶಬರಿಯ ನಿಷ್ಕಲ್ಮಷ ಪ್ರೀತಿ, ಪ್ರಾಮಾಣಿಕ ಭಕ್ತಿಗೆ ಪ್ರಸನ್ನನಾದ ರಾಮನು ಅವಳನ್ನು ಅನುಗ್ರಹಿಸುತ್ತಾನೆ.
ಇಂಥ ಸಂದರ್ಭದಲ್ಲಿ ಪತ್ನಿಯನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಅಂದರೆ ಸೀತೆಯನ್ನು ರಾವಣ ಅಪಹರಿಸುತ್ತಾನೆ. ಆಗ ದುಃಖದ ಮಡುವಿನಲ್ಲಿದ್ದುಕೊಂಡು ನೊಂದುಕೊಂಡರೂ, ಶಾಂತಚಿತ್ತನಾಗಿ ಪರಿಸ್ಥಿತಿಯನ್ನು ಎದುರಿಸುತ್ತಾನೆ. ಕಾಡಿನಲ್ಲಿ ವಾನರ ಸೇನೆಯ ಸಹಾಯದಿಂದ ಸೀತೆಯನ್ನು ಹುಡುಕಲು ತೊಡಗುತ್ತಾನೆ. ಕೊನೆಗೆ ಸೀತೆಯು ಲಂಕೆಯಲ್ಲಿದ್ದಾಳೆಂದು ತಿಳಿದು ಅಲ್ಲಿಗೆ ಹನುಮಂತನನ್ನು ಕಳುಹಿಸುತ್ತಾನೆ. ಆಗ ಸೀತೆಯನ್ನು ಭೇಟಿಯಾದ ಹನುಮಂತನು, ‘ಸೀತಾಮಾತೆ, ನಿನ್ನನ್ನು ನನ್ನ ಬಾಹುವಿನ ಮೇಲೆ ಕುಳ್ಳಿರಿಸಿಕೊಂಡು ಕರೆದೊಯ್ದು ಪ್ರಭುವಿನೊಂದಿಗೆ ಸೇರಿಸಿ ಬಿಡುತ್ತೇನೆ’ ಎನ್ನುತ್ತಾನೆ.
ಆಗ ಸೀತೆಯು ಹೇಳುವ ಮಾತು ಮಾರ್ವಿುಕವಾದುದು. ‘ನೀನು ಖಂಡಿತವಾಗಿಯೂ ಆ ಕಾರ್ಯವನ್ನು ಮಾಡಬಲ್ಲೆ ಎಂದು ತಿಳಿದಿದೆ. ಆದರೆ ನನ್ನನ್ನು ನನ್ನ ಸ್ವಾಮಿಯೇ ಇಲ್ಲಿಂದ ಕರೆದೊಯ್ಯಬೇಕು. ಅಲ್ಲಿಯವರೆಗೆ ನನಗೆ ಎಷ್ಟು ದುಃಖ, ಹಿಂಸೆಗಳಾದರೂ ಎಲ್ಲವನ್ನೂ ಸಹಿಸಿಕೊಳ್ಳುವೆ’ ಎಂಬ ಮಾತನ್ನಾಡುತ್ತಾಳೆ.
ರಾಮಾಯಣ-ಮಹಾಭಾರತ ಕತೆಗಳನ್ನು ಏಕೆ ಓದಬೇಕು ಎಂದರೆ ನಮ್ಮ ಜೀವನದಲ್ಲಿ ಬರುವ ಅನೇಕ ಸಂಘರ್ಷ, ಸಮಯ-ಸಂದರ್ಭಗಳಿಗೆ, ಘಟನೆಗಳಿಗೆ ಒಂದಲ್ಲ ಒಂದು ಪರಿಹಾರಗಳು ಇವುಗಳಲ್ಲಿ ಅಡಕವಾಗಿವೆ. ನಮ್ಮಲ್ಲಿ ಇರುವ ಅನೇಕ ಪ್ರಶ್ನೆಗಳಿವೆ ಅವುಗಳಲ್ಲಿ ಉತ್ತರ ಅಡಗಿದೆ.
