

ಸಾಮಾನ್ಯವಾಗಿ ಜನರು ನನ್ನ ಬಳಿ ಕೇಳುವ ಪ್ರಶ್ನೆಯೆಂದರೆ, ‘ನಮ್ಮ ಮಕ್ಕಳಿಗೆ ಆಧ್ಯಾತ್ಮಿಕತೆಯನ್ನು ಹೇಗೆ ಪರಿಚಯಿಸುವುದು?’ ಎಂದಾಗಿದೆ. ಆದರೆ ಮಾನವ ಬುದ್ಧಿವಂತಿಕೆಗೆ ಜೀವನ ಮತ್ತು ಅದರ ಆಚೆ ಏನು ಎಂಬುದನ್ನು ಹುಡುಕುವುದು ಸಹಜ- ಜೀವನವನ್ನು ನೋಡುವುದು ಮತ್ತು ತಿಳಿಯಲು ಹಂಬಲಿಸುವುದು. ಆದ್ದರಿಂದ ನೀವು ಆಧ್ಯಾತ್ಮಿಕತೆಯನ್ನು ಹೇಗೆ ತಪ್ಪಿಸಬಹುದು? ಆದರೆ ಅದನ್ನು ಬಹಳ ಕಾಲ ತಪ್ಪಿಸಿಕೊಂಡು ಬಂದಿದ್ದೀರಿ, ಏಕೆಂದರೆ ‘ನೀವಲ್ಲದ ವಿಷಯ’ಗಳೊಂದಿಗೆ ಆಳವಾಗಿ ಅಂಟಿಕೊಂಡಿದ್ದೀರಿ ಮತ್ತು ಗುರುತಿಸಿಕೊಂಡಿದ್ದೀರಿ.
‘ನೀವಲ್ಲದ ವಿಷಯ’ಗಳು ಎಂದರೆ, ದೇಹ ಮತ್ತು ಮನಸ್ಸನ್ನೂ ಸೇರಿ. ನೀವಲ್ಲದ ಯಾವುದರೊಂದಿಗಾದರೂ ಗುರುತಿಸಿಕೊಂಡಾಗ, ಬುದ್ಧಿಶಕ್ತಿ ತಿರುಚಿಕೊಳ್ಳುತ್ತದೆ. ಅದು ಏನನ್ನೂ ನೇರವಾಗಿ ನೋಡಲಾರದು. ಏಕೆಂದರೆ ಅಂದಿನಿಂದ ಅದು ಆ ಗುರುತಿನಿಂದ ಮಾತ್ರ ಕಾರ್ಯನಿರ್ವಹಿಸುತ್ತದೆ. ಉದಾಹರಣೆಗೆ ನೀವು, ‘ನಾನು ಮಹಿಳೆ’ ಎಂದು ಹೇಳಿದಾಗ, ನೀವು ಯೋಚಿಸುವ ರೀತಿ, ಅನುಭವಿಸುವ ರೀತಿ, ಎಲ್ಲವೂ ಮಹಿಳೆಯಂತೆಯೇ ಇರುತ್ತವೆ. ನೀವು ದೇಹದ ಕೆಲವು ಭಾಗಗಳೊಂದಿಗೆ ಗುರುತಿಸಿಕೊಂಡಿದ್ದೀರಿ. ನಿಮ್ಮ ಬುದ್ಧಿ ಯಾವುದನ್ನೂ ನೇರವಾಗಿ ನೋಡಲಾರದು.
ಇದೇ ಕಾರಣಕ್ಕಾಗಿ ಒಂದು ಆಧ್ಯಾತ್ಮಿಕ ಕಾರ್ಯಕ್ರಮ ಅಗತ್ಯ. ಜನರ ಮನಸ್ಸು ತಿರುಚಿಕೊಂಡಿರದಿದ್ದರೆ, ಅಧ್ಯಾತ್ಮ ಸಹಜವಾದ ವಿಷಯವಾಗಿ ಇರುತ್ತಿತ್ತು. ಯಾರೋ ನಿಮಗೆ ಕಲಿಸಬೇಕಾದ ಮತ್ತು ನೆನಪಿಸಬೇಕಾದ ವಿಷಯವಾಗಿರುತ್ತಿರಲಿಲ್ಲ. ಸುತ್ತಲಿನ ಜೀವನವನ್ನು ಗಮನಿಸಿದಾಗಲೇ ನಿಮಗೆ, ‘ಜೀವನದ ಭೌತಿಕತೆಯ ಆಚೆಗೆ ಏನೋ ಇರುವಂತೆ ಕಾಣುತ್ತದೆ’ ಎಂದು ನೋಡುವುದು ಬಹಳ ಸಹಜ ಮತ್ತು ಅದನ್ನು ತಿಳಿಯುವುದು ಬಹಳ ಸರಳವಾಗುತ್ತದೆ.
