ಶಾಸ್ತ್ರಿ ಕೊಡುಗೆಯನ್ನು ದೇಶ ಮರೆಯದಿರಲಿ

Shasthri
Published on
ಸಮರ್ಥ ರಾಷ್ಟ್ರನಿಮಾರ್ಣದ ನಿಟ್ಟಿನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಹಲವು ಕನಸುಗಳನ್ನು ಕಂಡಿದ್ದರು. ಭಾರತದ ಆಂತರಿಕ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಅವುಗಳ ಪರಿಹಾರದ ನಿಟ್ಟಿನಲ್ಲೂ ಕಾರ್ಯೋನ್ಮುಖರಾಗಿದ್ದರು. ಸರಳ, ಪ್ರಾಮಾಣಿಕ ವ್ಯಕ್ತಿತ್ವದ ಅವರು ನಾಯಕತ್ವಕ್ಕೆ ಮಾದರಿಯಾಗಿದ್ದರು.

‘ಮೇರೆ ಬಿಟುವಾ ಕೋ ಜಹರ್ ದೇದಿಯ...’ ಎಂದು ಹೇಳಿದ ರಾಮ್ ದುಲಾರಿಯ ಮಾತಿಗೆ ಅಲ್ಲಿ ಬೆಲೆಯೇ ಇರಲಿಲ್ಲ. ಅಷ್ಟಕ್ಕೂ ಈ ರಾಮ್ ದುಲಾರಿ ಯಾರು ಅಂತಿರಾ? ಈ ದೇಶ ಕಂಡ ಪ್ರಾಮಾಣಿಕ, ಸಜ್ಜನ ರಾಜಕಾರಣಿ, ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ತಾಯಿ.

1904 ಅಕ್ಟೋಬರ್ 02ರಂದು ಮೊಘಲ್​ಸರಾಯ್ನಲ್ಲಿ ಜನಿಸಿದ ಲಾಲ್ ಬಹದ್ದೂರ್ ಶಾಸ್ತ್ರಿ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದರು. ಸ್ವತಂತ್ರ ಭಾರತದಲ್ಲಿ ಸರ್ಕಾರದ ವಿವಿಧ ಸ್ತರದ ಮಂತ್ರಿ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸಿದ ಅವರು ಜವಾಹರಲಾಲ್ ನೆಹರು ಮರಣದ ನಂತರ ಪ್ರಧಾನಿಯಾಗಿ ಆಯ್ಕೆಯಾದರು. ವಾಮನಮೂರ್ತಿ ಆಕಾರದ ಪ್ರಧಾನಿಯನ್ನು ಕಂಡ ಅಂದಿನ ಕಾಂಗ್ರೆಸ್​ನ ಕೆಲ ಮುಖಂಡರು ‘ಈತ ಏನು ತಾನೇ ಮಾಡಿಯಾನು?’ ಎಂದು ಒಳಗೊಳಗೆ ನಕ್ಕಿದ್ದರು. ಆದರೆ ಶಾಸ್ತ್ರಿಯವರು ಪ್ರಧಾನಿಯಾದ ಮೇಲೆ ಮೊದಲ ಬಾರಿ ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿಸಿ (1964), ಸ್ವಾತಂತ್ರೊ್ಯೕತ್ಸವದ ಭಾಷಣ ಮಾಡಿದಾಗ ದೇಶವೇ ರೋಮಾಂಚನಗೊಂಡಿತು. ‘ಮೊದಲಿಗೆ ನಾವು ಆತಂರಿಕವಾಗಿ ಬಲಿಷ್ಠರಾಗಬೇಕು, ಬಡತನ ಮತ್ತು ನಿರುದ್ಯೋಗ ತೊಡೆದು ಹಾಕಬೇಕು. ಆಗ ಮಾತ್ರ ಜಗತ್ತು ನಮ್ಮನ್ನು ಗೌರವಿಸುತ್ತದೆ’ ಎಂದು ಶಾಸ್ತ್ರೀಜಿ ಹೇಳಿದಾಗ ಭಾರತವನ್ನು ವಿಶ್ವದ ರಾಷ್ಟ್ರಗಳು ಗೌರವಿಸುವಂತೆ ಮಾಡಬೇಕೆಂಬ ಹಂಬಲ ಅವರಿಗೆ ಇತ್ತೆಂಬುದು ಸ್ಪಷ್ಟವಾಗುತ್ತದೆ.

