

ಪುಸ್ತಕ ಎಂದರೆ ಅದು ಬರಿ ಅಕ್ಷರವನ್ನು ತುಂಬಿರುವ ಪುಟವಲ್ಲ ಅದು ನಮ್ಮ ಭಾವನೆಯನ್ನು, ನಮ್ಮೊಳಗೆ ಅಡಗಿ ಕುಳಿತು ಹೊರಬರಲು ಕಾಯುತ್ತಿರುವ ಕಾತುರತೆಯ ಮಾತುಗಳು ಅಥವಾ ಪದಗಳನ್ನು ವ್ಯಕ್ತಪಡಿಸುವ ಪುಟಗಳು. ಈ ಪುಸ್ತಕದ ಬಗ್ಗೆ ಯಾಕಿಷ್ಟು ಮಾತುಗಳು ಅಂದರೆ ಇತ್ತೀಚಿನ ದಿನಗಳಲ್ಲಿ ದ್ರಶ್ಯ, ಶ್ರಾವ್ಯ ಮಾಧ್ಯಮಗಳಿಗೆ ಸಿಗುತ್ತಿರುವಷ್ಟು ಬೆಲೆ ಪುಸ್ತಕಗಳಿಗೆ ಇಲ್ಲ. ಹಾಗೆಂದ ಮಾತ್ರಕ್ಕೆ ಯಾರು ಪುಸ್ತಕವನ್ನು ಓದುವುದೇ ಇಲ್ಲ ಎಂದೇನಲ್ಲ, ಓದುವವರ ಸಂಖ್ಯೆ ಕೊಂಚ ಕಡಿಮೆಯಾಗುತ್ತಿದೆ ಎಂಬರ್ಥವಷ್ಟೇ. ನಾವು ಸಾಮಾನ್ಯವಾಗಿ ಗಮನಿಸುವ ಕೆಲವು ಉದಾಹರಣೆಯನ್ನು ಇಲ್ಲಿ ನೀಡುತ್ತ ಹೋಗುವುದಾದರೆ, ಒಮ್ಮೆ ಪುಸ್ತಕದ ಮಳಿಗೆಗೆ ಹೋಗಿದ್ದೆ. ಯಾವುದೋ ಒಂದು ಪುಸ್ತಕ ಓದ ಬೇಕೆಂಬ ಹಂಬಲ ತುಂಬಾ ಕಾಡಿತ್ತು. ನನಗೆ ಬೇಕಾದ ಪುಸ್ತಕವನ್ನು ಹುಡುಕುತ್ತಾ ಹೋದೆ. ಎಷ್ಟು ಹುಡುಕಿದರೂ ಪುಸ್ತಕ ಸಿಗದಿದ್ದ ಕಾರಣ ಅಲ್ಲಿಂದ ಹೊರಡಬೇಕು ಎಂದು ಮಳಿಗೆಯ ಬಾಗಿಲಲ್ಲಿ ನಿಂತಿದ್ದೆ. ಆಗ ಒಬ್ಬ ವ್ಯಕ್ತಿ ಮೂರು ಪುಸ್ತಕಗಳನ್ನು ಖರೀದಿಸುವುದಕ್ಕೆ ಮುಂದಾಗಿದ್ದರು. ಆದರೆ, ಅಲ್ಲಿ ಅವುಗಳ ಬೆಲೆಯಲ್ಲಿ ಚೌಕಾಶಿ ಮಾಡುತ್ತಾ ನಿಂತಿದ್ದನ್ನು ಗಮನಿಸಿದೆ. ಅದನ್ನ ನೋಡಿದಾಗ ತರಕಾರಿ ಮಾರುಕಟ್ಟೆಯ ಚೌಕಾಶಿ ಮಾಡುವ ಸನ್ನಿವೇಶಗಳು ನೆನಪಾದವು, ಹಾಗೆಯೇ ಒಂದು ಕಡೆಯಿಂದ ಕೋಪವೂ ಬಂತು.
