

ಹಾಗಂತ ