ಸುಜ್ಞಾನದ ಅರಿವಿಗೆ ಸಮ್ಮೇಳನಗಳು ವೇದಿಕೆಯಾಗಲಿ

Da Ra Bendre Veerendra Hegde
Published on

ಸಾಹಿತ್ಯ ಕ್ಷೇತ್ರದ ಚಟುವಟಿಕೆ ಹಾಗೂ ಬೆಳವಣಿಗೆಗಳಲ್ಲಿ ಸಮ್ಮೇಳನಗಳ ಪಾತ್ರ ಮಹತ್ವವಾದದ್ದು. ವಿಚಾರ ಮಂಡನೆಗೆ, ವಿಮರ್ಶೆಗೆ, ಪ್ರಚಲಿತ ವಿಷಯ, ಅಭಿವೃದ್ಧಿ ಮುಂತಾದವುಗಳ ಬಗ್ಗೆ ಬೆಳಕು ಚೆಲ್ಲುವಂಥ ಕಾರ್ಯಗಳು ಸಮ್ಮೇಳನಗಳ ಮೂಲಕ ನಡೆಯಬೇಕಿದೆ. ಇನ್ನೂ ಮುಂದುವರೆದು ಜಗತ್ತಿನೆಲ್ಲೆಡೆ ಮಾನವೀಯತೆ, ಶಾಂತಿ, ಸೌಹಾರ್ದ ನೆಲೆಗೊಳ್ಳುವ ಬಗ್ಗೆ ಸಂಕಲ್ಪಿಸಬೇಕಿದೆ.

ಭಾರತದಲ್ಲಿ ಇರುವಷ್ಟು ಧರ್ಮಗಳು, ಮತ, ಪಂಥಗಳು ಮತ್ತು ಅವುಗಳ ಆಚರಣೆಗಳು ಬಹುಶಃ ವಿಶ್ವದ ಯಾವ ದೇಶದಲ್ಲೂ ಇರಲಾರವು ಎನಿಸುತ್ತದೆ. ನಮ್ಮ ದೇಶದ ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಸಾಗಿದಾಗ ಹೆಜ್ಜೆ ಹೆಜ್ಜೆಗೂ ವಿವಿಧತೆಯನ್ನು ಕಾಣಬಹುದಾಗಿದೆ. ಆ ವಿವಿಧತೆಯಲ್ಲೂ ಏಕತೆಯನ್ನು ಜಗತ್ತಿಗೆ ಮಾದರಿ ಎಂಬಂತೆ ಸಾರಿದ ಮತ್ತು ಈಗಲೂ ಸಾರುತ್ತಿರುವ ರಾಷ್ಟ್ರದಲ್ಲಿ ನಾವು ಹುಟ್ಟಿ ಬೆಳೆದಿದ್ದೇವೆ ಎಂಬುದು ಹೆಮ್ಮೆಯ ವಿಚಾರವಾಗಿದೆ. ಇಲ್ಲಿ ಎಷ್ಟೇ ಧರ್ಮಗಳಿದ್ದರೂ ಎಲ್ಲರೂ ಅವರವರ ಪಾಡಿಗೆ ತಮ್ಮ-ತಮ್ಮ ಧರ್ಮ, ರೀತಿ-ನೀತಿಗಳನ್ನು ಅನುಸರಿಸಿಕೊಂಡು ಹೋಗುತ್ತಿದ್ದಾರೆ. ‘ಬದುಕು ಮತ್ತು ಇತರರನ್ನೂ ಬದುಕಗೊಡು’ ಎಂಬ ತತ್ವವು ಎಲ್ಲರಲ್ಲಿ ಇರುವುದರಿಂದಲೇ ಐಕ್ಯತೆಯನ್ನು ಹೊಂದಲು ಸಾಧ್ಯವಾಗಿದೆ.

