

ಇವು ಇತ್ತೀಚಿನ ವಿದ್ಯಮಾನಗಳು. ಈ ತರಹದ ಘಟನೆಗಳ ಬಗ್ಗೆ ತಿಳಿಯುತ್ತಿದ್ದಂತೆ ನಮಗೆ ಅನಿಸುವುದು ಇಷ್ಟೇ: ನಾವು ಎಲ್ಲಿಗೆ ಬಂದು ತಲುಪಿದ್ದೇವೆ? ವಿಜ್ಞಾನ, ತಂತ್ರಜ್ಞಾನದ ನಾಗಾಲೋಟ, ಮಾತೆತ್ತಿದ್ದರೆ ಡಿಜಿಟಲ್ ಕ್ರಾಂತಿ ಎಂದೆಲ್ಲಾ ಮಾತನಾಡುವ ನಮ್ಮ ಮಧ್ಯೆ ನಾಗರಿಕ ಸಮಾಜವೇ ತಲೆತೆಗ್ಗಿಸುವಂತಹ ಘಟನೆಗಳು ನಮ್ಮನ್ನು ಆತಂಕದ ಕೂಪಕ್ಕೆ ತಳ್ಳದಿರದು. ಹೌದು, ಇದು ನಿಜಕ್ಕೂ ಆತಂಕಕಾರಿಯೇ. ಮನುಷ್ಯನಿಗೆ ದೈಹಿಕ ಆರೋಗ್ಯದಷ್ಟೇ ಮಾನಸಿಕ ಅರೋಗ್ಯವೂ ಪ್ರಮುಖ. ಈ ಮನಸ್ಸಿನ ಮೇಲೆ ಆಗುವ ಪರಿಣಾಮ ಹಾಗೂ ಅದರಲ್ಲಾಗುವ ಬದಲಾವಣೆ ಭಾರಿ ಅನಾಹುತ ಸೃಷ್ಟಿಸಬಹುದು ಎನ್ನಲು ಈ ತರಹದ ದುರ್ಘಟನೆಗಳೇ ನಿದರ್ಶನ.
ಮನಸ್ಸು ಹಲವು ಕಾರಣಗಳಿಂದಾಗಿ ವಿಕೃತಗೊಳ್ಳುತ್ತದೆ. ಹಾಗಾದಾಗ ಅಪಾಯಕಾರಿ ಘಟನೆಗಳು ಸಂಭವಿಸುತ್ತವೆ. ಮಾದಕ ವಸ್ತುಗಳ ಬಳಕೆ ಕೂಡ ಮನೋವಿಕೃತಿಯ ಒಂದು ಬಗೆ. ಒತ್ತಡ ಪರಿಸ್ಥಿತಿ ನಿಭಾಯಿಸಲಾಗದೇ ಸಂಶಯಗ್ರಸ್ತ ತರ್ಕ ಮಾಡುವುದು, ದೃಶ್ಯ ಹಾಗೂ ಶ್ರಾವ್ಯ ಭ್ರಾಂತಿಗಳು, ಉನ್ಮಾದ, ಅವಾಸ್ತವಿಕ ನಂಬಿಕೆಗಳು ಮತಿವಿಕಲ್ಪಕ್ಕೆ ಎಡೆ ಮಾಡಿಕೊಡುತ್ತವೆ. ಆಗ ಮನೋವಿಕೃತಿಗೆ ಒಳಗಾದ ವ್ಯಕ್ತಿಗೆ ತಾನು ಏನು ಮಾಡುತ್ತಿರುವೆ? ಎದುರಿನ ವ್ಯಕ್ತಿ ಯಾರು? ಇದ್ಯಾವುದರ ಅರಿವೇ ಇರುವುದಿಲ್ಲ. ಎಲ್ಲರೂ ನನ್ನ ವಿರುದ್ಧ ಪಿತೂರಿ ಮಾಡುತ್ತಾರೆ ಎನ್ನುವುದು, ಫ್ಯಾಂಟಸಿ ಹುಚ್ಚು ಪ್ರೀತಿ, ಅಸೂಯೆಯುಕ್ತ ಆಕ್ರಮಣಶೀಲತೆ ಅಥವಾ ಉತ್ಪ್ರೇಕ್ಷೆ ಹೀಗೆ ಹಲವು ಭಾವನೆ ಸೃಷ್ಟಿಸುವ ಮನಸ್ಥಿತಿ ಅಪಾಯ ಆಹ್ವಾನಿಸುತ್ತವೆ. ವ್ಯಕ್ತಿ ಯಾರನ್ನೋ ಅತಿಯಾಗಿ ಪ್ರೀತಿಸುವುದು, ಅವರಿಂದ ಭಾರಿ ನಿರೀಕ್ಷೆ ಇಟ್ಟುಕೊಳ್ಳುವುದು, ಅವರನ್ನು ತನ್ನ ಹೊರತುಪಡಿಸಿ ಯಾರೂ ಮಾತನಾಡಿಸಬಾರದು, ನೋಡಬಾರದು ಎನ್ನುವ ಮನಸ್ಥಿತಿ ಅದಕ್ಕೆ ಧಕ್ಕೆಯಾದಾಗ ಯಾವ ಮಟ್ಟಕ್ಕಾದರೂ ಹೋಗಬಹುದು. ಅದೇ ರೀತಿ ಕೀಳರಿಮೆ ಮನಸ್ಥಿತಿ ಕೂಡ ವಿಕೃತಿಗೆ ಕಾರಣವಾಗಬಹುದು. ನಾನು ಅಸಮರ್ಥ, ನಾನು ನೋಡಲು ಸುಂದರವಾಗಿಲ್ಲ. ಎಲ್ಲರೂ ನನ್ನ ಬಗ್ಗೆಯೇ ಮಾತನಾಡಿಕೊಳ್ಳುತ್ತಾರೆ ಅವಕಾಶ ಸಿಕ್ಕಾಗ ಸೇಡು ತೀರಿಸಿಕೊಳ್ಳಬೇಕು ಎನ್ನುವ ಆಲೋಚನೆ ಹಲ್ಲೆ, ಹತ್ಯೆಯಂತಹ ದುಷ್ಕೃತ್ಯಕ್ಕೆ ಎಡೆ ಮಾಡಿಕೊಡಬಹುದು. ಇನ್ನು ಮಹಿಳೆಯರಲ್ಲೂ ಮನೋವಿಕೃತ ಅಸ್ವಸ್ಥತೆ ಕಾಣಬಹುದಾಗಿದೆ. ದೈನಂದಿನ ಜೀವನದಲ್ಲಿ ಅಂದುಕೊಂಡಂತೆ ಆಗದಿದ್ದಾಗ ಅಥವಾ ವಿಚ್ಛೇದನದಂತಹ ಪ್ರಸಂಗ ಎದುರಾದಾಗ ಕೂಡ ಮನಸ್ಸು ವಿಕಾರಗೊಳ್ಳುತ್ತದೆ. ಸಮಾಜ ನನ್ನ ನಡವಳಿಕೆಯನ್ನು ಸ್ವೀಕರಿಸುತ್ತದೆಯೋ ಇಲ್ಲವೋ ಎನ್ನುವ ಸಂಶಯಯುಕ್ತ ಆತಂಕವೂ ಮನಸ್ಸನ್ನು ಅಸ್ಥಿರಗೊಳಿಸಬಹುದು.
