

‘ವಿಪರೀತ ಮಾತಾಡಿ ಬಿಟ್ಟೆ’ ಅಂತ ನಿಮಗೇ ಅನ್ನಿಸಿ ಫಕ್ಕನೆ ಸುಮ್ಮನಾಗಿದ್ದೀರಾ ಯಾವಾಗಲಾದರೂ? That's ok. ಹಾಗಂತ ಯಾವಾಗಲಾದರೊಮ್ಮೆ ಅನ್ನಿಸಿದರೆ ನಿಜವಾಗಿಯೂ ಓ.ಕೆ. ಗೆಳೆಯರೊಂದಿಗೆ ಖುಷಿಯಾಗಿ ಕೂತಾಗ ಸಹಜವಾಗಿಯೇ ಮಾತು ಜಾಸ್ತಿಯಾಗುತ್ತವೆ. ಭಾಷಣಕ್ಕೆ ಅಂತ ನಿಂತಾಗ ಪ್ರೇಕ್ಷಕರ ಪ್ರತಿಕ್ರಿಯೆ ಚೆನ್ನಾಗಿದ್ದರೆ ‘ಹೊಡೀ ಇನ್ನಷ್ಟು ಮಾತು’ ಅನ್ನುತ್ತದೆ ಮನಸು. ಸ್ವಲ್ಪ ಗುಂಡು ಹಾಕಿದರೆ ಕೆಲವರು ಭಯಂಕರ ಇಂಗ್ಲಿಷಿನಲ್ಲಿ ಮಾತು ಶುರು ಮಾಡಿ ಬಿಡುತ್ತಾರೆ.
ಇವೆಲ್ಲವೂ ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುವ ನಮ್ಮವೇ ವಾಚಾಳಿ ಮುಖಗಳು. ಇವುಗಳಿಂದ ಉಪದ್ರವ ವಿಲ್ಲ. ಆದರೆ ಇಡೀ ದಿನ ನೀವು ವಿಪರೀತ ಮಾತನಾಡುತ್ತೀರಾ? ಈ ಕೆಳಗಿನ ಪ್ರಶ್ನೆಗಳಿಗೆ ನೀವೇ ಉತ್ತರಿಸಿಕೊಳ್ಳಿ. ಮಾತಾಡುತ್ತ ಆಡುತ್ತ ಒಂದು ಕಡೆ ಥಟ್ಟನೆ ಸಬ್ಜೆಕ್ಟು ಮುಗಿದು ಹೋಯ್ತು ಅನ್ನಿಸುತ್ತದಾ? ಮನೆಗೆ ಬಂದ ಮೇಲೆ ನಾನು ಅಷ್ಟೊಂದು ಮಾತಾಡಬಾರದಿತ್ತೇನೋ- ಅಂತ ತುಂಬ ಸಲ ಅನ್ನಿಸುತ್ತದಾ?
‘ಸಾಕು ನಿಲ್ಸೋ ಮಾರಾಯಾ...’ ಅಂತ ಗೆಳೆಯರು ಅಂದ ಮೇಲೂ ನೀವು ಮಾತು ಮುಂದುವರಿಸುತ್ತಿದ್ದೀರಾ? ನಿಮ್ಮನ್ನು ನೋಡಿದ ತಕ್ಷಣ ಗೆಳೆಯರು ನಿಮ್ಮನ್ನು avoid ಮಾಡತೊಡಗಿದ್ದಾರೆ ಅನ್ನಿಸುತ್ತಿದೆಯಾ? ಎಲ್ಲಕ್ಕಿಂತ ಹೆಚ್ಚಾಗಿ, ನಿಮ್ಮೊಂದಿಗೆ ಯಾರಾದರೂ ಹತ್ತು ನಿಮಿಷ ಮಾತನಾಡಲು ನಿಂತರೆ ನೀವು ಅವರಿಗೆ ಅವಕಾಶವನ್ನೆ ಕೊಡದೆ ಒಂದೇ ಸಮನೆ ಮಾತಾಡಿಬಿಡುತ್ತೀರಿ ಅನ್ನಿಸುತ್ತದಾ? ಮನೆಯಲ್ಲೇ ನಿಮ್ಮ ಬಗ್ಗೆ ‘ವಿಪ್ರೀತ ಮಾತು, ಹೇಳಿದ್ದೇ ಹೇಳ್ತಾನೆ, ಶುರುವಾದ್ರೆ ನಿಲ್ಲಿಸೋದೇ ಇಲ್ಲ, ಭಯಂಕರ ಹ್ಯಾಮರ್ರು, ಥೂ... ಸುತ್ಗೆ’ ಎಂಬೆಲ್ಲ ಸಿಡಿಮಿಡಿ ಆರಂಭವಾಗಿದೆಯಾ? ಯಾರೂ ಮಾತಿಗೆ ಸಿಗದಿದ್ದಾಗ ನಿಮಗೆ ಕಷ್ಟ ಅನ್ನಿಸಿದೆಯಾ?
