ಭಾಷೆಯು ಭಾವನೆ ಕೆರಳಿಸುವ ಅಸ್ತ್ರ ಆಗದಿರಲಿ

Untitled design (9)
Published on
ಕನ್ನಡ ಭಾಷೆಗೆ 2000 ವರ್ಷಗಳ ಇತಿಹಾಸವಿದೆ. ಶತಮಾನಗಳ ಹಿಂದೆಯೇ ಕನ್ನಡ ನಾಡನ್ನು ಕನ್ನಡಿಗರೇ ಆಳಿದ್ದರು. ಹೀಗಿದ್ದರೂ ಕನ್ನಡನಾಡಿನ ಪರಿಪೂರ್ಣ ಪರಿಕಲ್ಪನೆ ಸಾಕಾರಗೊಂಡಿದ್ದು, ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ 1956ರ ನ. 1ರಂದು ವಿಶಾಲ ಮೈಸೂರು ರಾಜ್ಯ ಮೈದಳೆದಾಗ. 1973ರ ನ. 1ರಂದು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣಗೊಂಡಾಗ ಕನ್ನಡಿಗರೆಲ್ಲರೂ ಸಾಂಸ್ಕೃತಿಕವಾಗಿ ಹಾಗೂ ಭಾವನಾತ್ಮಕವಾಗಿ ಒಂದಾದರು.

ಕನ್ನಡಕ್ಕೆ ಅದರದ್ದೇ ಆದ ಅಸ್ಮಿತೆಯಿದೆ. ಅದು ಬಹುತ್ವವನ್ನು ಗೌರವಿಸುವ, ಒಕ್ಕೂಟದ ಹಿತ ಕಾಯುವ ಬಾಳನೋಟದ ಅಸ್ಮಿತೆ. ಇದು ಪಂಪನಿಂದ ಕುವೆಂಪುವರೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದುಬಂದಿರುವ ಜೀವನದರ್ಶನ. ಇದನ್ನೇ ಪಂಪ ‘ಮಾನವ ಕುಲ ತಾನೊಂದೇ ವಲಂ’ ಎಂದು ಹೇಳಿದ್ದು. ಕನ್ನಡ ಭಾಷೆ ಕೇವಲ ವರ್ಣಮಾಲೆ ಅಲ್ಲ. ಅದು ಕೇವಲ ಶಬ್ದ-ವಾಕ್ಯಗಳಲ್ಲ. ಭಾಷೆಯಲ್ಲಿ ಮನುಷ್ಯನ ಆಳವಾದ ಭಾವನೆಗಳಿರುತ್ತವೆ, ಪರಸ್ಪರ ಸಂಬಂಧಗಳಿರುತ್ತವೆ, ತನ್ನತನದ ಪ್ರಜ್ಞೆ ಇರುತ್ತದೆ. ಅದು ನಮ್ಮ ಸಂಸ್ಕೃತಿ, ಇತಿಹಾಸ, ನೆಲ-ಜಲದ ಸಂಪತ್ತು ಸೇರಿದಂತೆ ಎಲ್ಲವನ್ನೂ ಒಳಗೊಂಡ ಅಸ್ಮಿತೆ. ಕನ್ನಡ ಭಾಷೆ ಈ ಅಸ್ಮಿತೆಯ ಜೀವಧಾತು.

ಕೇವಲ ಅಭಿಮಾನದಿಂದ ಇದರ ರಕ್ಷಣೆ ಸಾಧ್ಯ ಇಲ್ಲ. ಭಾಷೆಯ ಸಾವು ಎಂದರೆ ಸಂಸ್ಕೃತಿ ಮತ್ತು ಸಮುದಾಯದ ಸಾವು ಕೂಡ. ಇತ್ತೀಚೆಗೆ ಶಿಕ್ಷಣ ಕ್ಷೇತ್ರಕ್ಕೆ ವ್ಯಾಪಾರಿ ಮನೋವೃತ್ತಿಯ ಖಾಸಗಿವಲಯದ ಪ್ರವೇಶದಿಂದಾಗಿ ಪ್ರಾದೇಶಿಕ ಭಾಷೆಗಳು ಅಸುರಕ್ಷತೆ ಅನುಭವಿಸುತ್ತಿದೆ. ಭಾಷೆಗೆ ಆಳುವ ಸಾಮರ್ಥ್ಯವೂ ಬೇಕು, ಅನ್ನಕೊಡುವ ಶಕ್ತಿಯೂ ಬೇಕು. ಪ್ರತಿಯೊಂದು ರಾಜ್ಯದ ರಾಜ್ಯಭಾಷೆಯು ಈ ನೆಲದ ಸಾರ್ವಭೌಮ ಭಾಷೆ. ಇದನ್ನು ಸಂವಿಧಾನ ಮಾನ್ಯ ಮಾಡಿದೆ. ಬೇರೆ ಭಾಷೆ ಈ ನೆಲದ ಬದುಕಿನ ಮೇಲೆ ಆಧಿಪತ್ಯ ಮೆರೆಯುವುದು ಭಾಷಾವಾರು ಪ್ರಾಂತ್ಯದ ರಚನೆಯ ನೀತಿಗೆ ವಿರುದ್ಧವಾದುದು.