ಈ ದೇಶದ ಪ್ರಧಾನಿ ಹುದ್ದೆಗೇರಿದಾಗ ಶಾಸ್ತ್ರೀಜಿಗೆ ಹೊರಗಿನ ಶತ್ರುಗಳಿಗಿಂತ ಕಾಂಗ್ರೆಸ್​ನ ಹಿತಶತ್ರುಗಳೇ ಅತಿಯಾದರು. ಆದರೂ ಅದೆಲ್ಲವನ್ನು ನಿಭಾಯಿಸಿದ ಅವರಿಗೆ ತಾಷ್ಕೆಂಟ್ ಒಪ್ಪಂದ ಜೀವವನ್ನು ಕಸಿದುಕೊಂಡಿತಾ? ರಷ್ಯಾದ ಅಧ್ಯಕ್ಷ ಅಲೆಕ್ಸಿ ಕೊಸಿಗಿನ್ ನೇತೃತ್ವದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ತಾಷ್ಕೆಂಟ್ ಒಪ್ಪಂದಕ್ಕೆ ರಷ್ಯಾದಿಂದ ಆಹ್ವಾನ ಬಂದಾಗ ಶಾಸ್ತ್ರೀಜಿ ಅದನ್ನು ತಿರಸ್ಕರಿಸಿದರು. ಆದರೆ ಅಂದಿನ ರಷ್ಯಾದ ಭಾರತದ ರಾಯಭಾರಿ ಟಿ.ಎನ್.ಕೌಲ್ ರಷ್ಯಾ ಸರ್ಕಾರಕ್ಕೆ ತಿಳಿಸದೆ, ‘ರಷ್ಯಾ ಕಾಶ್ಮೀರ ವಿಚಾರದಲ್ಲಿ ಭಾರತದ ಪರವಾಗಿದೆ’ ಎಂದು ತಿಳಿಸಿದ ನಂತರ ಶಾಸ್ತ್ರೀಜಿ ಒಪ್ಪಿಗೆ ಸೂಚಿಸಿದರು.

1966 ಜನವರಿ 3ರಂದು ದೆಹಲಿಯಿಂದ ರಷ್ಯಾಕ್ಕೆ ತೆರಳಿದ ಪ್ರಧಾನಿ ಶಾಸ್ತ್ರೀಜಿಯವರನ್ನು ರಷ್ಯಾದ ಡಾಚಾ(ವಿಲ್ಲಾ)ದಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಯಿತು. ಏಳು ದಿನಗಳ ಶೃಂಗಸಭೆ ನಂತರ ಅಂತಿಮವಾಗಿ ಜನವರಿ 10ರ ಸಂಜೆ 4 ಗಂಟೆಗೆ ಶಾಸ್ತ್ರೀಜಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿದರು. ರಷ್ಯಾಕ್ಕೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಕಾಶ್ಮೀರದ ಒಂದಿಂಚನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡುವುದಿಲ್ಲ ಎಂದು ಹಠ ಹಿಡಿದು ಕುಳಿತಿದ್ದ ಶಾಸ್ತ್ರಿಯವರ ಮುಂದೆ ರಷ್ಯಾದ ಒತ್ತಡಕ್ಕೆ ಮಣಿದು ಪಾಕಿಸ್ತಾನ ಮಂಡಿಯೂರಿತು. ಅವತ್ತು ರಾತ್ರಿ ಡಾಚಾಕ್ಕೆ ಬಂದ ಶಾಸ್ತ್ರೀಜಿಯವರಿಗೆ ಸಹಾಯಕ ರಾಮನಾಥ್, ಬಾಣಸಿಗ ಮಹಮ್ಮದ್ ಜಾನ್ ಮತ್ತು ರಷ್ಯಾದ ಇತರ ಬಾಣಸಿಗರು ತಯಾರಿಸಿದ ಪಾಲಕ್ ಮತ್ತು ಆಲೂಗಡ್ಡೆ ಪಲ್ಯವನ್ನು ಹತ್ತು ಗಂಟೆಗೆ ನೀಡಿದರು. ನಂತರ ಕಾರ್ಯದರ್ಶಿ ಸಹಾಯ್ಯೊಂದಿಗೆ ಮರುದಿನದ ಕಾರ್ಯಕ್ರಮಗಳ ಬಗ್ಗೆ ರ್ಚಚಿಸಿ, ದೆಹಲಿಯಲ್ಲಿದ್ದ ಸಹಾಯಕ ವೆಂಕಟರಾಮನ್​ನೊಂದಿಗೂ ರ್ಚಚಿಸಿದರು. ಜನವರಿ 11ಕ್ಕೆ ಕೈರೊ ಮೂಲಕ ಭಾರತಕ್ಕೆ ವಾಪಸಾಗುವವರಿದ್ದರು ಶಾಸ್ತ್ರಿ.