ಸುಮ್ಮನೆ ಬಸ್ಸ್ಟಾಪಿನಲ್ಲಿ ನಿಂತ ಅಪರಿಚಿತರನ್ನು ನೀವಾಗೇ ಸಮೀಪಿಸಿ ‘ಎಷ್ಟ್ ಬಿಸ್ಲು ಅಲ್ವಾ?’ ಅಂತ ಮಾತಿಗೆಳೆಯಲು ಯತ್ನಿಸಿದ್ದೀರಾ? ನೀವು ನಿಮಗೆ ಗೊತ್ತಿರದ ಅಥವಾ ಪೂರ್ತಿ ಗೊತ್ತಿರದ Subject ಎತ್ತಿಕೊಂಡು ದಡಬಡನೆ ಮಾತಾಡತೊಡಗುತ್ತೀರಾ? ಇನ್ನೊಬ್ಬ ವಾಚಾಳಿ ಸಿಕ್ಕಾಗ ಅವನನ್ನು ಮೀರಿಸಿ ನೀವೇ ಮಾತಾಡಲು ಮೇಲುಗೈಯಾಗಲು ಹವಣಿಸುತ್ತೀರಾ? ಇಡೀ ಸಿನಿಮಾದ ಕಥೆ ಹೇಳಲು ಶುರು ಮಾಡುತ್ತೀರಾ? ಯಾರಾದರೂ ನಿಮಗೆ ‘ಸುಮ್ನಿರಿ ಸ್ವಲ್ಪ’ ಅಂದಾಗ ಬೇಸರ ಮಾಡಿಕೊಳ್ಳುತ್ತೀರಾ? ಒಂದಿಡೀ ದಿನ ಯಾರೊಂದಿಗೂ ಮಾತಾಡದೆ ಇದ್ದೂ ಕೂಡ ನೀವು ಸಂತೋಷವಾಗಿ ಇರಬಲ್ಲಿರಾ?
Hold on. ಮಾತು ಕಡಿಮೆ ಮಾಡಿ. ಮಾತು ಕಡಿಮೆ ಮಾಡುವ ಅವಶ್ಯಕತೆ ನಿಮಗಿದೆ. ಕಾರಣವಿಷ್ಟೆ- ನಮ್ಮ ಮನೆಗಳವರು, ಸುತ್ತಲಿನವರು, ಸ್ನೇಹಿತರು, ಒಟ್ಟಾರೆ ಈ ಸಮಾಜ ವಾಚಾಳಿಗಳನ್ನು ಹೇಗೋ ಸಹಿಸಿಕೊಳ್ಳುತ್ತದೆ. ಆದರೆ ವಾಚಾಳಿತನ ನಮಗೇ ಒಳ್ಳೆಯದಲ್ಲ. ‘ಎಂಥ ಕಲ್ಲನ್ನ ಬೇಕಾದ್ರೂ ಮಾತಾಡಿಸಿಕೊಂಡು ಬರ್ತೀನಿ’ ಅಂತ ಹೊರಡುವುದು ಒಳ್ಳೆಯದೇ. ಆದರೆ ಕಲ್ಲಿಗೂ ಬೋರಾಗಿ ಬಿಡುವಂತೆ ಮಾತನಾಡುವುದು ಕಾಯಿಲೆಯ ಲಕ್ಷಣ. ಮಾತು ಎಂಬುದು ನಮ್ಮ ಅನೇಕ ಮನೋದೈಹಿಕ ಚಟುವಟಿಕೆಗಳಲ್ಲಿ ಒಂದು. ಅದನ್ನು ಮಾಡದೆಯೂ ಇರಬಹುದು. ಇಡೀ ದಿನ ಕೂತೇ ಇರುತ್ತೇವೆ. ಓಡಾಡದೇನೇ. ಹಾಗೆಯೇ ಇಡೀ ದಿನ ಮೌನವಾಗಿಯೂ ಇರಬಹುದು: ಮಾತಾಡದೇನೇ. ಏಕೆಂದರೆ, ಮೌನ ಕೂಡ ‘ಸಾಧಿಸಬೇಕಾದ ಒಂದು ವಿದ್ಯೆ’. ಬೆಳಗ್ಗೆಯಿಂದ ಯಾರ್ಯಾರೊಂದಿಗೆ ಎಷ್ಟೆಷ್ಟು ಹೊತ್ತು, ಏನೇನನ್ನು ಮಾತನಾಡಿದೆ ಅಂತ ರಾತ್ರಿ ಕುಳಿತು ಹಾಳೆಯಲ್ಲಿ note ಮಾಡುತ್ತ ಹೋಗಿ. ‘ಅನವಶ್ಯಕವಾದುದನ್ನು ತುಂಬ ಮಾತಾಡಿದೆ’ ಅಂತ ನಿಮಗೇ ಅನ್ನಿಸಿದರೆ ಮಾರನೆಯ ದಿನ ಅಂಥ ಫಿಜೂಲು ಮಾತು ರದ್ದು ಮಾಡಿಕೊಳ್ಳಿ.
