ತೇಜಸ್ವಿನಿ ಅನಂತಕುಮಾರ್​ ಅಂಕಣ: ಪರಿಸರಸ್ನೇಹಿ ಜೀವನಶೈಲಿ ಹೊಸ ವರ್ಷದ ಸಂಕಲ್ಪವಾಗಲಿ

Tejaswmini 1 Jan 2020
Published on

ಪರಿಸರಕ್ಕೆ ಹಾನಿ ಮಾಡದಂಥ ಜೀವನಶೈಲಿಯನ್ನು ರೂಪಿಸಿಕೊಂಡರೆ, ಅದುವೇ ನಾವು ಪರಿಸರ ರಕ್ಷಣೆ ನಿಟ್ಟಿನಲ್ಲಿ ನೀಡುವ ದೊಡ್ಡ ಕೊಡುಗೆ. ಆದರೆ, ಆಧುನಿಕತೆಯ ಭರಾಟೆಯಲ್ಲಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಪರಿಸರಕ್ಕೆ ಮಾರಕವಾದ ವಸ್ತುಗಳನ್ನು ಬಳಸುತ್ತಿದ್ದು, ಇದನ್ನು ತಡೆಯಬೇಕಿದೆ ಮತ್ತು ಮೊದಲಿನಂತೆ ನಿಸರ್ಗಕ್ಕೆ ಹತ್ತಿರವಾಗಿ ಬದುಕಬೇಕಿದೆ.

ಅಮೆರಿಕದಲ್ಲಿ ವಾಸಿಸುತ್ತಿರುವ ಕನ್ನಡಿಗರೇ ಆಗಿರುವ ಹಿರಿಯ ವಿಜ್ಞಾನಿಯೊಬ್ಬರು ಇತ್ತೀಚೆಗೆ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದರು. ಅವರು ಐದು ವರ್ಷಗಳ ಹಿಂದೆ ದೆಹಲಿಯಲ್ಲಿ ಅನಂತಕುಮಾರ್, ನನ್ನ ಮತ್ತು ಇತರ ಹಿರಿಯ ಅಧಿಕಾರಿಗಳ ಮುಂದೆ ಹೊಸ ಬಗೆಯ ಅಡುಗೆ ಸ್ಟೋವನ್ನು ಡೆಮೋ ಮಾಡಿದ್ದನ್ನು ನೆನಪಿಸಿಕೊಂಡರು. ಅದು ಚಿಕ್ಕ ಸ್ಟೋವ್. ಕರ್ಪರ್ ಥರದ 2 ಇಂಚು ಅಗಲದ ಮಾತ್ರೆ ಇಟ್ಟು ಹೊತ್ತಿಸಿದರೆ 3 ಗಂಟೆಗಳ ಕಾಲ ಉರಿಯುತ್ತೆ. ಹೊಗೆಯೂ ಉಗುಳುವುದಿಲ್ಲ. ಇದು ತಯಾರಿಸಿದ್ದು ಗಾಳಿಯಲ್ಲಿನ ಕಾರ್ಬನ್​ನಿಂದ! ಇದಕ್ಕೆ ಮೆಥನಾಲ್ ಸ್ಟೋವ್ ಎಂದು ಹೆಸರು.