ದೆಹಲಿಯ 10 ಜನಪಥ್ ನಿವಾಸಕ್ಕೆ ಕರೆ ಮಾಡಿದ ಅವರಿಗೆ ಪತ್ನಿ ಲಲಿತಾ ಶಾಸ್ತ್ರಿ ಫೋನ್​ಗೆ ಸಿಗದೆ ಪ್ರೀತಿಯ ಮಗಳು ಕುಸುಮಾಳೊಂದಿಗೆ ಮಾತನಾಡಿದರು. ನಂತರ ಹಾಲು ಕುಡಿದು ಕೋಣೆಯಲ್ಲಿ ಓಡಾಡಿ ಫ್ಲಾಸ್ಕ್​ನಲ್ಲಿದ್ದ ನೀರು ಕುಡಿದು ಮಲಗಿದ ಪ್ರಧಾನಿಯವರಿಗೆ ತನಗೇನಾಗಿದೆ ಎಂದು ತಿಳಿಯುವಷ್ಟರಲ್ಲೇ ಎದೆನೋವು ಕಾಣಿಸಿಕೊಂಡಿತು. ಜನವರಿ 11ರ ನಸುಕಿನ ಜಾವ 1.20ಕ್ಕೆ ಶಾಸ್ತ್ರೀಜಿ ತಮ್ಮ ಕಾರ್ಯದರ್ಶಿ ಸಹಾಯ್ ಮತ್ತು ಶರ್ಮಾ ಇದ್ದ ಕೋಣೆಯ ಹೊರಗೆ ಬಾಗಿಲು ಬಡಿದು ನಿಂತಿದ್ದರು. ಬಾಗಿಲ ಬಳಿ ಶಾಸ್ತ್ರೀಜಿಯವರನ್ನು ಕಂಡ ಸಹಾಯ್ ಅಪಾಯದ ಮುನ್ಸೂಚನೆ ಅರಿತು, ವೈದ್ಯರಿಗೆ ಮಾಹಿತಿ ರವಾನಿಸಿದರು. ಕೋಣೆಯಲ್ಲಿದ್ದ ಫ್ಲಾಸ್ಕ್​ನತ್ತ ಬೊಟ್ಟು ಮಾಡಿ ಏನೋ ಹೇಳಲು ಹೊರಟ ಪ್ರಧಾನಿಗೆ ಅದು ಹೇಳಲು ಸಾಧ್ಯವಾಗಲೇ ಇಲ್ಲ. ವಿಪರೀತ ಬೆವತು, ಕೆಮ್ಮುತ್ತಿದ್ದ ಪ್ರಧಾನಿಯವರಿಗೆ ಭಾರತದ ವೈದ್ಯ ಡಾ| ಛುಗ್ ಇಂಜೆಕ್ಷನ್ ನೀಡಿದರು. ಏರ್ ಟ್ಯೂಬ್ ಮೂಲಕ ಕೃತಕ ಉಸಿರಾಟದ ವ್ಯವಸ್ಥೆ ಮಾಡಿದರೂ ಪ್ರಯೋಜನಕ್ಕೆ ಬರಲಿಲ್ಲ. ಅಷ್ಟರಲ್ಲೇ ರಷ್ಯಾದ ವೈದ್ಯೆ ಡಾ.ಇವೆಂಜಿಯಾ ಎರಮೆಂಕೋ ಆಗಮಿಸಿದರು. ಬೆಳಗ್ಗೆ 2.30ಕ್ಕೆ ರಷ್ಯಾದ ಹಿರಿಯ ವೈದ್ಯ ಡಾ.ಉಕ್ತಮ್ ಅರಿಪೋವಿಡ್ ಮತ್ತು ರಷ್ಯಾ ಆರೋಗ್ಯ ಸಚಿವರ ತಂಡ ಅಲ್ಲಿಗೆ ಆಗಮಿಸಿತು. ಸತತ ಒಂದು ಗಂಟೆಯ ಚಿಕಿತ್ಸೆಯ ನಂತರ ಶಾಸ್ತ್ರೀಜಿ ನಿಧನರಾಗಿದ್ದಾರೆ ಎಂದು ಘೊಷಿಸಲಾಯಿತು.