ಇಷ್ಟು ದೊಡ್ಡ ಜನಸಮೂಹ ಅದನ್ನು ಗಮನಿಸದೆ ಹೋಗಿರುವುದು ನಂಬಲಸಾಧ್ಯವಾದುದು. ಕೇವಲ ಎರಡು ನಿಮಿಷ ಕಣ್ಣು ಮುಚ್ಚಿ ಕುಳಿತರೆ, ನೀವು, ‘ನಿಮ್ಮ ದೇಹ’ವನ್ನು ಮೀರಿದವರು ಎಂದು ನೋಡಬಹುದು. ಹಾಗಾದರೆ ಯಾರಾದರೂ ಬಂದು ನಿಮಗೆ ನೆನಪಿಸಬೇಕಾಗಿರುವುದು ಏಕೆ?
ಯಾರಾದರೂ ಅದನ್ನು ಗಮನಿಸಿ ನೋಡಬಹುದು, ಆದರೆ ಕೆಲವೇ ಜನರು ನೋಡುತ್ತಾರೆ, ಏಕೆಂದರೆ ಬಾಲ್ಯದಿಂದಲೇ, ನಿಮ್ಮ ಸುತ್ತಲಿನ ಪ್ರತಿಯೊಬ್ಬರೂ ಸ್ವಾರ್ಥ ಹಿತಾಸಕ್ತಿಯುಳ್ಳವರು. ಪ್ರತಿಯೊಬ್ಬರೂ ನಿಮ್ಮನ್ನು ತಮ್ಮೊಂದಿಗೆ ಗುರುತಿಸಿಕೊಳ್ಳಲು ಪ್ರೋತ್ಸಾಹಿಸುತ್ತಾರೆ.
ಪಾಲಕರು ನಿಮ್ಮನ್ನು ತಮ್ಮೊಂದಿಗೆ ಗುರುತಿಸಿಕೊಳ್ಳಲು ಬಯಸುತ್ತಾರೆ, ಶಿಕ್ಷಕರು ನಿಮ್ಮನ್ನು ತಮ್ಮೊಂದಿಗೆ ಮತ್ತು ತಮ್ಮ ರೀತಿಯ ಶಿಕ್ಷಣದೊಂದಿಗೆ ಗುರುತಿಸಿಕೊಳ್ಳಲು ಬಯಸುತ್ತಾರೆ, ನಾಯಕರು ಮತ್ತು ಇತರರು ನಿಮ್ಮನ್ನು ತಮ್ಮ ರಾಷ್ಟ್ರ, ಜಾತಿ, ಪಂಗಡ ಮತ್ತು ಇತರ ವಿಷಯಗಳೊಂದಿಗೆ ಗುರುತಿಸಿಕೊಳ್ಳಲು ಬಯಸುತ್ತಾರೆ, ಏಕೆಂದರೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಕಾರ್ಯಸೂಚಿ, ಜನರನ್ನು ಒಟ್ಟುಗೂಡಿಸಿ ತಮ್ಮ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ತಮ್ಮದೇ ಆದ ಬಯಕೆ ಇರುತ್ತದೆ.
ನಡೆಯುತ್ತಿರುವ ಎಲ್ಲ ಚಟುವಟಿಕೆಗಳು ಮೌಲ್ಯವಿಲ್ಲದ್ದು ಎಂದು ಹೇಳುತ್ತಿಲ್ಲ. ಅದಕ್ಕೆ ಮೌಲ್ಯವಿದೆ, ಆದರೆ ನೀವು ಏನನ್ನಾದರೂ ಮಾಡುತ್ತಿದ್ದೀರಿ ಎಂಬ ಕಾರಣಕ್ಕಾಗಿ, ಅದು ಉಪಯುಕ್ತವಾಗಿದ್ದರೂ ಸಹ, ಅದರೊಂದಿಗೆ ಗುರುತಿಸಿಕೊಳ್ಳುವ ಅಗತ್ಯವಿಲ್ಲ. ಗುರುತಿಸಿಕೊಂಡ ಕ್ಷಣ, ಮನಸ್ಸು ತಿರುಚಿಕೊಳ್ಳುತ್ತದೆ ಮತ್ತು ಇಂತಹ ಮನುಷ್ಯರು ನಿಜವಾಗಿಯೂ ಜನರಿಗೆ ಒಳಿತನ್ನು ತರಲಾರರು.