ನಮ್ಮ ನಾಡಿನಲ್ಲಿರುವ ಭಿನ್ನ ಭಿನ್ನ ಧರ್ಮಗಳ ನೈಜತೆ, ತತ್ವ, ಸಿದ್ಧಾಂತ ಮತ್ತು ಮರ್ಮಗಳೆಲ್ಲ ಒಂದೇ ಆಗಿದೆ. ಹಾಗೆಯೇ ಎಲ್ಲ ಧರ್ಮಗಳು ವ್ರತ, ಉಪವಾಸ, ತೀರ್ಥಯಾತ್ರೆ ಮುಂತಾದವನ್ನು ಬೇರೆ ಬೇರೆ ರೀತಿಯಲ್ಲಿ ಆಚರಿಸುವುದನ್ನು ನಾವೆಲ್ಲ ಕಂಡಿದ್ದೇವೆ. ಬೇರೆ ಧರ್ಮದವರನ್ನು, ಅವರ ವಿಶೇಷತೆಯನ್ನು ಅರಿತುಕೊಂಡಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ. ಆದರೆ ಬಹುತೇಕರು ಎಡವುವುದೇ ಇಲ್ಲಿ. ಧರ್ಮ ಅಥವಾ ಆಚರಣೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋತಾಗ ಅಥವಾ ಧರ್ಮದ ವ್ಯಾಖ್ಯಾನವನ್ನು ಸಂಕುಚಿತಗೊಳಿಸಿದಾಗ ಸಮಾಜದಲ್ಲಿ ಧರ್ಮ, ಜಾತಿ, ಮತ, ಪಂಥ, ಪಂಗಡಗಳ ನಡುವೆ ಭಿನ್ನಾಭಿಪ್ರಾಯಗಳು, ತಿಕ್ಕಾಟ, ಕೋಪ, ಘರ್ಷಣೆಗಳು ಉಂಟಾಗಿ ಸಮಾಜದ ಸ್ವಾಸ್ಥ್ಯ ಹದಗೆಡುತ್ತದೆ. ಧರ್ಮವನ್ನು ವಿಶಾಲ ಅರ್ಥದಲ್ಲಿ ಕಾಣುವ ದೃಷ್ಟಿಯನ್ನು ನಾವೆಲ್ಲ ಬೆಳೆಸಿಕೊಳ್ಳಬೇಕಾಗಿದೆ.

ಎಲ್ಲಾ ಧರ್ವಿುಯರೂ ಮಾನವೀಯತೆ, ತ್ಯಾಗ, ಅಹಿಂಸೆ, ಸತ್ಯ, ಪರೋಪಕಾರ, ಸಹನೆ, ಸಹಬಾಳ್ವೆ ದಯೆ ಮುಂತಾದ ಸದ್ಗುಣಗಳನ್ನು ಧರ್ಮದ ರೂಪದಲ್ಲಿ ಕಂಡುಕೊಂಡಿದ್ದಾರೆ. ಸಂತ-ಮಹಾಂತರು, ಮುನಿಗಳು, ಪ್ರವಾದಿಗಳು, ಯುಗಪುರುಷರು ಮುಂತಾದವರೆಲ್ಲ ಸದ್ವಿಚಾರಗಳನ್ನೇ ಪ್ರಚುರ ಪಡಿಸಿದ್ದಾರೆ. ಇಂತಹ ಮೌಲ್ಯಗಳು ವ್ಯಕ್ತಿಯಲ್ಲಿ, ಸಮಾಜದಲ್ಲಿ ಮರೆಯಾದಾಗ ಅಶಾಂತಿ, ಕೋಮು ಗಲಭೆ, ಹಿಂಸೆ, ದೊಂಬಿ, ಯುದ್ಧಗಳು ಘಟಿಸುತ್ತವೆ. ಕಳೆದ ಕೆಲವು ವರ್ಷಗಳಿಂದ ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಯುದ್ಧಗಳು, ಆಕ್ರಮಣಗಳಿಂದಾಗಿ ಸಾಕಷ್ಟು ಪ್ರಾಣಹಾನಿ ಸಂಭವಿಸಿದೆ. ಅಪಾರ ಆಸ್ತಿ-ಪಾಸ್ತಿಗಳೂ ನಾಶವಾಗಿವೆ.