ಜನವರಿ 11ರ ಮಧ್ಯಾಹ್ನ 2.31ಕ್ಕೆ ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಲಾಲ್ ಬಹದ್ದೂರ್ ಶಾಸ್ತ್ರೀಯವರ ಪಾರ್ಥಿವಶರೀರವನ್ನು ಶೋಕಸಾಗರದಲ್ಲೇ ಬರಮಾಡಿಕೊಳ್ಳಲಾಯಿತು. 4.10ಕ್ಕೆ ಜನಪಥ ನಿವಾಸಕ್ಕೆ ಕರೆತಂದು ಪುಣ್ಯಸ್ನಾನ ಮಾಡಿಸುವಾಗಲೂ ಮನೆಯವರಿಗೆ ಪಾರ್ಥಿವ ಶರೀರದ ಹತ್ತಿರಕ್ಕೂ ಬರಲು ಬಿಡದ ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ಕುಟುಂಬಸ್ಥರ ಒತ್ತಡಕ್ಕೆ ಮಣಿದು ಹತ್ತಿರ ಬಿಟ್ಟರು. ಮೃತದೇಹ ನೋಡಿದ ಕೂಡಲೇ ಮಗ ಹರಿಕೃಷ್ಣ ಶಾಸ್ತ್ರಿ ಮರಣೋತ್ತರ ಪರೀಕ್ಷೆಗೆ ಬೇಡಿಕೆ ಇಟ್ಟರು. ಆದರೆ ಆಗಿನ ವಿದೇಶಾಂಗ ಸಚಿವ ಸ್ವರಣ್ ಸಿಂಗ್ ಮತ್ತು ಆಗಿನ ರಕ್ಷಣಾ ಮಂತ್ರಿ ವೈ.ಬಿ.ಚವ್ಹಾಣ್ ತಿರಸ್ಕರಿಸಿದರು. ಅಸಲಿಗೆ ತಾಷ್ಕೆಂಟ್​ನಲ್ಲಿ ರಷ್ಯಾ ಸರ್ಕಾರ ಮರಣೋತ್ತರ ಪರೀಕ್ಷೆ ನಡೆಸಲು ಅನುಮತಿ ಕೇಳಿದಾಗ ನಿರಾಕರಿಸಿದವರು ಇವರಿಬ್ಬರೇ.

1966ರ ಫೆಬ್ರವರಿ 14ರಂದು ರಾಜ್ಯಸಭೆಯಲ್ಲಿ ನಡೆದ ಸಂತಾಪ ಸಭೆಯಲ್ಲಿ ಸ್ವರಣ್ ಸಿಂಗ್ ಜನವರಿ 10 ಮತ್ತು 11ರಂದು ನಡೆದ ಘಟನೆ ಕುರಿತು ವಿವರಿಸುತ್ತಿದ್ದಾಗ ವಾಜಪೇಯಿಯವರು ‘ಪ್ರಧಾನಿಯವರು ತಂಗಿದ್ದ ಕೋಣೆಯಲ್ಲಿ ಬಝುರ್ ಇರಲಿಲ್ಲವೇ?’ ಎಂಬ ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರಿಸಿದ ಸ್ವರಣ್ ಸಿಂಗ್, ‘ಮೂರು ಫೋನ್​ಗಳಿದ್ದು ಬಝುರ್​ನಂತೆ ಕಾರ್ಯ ನಿರ್ವಹಿಸುತ್ತಿದ್ದವು’ ಎಂದರು. ಆದರೆ ತಾಷ್ಕೆಂಟ್​ನ ಡಾಚಾದಲ್ಲಿ ಪ್ರಧಾನಿ ತಂಗಿದ್ದ ಕೋಣೆಯ ಪೋಟೋವನ್ನು ರಾಮ್ ಮನೋಹರ್ ಲೋಹಿಯಾ ತರಿಸಿಕೊಂಡಿದ್ದರು. ಅದರ ಯಾವ ಮೂಲೆಯಲ್ಲೂ ಒಂದೇ ಒಂದು ಫೋನ್ ಇರಲಿಲ್ಲ. ಸ್ವರಣ್ ಸಿಂಗ್ ಸುಳ್ಳು ಹೇಳಿದ್ದರು. ಶಾಸ್ತ್ರಿಯವರು ವೈಯಕ್ತಿಕ ವಿಚಾರಗಳನ್ನು ಬರೆದಿಡುತ್ತಿದ್ದ ಕೆಂಪು ಡೈರಿ ಮತ್ತು ಕೊನೆಯದಾಗಿ ನೀರು ಕುಡಿದ ಫ್ಲಾಸ್ಕ್ ನಾಪತ್ತೆಯಾದವು.

