ಸಂಸ್ಕೃತ ಭಾಷೆ ಎಲ್ಲರ ಸಂಪರ್ಕ ಭಾಷೆಯಾಗಲಿ

4-67f2be5e6ec75
Published on
ಬ್ರಹ್ಮಾಂಡದ ಸೃಷ್ಟಿಯ ವಿಸ್ಮಯಗಳ ಕಣಜವಾಗಿರುವ ವೇದಗಳು ಅಪೌರುಷೇಯವೆಂದು ಕರೆಯಲ್ಪಟ್ಟಿವೆ. ಸೃಷ್ಟಿಯ ಆದಿಯಲ್ಲಿ ಋಷಿ ಸಂಕುಲವು ದಿವ್ಯಾನುಭೂತಿಯಿಂದ ಸಂಪಾದಿಸಿದ ಜ್ಞಾನರಾಶಿಯೇ ವೇದಗಳು. ಈ ಜ್ಞಾನವನ್ನು ಪಡೆಯುವಲ್ಲಿ ಭಾರತದ ಪ್ರಾಚೀನರು ಸಂವಹನ ನಡೆಸಿದ ‘ಶಬ್ದ’ ಅಥವಾ ‘ವಾಗ್ರೂಪ’ದ ಮಾಧ್ಯಮವನ್ನು ‘ನಾದ’ವೆಂದು ಉಪನಿಷತ್ತುಗಳು ಸಾರುತ್ತವೆ. ಅಮೃತಬಿಂದು ಉಪನಿಷತ್ತಿನ ಈ ಶ್ಲೋಕವು ಮೇಲಿನ ಅಂಶವನ್ನು ಪುಷ್ಟೀಕರಿಸುತ್ತದೆ.

ದ್ವೇ ಬ್ರಹ್ಮಣೀ ವೇದಿತವ್ಯೇ ಶಬ್ದಬ್ರಹ್ಮ ಪರಂ ಚ ಯತ್ | ಶಬ್ದಬ್ರಹ್ಮಣಿ ನಿಷ್ಣಾತಃ ಪರಂ ಬ್ರಹ್ಮಾಧಿಗಚ್ಛತಿ ||

ಅಂದರೆ ಎರಡು ಬ್ರಹ್ಮಗಳನ್ನು ಅರಿಯಬೇಕಿದ್ದು, ಅವುಗಳು ಶಬ್ದಬ್ರಹ್ಮ ಮತ್ತು ಪರಬ್ರಹ್ಮ. ‘ಶಬ್ದಬ್ರಹ್ಮ’ವನ್ನು ಅರಿತವನು ‘ಪರಬ್ರಹ್ಮ’ವನ್ನು ಅರಿಯಲು ಸಾಧ್ಯ. ಮುಂದುವರಿದು, ಲಕ್ಷ್ಮಣ ದೇಶಿಕೇಂದ್ರರ ಶಾರದಾ ತಿಲಕ ತಂತ್ರದಲ್ಲಿ ‘ಚೈತನ್ಯಂ ಸರ್ವ ಭೂತಾನಾಂ ಶಬ್ದ ಬ್ರಹ್ಮೇತಿ ಮೇ ಮತಿಃ’ ಅರ್ಥಾತ್ ಎಲ್ಲ ಜೀವರಾಶಿಯ ಮೂಲಧ್ಯೇಯ ಶಬ್ದ ಬ್ರಹ್ಮವನ್ನು ತಿಳಿಯುವಲ್ಲಿ ಇದೆ ಎಂದು ವಿಶದೀಕರಿಸುತ್ತದೆ. ನಾದವು ವರ್ಣಗಳಾಗಿ, ವರ್ಣವು ಪದಗಳಾಗಿ, ಪದಗಳು ವಾಕ್ಯವಾಗಿ ಪರಿವರ್ತಿತವಾಗುತ್ತದೆ. ಜಗದ ಎಲ್ಲ ಜೀವರಾಶಿಯ ವ್ಯವಹಾರಗಳು ವಾಗ್ರೂಪದ ನಾದದಿಂದಲೇ ನಡೆಯುತ್ತದೆ.