ಯಾವುದರೊಂದಿಗಾದರೂ ಗುರುತಿಸಿಕೊಂಡ ಕ್ಷಣ, ಜಗತ್ತನ್ನು ಸಾವಿರಾರು ತುಣುಕುಗಳಾಗಿ ವಿಭಜಿಸುತ್ತೀರಿ. ನಿಮ್ಮ ದೃಷ್ಟಿಯಲ್ಲಿ ಎಲ್ಲವನ್ನೂ ವಿಭಜಿಸಿದ ನಂತರ, ನೀವು ಮಾಡುವ ಪ್ರತಿಯೊಂದೂ ಆ ವಿಭಜನೆಯನ್ನು ಮಾತ್ರ ಹೆಚ್ಚಿಸುತ್ತದೆ ಮತ್ತು ಅದು ಮಾನವಕುಲದ ಅತ್ಯುನ್ನತ ಒಳಿತಿಗೆ ಎಂದಿಗೂ ಸಹಕಾರಿಯಾಗುವುದಿಲ್ಲ. ಆದ್ದರಿಂದ ಮಕ್ಕಳಿಗೆ ಯಾವುದೇ ಆಧ್ಯಾತ್ಮಿಕತೆಯನ್ನು ಕಲಿಸಬೇಕಾಗಿಲ್ಲ. ಅವರಿಗೆ ಕಲಿಸಿದ ಎಲ್ಲ ಅರ್ಥವಿಲ್ಲದ ವಿಷಯಗಳನ್ನು, ನಿಮ್ಮ ಎಲ್ಲ ತಂತ್ರಗಳನ್ನು ಮರೆಯುವಂತೆ ಮಾಡಿ, ಅವುಗಳಿಂದ ಅವರನ್ನು ಮುಕ್ತಗೊಳಿಸಿ ಮತ್ತು ಅವರು ಸ್ವಾಭಾವಿಕವಾಗಿಯೇ ಆಧ್ಯಾತ್ಮಿಕರಾಗುತ್ತಾರೆ.
ಒಂದು ಮಗುವನ್ನು, ನಿಮ್ಮನ್ನೂ ಸೇರಿಸಿ ಯಾವುದರೊಂದಿಗೂ ಗುರುತಿಸಿಕೊಳ್ಳದಂತೆ ಬೆಳೆಯಲು, ಸಹಾಯ ಮಾಡಬಹುದಾದರೆ, ಒಂದು ಮಗು ತನ್ನ ಮನಸ್ಸಿನಲ್ಲಿ ಯಾವುದೇ ಗುರುತಿಸುವಿಕೆಯಿಲ್ಲದೆ ಬೆಳೆದರೆ, ಅವರು ಸ್ವಾಭಾವಿಕವಾಗಿ ಆಧ್ಯಾತ್ಮಿಕರಾಗುತ್ತಾರೆ; ಯಾರೂ ಅವರಿಗೆ ಯಾವುದೇ ಆಧ್ಯಾತ್ಮಿಕತೆಯನ್ನು ಕಲಿಸಬೇಕಾಗಿಲ್ಲ. ಇದು ಒಂದು ಸಸ್ಯಕ್ಕೆ ಹೂವು ಅರಳಿಸುವುದನ್ನು ಕಲಿಸುವಂತೆ- ಇದು ಹುಚ್ಚುತನ.
ಕೆಲವು ತೋಟಗಾರರು ತಮ್ಮಿಂದಲೇ ಹೂವುಗಳು ಅರಳುತ್ತವೆ ಎಂದು ನಂಬುತ್ತಾರೆ; ಹಾಗಲ್ಲ. ಹೂವು ಅರಳುವುದು ಸಸ್ಯದ ಸ್ವಭಾವ. ಅವು ನೈಸರ್ಗಿಕ ಪರಿಸ್ಥಿತಿಗಳಲ್ಲಿ ಇದ್ದರೆ, ಅವು ಹಾಗೆಯೇ ಹೂವನ್ನು ಬಿಡುತ್ತಿದ್ದವು. ಕಾಡಿನಲ್ಲಿ ಎಲ್ಲವೂ ಪೂರ್ಣ ಅರಳುವಿಕೆಯಲ್ಲಿರುತ್ತದೆ.