1970 ಅಕ್ಟೋಬರ್ 04ರಂದು ಶಾಸ್ತ್ರಿಯವರ ಪತ್ನಿ ಲಲಿತಾ ಅವರು ‘ಧರ್ಮಯುಗ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ‘ಶಾಸ್ತ್ರಿಯವರ ದೇಹ ಊದಿಕೊಂಡಿತ್ತು, ಹಾಕಿದ ಕುರ್ತಾ, ಕೋಟನ್ನು ಹರಿದು ತೆಗೆಯಲಾಯಿತು. ದೇಹ ನೀಲಿ ಬಣ್ಣಕ್ಕೆ ತಿರುಗಿತ್ತು. ಕುತ್ತಿಗೆ ಹಿಂಭಾಗದಲ್ಲಿ ದೊಡ್ಡ ರಂಧ್ರವಾಗಿತ್ತು. ಅದರಿಂದ ರಕ್ತ ಜಿನುಗುತ್ತಿತ್ತು. ರಕ್ತದ ಹನಿ ಖಾದಿ ಟೋಪಿಗೂ ತಗುಲಿತ್ತು. ಇದೊಂದು ವ್ಯವಸ್ಥಿತ ಕೊಲೆ’ ಎಂಬ ಹೇಳಿಕೆ ನೀಡಿದರು. ಅನಿವಾರ್ಯವಾಗಿ ಹಿರಿಯ ಸಂಸದ ಡಾ. ಹೃದಯನಾಥ್ ಕುಂಚ್ರು ಅಧ್ಯಕ್ಷತೆಯಲ್ಲಿ ವಿಶೇಷ ತನಿಖಾ ಸಮಿತಿ ರಚಿಸಲಾಯಿತು. ವಾಜಪೇಯಿ, ಆಡ್ವಾಣಿ, ಟಿ.ಎನ್.ಸಿಂಗ್, ದಾಹ್ಯಭಾಯಿ ಪಟೇಲ್ ಸೇರಿದಂತೆ ಅನೇಕರು ಸಮಿತಿ ಸದಸ್ಯರಾಗಿದ್ದರು. ಈ ಬೆಳವಣಿಗೆಗಳ ನಡುವೆ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಕೊಸಾಡಿಯಾ ರಾಷ್ಟ್ರಪತಿಗಳಿಗೆ ಪತ್ರ ಬರೆದು, ‘ಶಾಸ್ತ್ರೀಜಿ ದೇಹದಲ್ಲಿ ಲಲಿತಾ ಶಾಸ್ತ್ರಿ ಹೇಳಿದ ಗಾಯಗಳಿದ್ದವು. ಪುಣ್ಯಸ್ನಾನದ ವೇಳೆ ನಾನು ಗಮನಿಸಿದ್ದೇನೆ. ದಿಂಬು ಮತ್ತು ಹೊದಿಕೆ ರಕ್ತಗತವಾಗಿತ್ತು’ ಎಂದು ಉಲ್ಲೇಖಿಸಿದರು.