ವಿಪರೀತ ಮಾತು, ಎಷ್ಟೋ ಸಲ ನಮ್ಮ ಬಲಹೀನತೆಯ Identity crisis ನ ಸಂಕೇತವಾಗಿರುತ್ತದೆ. ಹತ್ತು ಮಂದಿಯ ಮಧ್ಯೆ ‘ಶಾಣ್ಯಾ’ ಅನ್ನಿಸಿಕೊಳ್ಳುವ ಚಡಪಡಿಕೆ, ನಮ್ಮನ್ನು ಹೀಗಾದರೂ ಜನ ಗುರುತಿಸಲಿ ಎಂಬ ಚಡಪಡಿಕೆ- ಇದು ಒಳ್ಳೆಯದಲ್ಲ. ಮಾತಿನ ಮೂಲಕ ಹೀಗೆ ಗುರುತಿಸಿಕೊಳ್ಳಲು ಯತ್ನಿಸುವುದು ಖಂಡಿತ ಒಳ್ಳೆಯದಲ್ಲ. ಅಷ್ಟು ವಡವಡನೆ ಮಾತನಾಡಿ ನಾವು ‘ಸುತ್ಗೆ’ ಅನ್ನಿಸಿಕೊಳ್ಳುತ್ತಿರುವಾಗಲೇ, ಅದೇ ಗುಂಪಿನಲ್ಲೊಬ್ಬ ಮೌನವಾಗಿ ಕುಳಿತು, ಆಯಕಟ್ಟಿಗೆ ತಾಕುವಂತಹ ವಜನಾದ ಮಾತನ್ನಾಡಿ ‘ಜ್ಞಾನಿ’ ಅನ್ನಿಸಿಕೊಂಡು ಬಿಡುತ್ತಾನೆ.
ಕೆಲವೊಮ್ಮೆ ಮಾತು, ಅದರಲ್ಲೂ ವಿಪರೀತ ಮಾತು ನಮ್ಮನ್ನು ಸುಳ್ಳೇ ಒಂದು ಸಭ್ಯ ಆಪಾದನೆಗೆ ಒಳಪಡಿಸುತ್ತದೆ. ‘ಮನುಷ್ಯ ಒಳ್ಳೆಯವನು. ಬರೀ ವಡವಡ ಮಾತು ಅಷ್ಟೆ. ಮನಸ್ನಲ್ಲಿ ಕಲ್ಮಶ ಇಲ್ಲ’ ಅನ್ನುತ್ತಿರುತ್ತಾರೆ. ಇದನ್ನೊಂದು ಬಿರುದು ಅಂತ ತಿಳಿದುಕೊಳ್ಳಬಾರದು. ಮನಸ್ಸಿನಲ್ಲಿ ಕಲ್ಮಶ ಇಲ್ಲ ಅಂದರೆ-ಮಿದುಳಿನಲ್ಲಿ ಬುದ್ಧಿಯೂ ಇಲ್ಲ ಅಂತ ಅರ್ಥ. ಇಂಥ ಸಭ್ಯ ಮೂದಲಿಕೆಗಳೇ ಈ ತನಕ ಭಾರತದಂತಹ ದೇಶದಲ್ಲಿ ವಾಚಾಳಿಗಳನ್ನು ಸಾಕುತ್ತ ಬಂದಿವೆ. ವಿದೇಶಗಳಲ್ಲಿ ಪರಿಸ್ಥಿತಿಯೇ ಬೇರೆ. ಅಲ್ಲಿ ಎಲ್ಲವೂ ಮುಗುಮ್ಮು. ರೈಲು, ಕಾರು, ಬಸ್ಸು, ಬೀದಿಗಳಲ್ಲಿ ಜನ ತಮ್ಮ ಪಾಡಿಗೆ ತಾವಿರುತ್ತಾರೆ. ನಾವೇ, ಭಯಂಕರ ಹರಟೆ ಮಲ್ಲರು. ಯಾರಾದರೂ ಕೈಗೆ ಸಿಕ್ಕರೆ ಸಾಕು, ನಾಲಗೆ ಚಾವಟಿಯಾಗಿ ಬಿಡುತ್ತದೆ. ಮಾತು ಗಿರ್ರಗಿರ್ರ ಬುಗುರಿ. ಮಾತು ಕಡಿಮೆ ಮಾಡಿಕೊಳ್ಳಲು