

ಜಗತ್ತಿನ ಪುಟ್ಟ ದೇಶಗಳಲ್ಲಿ ಒಂದಾದ ಇಸ್ರೇಲ್ ಹಲವು ಬಗೆಯ ಕುತೂಹಲ ಮೂಡಿಸುತ್ತ ಬಂದಿದೆ. ಇದು ಜಗತ್ತಿನ ಏಕೈಕ ಯಹೂದಿ ರಾಷ್ಟ್ರ. ಇವರು ಮಹಾ ಪ್ರತಿಭಾವಂತ ಜನ. ವಿಜ್ಞಾನ, ವೈದ್ಯಕೀಯ, ಕಲೆ, ಸಂಗೀತ, ಸಾಹಿತ್ಯ, ಕೃಷಿ, ಅರ್ಥಶಾಸ್ತ್ರ, ಪಾಂಡಿತ್ಯದ ಯಾವುದೇ ಕ್ಷೇತ್ರದಲ್ಲಿ ಅವರು ದಾಖಲೆವೀರರು. ಇಲ್ಲಿಯವರೆಗಿನ ಒಟ್ಟು ನೊಬೆಲ್ ಪ್ರಶಸ್ತಿಗಳಲ್ಲಿ ಶೇಕಡ 20ರಷ್ಟು ಪಾಲು ಯಹೂದಿಗಳಿಗೆ ಸೇರಿದೆ. ಮಹಾನ್ ವಿಜ್ಞಾನಿ ಐನ್ಸ್ಟೀನ್ನಿಂದ ಹಿಡಿದು, ನೀಲ್ಸ್ ಬೋಹ್ರ್, ಪೌಲಿ, ಸ್ಟೀಮ್ ವಿನ್ಬರ್ಗ್, ಹಟ್ಸನ್ ಎಲ್ಲರೂ ಯಹೂದಿಗಳೇ. ಅರ್ಥಶಾಸ್ತ್ರದಲ್ಲಿ ಶೇಕಡ 40ರಷ್ಟು ನೊಬೆಲ್ ಇವರಿಗೆ ಲಭಿಸಿರುವುದು ಒಂದು ದಾಖಲೆ.
ತುಂಬ ಬುದ್ಧಿವಂತರಿರುವಲ್ಲಿ ಹೊಂದಾಣಿಕೆ ಕಡಿಮೆಯೇನೋ. ಈಗ ಹೊಂದಾಣಿಕೆ ಇಲ್ಲದ್ದಕ್ಕೆ ಇಸ್ರೇಲ್ ಸಂಸತ್ತಿಗೆ ಹನ್ನೊಂದು ತಿಂಗಳ ಅವಧಿಯಲ್ಲಿ 3ನೇ ಬಾರಿ ಚುನಾವಣೆ ನಡೆದರೂ, ರಾಜಕೀಯ ಅಸ್ಥಿರತೆ ಕೊನೆಗೊಂಡಿಲ್ಲ. ಬೆಂಜಮಿನ್ ನೆತನ್ಯಾಹುರ ಪಕ್ಷ ಈ ಬಾರಿಯೂ ಸ್ಪಷ್ಟ ಬಹುಮತ ಗಳಿಸುವಲ್ಲಿ ವಿಫಲವಾಗಿದ್ದು, ಮೂರು ಸ್ಥಾನಗಳ ಕೊರತೆ ಎದುರಿಸುತ್ತಿದೆ. ಮಾರ್ಚ್ 10ರಂದು ರಾಷ್ಟ್ರಪತಿಗಳ ಮುಂದೆ ಫಲಿತಾಂಶ ಪ್ರಸ್ತುತ ಪಡಿಸಬೇಕಿದೆ. ಆ ಬಳಿಕ ಒಂದು ವಾರದಲ್ಲಿ ಬಹುಮತ ಸಾಬೀತು ಪಡಿಸಬೇಕಾಗುತ್ತದೆ.
ಅಸ್ಥಿರ ಆಡಳಿತದಿಂದ ಇಸ್ರೇಲ್ನಲ್ಲಿ ಆರ್ಥಿಕ ಸಮಸ್ಯೆಗಳು ಹೆಚ್ಚುತ್ತಿವೆ. ಆಡಳಿತ ಬಿಗುವು ಕಳೆದುಕೊಂಡಿದೆ. ಕಳೆದ ವರ್ಷ ಏಪ್ರಿಲ್ 9 ಹಾಗೂ ಸೆಪ್ಟಂಬರ್ 17ರಂದು ಇಸ್ರೇಲ್ ಸಂಸತ್ತಿಗೆ ಎರಡು ಮಹಾಚುನಾವಣೆಗಳು ತುಂಬ ತುರುಸಿನಿಂದ ನಡೆದವು. ಬಲಪಂಥೀಯ ಲಿಕುಡ್ ಪಕ್ಷದ ಮುಂದಾಳು ಬೆಂಜಮಿನ್ ನೆತನ್ಯಾಹು ಮತ್ತು ಇವರ ನೇರ ಪ್ರತಿಸ್ಪರ್ಧಿ ಬ್ಲೂ ಅಂಡ್ ವೈಟ್ ಪಕ್ಷದ ಅಧ್ಯಕ್ಷ ಬೆನ್ನಿ ಗ್ಯಾಂಟ್ಸ್ ಸರ್ಕಾರ ರಚಿಸಲು ಮಾಡಿದ ಪ್ರಯತ್ನಗಳೆಲ್ಲ ವಿಫಲವಾದವು.