ರಷ್ಯಾದಲ್ಲಿ 1959ರಿಂದ 72ರವರೆಗೆ ರಾಜಕೀಯ ನಾಯಕರಿಗೆ ಬಾಣಸಿಗನಾಗಿದ್ದ ಅಹಮ್ಮದ್ ಸತ್ರೋವ್, ಮಹಮ್ಮದ್ ಜಾನ್ ಜೊತೆ ಸೇರಿ ಅವತ್ತು ರಾತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ಹಾಲು ಬಿಸಿ ಮಾಡಿ ಕೊಟ್ಟಿದ್ದ. ರಷ್ಯಾದ ಆಂತರಿಕ ಭದ್ರತಾ ಪಡೆ ಕೆಜಿಬಿ ಅಹಮ್ಮದ್ ಸತ್ರೋವ್ ಮತ್ತು ಮಹಮ್ಮದ್ ಜಾನ್​ನನ್ನು ಬಂಧಿಸಿತು. ಆದರೆ ಬಿಡುಗಡೆಗೊಂಡ ನಂತರ ಅಹಮ್ಮದ್ ಸತ್ರೋವ್, ‘ವಿಷಪ್ರಾಶನವಾಗಿದ್ದರೆ ಅದು ಕೆಜಿಬಿಯಿಂದ ಮಾತ್ರ ಸಾಧ್ಯ. ಪ್ರಧಾನಿ ತಂಗಿದ್ದ ಡಾಚಾ ಸಂಪೂರ್ಣ ಕೆಜಿಬಿಯ ಕಂಟ್ರೋಲ್​ನಲ್ಲಿತ್ತು’ ಎಂದು ಹೇಳಿದ.

ಪ್ರಧಾನಿ ಜೊತೆಗೆ ರಷ್ಯಾಕ್ಕೆ ತೆರಳಿದ್ದ ಮುಖ್ಯ ಸಾಕ್ಷಿಗಳು ದುರಂತ ಅಂತ್ಯ ಕಂಡರು. ಡಾ| ಛುಗ್ ಪ್ರಯಾಣಿಸುತ್ತಿದ್ದ ಕಾರಿಗೆ 1977 ಮಾರ್ಚ್ 25ರಂದು ಟ್ರಕ್ ಗುದ್ದಿ ಅಪಘಾತವಾಯಿತು. ಬದುಕಿದ್ದ ಛುಗ್ ಕಾರಿನಿಂದ ಹೊರಬಂದು ನಿಂತಾಗ ಅದೇ ಟ್ರಕ್ ಹಿಂದೆ ಬಂದು ಗುದ್ದಿ ಕೊಲೆ ಮಾಡಿತು. ‘ಬಹುತ್ ದಿನ್ ಕಾ ಬೋಜ್ ಥಾ ಅಮ್ಮ!’ ಎಂದು ಲಲಿತಾ ಶಾಸ್ತ್ರಿ ಮನೆಗೆ ಬಂದು ತಾಷ್ಕೆಂಟ್​ನಲ್ಲಿ ನಡೆದಿದ್ದನ್ನು ಹೇಳಲು ಬಯಸಿದ ರಾಮನಾಥ್ ಮೋತಿಲಾಲ್ ನೆಹರು ಮನೆಯಿಂದ ಸಂಸತ್ ಭವನದ ಕಡೆಗೆ ಹೊರಟಿದ್ದಾಗ ಬಸ್ ಗುದ್ದಿ ಎರಡೂ ಕಾಲು ಕಳೆದುಕೊಂಡು ಮಾನಸಿಕವಾಗಿ ಅಸ್ವಸ್ಥರಾದರು. ಇದೆಲ್ಲದರ ಹಿಂದೆ ರಷ್ಯಾದ ಕೆಜಿಬಿ ಕೈವಾಡ ಇತ್ತಾ ಎಂಬ ಅನುಮಾನಗಳಿಗೆ ನಿಖರ ಉತ್ತರ ಸಿಗಲೇ ಇಲ್ಲ.