ಸ್ಥಳೀಯ ಭಾಷೆಯ ಸ್ವಾಯತ್ತತೆ ಉಳಿಸಿಕೊಂಡೇ ಅನ್ಯಭಾಷೆ ಕಲಿಯುವುದಕ್ಕೆ ಅವಕಾಶ ಕೊಡಬೇಕಾದುದು ಒಕ್ಕೂಟ ವ್ಯವಸ್ಥೆಯೊಳಗಿನ ನೀತಿಸಂಹಿತೆ. ಮಾತೃಭಾಷೆ ಎನ್ನುವುದು ಪರಿಸರದ ಭಾಷೆ. ಪರಿಸರ ಭಾಷೆ ಎಂದರೆ ಪ್ರಾದೇಶಿಕ ಮಾನ್ಯತೆ ಪಡೆದ ಭಾಷೆ. ಪ್ರಾದೇಶಿಕ ಆಶೋತ್ತರಗಳನ್ನು ಮೈಗೂಡಿಸಿಕೊಂಡ ಭಾಷೆ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಕನ್ನಡಕ್ಕೇ ಅಗ್ರ ಸ್ಥಾನ. ಕನ್ನಡ ಭಾಷೆಯದ್ದೇ ಸಾರ್ವಭೌಮತ್ವ. ನಮ್ಮ ನೆಲದಲ್ಲಿ ಕನ್ನಡ ಭಾಷೆಯೊಂದೇ ಇಲ್ಲ, ಪ್ರಾದೇಶಿಕ ಭಾಷೆಗಳಾದ ತುಳು, ಕೊಡವ, ಕೊಂಕಣಿ ಮತ್ತಿತರ ಭಾಷೆಗಳಿವೆ. ಕನ್ನಡದೊಂದಿಗೆ ಬೇರುಬಿಟ್ಟಿರುವ ಉರ್ದು, ಲಂಬಾಣಿ, ಬ್ಯಾರಿ ಭಾಷೆಗಳಿವೆ. ಇವೆಲ್ಲವನ್ನೂ ಬೇರೆ ಎಂದು ನಾವು ಎಂದೂ ಭಾವಿಸಿಲ್ಲ. ಭಾರತದ, ಅಷ್ಟೇ ಏಕೆ ವಿಶ್ವದ ಬಹುತೇಕ ಭಾಷಿಗರು ಕರ್ನಾಟಕದಲ್ಲಿದ್ದಾರೆ. ಇಲ್ಲಿ ವಾಸಿಸಿರುವವರೆಲ್ಲರೂ ಕನ್ನಡಿಗರು ಎಂಬುದೇ ನಮ್ಮ ಭಾವನೆ.

ಕರ್ನಾಟಕದಲ್ಲಿರುವ ಕನ್ನಡೇತರರನ್ನು ಕನ್ನಡಿಗರು ಎಂದು ಒಪ್ಪಿಕೊಳ್ಳುವ ಉದಾರ ಮನಸ್ಸು ನಮ್ಮದಾಗಿರುವಾಗ, ರಾಜ್ಯದಲ್ಲಿ ವಾಸವಾಗಿರುವ ಕನ್ನಡೇತರರೂ ಕನ್ನಡ ಭಾಷೆಯನ್ನು ಕಲಿಯುವ, ಕನ್ನಡದಲ್ಲೇ ಮಾತನಾಡುವ ಹಾಗೂ ಕನ್ನಡ ಭಾಷೆಯಲ್ಲೇ ವ್ಯವಹರಿಸುವ ಪ್ರಯತ್ನ ಮಾಡಬೇಕು. ಯಾವುದೇ ಭಾಷೆಯ ಹೇರಿಕೆಯನ್ನು ಯಾರೂ ಒಪ್ಪುವುದಿಲ್ಲ. ಯಾವುದೇ ಭಾಷೆಯ ಕಲಿಕೆಯನ್ನು ತಡೆಯುವುದು ಸಮಂಜಸವೂ ಅಲ್ಲ. ಭಾಷೆಯು ಬಾಂಧವ್ಯ ಬೆಸೆಯುವ ಸಾಧನವಾಗಬೇಕು. ಭಾವನೆ ಕೆರಳಿಸುವ ಅಸ್ತ್ರವಾಗಬಾರದು.

