

ದೇಶದ ಸಾಮಾಜಿಕ ಸನ್ನಿವೇಶದಲ್ಲಿ ಬಹುದೊಡ್ಡ ವೇಗ ನೀಡಬಹುದಾದ ನಿರ್ಧಾರವೊಂದನ್ನು ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಏಪ್ರಿಲ್ 30ರ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿದೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಜನಗಣತಿಯ ಜೊತೆಗೆ ದೇಶಾದ್ಯಂತ ಜಾತಿಗಣತಿಯನ್ನೂ ನಡೆಸುವ ನಿರ್ಧಾರ ಮಾಡಲಾಗಿದೆ. ಜಾತಿ ಗಣತಿಯಾಗಲಿ ಅಥವಾ ಸಾಮಾನ್ಯ ಗಣತಿಯೇ ಆಗಲಿ ದೇಶದ ಅಭಿವೃದ್ಧಿ ದೃಷ್ಟಿಯಿಂದ ಮಹತ್ವದ್ದು. ಗಣತಿಯಿಂದಲೇ ದೇಶದ ಜನರ ನಿಜವಾದ ಜೀವನಮಟ್ಟ ತಿಳಿಯುತ್ತದೆ. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು, ಬಡವರಿಗೆ ಯೋಜನೆಗಳನ್ನು ಸಿದ್ಧಪಡಿಸಲು, ಅನುದಾನಗಳನ್ನು ಮೀಸಲಿಡಲು, ಮೀಸಲಾತಿ ಕಲ್ಪಿಸಲು ಇನ್ನೂ ಅನೇಕ ಕಾರ್ಯಗಳಿಗೆ ಯಾವುದೇ ರೀತಿಯ ಗಣತಿ ಅನಿವಾರ್ಯ.
ಆದರೆ ಕರ್ನಾಟಕದಲ್ಲಿ ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರವು ಅವೈಜ್ಞಾನಿಕ ರೀತಿಯಲ್ಲಿ ಹತ್ತು ವರ್ಷಗಳ ಹಿಂದೆ ಸಾಮಾಜಿಕ-ಶೈಕ್ಷಣಿಕ-ಆರ್ಥಿಕ ಸಮೀಕ್ಷೆ ಹೆಸರಿನ ಜಾತಿ ಗಣತಿ ಮಾಡಿದೆ. ಅದನ್ನು ಇತ್ತೀಚೆಗಷ್ಟೆ ಸಂಪುಟ ಸಭೆಯಲ್ಲೂ ಇಟ್ಟು ರ್ಚಚಿಸಲಾಗಿದೆ. ಈ ವರದಿಯನ್ನು ಸಿದ್ಧಪಡಿಸುವಾಗ ಅನೇಕ ಲೋಪದೋಷಗಳು ಕಂಡುಬಂದಿವೆ. ಇಡೀ ವರದಿಯನ್ನು ಜನಕಲ್ಯಾಣಕ್ಕಿಂತಲೂ ಹೆಚ್ಚಾಗಿ ಸಮುದಾಯಗಳನ್ನು ಒಡೆಯಲು, ರಾಜಕೀಯ ಲಾಭ ಪಡೆಯಲು ರೂಪಿಸಿ ದಂತೆ ಸ್ಪಷ್ಟವಾಗಿ ಕಾಣುತ್ತಿದೆ. ಹೀಗಾಗಿ ಇದರಿಂದ ಸಮಾಜಕ್ಕೆ ಯಾವುದೇ ಲಾಭ ಇಲ್ಲ.
2011ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಜಾತಿಗಣತಿಯ ದತ್ತಾಂಶಗಳನ್ನು ದೇಶಾದ್ಯಂತ ಸಂಗ್ರಹಿಸಿ ರಾಜಕೀಯ ಕಾರಣಗಳಿಗೋಸ್ಕರ ಅಧಿಕೃತವಾಗಿ ಬಿಡುಗಡೆಗೊಳಿಸದೆ ಅನಗತ್ಯ ಕಾಲಹರಣ ಮಾಡಿ ಈಗ ದೇಶಾದ್ಯಂತ ಜಾತಿಗಣತಿಗಾಗಿ ಒತ್ತಾಯ ಮಾಡುತ್ತಿರುವುದರ ಹಿಂದಿನ ಮರ್ಮವನ್ನು ಎಲ್ಲ ಪ್ರಜ್ಞಾವಂತರೂ ಅರ್ಥ ಮಾಡಿಕೊಳ್ಳಬಲ್ಲರು.