2019 ಏಪ್ರಿಲ್ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸರಳ ಬಹುಮತ ದೊರೆಯಲಿಲ್ಲ. ಒಟ್ಟು 120 ಸದಸ್ಯ ಬಲದ ಸಂಸತ್ತಿನಲ್ಲಿ ಸರ್ಕಾರ ರಚಿಸಬೇಕಾದರೆ 61 ಸಂಸದರ ಬೆಂಬಲಬೇಕು. ಈ ಮ್ಯಾಜಿಕ್ ಸಂಖ್ಯೆ ತಲುಪುವುದು ಯಾವುದೇ ಪಕ್ಷಕ್ಕೂ ಸಾಧ್ಯವಾಗಲೇ ಇಲ್ಲ. ಮೊದಲೊಂದು ವಾರ, ಮುಂದೆ ತಿಂಗಳ ಅವಕಾಶ ಕೊಟ್ಟರೂ ಪ್ರಯೋಜನವಾಗಲಿಲ್ಲ. ರೆಸಾರ್ಟ್ ರಾಜಕಾರಣ ಅವರಿಗೆ ಗೊತ್ತಿದ್ದಂತಿಲ್ಲ. ಕಿಭೂತ ಎಂಬ ಸಾಮೂಹಿಕ ತಾಣದಲ್ಲಿ ಅವರು ಸಭೆ ನಡೆಸುತ್ತಿದ್ದರು. ಪ್ರತಿಯೊಂದು ಸಭೆಯಲ್ಲಿ 61 ವಿವಿಧ ಬಗೆಯ ತಿಂಡಿ-ತಿನಿಸುಗಳನ್ನು ಹಂಚುತ್ತಿದ್ದರು. ಆದರೆ 61 ಬೆಂಬಲಿಗರ ಸಂಖ್ಯೆ ಯಾರಿಗೂ ದೊರಕಲಿಲ್ಲ!
ಅನಿವಾರ್ಯ ಸಂದರ್ಭ ನಿರ್ವಣವಾದ್ದರಿಂದ 2019 ಸೆಪ್ಟಂಬರ್ 17ರಂದು ಮತ್ತೊಮ್ಮೆ ಸಂಸತ್ತಿಗೆ ಚುನಾವಣೆ ನಡೆಯಿತು. ವಿಚಿತ್ರ ಎಂದರೆ ಈ ಬಾರಿ ಲಿಕುಡ್ ಮತ್ತು ಬ್ಲೂ ಆಂಡ್ ವೈಟ್ ಎರಡೂ ಪಕ್ಷಗಳು ತಲಾ 60 ಸ್ಥಾನ ಗಳಿಸಿದವು. ಎರಡು ಪಕ್ಷಗಳು ಸಮಬಲ ಪಡೆದಿದ್ದರಿಂದ ಸದಸ್ಯರನ್ನು ಸೆಳೆಯುವ ಪ್ರಯತ್ನ ಜೋರಾಯಿತು. ಚುನಾವಣೆ ನಡೆದು ತಿಂಗಳವರೆಗೆ ಸಂಸದರನ್ನು ಸೆಳೆಯುವ ತಂತ್ರಗಳನ್ನು ಹೆಣೆದರೂ ಫಲ ಸಿಗಲಿಲ್ಲ.