‘ಮೆಥನಾಲ್ ಟ್ಯಾಬ್ಲೆಟ್ ಹೇಗೆ ತಯಾರಿಸಿದೀರಿ’ ಎಂದು ಅವರನ್ನು ಪ್ರಶ್ನಿಸಿದೆ. ಅದಕ್ಕವರು, ‘ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿರುವ ವಾಹನಗಳು ಉಗುಳುವ ಕಾರ್ಬನ್ ಮತ್ತು ಕಾರ್ಖಾನೆಗಳು ಹೊರಹಾಕುವ ಹೊಗೆ-ಈ ಕಾರ್ಬನ್ ಅನ್ನೇ ಹಿಡಿದಿಟ್ಟುಕೊಂಡು, ಅದನ್ನೇ ಇಂಧನವಾಗಿ ಪರಿವರ್ತಿಸುತ್ತಿದ್ದೇವೆ’ ಎಂದು ಹೇಳಿದರು. ನನಗೆ ಒಂದು ಕ್ಷಣ ನಂಬಲಾಗಲಿಲ್ಲ. ಗಾಳಿಯಲ್ಲಿರುವ ಕಾರ್ಬನ್ ಅನ್ನು ಬಳಸಿ ಅದರಿಂದ ಅಡುಗೆ ಇಂಧನ ತಯಾರಿಸುವ ಮೂಲಕ ಕ್ಲೀನ್ ಆಂಡ್ ಗ್ರೀನ್ ಪವರ್ ಅನ್ನು ನಮ್ಮ ವಿಜ್ಞಾನಿಗಳೇ ಕಂಡು ಹಿಡಿಯುತ್ತಿದ್ದಾರಲ್ಲ ಎಂದು ತುಂಬ ಸಂತೋಷವಾಯಿತು. ಹಾಗೇ ಯೋಚನೆ ಮಾಡುತ್ತಿದ್ದೆ. ಸಮುದ್ರದ ಆಳದಲ್ಲಿ ಟನ್​ಗಟ್ಟಲೇ ಪ್ಲಾಸ್ಟಿಕ್ ಚೂರುಗಳು ಸೇರಿಕೊಂಡಿವೆ. ಅದರಿಂದ ಜಲಚರಗಳ ಪ್ರಾಣಕ್ಕೂ ಕುತ್ತು ಬಂದಿದೆ. ಈ ಪ್ಲಾಸ್ಟಿಕ್ ಚೂರುಗಳನ್ನು ಹೆಕ್ಕಿ ತೆಗೆದು ಅದರಿಂದ ಇಂಧನ ತಯಾರಿಸಿ, ಆ ಮೂಲಕ ವಾಹನಗಳನ್ನು ಓಡಿಸುವ ತಂತ್ರಜ್ಞಾನ ಬಂದರೆ ಎಷ್ಟೊಂದು ಉಪಯೋಗಿ ಅಲ್ವಾ... ಅಂತ.

ನ್ಯಾನೋ ಟೆಕ್ನಾಲಜಿಯಿಂದ ಸಮುದ್ರದಲ್ಲಿನ ಎಲ್ಲ ಮೈಕ್ರೋ ಪ್ಲಾಸ್ಟಿಕ್ ಅನ್ನು ಹೆಕ್ಕಿ, ಅದರಿಂದ ಯಾವುದೋ ಉಪಯೋಗಿ ಉತ್ಪನ್ನ ತಯಾರು ಮಾಡಿದರೆ ಉಪ್ಪಿನಲ್ಲಿ ಬರುವ ಮೈಕ್ರೋ ಪ್ಲಾಸ್ಟಿಕ್ ಕೂಡ ತಪು್ಪತ್ತದೆ. ಹಾಗೆಯೇ, ಭೂಮಿ ಮೇಲೆ ಬಿದ್ದಿರುವ ಕೋಟ್ಯಂತರ ಪ್ಲಾಸ್ಟಿಕ್ ಮತ್ತು ಲೋಹದ ತುಂಡುಗಳನ್ನು ಹೆಕ್ಕಲು ರೊಬಾಟ್​ನ್ನು ತಯಾರಿಸಿ, ಅದನ್ನು ನಿಯೋಜಿಸಿದರೆ ಎಂಥ ಬದಲಾವಣೆ! ಹೀಗೆ ಸಂಗ್ರಹಿಸಲಾದ ಪ್ಲಾಸ್ಟಿಕ್ ಮತ್ತು ಲೋಹದ ತುಂಡು ಅಥವಾ ತ್ಯಾಜ್ಯದಿಂದ ಜನಸ್ನೇಹಿ ಉತ್ಪನ್ನ ತಯಾರಿಸುವಂತಾದರೆ ಇನ್ನೂ ಉತ್ತಮ. ಹಿಮಾಲಯದ ತುದಿಯಿಂದ ಹಿಡಿದು ನಗರಗಳ ಅಂಚಿನಲ್ಲಿರುವ ದಟ್ಟ ಕಾಡಿನಲ್ಲೂ ಸಿಗುವ ಪ್ಲಾಸ್ಟಿಕ್​ನಿಂದ ಇಂಧನ ತಯಾರಿಸುವಂತಾದರೆ ಸ್ವರ್ಗದಲ್ಲಿರುವ ಸೌಗಂಧಿಕಾ ಪುಷ್ಪ ತಂದಷ್ಟೇ ಸಂತೋಷ. ಅಲ್ಲವೇ? ಇರಲಿ, ಹಗಲುಗನಸುಗಳನ್ನು ಬಿಟ್ಟು ವಾಸ್ತವಕ್ಕೆ ಬರೋಣ.