ಆದರೇನು ಮಾಡುವುದು, ನಾನು ಅವರಿಗಿಂತ ಚಿಕ್ಕವಳಾಗಿದ್ದರಿಂದ ಮನಸ್ಸಿನಲ್ಲೇ ಕೋಪವನ್ನು ಹಿಡಿದಿಟ್ಟುಕೊಂಡು, ‘ಅಂಕಲ್, ಇದು ಪುಸ್ತಕ ಮಳಿಗೆ. ಇಲ್ಲಿ ಚೌಕಾಶಿ ಮಾಡಿ ಪ್ರಯೋಜನವಿಲ್ಲ. ಪುಸ್ತಕಕ್ಕೆ ಇರುವ ಬೆಲೆಯನ್ನು ನೀಡಿದರೆ ಎಲ್ಲಿಯೂ ಏನೂ ಪ್ರಳಯವಾಗುವುದಿಲ್ಲ. ಸುಮ್ಮನೆ ಪುಸ್ತಕ ಕೊಳ್ಳಿ’ ಎಂದು ಅಲ್ಲಿಂದ ಹೊರಟು ಬಂದು ಬಿಟ್ಟೆ. ಇದೇ ರೀತಿಯಲ್ಲಿ ಈ ಪುಸ್ತಕ ಕೊಳ್ಳುವುದರ ಬಗ್ಗೆ ಇನ್ನೊಂದು ಅನುಭವವಾಗಿತ್ತು. ನನ್ನ ಸ್ನೇಹಿತೆಯೊಬ್ಬಳು ಕಂಡ ಪುಸ್ತಕವನ್ನೆಲ್ಲ ಕೈಗೆತ್ತಿಕೊಂಡು ಅದರಲ್ಲಿರುವ ಪುಟಗಳ ಸಂಖ್ಯೆ ನೋಡಿ ಅದನ್ನು ಹಾಗೆಯೇ ಮುಚ್ಚಿಡುತ್ತಿದ್ದಳು. ನಾನು ತುಂಬ ಸಲ ಗಮನಿಸಿ ಮತ್ತೆ ಕೇಳಿದೆ - ‘ಯಾಕೆ ? ಯಾವ ಪುಸ್ತಕವೂ ಹಿಡಿಸಲಿಲ್ಲವೇ?’. ಅದಕ್ಕೆ ಅವಳು, ‘ತುಂಬಾ ಪುಟಗಳನ್ನು ಇರುವ ಪುಸ್ತಕ ಓದುವುದು ಕಷ್ಟ’ ಎಂದಳು. ಇನ್ನೊಂದು ಅನುಭವ ಅಂದರೆ, ಪುಸ್ತಕ ಎಷ್ಟೇ ದೊಡ್ಡದಿದ್ದರೂ ಅದರ ಒಳಗಿನ ಅಕ್ಷರದ ಗಾತ್ರ ಮತ್ತು ಚಿತ್ರ, ಪುಸ್ತಕದ ಗುಣಮಟ್ಟವನ್ನು ನೋಡಿ ಪುಸ್ತಕ ಖರೀದಿಸುವವರು. ಹೀಗೆ ಹಲವು ಅನುಭವಗಳು ಆಗುತ್ತಿರುತ್ತವೆ. ಪ್ರತಿದಿನ ಒಂದಿಷ್ಟು ಓದುವುದರಿಂದ ನಮ್ಮ ಆಯಸ್ಸು ಹೆಚ್ಚಾಗುತ್ತದೆ ಎಂಬುದು ಎಲ್ಲೋ ಓದಿದ ನೆನಪು. ಅದು ಯಾವ ತರಹದ ಪುಸ್ತಕವಾದರೂ, ದಿನ ಪತ್ರಿಕೆ, ಮಾಸ ಪತ್ರಿಕೆಯಾದರೂ ಸರಿಯೇ. ಒಟ್ಟಾರೆ ನಮಗೆ ಓದುವ ಹವ್ಯಾಸ ಬೆಳೆಯ ಬೇಕು. ಹಾಗಾಗಿ ದಿನಕ್ಕೆ ಒಂದಿಷ್ಟು ಸಮಯವನ್ನಾದರೂ ಓದುವಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳೋಣ. ಮತ್ತು ಪುಸ್ತಕ ಕೊಂಡುಕೊಳ್ಳುವ ಸಮಯಕ್ಕೆ ಆ ಪುಸ್ತಕದ ವಿಷಯ ವಸ್ತುವನ್ನು ಅರಿತು ಅದನ್ನು ಓದುವುದರ ಮುಖೇನ ಹೇಗೆ ನಮ್ಮಲ್ಲಿ ವಿಷಯ ಸಂಗ್ರಹ ಮಾಡಿಕೊಳ್ಳಬಹುದು ಎಂಬುದನ್ನು ಯೋಚಿಸೋಣ.
| ಮಧುರ ಎಲ್ ಭಟ್ಟ ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರ ಉಜಿರೆ