ಕಷ್ಟ ಅಪಾರವಾಗಿದ್ದು, ಸುಖ ಅಲ್ಪವಾಗಿರುತ್ತದೆ. ಕಷ್ಟ ಪಟ್ಟಾಗ ಮಾತ್ರ ನಿಜವಾದ ಸುಖ ದೊರೆಯುತ್ತದೆ ಎಂಬುದು ಹಿರಿಯರ ಅನುಭವದ ಮಾತು. ರಾಮನು ಪಿತೃವಾಕ್ಯಪರಿಪಾಲನೆಗಾಗಿ ಕಾಡಿಗೆ ಹೋಗಿ ಕಷ್ಟಪಡುತ್ತಾನೆ. ಹಾಗಾಗಿಯೇ ಆತ ರಾಜ್ಯಭಾರ ಮಾಡುವಾಗ ಇತರರ ಕಷ್ಟವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು ಮತ್ತು ಅವುಗಳನ್ನು ಪರಿಹರಿಸಲು ಸೂಕ್ತ ಮಾಗೋಪಾಯ ಕಂಡುಕೊಳ್ಳಲು ಸಾಧ್ಯವಾಯಿತು. ಕಷ್ಟಗಳು ಹೇಗೆ ಬರುತ್ತವೆ ಎಂಬುದನ್ನು ಸ್ವತಃ ಅನುಭವಿಸಿದ್ದರ ಪರಿಣಾಮವಾಗಿಯೇ ಆತನಿಗೆ ರಾಮರಾಜ್ಯ ನಿರ್ಮಾಣ ಮಾಡಲು ಸಾಧ್ಯವಾಯಿತು. ಇಂತಹ ಮಹೋನ್ನತ ಆದರ್ಶ ಪುರುಷ ಶ್ರೀರಾಮನಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣವಾಗಿ ಲೋಕಾರ್ಪಣೆಯಾಗಿದೆ.
ಸುಂದರವಾದ ದೇವಾಲಯ, ಸುಂದರವಾದ ಮೂರ್ತಿಯನ್ನು ನೋಡುವುದೇ ಮಹದಾನಂದ. ಶ್ರೀಬಾಲರಾಮನ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನನಗೂ ಆಹ್ವಾನವಿತ್ತು. ಶ್ರೀ ರವಿಶಂಕರ್ ಗುರೂಜಿಯವರೊಂದಿಗೆ ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ತೆರಳಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಂದಿರ ಮತ್ತು ಅಲ್ಲಿನ ಎಲ್ಲ ಕಾರ್ಯಕ್ರಮಗಳನ್ನು ನೋಡಿ ತುಂಬ ಸಂತೋಷಪಟ್ಟೆ. ಮಂದಿರ ಲೋಕಾರ್ಪಣೆಯಾದ ಆರಂಭದ ದಿನ 5 ಲಕ್ಷ ಜನರು ದರ್ಶನ ಪಡೆದಿದ್ದಾರೆಂದು ತಿಳಿದುಬಂತು. ಅಷ್ಟೊಂದು ಜನ ಇದ್ದಕ್ಕಿದ್ದಂತೆ ಅಲ್ಲಿ ಹೋಗಿ ದರ್ಶನ ಮಾಡಬೇಕಾದರೆ ಎಷ್ಟೊಂದು ಉತ್ಸಾಹ, ಭಕ್ತಿ, ಪ್ರೀತಿ ಹಾಗೂ ಕುತೂಹಲ ಹೊಂದಿರಬಹುದು ಎಂಬುದನ್ನು ಗಮನಿಸಿ. ಮುಂದಿನ ದಿನಗಳಲ್ಲಿ ಎಲ್ಲರೂ ರಾಮಲಲ್ಲಾನ ದರ್ಶನ ಮಾಡಿ. ರಾಮಾಯಣ ಕತೆಯನ್ನು ಕೇಳಿ, ಓದಿ ಮನನ ಮಾಡಿಕೊಂಡು ಶ್ರೀರಾಮನ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಾರ್ಥಕತೆಯನ್ನು ಪಡೆಯಿರಿ ಎಂದು ಆಶಿಸುತ್ತೇನೆ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)