ಒಂದೆಡೆ ಪರಿಸರಕ್ಕೆ ಈಗಾಗಲೇ ತೀವ್ರ ಮಟ್ಟದ ಹಾನಿಯಾಗಿದೆ. ಕುಡಿಯುವ ನೀರು, ಸೇವಿಸುವ ಗಾಳಿ, ಉಣ್ಣುವ ಆಹಾರ... ಎಲ್ಲವೂ ಕಲುಷಿತವಾಗಿದೆ. ಮತ್ತು ಈ ಹಾನಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ವಾಯುಮಾಲಿನ್ಯ, ಶಬ್ದಮಾಲಿನ್ಯ, ಜಲಮಾಲಿನ್ಯ, ಭೂಮಾಲಿನ್ಯದ ತೀವ್ರತೆ ಹೆಚ್ಚುತ್ತಿರುವುದು ಎಚ್ಚರಿಕೆಯ ಗಂಟೆಯೇ ಸರಿ. ಮರಗಿಡಗಳ ಸಂಖ್ಯೆ ತಗ್ಗಿದೆ, ತಗ್ಗುತ್ತಲೇ ಇದೆ. ಜಲಮೂಲಗಳು ಕಣ್ಣೆದುರೇ ಬರಿದಾಗುತ್ತಿವೆ. ಆಹಾರ ವಿಷವಾಗಿದೆ. ನಾಳೆಗಳು ಹೇಗೆ ಎಂಬ ಚಿಂತೆ ಕಾಡುತ್ತಿದೆ. ನಿನ್ನೆಯಷ್ಟೇ ಹೊಸ ವರ್ಷವನ್ನು ಬರಮಾಡಿಕೊಂಡಿದ್ದೇವೆ ಎಂಬುದೇನೋ ನಿಜ. ಆದರೆ, ಹೊಸ ವರ್ಷದಲ್ಲಿ ಈ ಹಳೆಯ ಸಮಸ್ಯೆಗಳಿಗೆ ಎಂಥ ಮದ್ದು ನೀಡಬಹುದು, ಈ ಸಮಸ್ಯೆಗಳ ತೀವ್ರತೆ ಹೇಗೆ ತಗ್ಗಿಸಬಹುದು ಮತ್ತು ಪರಿಸರಕ್ಕೆ ಆಗುತ್ತಿರುವ ಹಾನಿಯ ಪ್ರಮಾಣವನ್ನು ಹೇಗೆ ಕಡಿಮೆಗೊಳಿಸಬಹುದು ಎಂದು ಚಿಂತನೆ ಮಾಡಲು ಇದು ಸಕಾಲ. ಸಮಸ್ಯೆ ದೊಡ್ಡದಾಗಿದ್ದರೂ, ಪರಿಹಾರ ಎಲ್ಲೋ ದೂರದಲ್ಲಿಲ್ಲ. ಅಥವಾ ಅದನ್ನು ಯಾರೋ ಮಾಡಲಿ ಎಂದು ನಾವು ಕೈಕಟ್ಟಿ ಕುಳಿತುಕೊಳ್ಳುವ ಸ್ಥಿತಿಯೂ ಈಗಿಲ್ಲ. ಹಾಗಿದ್ದರೆ ಏನು ಮಾಡಬಹುದು? ಬೆಳಗ್ಗೆಯಿಂದ ರಾತ್ರಿಯವರೆಗಿನ ನಮ್ಮ ದಿನಚರಿಯನ್ನು ಒಮ್ಮೆ ಅವಲೋಕಿಸಿಕೊಳ್ಳೋಣ. ಇಲ್ಲೆಲ್ಲ ಪರಿಸರಕ್ಕೆ ಹಾನಿ ಮಾಡುತ್ತಿರುವ ಸಂಗತಿಗಳನ್ನು ತ್ಯಜಿಸೋಣ. ಅಂದರೆ, ಪರಿಸರಸ್ನೇಹಿ ಜೀವನಶೈಲಿ ಅಳವಡಿಸಿಕೊಳ್ಳುವ ಪ್ರಯತ್ನ ನಮ್ಮದಾಗಬೇಕು. ಈ ಅವಲೋಕನ ನಾವು ಬೆಳಗ್ಗೆ ಎದ್ದ ತಕ್ಷಣ ಉಪಯೋಗಿಸುವ ಬ್ರಶ್, ಪೇಸ್ಟಿನಿಂದಲೇ ಆರಂಭಿಸೋಣ.