ಇಂಗ್ಲಿಷ್ ಬೇಕು. ಇಂಗ್ಲಿಷ್ ಒಂದೇ ಅಲ್ಲ. ಇನ್ನೂ ಹಲವು ಭಾಷೆಗಳು ಬೇಕು. ಆದರೆ ನಮ್ಮ ಭಾಷೆಯ ಬದಲಿಗೆ ಅಲ್ಲ. ಯಾವ ಭಾಷೆ ಬೇಕು ಎನ್ನುವುದು ನಮ್ಮ ಅಗತ್ಯ, ಆಯ್ಕೆಯನ್ನು ಅವಲಂಬಿಸಿದೆ. ಇಂಗ್ಲಿಷ್ ಮಾತನಾಡಿದರೆ ಮಾತ್ರ ಬುದ್ಧಿವಂತ ಎನ್ನುವ ತಪ್ಪು ಕಲ್ಪನೆ ದೂರವಾಗಬೇಕು. ಚೀನಾ, ರಷ್ಯಾ, ಜಪಾನ್​ನಲ್ಲಿ ಎಲ್ಲ ಪಠ್ಯ ಚಟುವಟಿಕೆಗಳು ಅಲ್ಲಿನ ಭಾಷೆಗಳಲ್ಲೇ ಇವೆ. ಅಲ್ಲೂ ವಿಜ್ಞಾನಿಗಳಿದ್ದಾರೆ, ವೈದ್ಯರಿದ್ದಾರೆ, ಸಂಶೋಧಕರಿದ್ದಾರೆ, ಇಂಜಿನಿಯರ್​ಗಳಿದ್ದಾರೆ, ಶಿಕ್ಷಣ ತಜ್ಞರಿದ್ದಾರೆ.

ಎಲ್ಲ ಕಡೆ ಇಂಗ್ಲಿಷ್ ಮಾಧ್ಯಮದ ಶಾಲೆಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಇದನ್ನು ಕೇವಲ ಸರ್ಕಾರ ನಿಯಂತ್ರಿಸಲಾಗುವುದಿಲ್ಲ. ಈ ಕೆಲಸ ಸಮುದಾಯದಿಂದ ಆಗಬೇಕಾಗಿದೆ. ಶ್ರೀಮಂತರಿಗೆ ಇಂಗ್ಲಿಷ್ ಶಾಲೆ, ಬಡವರಿಗೆ ಕನ್ನಡ ಶಾಲೆ ಎಂದಾಗಬಾರದು. ಶ್ರೀಮಂತ ಕುಟುಂಬಗಳ ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗಳಿಗೆ ಸೇರಿಸಿದರೆ ಉಳಿದವರೂ ಅವರ ಹಾದಿಯನ್ನು ಅನುಸರಿಸುತ್ತಾರೆ. ಕನ್ನಡ ಮಾಧ್ಯಮದಲ್ಲಿ ಓದಿದವರು ಹಿಂದುಳಿಯುತ್ತಾರೆ ಎಂಬ ಭೀತಿ ನಿರಾಧಾರವಾದುದು. ಕನ್ನಡ ಶಾಲೆಗಳಲ್ಲಿ, ಅದರಲ್ಲೂ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ಡಾ. ಸಿ.ಎನ್.ಆರ್. ರಾವ್ ನಿಜವಾದ ಭಾರತರತ್ನಗಳಾಗಿ ವಿಶ್ವವಿಖ್ಯಾತರಾಗಿದ್ದಾರೆ. ನನ್ನನ್ನೂ ಸೇರಿದಂತೆ ಕರ್ನಾಟಕದ ಮುಖ್ಯಮಂತ್ರಿಗಳಾದವರಲ್ಲಿ ಬಹುತೇಕರು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿಯೇ ವ್ಯಾಸಂಗ ಮಾಡಿದವರು.

ಇಂಗ್ಲಿಷ್ ಇಲ್ಲವೆ ಹಿಂದಿ ಭಾಷೆಗಳ ಕಲಿಕೆ, ಅಧ್ಯಯನ, ಸಂಶೋಧನೆಗಳನ್ನು ನಾವು ವಿರೋಧಿಸಬೇಕಾಗಿಲ್ಲ, ಅದು ಸರಿಯಾದ ನಡೆಯೂ ಅಲ್ಲ. ಈ ಭಾಷೆಗಳ ಪ್ರಭಾವ ಕನ್ನಡ ಭಾಷೆಗೆ ಮಾರಕವಾಗದಂತೆ ನೋಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ನಾವು ಯೋಚಿಸಬೇಕಾಗಿದೆ.

ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಜಾರಿಯಲ್ಲಿರುವ ತ್ರಿಭಾಷಾ ನೀತಿ ಕೈಬಿಟ್ಟು ದ್ವಿಭಾಷಾ ನೀತಿ ಅಳವಡಿಸಿಕೊಳ್ಳಬೇಕು. ಎಲ್ಲ ಶಾಲೆಗಳಲ್ಲಿಯೂ ಕನ್ನಡವನ್ನು ಮೊದಲನೆಯ ಇಲ್ಲವೆ ಎರಡನೇ ಭಾಷೆಯಾಗಿ ಕಲಿಯುವುದನ್ನು ಕಡ್ಡಾಯಗೊಳಿಸಬೇಕು ಎನ್ನುವ ಬೇಡಿಕೆ ಇದೆ. ಇದನ್ನು ಸರ್ಕಾರ ಗಂಭೀರವಾಗಿ ಸ್ವೀಕರಿಸಿದೆ.

ಉದ್ಯೋಗ ಎನ್ನುವುದು ಇತ್ತೀಚಿನ ದಿನಗಳಲ್ಲಿ ಕನ್ನಡಿಗ ಯುವಕ-ಯುವತಿಯರು ಎದುರಿಸುವ ಮುಖ್ಯ ಸಮಸ್ಯೆ. ಖಾಸಗಿ ಕ್ಷೇತ್ರಗಳಲ್ಲಿನ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಸಿಗಬೇಕಾದ ನ್ಯಾಯದ ಪಾಲು ಸಿಗುತ್ತಿಲ್ಲ ಎನ್ನುವ ಅಸಮಾಧಾನ ಕನ್ನಡಿಗರಲ್ಲಿದೆ. ರಾಜ್ಯದಲ್ಲಿ ಸ್ಥಾಪಿತವಾಗುವ ಕೇಂದ್ರದ ಉದ್ಯಮಗಳಲ್ಲೂ ಇದೇ ಸ್ಥಿತಿ ಇದೆ. ಒಂದು ಹಂತದವರೆಗಿನ ನೇಮಕಾತಿಯಲ್ಲಿ ಸ್ಥಳೀಯರನ್ನೇ ಪರಿಗಣಿಸಬೇಕಾದ ಅಗತ್ಯವಿದ್ದರೂ ಇಲ್ಲಿ ಹಾಗಾಗುವುದಿಲ್ಲ. ನಮ್ಮ ಸರ್ಕಾರದ ಹೊಸ ಕೈಗಾರಿಕಾ ನೀತಿಯಲ್ಲಿ ಖಾಸಗಿರಂಗದ ಉದ್ಯಮಗಳಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗಾವಕಾಶ ಕಲ್ಪಿಸುವ ಪ್ರಯತ್ನವನ್ನು ಸರ್ಕಾರ ಮಾಡಿದೆ. ಕೇಂದ್ರದ ಸಾರ್ವಜನಿಕ ಉದ್ದಿಮೆಗಳಲ್ಲಿ, ವಾಣಿಜ್ಯ ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳ ಬಗ್ಗೆ ಸರೋಜಿನಿ ಮಹಿಷಿ ಸಮಿತಿ ನೀಡಿದ ವರದಿ ಜಾರಿಗೆ ಸರ್ಕಾರ ಬದ್ಧವಾಗಿದೆ. ಕನ್ನಡ ಅಭಿವೃದ್ದಿ ಪ್ರಾಧಿಕಾರ ಈ ವರದಿಯನ್ನು ಈ ಕಾಲದ ಅವಶ್ಯಕತೆಗಳಿಗೆ ಅನುಗುಣವಾಗಿ ಪರಿಷ್ಕರಿಸಿದೆ. ಇದರ ಅನುಷ್ಠಾನಕ್ಕೆ ಕೂಡ ಸರ್ಕಾರ ಬದ್ಧವಾಗಿದೆ.

ಕನ್ನಡದ ಭಾಷೆ, ಸಂಸ್ಕೃತಿ, ನೆಲ, ಜಲದ ಹಿತವನ್ನು ಕಾಯಬೇಕು ಎಂಬ ಸಂಕಲ್ಪವನ್ನು ನಾವೆಲ್ಲರೂ ಕೂಡಿ ಮಾಡೋಣ. ನಮ್ಮ ಆಚಾರ, ವಿಚಾರ, ನಡವಳಿಕೆಯಿಂದ ನಾವು ಕನ್ನಡಿಗರೆನ್ನುವುದನ್ನು ಸಾಬೀತುಪಡಿಸೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net