ಜೀವರಾಶಿಯಲ್ಲಿ ವಿಕಸಿತಗೊಂಡ ಮಾನವ ವರ್ಗ ಒಂದು ವಿಷಯದಲ್ಲಿ ತನ್ನ ವಿಭಿನ್ನತೆಯನ್ನು ಉಳಿಸಿಕೊಂಡಿದೆ-ಅದು ಸಂವಹನ ಕಾರ್ಯ. ನಮ್ಮ ಯೋಚನೆಗಳೆಲ್ಲವು ನುಡಿಗಳಾಗಿ, ಭಾವಾರ್ಥಕ್ಕೂ ಶಬ್ದಾರ್ಥಕ್ಕೂ ಜೀವತಂತು ಬೆಸೆಯುವುದಲ್ಲದೆ, ಅದಕ್ಕೆ ಸೊಬಗು, ಲಾಲಿತ್ಯ, ಗಾಂಭೀರ್ಯ ಮತ್ತು ಸುಲಲಿತೆಯ ಸ್ವಾರಸ್ಯವನ್ನು ನೀಡುವ ಮಾಧ್ಯಮ ಭಾಷೆ. ಹೀಗೆ ಮಾನವ ಪ್ರಭೇದದ ನಡುವೆ ಸಂವಹನಕ್ಕಾಗಿ ಉಗಮಗೊಂಡ ಮೊದಲ ವಾಗ್ರೂಪದ ಭಾಷಾ ಮಾಧ್ಯಮವಾಗಿ ಸಂಸ್ಕೃತ ಭಾಷೆಯು ಜನಿಸಿತು ಎನ್ನಬಹುದು.

ನಾವು ಆಡುವ ಪ್ರತಿ ಶಬ್ದದ ಹಿಂದೆ ನಡೆಯುವ ವೈಜ್ಞಾನಿಕ ಕ್ರಿಯೆಯನ್ನು ಅವಲೋಕಿಸಿದರೆ, ನಾಭಿಯಿಂದ ಹೊರಟ ನಾದವು ಸಂವಹನ ನಡೆಸುವ ವ್ಯಕ್ತಿಯ ಒಳ-ಹೊರಗಿನ ವಿಷಯಗಳನ್ನು ವಾಕ್ಕಿನ ಮೂಲಕ ಅಭಿವ್ಯಕ್ತಗೊಳಿಸಲು ಭಾಷಾರೂಪದ ಶಬ್ದವಾಗಿ ಹುಟ್ಟಿಕೊಳ್ಳುತ್ತದೆ ಎನ್ನಬಹುದು. ಇದನ್ನು ಭಾಷಾ ಲಾಕ್ಷಣಿಕರು ‘ಪರಾ-ಪಶ್ಯಂತಿ-ಮಧ್ಯಮಾ-ವೈಖರಿ’ ಎಂದು ಸರಳವಾಗಿ ವಿವರಿಸಿದ್ದಾರೆ. ಸಂವಹನ ಕಾರ್ಯದಲ್ಲಿ ಮುಖ್ಯ ಧಾತುವೇ ಭಾಷೆ. ಅಂತಃಪ್ರಜ್ಞೆ ಪ್ರೇರಿತ ಶಬ್ದೋಚ್ಚಾರಣೆಗೆ ಮತ್ತು ಸಮರ್ಥ ಸಂವಹನಕ್ಕೆ ಎಲ್ಲ ದೃಷ್ಟಿಯಿಂದಲೂ ಸಂಸ್ಕೃತವು ವೈಜ್ಞಾನಿಕ ಸ್ವರೂಪವುಳ್ಳದ್ದಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಬುನಾದಿಯಾಗಿರುವ ಸಂಸ್ಕೃತವು ಹಲವು ತತ್ವಗಳ ಅನ್ವೇಷಣೆ, ಅಧ್ಯಯನ ಮತ್ತು ಪ್ರಯೋಗಗಳ ಫಲಿತವಾಗಿ ವಿಕಸಿತಗೊಂಡಿತೆನ್ನಬಹುದು. ಕಾಲಕ್ರಮೇಣ ಸಂಸ್ಕೃತವು ಸಂಸ್ಕೃತಿ-ಸಂಸ್ಕಾರಗಳ ಪ್ರತಿನಿಧಿಯಾಗಿ ಭರತ ವರ್ಷದ ಅಸಂಖ್ಯ ಜನಾಂಗಗಳ ಸತ್ವವಾಗಿ, ರಾಷ್ಟ್ರದ ವೈವಿಧ್ಯದ ಏಕ ಲಕ್ಷಣವಾಗಿ ಸದೃಢ ಸಾಮಾಜಿಕ ವ್ಯವಸ್ಥೆಯು ಸ್ಥಾಪಿತಗೊಂಡಿತೆನ್ನಬಹುದು.