ಇಚ್ಛಿಸುವವರು ಪ್ರತಿನಿತ್ಯ ಹೋಗುವ ಹರಟೆ ಕಟ್ಟೆಯಂತಹ ಪರಿಚಿತ ಜಾಗಗಳಿಗೆ ಹೋಗುವುದನ್ನು ಬಿಡಬೇಕು. ಲೈಬ್ರರಿಗಳಿಗೆ, ರೀಡಿಂಗ್ ರೂಮುಗಳಿಗೆ ಗಂಟು ಬೀಳಬೇಕು. ಪುಸ್ತಕ ರೂಢಿಸಿಕೊಂಡರೆ ಅದಕ್ಕಿಂತ ಚೆಂದದ್ದು ಮತ್ತೊಂದಿಲ್ಲ. ಟೀವಿ ನೋಡುವುದನ್ನು ರೂಢಿ ಮಾಡಿಕೊಂಡರೂ ಸರಿಯೇ. ಮೊಬೈಲು ತ್ಯಜಿಸಬೇಕು. ಎಲ್ಲಕ್ಕಿಂತ ಸೊಗಸು ಅಂದರೆ, ಮಾತಾಡಬೇಕು ಅನ್ನಿಸಿದ್ದನ್ನೆಲ್ಲ ಬರೆಯುತ್ತ ಕೂತುಬಿಡುವುದು. ಪ್ರತೀ ಭಾನುವಾರ ಯಾರೊಂದಿಗೂ ಮಾತು ಬೇಡ ಅಂತ ತೀರ್ವನಿಸಿ ಅಪರಿಚಿತ ಸ್ಥಳಗಳಿಗೆ ಸುತ್ತಾಡಲು ಹೋಗಿ ಬಿಡುವುದು. ಅತ್ಯಂತ ಸುಂದರವಾದ ಇಷ್ಟವಾಗುವ ಸುದೀರ್ಘ ಪದ್ಯಗಳನ್ನು ಕಂಠಪಾಠ ಮಾಡಿಕೊಳ್ಳುವುದು. ಸಾವಿರಾರು ಹಾಡು ನೆನಪಿಟ್ಟು ಕೊಳ್ಳುವ ಯೋಜನೆ ಆರಂಭಿಸುವುದು. ರೇಡಿಯೋ ಕೇಳುವುದು. ಇದೆಲ್ಲ ಮಾಡುತ್ತ ಹೋದರೆ ಮಾತು ಕಡಿಮೆಯಾಗುತ್ತವೆ. ಹಾಗೆ ಒಂದು ಸಲ ಮಾತು ಕಡಿಮೆ ಮಾಡಿ ನೋಡಿ- ಸುತ್ತಲಿನವರಲ್ಲಿ ನಿಮ್ಮ ಬಗೆಗಿನ ಗೌರವ ಜಾಸ್ತಿಯಾಗುತ್ತದೆ. ಇಮೇಜು ಬದಲಾಗುತ್ತದೆ. ನಿಮ್ಮ ಮಾತಿಗೆ
ಕಿಮ್ಮತ್ತು ಬರುತ್ತದೆ. ಆದರೆ ಯಾವನೋ ಒಬ್ಬ ‘ಯಾಕ್ರೀ, ಅರಳು ಹುರಿದಂಗೆ ಮಾತಾಡ್ತಿದ್ರೀ? ಇದ್ದಕ್ಕಿದ್ದಂಗೆ ಸುಮ್ಮನಾಗಿ ಬಿಟ್ರಲ್ಲ? ಅಂತ ಕೆಣಕುತ್ತಾನೆ. ತಕ್ಷಣ ನಾಲಗೆ ಮಸೆದುಕೊಂಡು ಮಾತಿಗಿಳಿದು ಬಿಡಬೇಡಿ. ‘ಅರಳು ಹುರಿಯೋ ಕಾಲ ಮುಗಿಯಿತು. ಕಲ್ಲು ಕರಗಿಸುವ ಮೌನ ರೂಢಿಯಾಗಿದೆ’ ಅನ್ನಿ. ನಿಮ್ಮ ಮೌನಕ್ಕೂ ವಜನು ಬರುತ್ತದೆ.
(ಲೇಖಕರು ಹಿರಿಯ ಪತ್ರಕರ್ತರು)