ಮೂರನೆಯ ಚುನಾವಣೆಯೂ ಸ್ಪಷ್ಟ ಜನಾದೇಶ ನೀಡಿಲ್ಲ. ಅಲ್ಲದೆ, ಲಿಕುಡ್ ಪಕ್ಷದ ಮುಂದಾಳು ನೆತನ್ಯಾಹು ವಿರುದ್ಧ ಭ್ರಷ್ಟಾಚಾರ ಆರೋಪದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಅವರ ವಿಚಾರಣೆಗೆ ವೇದಿಕೆ ಸಜ್ಜಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿದ ಮಧ್ಯಪ್ರಾಚ್ಯ ಶಾಂತಿಮಂತ್ರವನ್ನು ಚುನಾವಣೆಯ ಪ್ರಚಾರಕ್ಕೆ ನೆತನ್ಯಾಹು ಬಳಸಿಕೊಂಡಿದ್ದರು. ಬ್ಲೂ ಆಂಡ್ ವೈಟ್ ಪಕ್ಷದ ನಾಯಕ ಬೆನ್ನಿಗ್ಯಾಂಟ್ಸ್ ಇಸ್ರೇಲಿನ ಅರಬ್ ಅಲ್ಪಸಂಖ್ಯಾತರ ಮತಗಳನ್ನು ಪಡೆಯುವ ಪ್ರಯತ್ನ ನಡೆಸಿದ್ದರು. ಈ ಬಾರಿಯೂ ತ್ರಿಶಂಕು ಸ್ಥಿತಿ ತಲೆದೋರಿರುವುದರಿಂದ ಮುಂದೇನು ಎಂಬ ಲೆಕ್ಕಾಚಾರಗಳು ಆರಂಭವಾಗಿವೆ. ಸಣ್ಣಪುಟ್ಟ ಪಕ್ಷಗಳು ಹದಿನೈದು ಸ್ಥಾನಗಳನ್ನು ಗಳಿಸಿದ್ದು, ಅವು ಯಾರಿಗೆ ಬೆಂಬಲ ನೀಡಲಿವೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಇದೇ ಸ್ಥಿತಿ ಮುಂದುವರಿದರೆ ನಾಲ್ಕನೆಯ ಚುನಾವಣೆಯ ಸಾಧ್ಯತೆಯನ್ನು ತಳ್ಳಿ ಹಾಕಲಾಗದು.
ಬ್ರಿಟಿಷ್ ಆಳ್ವಿಕೆಯ ಪ್ರದೇಶವಾಗಿದ್ದ ಪ್ಯಾಲಸ್ತೀನ್ನ್ನು 1948ರಲ್ಲಿ ಎರಡು ಭಾಗ ಮಾಡಿ ಹೊಸ ಇಸ್ರೇಲ್ ಸ್ಥಾಪಿಸಲಾಯಿತು. 1948 ಮೇ 14ರಂದು ಅಧಿಕೃತವಾಗಿ ಇಸ್ರೇಲ್ ದೇಶ ಸ್ಥಾಪನೆಯಾಯಿತು. ಡೇವಿಡ್ಬೆನ್ ಗುರಿಯನ್ ಈ ದೇಶದ ಮೊದಲ ಪ್ರಧಾನಿ. ಹೊಸ ದೇಶದ ನೀಲಿನಕ್ಷೆ ರೂಪಿಸಿ ಚೆನ್ನಾಗಿ ಅಭಿವೃದ್ಧಿ ಪಡಿಸಿದ ಮೇಧಾವಿ. ಭಾರತದಲ್ಲಿ ಇರುವಂತೆ ಸಂಸದೀಯ ವ್ಯವಸ್ಥೆ ಅಲ್ಲಿದೆ. ಸಂಸತ್ತಿನ ಒಟ್ಟು ಸದಸ್ಯರ ಸಂಖ್ಯೆ 120. ಪ್ರಧಾನಿಯೂ ಸಂಸದೀಯ ಮಂಡಳಿಯ ಅಧ್ಯಕ್ಷರಾಗಿರುತ್ತಾರೆ. ನಾಲ್ಕು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ.
ಹಾಲಿನ ಉತ್ಪಾದನೆಯಲ್ಲಿ ಇಸ್ರೇಲ್ ಜಗತ್ತಿಗೆ ಮೊದಲ ಸ್ಥಾನದಲ್ಲಿದೆ. ಈ ದೇಶ ಇಡೀ ಜಗತ್ತಿಗೆ ಹೈಟೆಕ್ ಕೃಷಿಯ ಪಾಠಗಳನ್ನು ಹೇಳುತ್ತಿದೆ. ಕಳೆದ ಮೂರು ದಶಕಗಳಲ್ಲಿ ಈ ದೇಶದ ಕೃಷಿ ಉತ್ಪಾದನೆ 7 ಪಟ್ಟು ಹೆಚ್ಚಾಗಿದೆ. ತುಂಬ ಶ್ರಮದಿಂದ ಇಂತಹ ಸುಭದ್ರತೆಯನ್ನು ಸಾಧಿಸಿರುವ ಇಸ್ರೇಲ್ ರಾಜಕೀಯ ಸ್ಥಿರತೆಯನ್ನು ಕಳೆದುಕೊಳ್ಳಬಾರದು.
ಮಲ್ಲಿಕಾರ್ಜುನ ಹೆಗ್ಗಳಗಿ