ಟೂಥ್​ಬ್ರಶ್: ಹಿಂದೆಲ್ಲ ನಮ್ಮ ಅಜ್ಜನೋ-ಅಜ್ಜಿಯೋ ಬೇವುಕಡ್ಡಿ, ಇದ್ದಲುಪುಡಿಯಿಂದ ಹಲ್ಲು ಉಜ್ಜುತ್ತಿದ್ದರು. ಆ ಸ್ಥಿತಿಗೆ ಮರಳಲು ನಮಗೆ ಈಗ ಸಾಧ್ಯವಿಲ್ಲ ಎಂಬುದು ನಿಜವೇ. ಆದರೆ, ಒಬ್ಬರು ಜೀವಮಾನದಲ್ಲಿ ಸರಾಸರಿ 100 ಪ್ಲಾಸ್ಟಿಕ್ ಟೂಥ್​ಬ್ರಶ್​ಗಳನ್ನು ಬಳಸುತ್ತಾರಂತೆ. ಹೀಗೆ ಬಳಸಿ, ಬೀಸಾಡುವ ಈ ಪ್ಲಾಸ್ಟಿಕ್ ಬ್ರಶ್​ಗಳು ಉಂಟು ಮಾಡುತ್ತಿರುವ ತ್ಯಾಜ್ಯ, ಪರಿಸರಕ್ಕೆ ಎಸಗುತ್ತಿರುವ ಹಾನಿ ತೀವ್ರ ಪ್ರಮಾಣದ್ದು. ಟೂಥ್​ಬ್ರಶ್​ಗಳು ಪ್ಲಾಸ್ಟಿಕ್​ದ್ದು ಆಗಿರುವುದು ಒಂದೆಡೆಯಾದರೆ, ಬ್ರಶ್ ಮುಂಭಾಗದಲ್ಲಿ ಅಳವಡಿಸಲಾದ ಹಲ್ಲುಗಳು ಹಂದಿ ಕೂದಲಿನಿಂದ ತಯಾರಿದವು ಎಂದು ಹೇಳಲಾಗುತ್ತದೆ. ಹಾಗಿದ್ದರೆ ಪರ್ಯಾಯ ಇಲ್ಲವೇ? ಖಂಡಿತ ಇದೆ. ಪ್ಲಾಸ್ಟಿಕ್ ಬ್ರಶ್ ಬದಲಿಗೆ ಬಾಂಬೂ ಬ್ರಶ್ ಬಳಕೆಯತ್ತ ಹೊರಳಬೇಕು. ಇಂಥ ಟೂಥ್​ಬ್ರಶ್​ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯ. ಅಲ್ಲದೆ, ಈ ನಿಟ್ಟಿನಲ್ಲಿ ಯುವಕರು ಸ್ಟಾರ್ಟಪ್ ತೆರೆದು, ಪರಿಸರಸ್ನೇಹಿ ಟೂಥ್​ಬ್ರಶ್​ಗಳನ್ನು ತಯಾರಿಸಿದರೆ ತುಂಬ ಪ್ರಯೋಜನವಾಗುತ್ತದೆ. ನೈಲಾನ್ ಹಲ್ಲು ಇರುವ ಬಾಂಬೂ ಬ್ರೇಶ್ ತಯಾರಿಕೆ ಮತ್ತು ಬಳಕೆಗೆ ಒತ್ತು ನೀಡಬೇಕಿದೆ.

ಪೇಸ್ಟ್: ಪೇಸ್ಟ್​ನದ್ದು ಇನ್ನೊಂದು ಕಥೆ. ಪೇಸ್ಟಿನಲ್ಲಿ ಮೈಕ್ರೋಬಿಟ್ಸ್ (ಪ್ಲಾಸ್ಟಿಕಿನ ಸಣ್ಣ ಸಣ್ಣ ಕಣಗಳು), ಬಣ್ಣಗಳನ್ನು ಬಳಸುತ್ತಿರುವುದು ಅಪಾಯಕಾರಿ. ಇವೆಲ್ಲ ತಕ್ಷಣಕ್ಕೆ ಹಾನಿ ಮಾಡಿದಿದ್ದರೂ, ನಿಧಾನವಾಗಿ ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡುತ್ತವೆ. ಇದಕ್ಕೆ ಪರ್ಯಾಯವೇನು? ಪೇಸ್ಟ್ ಗಾಜಿನ್ ಬಾಟಲಿನಲ್ಲಿ ಸಿಗುತ್ತಿದೆ; ಆದರೆ ಸದ್ಯಕ್ಕಂತೂ ಅದು ದುಬಾರಿ. ಆದರೆ ಹಲ್ಲಿನಪುಡಿ ಪ್ಲಾಸ್ಟಿಕ್ ಬಾಟಲ್ ಅಲ್ಲಿ ಸಿಗುತ್ತದೆ. ಆ ಡಬ್ಬಿಯ ಮರುಬಳಕೆಯೂ ಸಾಧ್ಯವಿದೆ. ಅಲ್ಲದೆ, ಮನೆಯಲ್ಲೇ ಸುಲಭ ವಿಧಾನದಲ್ಲಿ ಪೇಸ್ಟ್ ತಯಾರಿಸಿಕೊಳ್ಳಬಹುದಾಗಿದ್ದು, ಐದಾರು ಜನರಿಗೆ ಆಗುವಂತೆ ತಯಾರಿಯಲ್ಲಿ ತೊಡಗಿಕೊಂಡರೆ ಅದು ಉತ್ತಮ ಪರಿಹಾರ. ಅನಿವಾರ್ಯವಾಗಿ ಹೊರಗಿನಿಂದ ತಂದ ಪೇಸ್ಟ್ ಬಳಸುತ್ತಿದ್ದರೆ ಪೇಸ್ಟ್ ಡಬ್ಬಿಯನ್ನು ಮರುಬಳಕೆ ಮಾಡಿ. ಟ್ಯೂಬಿನ ತ್ಯಾಜ್ಯವನ್ನು ಸರಿಯಾಗಿ ಸಂಸ್ಕರಿಸಿ ಅಥವಾ ಮರುಬಳಕೆ ಸಾಧ್ಯವೇ ಎಂಬುದು ಯೋಚಿಸಿ.