ಒಂದು ರೀತಿಯಲ್ಲಿ, ನಾವು ಜನರಿಗೆ ಅವರ ಆಧ್ಯಾತ್ಮಿಕತೆಯ ಬಗ್ಗೆ ನೆನಪಿಸಬೇಕಾಗಿ ಬರುವುದು ನಿಜವಾಗಿಯೂ ನಾಚಿಕೆಯ ವಿಷಯ. ಆಧ್ಯಾತ್ಮಿಕ ಪ್ರಕ್ರಿಯೆಯು ನಮ್ಮ ಸಂಸ್ಕೃತಿಯ ಭಾಗವಾಗಬೇಕೆಂದು ನಾವು ಬಯಸುತ್ತೇವೆ. ತಾಯಿ ತನ್ನ ಮಗುವಿಗೆ ಹಲ್ಲು ಉಜ್ಜುವುದನ್ನು ಕಲಿಸುವಂತೆ, ಆಧ್ಯಾತ್ಮಿಕ ಪ್ರಕ್ರಿಯೆಯೂ ಆಗಬೇಕು- ಯಾವುದೇ ಪ್ರಯತ್ನವಿಲ್ಲದೆ, ತಾಯಿಗೆ ಅದರ ಬಗ್ಗೆ ತಿಳಿದಿಲ್ಲದಿದ್ದರೂ, ಅವಳು ತನ್ನ ಮಗುವಿಗೆ ಆಧ್ಯಾತ್ಮಿಕ ಪ್ರಕ್ರಿಯೆಯನ್ನು ಕಲಿಸುತ್ತಾಳೆ.
ಈ ಸಂಸ್ಕೃತಿಯಲ್ಲಿ ಕೇವಲ ಒಂದು ಅಥವಾ ಎರಡು ತಲೆಮಾರುಗಳ ಹಿಂದೆ ಹಾಗೆಯೇ ಇತ್ತು. ಇಂದಿಗೂ ಭಾರತದಲ್ಲಿ, ಆಧ್ಯಾತ್ಮಿಕ ಪ್ರಕ್ರಿಯೆಯ ಸಾರವನ್ನು ಯಾವುದೇ ಒಂದು ಸಂಸ್ಥೆ ನಿಯಂತ್ರಿಸುವುದಿಲ್ಲ. ಪ್ರಪಂಚದ ಇತರ ಭಾಗಗಳಲ್ಲಿ ಮಾಡುವಂತೆ ಯಾರೂ ಅದನ್ನು ಮಾರ್ಗದರ್ಶನ ಮತ್ತು ನಿಯಂತ್ರಣ ಮಾಡುವುದಿಲ್ಲ. ಇದು ಒಬ್ಬರ ಜೀವನದ ಭಾಗವಾಗಿರುತ್ತದೆ. ಪ್ರತಿಯೊಬ್ಬರೂ ತಮಗೆ ತಿಳಿದ ರೀತಿಯಲ್ಲಿ ಅದನ್ನು ಕಲಿಸುತ್ತಾರೆ. ಆಧ್ಯಾತ್ಮಿಕ ಪ್ರಕ್ರಿಯೆಯನ್ನು ಜೀವನದ ದೊಡ್ಡ ಭಾಗವನ್ನಾಗಿ ಮಾಡಲಾಗಿತ್ತು.
ಇದನ್ನು ಹೀಗೆ ನಿಯಂತ್ರಣವಿಲ್ಲದೆ ಬಿಡಲಾಗಿದೆ. ಏಕೆಂದರೆ ಇದು ಎಂದಿಗೂ ಒಂದು ಸಂಘಟಿತ ಮತಧರ್ಮದ ಪ್ರಕ್ರಿಯೆಯಾಗಿರಲಿಲ್ಲ. ಇದು ಕೇವಲ ಒಬ್ಬರ ವಿಕಾಸಕ್ಕಾಗಿ ವಿವಿಧ ವಿಧಾನಗಳಾಗಿತ್ತು. ನಮ್ಮ ದೇಶ ಭೂಮಿಯ ಮೇಲಿನ ಏಕೈಕ ದೇವರಿಲ್ಲದ ದೇಶವಾಗಿದೆ, ಏಕೆಂದರೆ ಇಲ್ಲಿ ದೇವರ ಬಗ್ಗೆ ಯಾವುದೇ ಗಟ್ಟಿಯಾದ ಕಲ್ಪನೆ ಇಲ್ಲ.