ಇನ್ನು ಅಪಘಾತಕ್ಕೊಳಗಾದ ವ್ಯಕ್ತಿ ಆ ಘಟನೆಯಿಂದ ಆಘಾತಕ್ಕೊಳಗಾಗಿ ಮನೋರೋಗಿಯಾಗುತ್ತಾನೆ. ಅವ್ಯಕ್ತ ಭಯ ಅವನಲ್ಲಿ ಆವರಿಸಿರುತ್ತದೆ. ಹೀಗಾಗಿ ಆತ ಹೊರಬರದೆ ಮನೆ ಸೇರುತ್ತಾನೆ. ಮನೆಯಲ್ಲೂ ಚಿತ್ರವಿಚಿತ್ರವಾಗಿ ವರ್ತಿಸುತ್ತಾನೆ. ಆಘಾತ ನಡೆದ ದಿನದಂದು ಮತ್ತೆ ಎಲ್ಲವೂ ಕಣ್ಣಮುಂದೆ ನಡೆಯುತ್ತಿರುವಂತೆ ಭಾಸವಾಗಬಹುದು.ಸಕಾರಾತ್ಮಕ ಚಿಂತನೆ: ನಿರಾಶೆ, ಹತಾಶೆ, ಜುಗುಪ್ಸೆ ಕೂಡ ಮನೋರೋಗಕ್ಕೆ ರಹದಾರಿ ಇದ್ದಂತೆ. ಮನಸ್ಸು ನಿರೀಕ್ಷಿಸುವುದನ್ನು ಹುಡುಕುವುದರಿಂದ ಯಾವಾಗಲೂ ಸಕಾರಾತ್ಮಕ ಆಲೋಚನೆ ನಮ್ಮನ್ನು ಸಂತೋಷವಾಗಿರಿಸುತ್ತದೆ ಎಂದರಿತರೆ ಇವೆಲ್ಲವುಗಳಿಂದ ದೂರವಾಗಬಹುದು. ಇದು ಬದುಕಿನ ಯಶಸ್ಸಿಗೆ ಕೀಲಿ ಕೈ ಕೂಡ ಹೌದು. ಪ್ರತಿಯೊಬ್ಬರೂ ಸಕಾರಾತ್ಮಕ ಚಿಂತನೆಯಲ್ಲಿ ನಂಬಿಕೆಯನ್ನಿಡುತ್ತಾರೆಂದಲ್ಲ. ಕೆಲವರು ಇದನ್ನು ವ್ಯರ್ಥವೆನ್ನುತ್ತಾರೆ ಮತ್ತು ಇದನ್ನು ನಂಬುವವರ ಮೇಲೆ ಅಸಮಾಧಾನವನ್ನು ಪ್ರದರ್ಶಿಸುತ್ತಾರೆ. ಸಕಾರಾತ್ಮಕ ಚಿಂತನೆಯನ್ನು ಇಷ್ಟ್ಟಪಡುವ ಹೆಚ್ಚಿನವರಿಗೆ ಇದನ್ನು ಪರಿಣಾಮಕಾರಿಯಾಗಿ ಮಾಡಿ ಉತ್ತಮ ಫಲಿತಾಂಶಗಳನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ಅರಿವಿರುವುದಿಲ್ಲ. ಯಾರು ತುಂಬಾ ಚಿಂತೆಯಲ್ಲಿರುತ್ತಾರೋ, ಅವರಿಗೆ ಸಕಾರಾತ್ಮಕವಾಗಿ ಆಲೋಚಿಸಿ ಎಂಬ ಮಾತನ್ನು ಜನಸಾಮಾನ್ಯರು ಬಳಸುವುದನ್ನು ನಾವು ಕೇಳಿದ್ದೇವೆ. ಕೆಲವರು ಈ ಮಾತನ್ನು ಪರಿಣಾಮಕಾರಿಯಾಗಿ ತೆಗೆದುಕೊಳ್ಳುವುದಿಲ್ಲ, ಇದರರ್ಥವೇನೆಂದು ಹೆಚ್ಚಿನವರಿಗೆ ತಿಳಿದಿಲ್ಲ, ಸಕಾರಾತ್ಮಕವಾಗಿ ಆಲೋಚಿಸಿ ಎಂಬುದರ ನಿಜವಾದ ಅರ್ಥವೇನೆಂದು ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿಲ್ಲ. ಆದರೂ ಇದನ್ನು ನಂಬುವವರ ಸಂಖ್ಯೆ ಅಧಿಕವಾಗುತ್ತಿದೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ಒಟ್ಟಾರೆ ಹೇಳುವುದಾದರೆ ಮನಸ್ಸನ್ನು ಸ್ವಸ್ಥವಾಗಿಟ್ಟುಕೊಳ್ಳುವುದು ಮತ್ತು ಅದಕ್ಕೆ ಘಾಸಿಯಾದಾಗ ತುಂಬಾ ಎಚ್ಚರಿಕೆಯಿಂದ ಕ್ರಮವಹಿಸಿ ಅದರಿಂದ ಪಾರಾಗುವುದನ್ನು ಮಾಡಿದರೆ ಯಾವ ಮನೋವಿಕೃತಿಯೂ ಇರುವುದಿಲ್ಲ. ಅದರ ದುಷ್ಪರಿಣಾಮದ ಆತಂಕವೂ ಇರುವುದಿಲ್ಲ.