ಸಾಬೂನು: ಸ್ನಾನಕ್ಕೆ, ಬಟ್ಟೆ, ಪಾತ್ರೆ ತೊಳೆಯಲು ಸಾಬೂನುಗಳನ್ನು ಬಳಸುತ್ತೇವೆ. ಅದೇ ರೀತಿ, ನೆಲ ಒರೆಸಲು, ವಾಹನ ತೊಳೆಯಲು ಮಾರ್ಜಕಗಳನ್ನು ಸಿಕ್ಕಾಪಟ್ಟೆ ಬಳಸುತ್ತಿದ್ದೇವೆ. ಸಾಬೂನಿನ ಬಳಕೆಯಿಂದ ದೇಹಕ್ಕೂ ನೂರೆಂಟು ಸಮಸ್ಯೆಗಳು. ಹಾಮೋನ್ ಅಸಮತೋಲನ, ಚರ್ಮ ಅಲರ್ಜಿ ತೀವ್ರ ಪ್ರಮಾಣದಲ್ಲಿ ಕಂಡು ಬರುತ್ತಿವೆ. ಆಂಟಿ ಫಂಗಲ್ ಸೋಪ್​ಗಳಂತೂ ಮತ್ತಷ್ಟು ಸಮಸ್ಯೆ ಸೃಷ್ಟಿಸುತ್ತವೆ. ಐವತ್ತು ವರ್ಷಗಳ ಹಿಂದೆ ಈ ಬಗೆಯ ಯಾವುದೇ ಸೋಪುಗಳು ಇರಲಿಲ್ಲ. ಸೋಪಿನಲ್ಲಿರುವ ಸೋಡಿಯಂ ಲಾರೆಟ್ ಇಥೆಲ್ ಸಲ್ಪೇಟ್, ಸೋಡಿಯಂ ಟ್ರೖೆ ಫಾಲಿ ಪಾಸ್ಟರೇಟ್ ದೊಡ್ಡಪ್ರಮಾಣದಲ್ಲಿ ಸಮಸ್ಯೆ ಉಂಟು ಮಾಡುತ್ತಿವೆ ಎಂಬುದನ್ನು ತುಂಬ ಜನರು ಗಮನಿಸಿದಂತಿಲ್ಲ. ಅಲ್ಲದೆ, ಇವು ನೀರಿಗೆ, ಭೂಮಿಗೆ ಸೇರಿಕೊಂಡು ಜಲಮೂಲಗಳನ್ನು, ಜಲಚರಗಳನ್ನು ಕೊಲ್ಲುತ್ತಿವೆ. ಒಮ್ಮೆ ಯೋಚಿಸಿ. ಹಿಂದೆ ಸ್ನಾನಕ್ಕೆ ಬಳಸುತ್ತಿದ್ದ ಕಡಲೆಹಿಟ್ಟು ನಿಜಕ್ಕೂ ಉತ್ತಮ ವಿಧಾನ. ಬೇಕಿದ್ದರೆ ಕಡಲೆಹಿಟ್ಟಿಗೆ ಹೆಸರು ಹಿಟ್ಟು ಸೇರಿಸಿಕೊಳ್ಳಬಹುದು. ಶ್ಯಾಂಪು ಬದಲಿಗೆ ಸಿಗೇಕಾಯಿ ಇದ್ದೇ ಇದೆ. ಪಾತ್ರೆ ತೊಳೆಯುವ ಸೋಪಿಗೆ ಬದಲಾಗಿ ಬೂದಿ ಇದೆ, ಅಂಟ್ವಾಳ ಕಾಯಿಯಿಂದ ಕೂಡ ಮನೆಯಲ್ಲೇ ಮಾರ್ಜಕ ತಯಾರಿಬಹುದು. ಬೇರೆ ಬೇರೆ ತರಕಾರಿ ಸಿಪ್ಪೆಗಳಿಂದ ಟಾಯ್ಲೆಟ್ ಕ್ಲೀನರ್​ಗಳನ್ನು ತಯಾರಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ಇಂಥ ಪರಿಸರಸ್ನೇಹಿ ಉತ್ಪನ್ನಗಳು ಲಭ್ಯವಿದ್ದು, ಅವುಗಳ ಬಳಕೆ ಹೆಚ್ಚಬೇಕಿದೆ. ಈ ಮೂಲಕ ನಮ್ಮ ಆರೋಗ್ಯ ಮತ್ತು ಪರಿಸರದ ಆರೋಗ್ಯ ರಕ್ಷಿಸಬೇಕಿದೆ.