ಯಾರು ಬೇಕಾದರೂ ತಮಗೆ ಇಷ್ಟ ಬಂದದ್ದನ್ನು ಆರಾಧಿಸಬಹುದು. ಜನರು ಎಲ್ಲ ರೀತಿಯ ವಸ್ತುಗಳನ್ನು ಆರಾಧಿಸುತ್ತಾರೆ. ಭಾರತದಲ್ಲಿ ಧರ್ಮದ್ರೋಹಿ ಎಂಬ ಪದವೇ ಇಲ್ಲ. ಏಕೆಂದರೆ ಪ್ರತಿಯೊಬ್ಬರಿಗೂ ಏನಾದರೊಂದರ ಬಗ್ಗೆ ಪ್ರೀತಿ ಅಥವಾ ಭಕ್ತಿಯ ಭಾವನೆ ಇರುತ್ತದೆ. ಯಾರೋ ತಮ್ಮ ತಾಯಿಯನ್ನು ಪ್ರೀತಿಸುತ್ತಾರೆ, ಇನ್ನೊಬ್ಬರು ತಮ್ಮ ದೇವರನ್ನು ಪ್ರೀತಿಸುತ್ತಾರೆ, ಮತ್ತೊಬ್ಬರು ಹಣವನ್ನು ಪ್ರೀತಿಸುತ್ತಾರೆ, ಬೇರೊಬ್ಬರು ತಮ್ಮ ಕೆಲಸವನ್ನು ಪ್ರೀತಿಸುತ್ತಾರೆ, ಇನ್ನೊಬ್ಬರು ತಮ್ಮ ನಾಯಿಯನ್ನು ಪ್ರೀತಿಸುತ್ತಾರೆ, ಕೆಲವರು ತಮ್ಮ ಹಸುವನ್ನು ಪ್ರೀತಿಸುತ್ತಾರೆ.
ಅದು ಏನೇ ಆಗಿರಲಿ, ಅವರು ಆಧ್ಯಾತ್ಮಿಕ ಮಾರ್ಗದಲ್ಲಿ ಇದ್ದಾರೆ. ಅವರ ಆಧ್ಯಾತ್ಮಿಕ ಮಾರ್ಗ ದುರ್ಬಲವೇ ಅಥವಾ ಬಲಿಷ್ಠವೇ ಎಂಬುದಷ್ಟೇ ಪ್ರಶ್ನೆ. ಆದರೆ ಆ ಮಾರ್ಗದಲ್ಲಿ ಇಲ್ಲದವರು ಯಾರೂ ಇಲ್ಲ. ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯ ಮಾರ್ಗದಲ್ಲಿ ಇದ್ದಾರೆ. ಆದ್ದರಿಂದ ನೀವು ಅದನ್ನು ನಿಮ್ಮ ಮಕ್ಕಳಲ್ಲಿ ತರಲು ಬಯಸಿದರೆ, ಮನೆಯಲ್ಲಿ ಬೋಧನೆಯನ್ನು ಪ್ರಾರಂಭಿಸಬೇಡಿ. ಆಧ್ಯಾತ್ಮಿಕರಾಗಿರಿ, ದೇವರನ್ನು ಪ್ರೀತಿಸಿ ಎಂದು ನೀವು ಹೇಳುತ್ತ ಹೋದರೆ ಮಕ್ಕಳಿಗೆ ಇಷ್ಟವಾಗುವುದಿಲ್ಲ. ಜೀವನದ ಪ್ರತಿಯೊಂದು ಅಂಶವನ್ನು ಪ್ರಜ್ಞಾಪೂರ್ವಕವಾಗಿ ಮಾಡಿ.
ಜೀವನದಲ್ಲಿ ನಿರ್ದಿಷ್ಟ ಸೌಮ್ಯತೆ, ಸೊಬಗು, ಪ್ರೀತಿ ಮತ್ತು ಕಾಳಜಿಯನ್ನು ತನ್ನಿರಿ. ಅವರೂ ಅದರ ಭಾಗವಾಗುತ್ತಾರೆ. ಏಕೆಂದರೆ ಅದನ್ನು ಬಯಸದ ಯಾವ ಮನುಷ್ಯರೂ ಇಲ್ಲ. ತಮ್ಮ ಸುತ್ತಲೂ ಮತ್ತು ತಮ್ಮೊಳಗೆ ಸುಖಾನುಭೂತಿಯನ್ನು ಯಾರು ಬಯಸುವುದಿಲ್ಲ? ನಿಮ್ಮ ಮಕ್ಕಳೂ ಅದೇ ವಿಷಯವನ್ನು ಬಯಸುತ್ತಾರೆ. ನೀವು ಅದನ್ನು ಸೃಷ್ಟಿಸಿದರೆ, ಅವರು ಅದನ್ನು ಪ್ರೀತಿಸುತ್ತಾರೆ ಮತ್ತು ಅದರತ್ತ ಸೆಳೆಯಲ್ಪಡುತ್ತಾರೆ.
(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)