ಆದರೆ ಕೇಂದ್ರ ಸರ್ಕಾರವು ನಡೆಸುವ ಜನಗಣತಿಯು ವೈಜ್ಞಾನಿಕವಾಗಿ ನಡೆಯುತ್ತದೆ. ಈ ಬಾರಿ ಟ್ಯಾಬ್ ಬಳಸಿ ಜನಗಣತಿ ನಡೆಸಲಾಗುತ್ತದೆ ಎಂಬ ಮಾತು ಗಳು ಕೇಳಿಬರುತ್ತಿವೆ. ಕರ್ನಾಟಕದಲ್ಲಿ ಜಾತಿ ಗಣತಿಯ ವೇಳೆ ನಡೆದ ಪ್ರಮಾದಗಳು ಪುನರಾವರ್ತನೆಯಾಗದಂತೆ ಕೇಂದ್ರ ಜನಗಣತಿ ವೇಳೆ ಎಚ್ಚರಿಕೆ ವಹಿಸಬೇಕಿದೆ.
ಪ್ರತಿಯೊಂದು ಮನೆಗೂ ಭೇಟಿ ನೀಡಿದ್ದಕ್ಕೆ ಪುರಾವೆಗಳಿಗಾಗಿ ತಂತ್ರಜ್ಞಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು.
ಜಾತಿಗಳನ್ನು ಗುರುತಿಸುವಾಗ ಹಾಗೂ ಅವುಗಳಿಗೆ ಕೋಡ್ ನೀಡುವಾಗ ಆಯಾ ರಾಜ್ಯಗಳನ್ನು ಸಂರ್ಪಸಬೇಕು. ಪ್ರತಿ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಈ ಕುರಿತು ನಿರ್ದೇಶನ ನೀಡಿ, ಯಾವುದೇ ಸಣ್ಣ ಜಾತಿಯೂ ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಇದ್ದ ಜಾತಿಗಳನ್ನು ಕೃತಕವಾಗಿ ವಿವಿಧ ಹೆಸರುಗಳಲ್ಲಿ ವಿಭಜನೆ ಮಾಡದಂತೆ ನೋಡಿಕೊಳ್ಳಬೇಕು.
ಯಾವುದೇ ಸಣ್ಣ ಜಾತಿಯೂ ಗಣತಿಯಿಂದ ಬಿಟ್ಟುಹೋಗದಂತೆ ಜಾಗ್ರತೆ ವಹಿಸಬೇಕು.
ಅಲೆಮಾರಿ ಸಮುದಾಯಗಳನ್ನು ಗಣತಿ ಮಾಡುವುದು ಸವಾಲಿನ ಕೆಲಸ. ಈ ಕಾರ್ಯಕ್ಕಾಗಿ ವಿಶೇಷ ಪರಿಣತಿ ಹೊಂದಿರುವವರನ್ನೇ ನೇಮಿಸಬೇಕು.
ಗಣತಿಯಲ್ಲಿ ಒಂದು ಕುಟುಂಬ ಬಡತನದಲ್ಲಿದೆಯೋ, ಶ್ರೀಮಂತವೋ ಎಂದು ನಿರ್ಧರಿಸುವ ಮಾನದಂಡಗಳ ಬದಲಾವಣೆ ಆಗಬೇಕು. ಒಂದು ಕುಟುಂಬದಲ್ಲಿ ಪಿಯುಸಿ ಓದಿದವರಿದ್ದರೆ, ಇನ್ನೊಂದು ಕುಟುಂಬದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡಿದವರಿದ್ದರೆ ಇಬ್ಬರನ್ನೂ ಕೇವಲ ‘ಶಿಕ್ಷಿತರು’ ಎಂದು ಒಂದೇ ಗುಂಪು ಮಾಡುವುದು ಸರಿಯಲ್ಲ. ಪ್ರತಿಯೊಂದು ಹಂತದ ವಿದ್ಯಾಭ್ಯಾಸ, ಉದ್ಯೋಗಕ್ಕೂ ಪ್ರತ್ಯೇಕ ಪ್ರಮಾಣ (Weightage) ನೀಡಬೇಕು.
| ಡಾ. ಎಂ.ಆರ್. ವೆಂಕಟೇಶ್ ರಾಜ್ಯಾಧ್ಯಕ್ಷರು, ರಾಜ್ಯ ಒಕ್ಕಲಿಗರ ಒಕ್ಕೂಟ (ರಿ) ಬೆಂಗಳೂರು