ಸಂಸ್ಕೃತ ಭಾಷೆಯು ವೈದಿಕ ಚಿಂತನೆಗಳ ಸಮೂಹವನ್ನು ಸೃಷ್ಟಿಸಿರುವುದು ಮಾತ್ರವಲ್ಲ, ವೈರುಧ್ಯವೆನ್ನಬಹುದಾದ ಹಲವಾರು ನಾಸ್ತಿಕ ದರ್ಶನಗಳಿಗೆ ಅಥವಾ ಅವೈದಿಕ ಚಿಂತನೆಗಳಾದ ಚಾರ್ವಾಕ, ಮುಂತಾದವುಗಳ ಉಗಮಕ್ಕೆ ಮೂಲಸೆಲೆಯಾಗಿದೆ. ಎಲ್ಲ ಭಾರತೀಯ ಭಾಷೆಗಳ ಲಿಪಿ ಸ್ವರೂಪ, ರಚನೆ ಮತ್ತು ವ್ಯಾಕರಣಾಂಶಗಳು ಬಹುತೇಕ ಒಂದೇ ತೆರನಾಗಿದ್ದು, ಅವುಗಳ ಮಾತೃಸ್ಥಾನ ಸಂಸ್ಕೃತವೇ ಎಂಬುದು ನಿಚ್ಚಳವಾಗಿ ರುಜುವಾತಾದ ಸಂಗತಿ. ನಾವೀನ್ಯತೆಯ ಪಾರಿಭಾಷಿಕ ಪದಗಳ, ಮುಖ್ಯವಾಗಿ ವಿಜ್ಞಾನ-ತಂತ್ರಜ್ಞಾನ ಸಂಬಂಧಿ ಪದಗಳ ಅವಶ್ಯಕತೆ ಬಂದಾಗ ಎಲ್ಲ ಭಾಷೆಗಳೂ ಸಂಸ್ಕೃತ ಭಾಷಾ ಗಣಿ ಸಂಪತ್ತನ್ನೇ ಆಶ್ರಯಿಸುತ್ತವೆ. ಸಂಸ್ಕೃತ ಭಾಷೆಯಲ್ಲಿನ ‘ಶಬ್ದ ಸೌಂದರ್ಯ’ ಅನ್ಯ ಭಾಷೆಗಳಲ್ಲಿ ಕಾಣಸಿಗುವುದು ಅತಿ ವಿರಳವೆನ್ನಬಹುದು.

ಇಂದಿಗೂ ಸಂಸ್ಕೃತದ ದೆಸೆಯಿಂದಾಗಿ ನಮ್ಮ ಪ್ರಾಚೀನರ ವಿಶ್ವಪ್ರಜ್ಞೆಯ ಮಾನವ ಐಕ್ಯತೆ, ಆಲೋಚನಾ ವೈಶಾಲ್ಯ ಮತ್ತು ಆಧ್ಯಾತ್ಮಿಕ ಸೂತ್ರಗಳ ಅನುಭಾವಿಕ ನೆಲೆಯಲ್ಲಿ ಸುಸ್ಪಷ್ಟವಾಗಿ ಅಭಿವ್ಯಕ್ತಗೊಂಡು ಇತಿಹಾಸದ ಬೇರುಗಳಲ್ಲಿ ಆರ್ದ್ರವಾಗಿರುವುದನ್ನು ನಾವು ಗಮನಿಸಬಹುದಾಗಿದೆ. ನಮ್ಮ ಚರಿತ್ರೆಗೆ ಅದೆಷ್ಟೋ ಶತಮಾನದ ಆಕ್ರಾಂತಗಳಿಂದಾದ ಅವನತಿ ಇದ್ದಾಗ್ಯೂ ಸಹ ಕೇವಲ ಸಂಸ್ಕೃತ ಭಾಷೆಯ ವಿರಾಟ್ ವೈದುಷ್ಯದ ಅನುಭೂತಿಯಿಂದಾಗಿ ರಾಷ್ಟ್ರಶಕ್ತಿಯು ಪುನರುಜ್ಜೀವನಗೊಂಡು ವರ್ಧಿಸಿದೆ. ಇಂತಹ ವೈಶಿಷ್ಟ್ಯ ಮತ್ತು ಸಮಕಾಲೀನ ವಿಶ್ವದ ವಿಶಿಷ್ಟ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬಹುದಾದ ಅಂತಃಸತ್ವ ಸಂಸ್ಕೃತ ಹೊರತು ಜಗತ್ತಿನ ಬೇರಾವ ಭಾಷೆಯಲ್ಲಿಯೂ ಕಾಣಸಿಗುವುದಿಲ್ಲ.