ಆಹಾರ: ಆಹಾರಗಳಲ್ಲಿ ನೇರವಾಗಿ ಪ್ಲಾಸ್ಟಿಕ್, ಕೆಮಿಕಲ್ ಸೇರುವ ಪ್ರಮಾಣ ಕಡಿಮೆಯಿದ್ದರೂ, ಹಾನಿ ಪ್ರಮಾಣ ಹೆಚ್ಚು. ಪ್ಲಾಸ್ಟಿಕ್​ನಲ್ಲಿ ಆಹಾರ ಶೇಖರಿಸಿಟ್ಟುಕೊಳ್ಳುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಅಡುಗೆಗೆ ಕೃತಕ ಬಣ್ಣಗಳ ಬಳಕೆ ಖಂಡಿತ ಬೇಡ. ಹೊರಗಡೆಯ ಊಟ ಕೂಡ ಕಡಿಮೆ ಮಾಡೋಣ. ಸಿರಿಧಾನ್ಯಗಳನ್ನು ಹೆಚ್ಚೆಚ್ಚು ಬಳಸೋಣ. ಏಕೆಂದರೆ, ಸಿರಿಧಾನ್ಯಗಳನ್ನು ಬೆಳೆಯುವಾಗ ಅತ್ಯಲ್ಪ ಪ್ರಮಾಣದ ರಸಗೊಬ್ಬರ ಬಳಸಲಾಗುತ್ತದೆ. ಸಿಹಿ ಪದಾರ್ಥಗಳಲ್ಲಿ ಬಣ್ಣಗಳನ್ನು ಹಾಕುವ ಕ್ರಮಕ್ಕೆ ಬ್ರೇಕ್ ಹಾಕಿ. ಜಂಕ್​ಫೂಡ್​ಗಳ ಸೇವನೆ ಕಡಿಮೆ ಮಾಡಿ. ಒಳ್ಳೆಯ, ಪೌಷ್ಟಿಕ ಆಹಾರ ಸೇವನೆಗೆ ಗಮನ ಇರಲಿ ಹೊರತು ಬರೀ ನಾಲಿಗೆಗೆ ರುಚಿ ನೋಡುವ ಆಹಾರಗಳ ಸೇವನೆ ಬೇಡ.