ನಾವೆಲ್ಲ ಒಂದೇ ಭೂಮಿಯಲ್ಲಿದ್ದುಕೊಂಡು ಉಸಿರಾಡುವ ಗಾಳಿ, ಕುಡಿಯುವ ನೀರು ಎಲ್ಲ ಒಂದೇ ಆಗಿರುವಾಗ ಧರ್ಮ, ಜಾತಿ, ಮತಗಳ ಹೆಸರಿನಲ್ಲಿ ಹೊಡೆದಾಡಿಕೊಳ್ಳುವುದು ಬಾಲಿಶವೆನಿಸುತ್ತದೆ. ಈ ಸಂದರ್ಭದಲ್ಲಿ ವಿಜ್ಞಾನಿ ಹಾಗೂ ರಾಷ್ಟ್ರಪತಿಯಾಗಿದ್ದ ಡಾ. ಅಬ್ದುಲ್ ಕಲಾಂ ಅವರ ಮಾತನ್ನು ನಾವೊಮ್ಮೆ ನೆನಪಿಸಿಕೊಳ್ಳಬೇಕು. ಅವರು ರಾಷ್ಟ್ರಪತಿ ಭವನದಲ್ಲಿ ಒಂದು ಸ್ಪಿರಿಚ್ಯುವಲ್ ಪಾರ್ಕನ್ನು ನಿರ್ವಿುಸಿ ಭಾರತದಲ್ಲಿ ಆಚರಣೆಯಲ್ಲಿರುವ ವಿವಿಧ ಧರ್ಮಗಳಿಗೆ ಸಂಬಂಧಿಸಿದ ಸಸ್ಯಗಳು ಮತ್ತು ಮರಗಳನ್ನು ಅಲ್ಲಿ ಒಟ್ಟಿಗೆ ಪೋಷಿಸುವುದರ ಜೊತೆಗೆ ‘ವಿವಿಧ ಜಾತಿಯ ಮರಗಳು ಒಂದೇ ನೆಲದಲ್ಲಿ ಬೆಳೆಯಬಹುದಾದರೆ ವಿವಿಧ ಧರ್ವಿುಯರು ಒಂದೇ ನೆಲದಲ್ಲಿ ಬಾಳಲು ಯಾಕೆ ಸಾಧ್ಯವಾಗದು?’ ಎಂಬ ಸಂದೇಶವನ್ನು ಬರೆಸಿದ್ದಾರೆ. ಈ ಮೂಲಕ ಧಾರ್ವಿುಕ ಮತ್ತು ಸಾಂಸ್ಕ ೃಕ ಭಿನ್ನತೆಗಳ ನಡುವೆಯೂ ಸಾಮರಸ್ಯದ ಸಹಬಾಳ್ವೆಯ ಸಂದೇಶ ಮತ್ತು ಪರಸ್ಪರ ಸಹಿಷ್ಣುತೆಯನ್ನು ಹೊಂದಲು ಸಾಧ್ಯ ಎಂಬುದು ಈ ಉದ್ಯಾನದ ಹಿಂದಿನ ಕಲ್ಪನೆಯಾಗಿದೆ.

ಸಾತ್ವಿಕ ಮಾರ್ಗದಿಂದ ಉತ್ತಮ ಸಂಸ್ಕಾರದೊಡನೆ ಬಾಳುವುದು ಮಾನವರ ಕಲ್ಯಾಣಕ್ಕಾಗಿ ಮನುಷ್ಯ- ಮನುಷ್ಯರ ನಡುವಿನ ಮನಸ್ಸನ್ನು ಬೆಸೆಯುವುದು ಎಲ್ಲ ಧರ್ಮಗಳ ಉದ್ದೇಶ. ಹೀಗೆ ಮನಸ್ಸುಗಳನ್ನು ಬೆಸೆಯಲು ಕಾರ್ಯಾಗಾರಗಳು, ಸಭೆ- ಸಮಾರಂಭಗಳು, ಸಮಾವೇಶಗಳು ಮುಖ್ಯ ವೇದಿಕೆಯಾಗುತ್ತವೆ. ಇಂದಿನ ದಿನಗಳಲ್ಲಿ ಅಂತಹ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತವೆಯಾದರೂ ಅವುಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಬಹಳಷ್ಟು ಕಡಿಮೆಯಾಗುತ್ತಿದೆ. ಸಾಹಿತ್ಯ ಕಾರ್ಯಕ್ರಮಗಳೂ ಸಾಹಿತ್ಯಾಸಕ್ತರಿಲ್ಲದೆ ಕಳೆಗುಂದುತ್ತಿವೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಇಂದಿನ ಯುವ ಜನಾಂಗಕ್ಕೆ, ವಿದ್ಯಾರ್ಥಿ ಸಮೂಹಕ್ಕೆ ಉತ್ತಮ ವಿಚಾರಧಾರೆಗಳ ಅರಿವು ಮೂಡಿಸಬೇಕು. ಅವರಲ್ಲಿ ಹೊಸ ಹೊಸ ಚಿಂತನೆ, ವಿಚಾರಧಾರೆಗಳು ಮೂಡಿ ಬರುವಂತೆ ಪ್ರೇರಣೆ ನೀಡಬೇಕು. ಅದಕ್ಕಾಗಿ ನಾವೆಲ್ಲ ಅವಕಾಶ ಮಾಡಿಕೊಡಬೇಕು. ಬಾಲ್ಯದಿಂದಲೇ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು. ಹೀಗೆ ಮಕ್ಕಳಲ್ಲಿ ಹೊಸತನವನ್ನು ಕಲಿಯುವ, ಅರಿಯುವ, ನೋಡುವ, ಸಂಶೋಧಿಸುವ ಮನೋಭಾವವು ಹೆಚ್ಚಾಗಲಿ.