ಭಾರತದ ಪ್ರಾಚೀನ ಸಂಸ್ಕೃತಿಯು ಜ್ಞಾನದ ಸಾಧನೆಗೆ, ವಿಕಾಸಕ್ಕೆ ಮತ್ತು ಉನ್ನತಿಗೆ ಉತ್ತೇಜನ ಸಂಸ್ಕೃತದ ಮೂಲಕ ನೀಡುತ್ತ ಬಂದಿದೆ. ನಾವು ಗಮನಿಸಬೇಕಾದ ಅಂಶವೆಂದರೆ ಸಂಸ್ಕೃತ ಭಾಷೆಯು ಜಿಜ್ಞಾಸುಗಳ ಅರಿವಿನ ಕೌತುಕವನ್ನು ತಣಿಸಲು ಅಥವಾ ಆತ್ಮಸಂತೋಷಕ್ಕಾಗಿ ಇರಬಹುದು, ಆದರೆ ಎಲ್ಲೆಲ್ಲಿ ಈ ಭಾಷೆಯು ಬೇರು ಬಿಟ್ಟಿದೆಯೋ ಅಲ್ಲೆಲ್ಲ ಅಂಕೆಯೊಳಗಿನ ಸ್ವ-ತಂತ್ರ, ಕಾಠಿಣ್ಯವಲ್ಲದ ಶಿಷ್ಟಾಚಾರ, ವಿವೇಕಯುತ ವ್ಯಕ್ತಿತ್ವ, ಜನಸಮುದಾಯಗಳಲ್ಲಿ ಸನ್ನಡತೆ, ಸದ್ಭೋದೆ, ಕುಲಧರ್ಮ, ಹೀಗೆ ಹತ್ತಾರು ಸು-ಸಂಸ್ಕೃತ ಜೀವಸಂಸ್ಕಾರದ ನಡವಳಿಕೆಯನ್ನು ವ್ಯಾಪಕವಾಗಿ ಬೆಳೆಸಿ, ಅದು ಭಾರತದ ಧರ್ಮವಾಗಿ ವೈಶ್ವಿಕ ಮಟ್ಟದಲ್ಲಿ ಪ್ರತಿಫಲಿಸಿದೆ. ಇದನ್ನು ಒಂದು ಸಶಕ್ತ ನಾಗರಿಕತೆಯ ಪರಾಕಾಷ್ಠೆಗಳಲ್ಲಿ ಪ್ರಮುಖ ಅಂಶವೆಂದು ಪರಿಗಣಿಸಬಹುದು. ಈ ದಿಕ್ಕಿನಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಆಧುನಿಕ ಜಗತ್ತಿನ ತಂತ್ರಜ್ಞಾನ ಆಧರಿತ ಶೈಕ್ಷಣಿಕ ಕಾರ್ಯಕ್ರಮಗಳೊಂದಿಗೆ ಬದುಕಿಗೆ ಅವಶ್ಯವಾದ ಮೌಲ್ಯಯುತ ಸುಜ್ಞಾನವನ್ನು ಜ್ಞಾನ ಸಂಪಾದನೆಯ ಮಾರ್ಗದಲ್ಲಿ ಚಿಗುರು-ಬೇರುಗಳನ್ನು ಸಮನ್ವಯಗೊಳಿಸುತ್ತ ಬಂದಿದೆ.