ವಿಹಾರ: ಆಹಾರದಷ್ಟೇ ವಿಹಾರಕ್ಕೂ ಗಮನ ನೀಡಬೇಕಿದೆ. ವಾಯುಮಾಲಿನ್ಯಕ್ಕೆ ಮುಖ್ಯ ಕಾರಣ ನಾವು ಬಳಸುತ್ತಿರುವ ವಾಹನಗಳು. ಸೈಕಲ್, ಎಲೆಕ್ಟಿಕ್ ವಾಹನಗಳನ್ನು ಬಳಸುವವರ ಸಂಖ್ಯೆ ಕಡಿಮೆ ಇದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿಯಂಥ ನಗರಗಳಲ್ಲಿ ಹೊರಗಡೆ ಹೋಗಬೇಕು ಎಂದರೆ ವಾಹನ ಅನಿವಾರ್ಯ ಎಂಬಂಥ ಪರಿಸ್ಥಿತಿ ನಿರ್ವಣವಾಗಿದೆ. ಆದರೆ, ಇಂಥ ಸಂದರ್ಭಗಳಲ್ಲಿ ಸಮೂಹ ಸಾರಿಗೆಯನ್ನು ನೆಚ್ಚಿಕೊಳ್ಳುವ ಮೂಲಕ ಪರಿಸರಕ್ಕೆ ಹೆಚ್ಚಿನ ಹಾನಿ ತಡೆಯಬಹುದು. ಉದಾಹರಣೆಗೆ, ರೈಲ್ವೆ ಒಮ್ಮೆಲೇ ನೂರಾರು ಜನರನ್ನು ಸಾಗಿಸುತ್ತದೆ. ರೈಲ್ವೆ ಪ್ರಯಾಣಕ್ಕೆ ಮೊದಲ ಆದ್ಯತೆ ಇರಲಿ, ಬಸ್ ಪ್ರಯಾಣವೂ ಸೂಕ್ತವೇ. ಕಾರಿನಲ್ಲಿ ಒಬ್ಬರೇ ಹೋಗುವ ಬದಲಿಗೆ ಪೂಲಿಂಗ್ ವ್ಯವಸ್ಥೆ ಹಾಕಿಕೊಳ್ಳುವುದು ಉತ್ತಮ. ಅಂದರೆ, ಮೊದಲೇ ಮಾತಾಡಿಕೊಂಡು ಒಂದೇ ಗಮ್ಯಸ್ಥಾನಕ್ಕೆ ತೆರಳುವ ಮೂರ್ನಾಲ್ಕು ಮಂದಿ ಒಟ್ಟಿಗೆ ಕಾರಿನಲ್ಲಿ ಪಯಣಿಸುವುದು. ಅತ್ಯಾವಶ್ಯಕ ಇರುವಲ್ಲಿ ಮಾತ್ರ ವಾಹನ ಬಳಸೋಣ. ನಡಿಗೆಗೆ ಹೆಚ್ಚು ಒತ್ತು ನೀಡೋಣ. ಎಲೆಕ್ಟ್ರಿಕ್ ವಾಹನಗಳ ಬೆಲೆ ಈಗ ಕೊಂಚ ಜಾಸ್ತಿಯಿದ್ದರೂ, ಮುಂದಿನ ದಿನಗಳಲ್ಲಿ ಅದು ತಗ್ಗಲಿದೆ. ಏಕೆಂದರೆ, ಎಲೆಕ್ಟ್ರಿಕ್ ಕಾರ್, ದ್ವಿಚಕ್ರ ವಾಹನದ ವಿನ್ಯಾಸ ಸುಲಭದ್ದು. ಅವು ಕಡಿಮೆ ಮೂವಿಂಗ್

ಪಾರ್ಟ್ಸ್​ಗಳನ್ನು ಹೊಂದಿವೆ. ಉತ್ಪಾದನಾ ವೆಚ್ಚವೂ ಕಡಿಮೆ. ಈಗ ಖರೀದಿಸುವವರ ಸಂಖ್ಯೆ ಕಡಿಮೆ ಇರುವುದರಿಂದ ಬೆಲೆ ಜಾತಿ ಇದೆ. ಎಲೆಕ್ಟಿಕ್ ಕಾರ್, ಸ್ಕೂಟರ್​ಗಳ ಖರೀದಿ ಹೆಚ್ಚಿದರೆ ಖಂಡಿತವಾಗಿಯೂ ಬೆಲೆ ತಗ್ಗಲಿದೆ.

ಬಟ್ಟೆ: ಹತ್ತಿಬಟ್ಟೆ ಎಲ್ಲಕ್ಕಿಂತ ಒಳ್ಳೆಯದು. ತುಂಬ ಚಳಿಯಿದ್ದರೆ ಉಣ್ಣೆ ಬಟ್ಟೆ ಬಳಸೋಣ. ಬಣ್ಣಬಣ್ಣದ ನೈಲಾನ್ ಬಟ್ಟೆಯ ಬಳಕೆ ಬೇಡ. ಇವು ಬಳಸಿ ಬಿಸಾಡಿದ ನಂತರ ಪರಿಸರಕ್ಕೆ ಹಲವು ರೀತಿಯಲ್ಲಿ ಹಾನಿ ಎಸಗುತ್ತಿವೆ. ಬಟ್ಟೆಯ ಮಿತಬಳಕೆ ಮತ್ತು ಮರುಬಳಕೆ ಮಂತ್ರ ಅನುಷ್ಠಾನಕ್ಕೆ ತರೋಣ. ಅದಮ್ಯ ಚೇತನ ‘ಆರ್​ಆರ್ ಬ್ಯಾಗ್ ಯೋಜನೆ’ ಅಡಿ ಹಳೇ ಸೀರೆಗಳಿಂದ ಪರಿಸರಸ್ನೇಹಿ ಬ್ಯಾಗುಗಳನ್ನು ತಯಾರಿಸುತ್ತಿದೆ. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಸೀರೆ ವ್ಯಾಮೋಹ ಇರುವ ಮಹಿಳೆಯರು ಕೂಡ ನೈಲಾನ್ ಸೀರೆ ಬಳಕೆ ತ್ಯಜಿಸಿ ಹತ್ತಿ ಸೀರೆ ಖರೀದಿಸುವುದು ಉತ್ತಮ.