ಸಾಹಿತ್ಯ ಕ್ಷೇತ್ರದ ಚಟುವಟಿಕೆ ಹಾಗೂ ಬೆಳವಣಿ ಗೆಗಳಲ್ಲಿ ಸಮ್ಮೇಳನಗಳ ಪಾತ್ರ ಮಹತ್ವವಾದದ್ದು. ವಿಚಾರ ಮಂಡನೆಗೆ, ವಿಮರ್ಶೆಗೆ, ಪ್ರಚಲಿತ ವಿಷಯ, ಅಭಿವೃದ್ಧಿ ಮುಂತಾದವುಗಳ ಬಗ್ಗೆ ಬೆಳಕು ಚೆಲ್ಲುವಂಥ ಕಾರ್ಯಗಳು ಸಮ್ಮೇಳನಗಳ ಮೂಲಕ ನಡೆಯಬೇಕಿದೆ. ಇನ್ನೂ ಮುಂದುವರೆದು ಜಗತ್ತಿನೆಲ್ಲೆಡೆ ಮಾನವೀಯತೆ, ಶಾಂತಿ, ಸೌಹಾರ್ದ ನೆಲೆಗೊಳ್ಳುವ ಬಗ್ಗೆ ಸಂಕಲ್ಪಿಸಬೇಕಿದೆ. ಸಾಹಿತ್ಯ ಸರ್ವರ ಹಿತವನ್ನು ಬಯಸಬೇಕು. ಸಾಹಿತ್ಯದಿಂದ ಲೋಕ ಕಲ್ಯಾಣ ಸಾಧ್ಯ. ಇದಕ್ಕೆ ಪೂರಕವಾಗಿ ರಾಮಾಯಣ, ಮಹಾಭಾರತಗಳೇ ಸಾಕ್ಷಿ. ಆದರ್ಶ ಪುರುಷ, ಆದರ್ಶ ಸಮಾಜ, ಅಲ್ಲಿನ ಆಡಳಿತ ವ್ಯವಸ್ಥೆ ಇನ್ನಿತರ ಎಲ್ಲ ವಿಚಾರಗಳ ಬಗ್ಗೆ ಮಹಾನ್ ಗ್ರಂಥಗಳು ಉಲ್ಲೇಖಿಸುತ್ತವೆ. ಮುಖ್ಯವಾಗಿ ಸತ್ಯ, ಧರ್ಮ, ನ್ಯಾಯಕ್ಕೇ ಸದಾ ಜಯ ಎನ್ನುವುದನ್ನು ಸಾರಿ ಸಾರಿ ಹೇಳುತ್ತವೆ. ಸ್ವಾತಂತ್ರ್ಯ ಪಡೆಯುವಲ್ಲಿ ಅಥವಾ ದೇಶ ಕಟ್ಟುವಲ್ಲಿ ಸಾಹಿತ್ಯವು ಪರಿಣಾಮಕಾರಿಯಾದ ಪಾತ್ರ ವಹಿಸಿದೆ ಎಂಬುದನ್ನು ಮರೆಯುವಂತಿಲ್ಲ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಡಿ. ಮಂಜಯ್ಯ ಹೆಗ್ಗಡೆಯವರು ಸರ್ವರಲ್ಲೂ ಸಾಹಿತ್ಯದ ಅಭಿರುಚಿ ಬೆಳೆಸುವ, ಧಾರ್ವಿುಕತೆಯನ್ನು ಜಾಗೃತಿಗೊಳಿಸಿ ಸರ್ವಧರ್ಮ ಸಮನ್ವಯತೆಗಾಗಿ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಸಂದರ್ಭದಲ್ಲಿ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳವನ್ನು 1933ರಲ್ಲಿ ಆರಂಭಿಸಿದರು. ನಾಡಿನ ವಿದ್ವಾಂಸರು, ಧಾರ್ವಿುಕ ಪುರುಷರು, ಸಂತರು ಹಾಗೂ ಲೇಖಕರು, ಬರಹಗಾರರನ್ನು ಆಮಂತ್ರಿಸಿ ಅವರಿಂದ ವಿವಿಧ ವಿಷಯ ಸಂಗತಿಗಳ ಬಗ್ಗೆ ವಿಚಾರ ಮಂಡನೆಗೆ ಅವಕಾಶ ಕಲ್ಪಿಸಿದರು. ಅಂದು ಅವರು ನೆಟ್ಟ ಸಸಿಯೊಂದು ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಡಿ. ಮಂಜಯ್ಯ ಹೆಗ್ಗಡೆಯವರ ಬಳಿಕ ಆ ಪರಂಪರೆಯನ್ನು ಮುಂದುವರಿಸಿಕೊಂಡು ಬಂದ ಶ್ರೀ ಡಿ. ರತ್ನವರ್ಮ ಹೆಗ್ಗಡೆಯವರು 1957ರಲ್ಲಿ ಈ ಸಮ್ಮೇಳನಗಳ ಬೆಳ್ಳಿಹಬ್ಬವನ್ನು ಆಚರಿಸಿದರು. ಅವರ ಅನಂತರ ಅವನ್ನೆಲ್ಲ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನನ್ನ ಹೆಗಲೇರಿತು. ಶ್ರೀ ಸ್ವಾಮಿಯ ಸೇವೆ, ಕ್ಷೇತ್ರದ ವಿವಿಧ ಕಾರ್ಯಕ್ರಮಗಳ ಜೊತೆಗೆ ಸಮ್ಮೇಳನಗಳಿಗೆ ವ್ಯವಸ್ಥಿತ ಚೌಕಟ್ಟನ್ನು ರೂಪಿಸಿಕೊಂಡು ಶಕ್ತಾ್ಯನುಸಾರವಾಗಿ ಮುಂದುವರಿಸಿಕೊಂಡು ಬರುತ್ತಿದ್ದೇನೆ. 1982ರಲ್ಲಿ ಸುವರ್ಣ ಮಹೋತ್ಸವ, 2007ರಲ್ಲಿ ಅಮೃತ ಮಹೋತ್ಸವ ಆಚರಿಸಿದೆವು.