ಅನ್ಯ ಸಂಸ್ಕೃತಿಗಳ ಅಂತರ್ ಒಡನಾಟ, ಸಾಮರಸ್ಯ-ಸಮನ್ವಯ ಮತ್ತು ಭೌತಿಕ ಇತಿ-ಮಿತಿಗಳನ್ನು ಮೀರಿ ಪೂರ್ಣತೆಯ ತೋಲನೆಯು ಮೀರದಂತೆ ನಿಭಾಯಿಸುತ್ತ, ಸಂಸ್ಕೃತ ಭಾಷೆಯು ಇಂದಿಗೂ ಜೀವಂತಿಕೆಯನ್ನು ಮೆರೆದಿದೆ. ಸಂಸ್ಕೃತಿಯ ಈ ಅಸ್ಮಿತೆಯನ್ನು ಗುರುತಿಸದೆ ಸ್ವಪರಂಪರೆಯ ಅನುಷ್ಠಾನದಿಂದ ದೂರವಾದ ನಮ್ಮ ಮನೋ-ಬೌದ್ಧಿಕ ವಿಕಾಸಗಳು ಇಂದು ನಮ್ಮ ಬೆಳವಣಿಗೆಯ ಅಸಮಪರ್ಕತೆಯನ್ನು ಮತ್ತು ಅಸಹಜತೆಯನ್ನು ಬಿಂಬಿಸುತ್ತದೆ. ಸೃಷ್ಟಿಯ ಯಾವುದೇ ವಸ್ತುವಿನ ಅಥವಾ ಸಂಗತಿಯನ್ನು ಯಾವುದೇ ಗುಣಾರೋಪವಿಲ್ಲದೆ ಸಮಗ್ರವಾಗಿ ಮತ್ತು ಸ್ಪಷ್ಟವಾಗಿ ಅರ್ಥೈಸಿಕೊಳ್ಳುವುದು ಸಂಸ್ಕೃತ ಭಾಷೆಯಿಂದೇ ಮಾತ್ರ ಸಾಧ್ಯ ಎಂಬ ಅಂಶವು ವೈಜ್ಞಾನಿಕ ಸತ್ಯ. ಆಧುನಿಕ ಬೋಧಿಸತ್ವ ಡಾ. ಬಿ.ಆರ್. ಅಂಬೇಡ್ಕರ್ ತಮ್ಮ ಬರಹಗಳಲ್ಲಿ ಒಂದೆಡೆ ಸಂಸ್ಕೃತವನ್ನು ಕುರಿತು ಹೀಗೆ ರ್ಚಚಿಸಿದ್ದಾರೆ:

(ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳು; ಪುಟ-137, ಸಂಪುಟ-8, ಪ್ರಕಟಣೆ: ಡಾ. ಅಂಬೇಡ್ಕರ್ ಪ್ರತಿಷ್ಠಾನ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ; ಐಎಸ್​ಬಿಎನ್: 978-93-5109-064-9)

‘ಸಂಸ್ಕೃತವು ನಮ್ಮ ದೇವ ಭಾಷೆಯಾಗಿರಲಿ, ನಮ್ಮ ಪವಿತ್ರ ಭಾಷೆಯಾಗಿರಲಿ ಮತ್ತು ಸಂಸ್ಕೃತದಿಂದ ಹುಟ್ಟಿಕೊಂಡ ಹಾಗೂ ತನ್ನ ಪೋಷಣೆಯನ್ನು ಹೊಂದಿರುವ ಸಂಸ್ಕೃತ ನಿಷ್ಠ ಹಿಂದಿ ಪ್ರಸ್ತುತ ನಮ್ಮ ರಾಷ್ಟ್ರಭಾಷೆಯಾಗಿರಲಿ-ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಅತ್ಯಂತ ಶ್ರೀಮಂತ ಮತ್ತು ಸುಸಂಸ್ಕೃತ ಭಾಷೆಯಾಗಿರುವುದರ ಜೊತೆಗೆ, ನಮಗೆ ಸಂಸ್ಕೃತವು ಅತ್ಯಂತ ಪವಿತ್ರ ಭಾಷೆಯಾಗಿದೆ.