ಕೆಜಿಬಿಯಲ್ಲಿ ದಾಖಲೆ ಸಂಗ್ರಹಿಸಿಡುವ ಕೆಲಸ ಮಾಡುತ್ತಿದ್ದ ವಾಸಿಲಿ ಮಿತ್ರೊಕಿನ್ ರಹಸ್ಯ ದಾಖಲೆಗಳ ಪುಟಗಳನ್ನು ಕಿತ್ತು ತನ್ನ ಶೂನಲ್ಲಿ ಬಚ್ಚಿಟ್ಟುಕೊಂಡು ಮನೆಗೆ ತರುತ್ತಿದ್ದ. ನಿವೃತ್ತಿ ನಂತರ ಬ್ರಿಟನ್​ನಲ್ಲಿ ಆಶ್ರಯ ಮತ್ತು ರಕ್ಷಣೆ ಪಡೆದ ಆತ ಭಾರತಕ್ಕೂ, ಕೆಜಿಬಿಗೂ ಇದ್ದ ಸಂಬಂಧಗಳ ದಾಖಲೆ ಬಹಿರಂಗಪಡಿಸಿದ. ಅದರಲ್ಲಿ ‘ಶಾಸ್ತ್ರೀಜಿ ತಂಗಿದ್ದ ಕೋಣೆಗೆ ಮೈಕ್ರೋಫೋನ್ ಅಳವಡಿಸಲಾಗಿತ್ತು. ಅವರ ನರಳಾಟ ಕೇಳುತ್ತಿತ್ತು’ ಎಂದು ರಷ್ಯಾ ಸರ್ಕಾರಕ್ಕೆ ಕೆಜಿಬಿ ನೀಡಿದ ವರದಿಯ ಉಲ್ಲೇಖವಿದೆ.

ಅಣುಬಾಂಬ್ ತಯಾರಿಕೆಗೆ ಡಾ| ಹೋಮಿ ಜಹಾಂಗೀರ್ ಬಾಬಾರಿಗೆ ಬೆಂಬಲ ನೀಡಿದ್ದು ಶಾಸ್ತ್ರೀಜಿ ಅವರಿಗೆ ಮುಳುವಾಯಿತಾ? ಅಮೆರಿಕದ ಸಿಐಎ ಏಜೆಂಟ್ ರಾಬರ್ಟ್ ಕ್ರೌಲಿ ಪತ್ರಕರ್ತ ಗ್ರೆಗೋರಿ ಡಗ್ಲಾಸ್​ಗೆ ನೀಡಿದ 15 ಸಾವಿರ ಪುಟಗಳ ‘ಅಮೆರಿಕ ರಹಸ್ಯ ಕಾರ್ಯಚರಣೆ ವರದಿ’ಯಲ್ಲಿ- ‘1966 ಜನವರಿ 24ರಂದು ಏರ್ ಇಂಡಿಯಾ-101 ಕಾಂಚನಜುಂಗಾ ವಿಮಾನವನ್ನು ಮೌಂಟ್ ಬ್ಲಾ್ಯಂಕ್ ಪರ್ವತದ ಮೇಲೆ ಹೊಡೆದುರುಳಿಸಿದ ಬಗ್ಗೆ ಮಾಹಿತಿ ಇದೆ. ಭಾರತದ ಅಣು ಬಾಂಬ್ ತಯಾರಿಯ ನೀಲಿನಕ್ಷೆಯೂ ಅಮೆರಿಕದ ಸಿಐಎ ಕೈಸೇರಿತ್ತು’ ಎಂಬ ಉಲ್ಲೇಖವಿದೆ.

ಭಾರತ ಅಣುಶಕ್ತಿ ಹೊಂದುವಂತಾದರೆ ಅದರಿಂದ ರಷ್ಯಾ ಮತ್ತು ಅಮೆರಿಕಕ್ಕೆ ಅಪಾಯ ಎಂದರಿತ ಎರಡೂ ದೇಶಗಳು ಭಾರತದಲ್ಲಿ ಪ್ರಧಾನಿ ಪಟ್ಟಕ್ಕೇರಲು ಶತಾಯಗತಾಯ ಪ್ರಯತ್ನಿಸುತ್ತಿದ್ದವರನ್ನು ಬಳಸಿಕೊಂಡು ಶಾಸ್ತ್ರೀಜಿಯವರನ್ನು ಕೊಂದು ಹಾಕಿದವಾ? ಇದುವರೆಗೂ ನಿಗೂಢವಾಗಿ ಉಳಿದ ಶಾಸ್ತ್ರೀಜಿ ಸಾವಿನ ರಹಸ್ಯ ಇನ್ನಾದರೂ ಹೊರಬರಲಿ.

(ಲೇಖಕರು ಬಿಜೆಪಿ ಮುಖಂಡರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net