ಇದುವರೆಗೂ ನಾಡಿನ ಖ್ಯಾತ ಸಾಹಿತಿಗಳು, ಗಣ್ಯರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು, ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಂಡರೆ, ಸರ್ವಧರ್ಮ ಸಮ್ಮೇಳನದಲ್ಲಿ ವಿವಿಧ ಧಾರ್ವಿುಕ ಗುರುಗಳು, ಚಿಂತನಕಾರರು, ವಿಚಾರಶೀಲರು, ಉಪನ್ಯಾಸಕರು ಹೀಗೆ ಅನೇಕರು ಭಾಗವಹಿಸಿ ಸಾಕಷ್ಟು ವಿಚಾರಗಳನ್ನು ಮಂಡನೆ ಮಾಡಿದ್ದಾರೆ. ಪ್ರತಿ ವರ್ಷವೂ ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸುವ ಜನರು ಈ ಸಮ್ಮೇಳನಗಳ ಮೂಲಕ ಹೊಸ ಹೊಸ ಚಿಂತನೆ, ವಿಚಾರಗಳಿಗೆ ಸಾಕ್ಷಿಯಾಗುತ್ತಾರೆ. ಈ ಬಾರಿ ನವೆಂಬರ್ 29 ಮತ್ತು 30ರಂದು ಕ್ರಮವಾಗಿ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನದ 92ನೇ ಅಧಿವೇಶನಗಳು ನಡೆದಿವೆ. ನಾಡಿನ ಖ್ಯಾತ ಗಣ್ಯರು, ವಿದ್ವಾಂಸರು ವಿವಿಧ ವಿಚಾರಧಾರೆಗಳನ್ನು ಹಂಚಿಕೊಂಡಿದ್ದಾರೆ.