ನಮ್ಮ ಧರ್ಮಗ್ರಂಥಗಳು, ಇತಿಹಾಸ, ತತ್ವಶಾಸ್ತ್ರ ಮತ್ತು ಸಂಸ್ಕೃತಿಯ ಬೇರುಗಳು ಸಂಸ್ಕೃತ ಸಾಹಿತ್ಯದಲ್ಲಿ ಎಷ್ಟು ಆಳವಾಗಿ ಬೇರೂರಿವೆಯೆಂದರೆ ಅದು ನಮ್ಮ ಜನಾಂಗದ ನಿಜವಾದ ಬುದ್ಧಿಮತ್ತೆಯನ್ನು ರೂಪಿಸುತ್ತದೆ. ಸಂಸ್ಕೃತ ನಮ್ಮ ಬಹುಪಾಲು ಮಾತೃಭಾಷೆಗಳ ತಾಯಿ, ಅವಳ ಎದೆ ಹಾಲು ಕುಡಿದು ಉಳಿದ ಭಾಷೆಗಳು ಉಳಿದಿವೆ. ಆದ್ದರಿಂದ ಸಂಸ್ಕೃತ ಭಾಷೆಯು ಹಿಂದೂಸ್ಥಾನದ ಯುವಕರಿಗೆ ಶಾಸ್ತ್ರೀಯ ಕಲಿಕೆಯಲ್ಲಿ ಅನಿವಾರ್ಯ ಅಂಶವಾಗಿರಬೇಕು’.

ಗತಕಾಲದ ಬೃಹದ್ಭಾರತವನ್ನು ಸ್ಮರಿಸಿದರೆ ಕಣ್ಣ ಮುಂದೆ ಗೋಚರಿಸುವ ಸಮಸ್ತ ಭಾರತೀಯತ್ವ, ಮಹತ್ತಿನ ಅರ್ಥವ್ಯಾಪ್ತಿಯ ‘ಧರ್ಮ’, ವಿಜ್ಞಾನ-ತಂತ್ರಜ್ಞಾನ, ವಿಚಾರ ಬಲ ಮತ್ತು ಯಾನವು ಸಂಸ್ಕೃತದೊಂದಿಗೆ ಹೆಣೆದುಕೊಂಡಿರುವುದು ಗಮನಾರ್ಹವಾದುದು. ಇಂತಹ ಮಹೋನ್ನತವಾದ ಸಾಂಸ್ಕೃತಿಕ ಐತಿಹ್ಯವನ್ನು ಹೊಂದಿರುವ, ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಯಾಗಿದ್ದು, ಸದಾ ನಾವೀನ್ಯತೆಗೆ ತೆರೆದುಕೊಂಡಿರುವ ಭಾಷೆಯ ಕುರಿತಾಗಿ ಸದ್ಯದಲ್ಲಿಯೇ (2025ರ ಜೂನ್ 26ರಿಂದ 30)ನೇಪಾಳದಲ್ಲಿ ‘ವಿಶ್ವ ಸಂಸ್ಕೃತ ಸಮ್ಮೇಳನ’ವು ನಡೆಯಲಿದೆ. ವೈವಿಧ್ಯದಿಂದ ಕೂಡಿರುವ ಈ ಭರತ ಭೂಮಿಯಲ್ಲಿ ಸಂವೃದ್ಧತೆಯ ಕುರುಹಾಗಿರುವ ಸಂಸ್ಕೃತ ಭಾಷೆಯು ಎಲ್ಲರ ಸಂಪರ್ಕ ಭಾಷೆಯಾಗಲಿ ಎಂಬ ಸದಾಶಯಕ್ಕೆ ಅಗತ್ಯವಾದ ಎಲ್ಲ ರೀತಿಯ ಅನುಕೂಲತೆಗಳು ಪ್ರಭುತ್ವದಿಂದಲೂ ಹರಿದು ಬರಲಿ ಎಂದು ಆಶಿಸುತ್ತೇನೆ. (ಲೇಖಕರು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net