

ಅಂತೂ ಇಂತೂ ವಿಸ್ತರಣೆಯೋ ಪುನಾರಚನೆಯೋ ಯಾವುದೋ ಒಂದು ಮುಗಿಯಿತೆನ್ನುವಷ್ಟರಲ್ಲಿ ಆಡಳಿತ ವ್ಯವಸ್ಥೆ ಸರಿಯಾಗುವ ಬದಲು ಇನ್ನಷ್ಟು ಹದಗೆಡುವ ಲಕ್ಷಣಗಳು ಗೋಚರಿಸುತ್ತಿವೆ. ಹಾಗೆ ನೋಡಿದರೆ 2018ರ ವಿಧಾನಸಭಾ ಚುನಾವಣೆ ನಂತರ ರಾಜ್ಯದಲ್ಲಿನ ರಾಜಕೀಯ ಅಸ್ಥಿರತೆಗೆ ಒಂದರ್ಥದಲ್ಲಿ ಮತದಾರರೇ ಹೊಣೆ. ಅತಂತ್ರ ಲೋಕಸಭೆಯಾಗಲೀ, ವಿಧಾನಸಭೆಯಾಗಲೀ ಅಸ್ತಿತ್ವಕ್ಕೆ ಬಂದಾಗಲೆಲ್ಲ ಆಡಳಿತ ಶಿಥಿಲಗೊಂಡ ಅದೆಷ್ಟೋ ಉದಾಹರಣೆಗಳು ನಮ್ಮೆದುರು ಹಸಿರಾಗಿವೆ. ಅದೇನೇ ಇರಲಿ, ಮುಂದಿನ ಚುನಾವಣೆ ತನಕ ಇಂಥ ಅಸ್ಥಿರತೆಯನ್ನು ಸಹಿಸಿಕೊಂಡು ಆಡಳಿತ ನಡೆಸುವುದು ಅನಿವಾರ್ಯ. ಆದರೆ ಆಯ್ಕೆಯಾದ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ಮರೆತು ಅಧಿಕಾರಕ್ಕಾಗಿ ಹಾತೊರೆಯುವ ಪ್ರವೃತ್ತಿ ಮಾತ್ರ ಖಂಡನೀಯ.
ಮಂತ್ರಿ ಪದವಿಗಾಗಿ ಹೋರಾಟ, ಸಮೃದ್ಧ ಖಾತೆಗೆ ಸೆಣಸಾಟ, ಅಷ್ಟೂ ಸಾಲದೆಂಬಂತೆ ಜಿಲ್ಲಾ ಉಸ್ತುವಾರಿಗಾಗಿ ಗುದ್ದಾಟ. ಇದೆಲ್ಲದರ ಹಿಂದಿನ ಉದ್ದೇಶವೇನು? ಇದರಲ್ಲಿ ಜನರ ಹಿತಾಸಕ್ತಿಯ ಉದ್ದೇಶವೇನಾದರೂ ಇದೆಯೇ? ಮೂಲನಿವಾಸಿಗಳು, ಪಕ್ಷಾಂತರಿಗಳು ಎಂಬ ವಿಭಾಗೀಕರಣ ಬೇರೆ. ಜನರ ಸೇವೆ ಮಾಡಬೇಕಾದರೆ ಮಂತ್ರಿ ಪದವಿಯೇ ಬೇಕೇ? ಇಂತಹುದೇ ಖಾತೆ ಬೇಕೆಂಬ ಕ್ಯಾತೆ ಏಕೆ? ಇಷ್ಟು ಸಾಲದೆಂಬಂತೆ ಅತೃಪ್ತರನ್ನು ತೃಪ್ತಿ ಪಡಿಸಲು ಸಂಪುಟ ದರ್ಜೆಯ ಸಮಾನಾಂತರ ಹುದ್ದೆಯನ್ನು ಸೃಷ್ಟಿಸಿ ಅದಕ್ಕೆ ನೇಮಕಾತಿ. ಇನ್ನೊಬ್ಬರನ್ನು ತೃಪ್ತಿಪಡಿಸಲು ದೊಡ್ಡ ಮೊತ್ತದ ಅನುದಾನ ಬಿಡುಗಡೆ-ಇನ್ನೂ ಏನೇನೋ ಕಸರತ್ತುಗಳು. ಯಾರೊಬ್ಬರೂ (ಒಂದಿಬ್ಬರನ್ನು ಹೊರತುಪಡಿಸಿ) ಜನರ ನಿಜವಾದ ಸಮಸ್ಯೆಗಳಿಗೆ ದನಿಯಾಗಲೇ ಇಲ್ಲ. ಕ್ಷೇತ್ರದಲ್ಲಿರುವ ಸಮಸ್ಯೆಗಳ ನಿವಾರಣೆಗೆ ಹೋರಾಟ ಮಾಡಲಿಲ್ಲ.
ಜನಾದೇಶ ಪಡೆದ ಪಕ್ಷ ತ್ಯಜಿಸಿ ಬೇರೊಂದು ಪಕ್ಷಕ್ಕೆ ಸೇರಿದಾಗ, ಜನರಿಂದಲೇ ಅನುಮೋದನೆ ಪಡೆದವರಿಗೆ ಮಾತ್ರ ಅಧಿಕಾರ ಎಂಬ ಕಾನೂನು ಜಾರಿಗೆ ಬರಬೇಕು. 80ರ ದಶಕದಲ್ಲಿ ರಾಮಕೃಷ್ಣ ಹೆಗಡೆಯವರಿಗೆ ಸಂಪೂರ್ಣ ಬಹುಮತ ಸಿಗದಿದ್ದಾಗ, ಅಂದಿನ ಭಾಜಪ ನಾಯಕರಾಗಿದ್ದ ಡಾ.ವಿ.ಎಸ್. ಆಚಾರ್ಯ ಸರ್ಕಾರದಲ್ಲಿ ಪಾಲ್ಗೊಳ್ಳದೆ ಬಾಹ್ಯಬೆಂಬಲ ನೀಡಿದ್ದು, ಸೈದ್ಧಾಂತಿಕ ಭಿನ್ನಾಭಿಪ್ರಾಯ ಬಂದಾಗ ರಾಮಕೃಷ್ಣ ಹೆಗಡೆಯವರು ವಿಧಾನಸಭೆಯನ್ನು ವಿಸರ್ಜಿಸಿ ಮತ್ತೆ ಜನಾದೇಶ ಪಡೆದದ್ದು ಇಂದಿನ ಕಾಲಘಟ್ಟದಲ್ಲಿ ಮಾದರಿ ಆಗಲಿ.
| ಮೋಹನದಾಸ ಕಿಣಿ ಕಾಪು