ಪ್ರಸ್ತುತ ಸಾಹಿತ್ಯವು ಹೊಸತನವನ್ನು ಕಂಡುಕೊಳ್ಳುತ್ತಿದೆ. ಪತ್ರಿಕೆ, ಕೃತಿ ಬರವಣಿಗೆಯಲ್ಲದೆ, ಜಾಲತಾಣಗಳಲ್ಲಿಯೂ ಸಾಕಷ್ಟು ಉತ್ತಮ ಬರಹಗಾರರನ್ನು ಕಾಣಬಹುದಾಗಿದೆ. ಆನ್ಲೈನ್ ಮೂಲಕ ತಮ್ಮ ಬರವಣಿಗೆಯನ್ನು ಅಭಿವ್ಯಕ್ತಗೊಳಿಸುವಂತೆ, ಅದನ್ನು ಓದುವ, ಇಷ್ಟಪಡುವ ಸಾಹಿತ್ಯಾಭಿಮಾನಿಗಳನ್ನೂ ಹೆಚ್ಚಾಗಿ ಕಾಣಬಹುದು.

ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜನೆಗೊಂಡ ‘ಪುಸ್ತಕ ಸಂತೆ’ ಮೇಳದಲ್ಲಿ ಪೂರ್ಣಚಂದ್ರ ತೇಜಸ್ವಿ ಮುಂತಾದವರ ಅನೇಕ ಕೃತಿಗಳು ಹೆಚ್ಚು ಮಾರಾಟಗೊಂಡವು ಎಂದು ಸ್ನೇಹಿತರು ಹೇಳುತ್ತಾ, ಯುವಜನತೆಯಲ್ಲಿ ಓದುವ ಆಸಕ್ತಿ ಕಡಿಮೆಯಾಗಿಲ್ಲ, ಓದುವ ಹಂಬಲ ಇದ್ದು, ಓದುವ ಅಭಿರುಚಿ ಬೆಳೆಸುವ ಉತ್ತಮ ಕೃತಿಗಳು, ಓದಿಸಿಕೊಂಡು ಹೋಗಬಲ್ಲ, ಯುವಜನತೆಯ ಮನಸ್ಸನ್ನು ಸೆಳೆಯುವ ಕೃತಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳಲ್ಲಿ ಓದಿನ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದ ವತಿಯಿಂದ ಮೊಬೈಲ್ (ಚಲಿಸುವ ವಾಹನದಲ್ಲಿ) ಗ್ರಂಥಾಲಯವನ್ನು ಶ್ರೀಮತಿ ಹೇಮಾವತಿಯವರ ಆಶಯದಂತೆ ಕಳೆದ ವರ್ಷ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಗಿತ್ತು. ಇದು ಶಾಲೆಗಳಿಗೆ ತೆರಳಿ, ಮಕ್ಕಳಿಗೆ ಪುಸ್ತಕಗಳನ್ನು ಓದಲು ನೀಡಿ ಸಾಹಿತ್ಯಾಭಿರುಚಿಯನ್ನು ಹೆಚ್ಚಿಸುವಲ್ಲಿ ಯಶಸ್ಸು ಕಾಣುತ್ತಿದೆ.