ಮನೆಗಳು: ಭೂಮಿ ಮೇಲಿನ ಶೇ. 60ರಷ್ಟು ಪರಿಸರ ಮಾಲಿನ್ಯಕ್ಕೆ ನಾವು ಮನೆಕಟ್ಟುವ ವಿಧಾನವೇ ಕಾರಣ ಎಂದಿದ್ದಾರೆ ಪರಿಸರವಿಜ್ಞಾನಿಗಳು. ಮನೆಕಟ್ಟಲು ಬಳಸುವ ಸಿಮೆಂಟ್, ಟೈಲ್ಸ್, ಗೋಡೆಯ ಬಣ್ಣಗಳು, ಸಿಮೆಂಟ್ ಇಟ್ಟಿಗೆಗಳು... ಇವೆಲ್ಲ ಸಂಗತಿಗಳು ಪರಿಸರದ ಮೇಲೆ ಒತ್ತಡ ತರುತ್ತಿವೆ. ಮನೆ ಕಟ್ಟುವಾಗ ನಿಸರ್ಗಸ್ನೇಹಿ ಉತ್ಪನ್ನಗಳನ್ನೇ ಬಳಸೋಣ.

ಮದುವೆ: ಮನೆ ಕಟ್ಟಿದಷ್ಟೇ ಕಷ್ಟದ ಕೆಲಸ ಮದುವೆ ಮಾಡುವುದು. ಮದುವೆ ಅಥವಾ ಇತರೆ ದೊಡ್ಡ ಕಾರ್ಯಕ್ರಮಗಳಲ್ಲಿ ಸೃಷ್ಟಿಯಾಗುತ್ತಿರುವ ಕಸ ಮತ್ತು ಆಹಾರ, ನೀರಿನ ಪೋಲನ್ನು ತಡೆಯಬೇಕಿದೆ. ಇತ್ತೀಚಿನ ದಿನಗಳಲ್ಲಿ ಶೂನ್ಯ ತ್ಯಾಜ್ಯ ಕಾರ್ಯಕ್ರಮಗಳು ಪರಿಕಲ್ಪನೆ ಬಗ್ಗೆ ಚಿಂತನೆ ಹೆಚ್ಚಿದೆ ಎಂಬುದು ಸಮಾಧಾನಕರ.

ಹಾಸಿಗೆ: ರಾತ್ರಿ ಮಲಗುವಾಗಿನ ಹಾಸಿಗೆಗಳೂ ಬದಲಾಗಿವೆ. ಹತ್ತಿಯ ಹಾಸಿಗೆಗಳನ್ನೇ ಬಳಸೋಣ. ಮನೆಗೆ ಕಟ್ಟುವ ತೋರಣದಲ್ಲಿ ಸೇಫ್ಟಿ ಪಿನ್, ಸ್ಟಾ್ಯಪ್ಟರ್ ಪಿನ್ ಬದಲಿಗೆ ಮಾಮೂಲಿ ಕಡ್ಡಿ ಬಳಕೆ ಆಗಲಿ. ನೈಲಾನ್ ದಾರದ ಬದಲು ಸುತಳಿ ಬಳಕೆ ಸೂಕ್ತ. ಪೆಟ್ರೋಲಿಯಂ ಪದಾರ್ಥದಿಂದ ತಯಾರಿದಿದ ಕರ್ಪರ್ ಬಳಕೆ ಖಂಡಿತ ಬೇಡ. ಕರ್ಪರ್ ಸಸ್ಯಜನ್ಯವಾಗಿದ್ದರೆ ಮಾತ್ರ ಬಳಸೋಣ.

ಹೀಗೆ ಹತ್ತಿರದಿಂದ ದಿನಚರಿಯನ್ನು ನೋಡಿ, ಸೂಕ್ತ ಬದಲಾವಣೆಗಳನ್ನು ಮಾಡುವ ಮತ್ತು ನಿಸರ್ಗಸ್ನೇಹಿ ಉತ್ಪನ್ನಗಳನ್ನು ಬಳಸುವ ಸಂಕಲ್ಪ ಕೈಗೆತ್ತಿಕೊಳ್ಳೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net