ಧರ್ಮ, ಸಾಹಿತ್ಯ, ಕಲೆ, ಸಂಗೀತ, ಕ್ರೀಡೆ ಹೀಗೆ ಯಾವುದೇ ರಂಗವಿರಲಿ ಮಕ್ಕಳನ್ನು ಅದರಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ನಾವು 1980 ಮತ್ತು 1987ರಲ್ಲಿ ಉಜಿರೆಯಲ್ಲಿ ರಾಜ್ಯಮಟ್ಟದ ಮಕ್ಕಳ ಮೇಳವನ್ನು ಹಮ್ಮಿಕೊಂಡಿದ್ದೆವು. ಮಕ್ಕಳ ಬೆಳವಣಿಗೆಯ ಬಗೆಗೆ ಸಾಕಷ್ಟು ಪ್ರಯೋಗಗಳನ್ನು ಮಾಡಿ ಖ್ಯಾತರಾಗಿದ್ದ ಡಾ. ಶಿವರಾಮ ಕಾರಂತರೊಡನೆ ವಿಚಾರ ವಿನಿಮಯ ನಡೆಸಿ ಅವರು ಹಾಕಿಕೊಟ್ಟ ಮೇಲ್ಪಂಕ್ತಿಯಂತೆ ಮಕ್ಕಳ ಸಮ್ಮೇಳನದ ಕಾರ್ಯಕ್ರಮವನ್ನು ರೂಪಿಸಲಾಗಿತ್ತು. ಮಕ್ಕಳು ರಾಷ್ಟ್ರದ ಸಂಪತ್ತು ಅವರಲ್ಲಿ ಸುಪ್ತವಾಗಿರುವ ವಿವಿಧ ಆಂತರಿಕ ಶಕ್ತಿಗಳು ಹೊರಹೊಮ್ಮುವಂತಾಗಲು ಸಾಕಷ್ಟು ಅವಕಾಶ ದೊರೆಯಬೇಕು ಎಂಬುದೇ ಈ ಮೇಳಗಳ ಆಶಯವಾಗಿತ್ತು.

ಈ ಬಾರಿ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನೆರವೇರಲಿದೆ. ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಮ್ಮ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃಯನ್ನು ಉಳಿಸಿ, ಬೆಳೆಸುವಲ್ಲಿ ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರೇರಕವಾಗಲಿ. ಗ್ರಾಮೀಣ ಪ್ರದೇಶವಾದ ಧರ್ಮಸ್ಥಳದಲ್ಲಿ ಅಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಡಾ. ಹಂಪನಾ ನೇತೃತ್ವದಲ್ಲಿ 51ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿದ್ದೆವು. ಈಗಲೂ ಅನೇಕ ಹಿರಿಯರು ಆ ಸಮ್ಮೇಳನವನ್ನು ನೆನಪಿಸಿಕೊಳ್ಳುತ್ತಾರೆ.

ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ (ಋಗ್ವೇದ) ಉದಾತ್ತ ವಿಚಾರಗಳು ಎಲ್ಲೆಡೆಗಳಿಂದಲೂ ನಮ್ಮೆಡೆಗೆ ಹರಿದು ಬರಲಿ. ಎಲ್ಲಾ ಕಡೆಗಳಿಂದರೂ ಬರುವ ಉತ್ತಮ ವಿಚಾರಗಳನ್ನು ಸ್ವೀಕರಿಸಿ ಉತ್ತಮ ಬದುಕನ್ನು ರೂಪಿಸಿಕೊಳ್ಳೋಣ. ಧಾರ್ವಿುಕ, ಸಾಹಿತ್ಯ, ಶಿಕ್ಷಣ ಅಥವಾ ಇನ್ನಿತರ ಯಾವುದೇ ರಂಗದ ವಿಚಾರಗಳಿರಲಿ ಅವು ನಮ್ಮ ಜೀವನವನ್ನು ಹಸನುಗೊಳಿಸುವಂತಿರಬೇಕು. ನಮ್ಮ ಮೂಲಕ ಇತರರ ಬದುಕೂ ಹಸನಾಗುವಂತಿರಬೇಕು. ಸಮ್ಮೇಳನ, ಕಮ್ಮಟ, ಶಿಬಿರ, ಕಾರ್ಯಾಗಾರ ಇತ್ಯಾದಿ ಅಜ್ಞಾನವನ್ನು ಕಳೆಯುವ ಸುಜ್ಞಾನದ ಅರಿವು ಮೂಡಿಸುವ ವೇದಿಕೆಯಾಗಲಿ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net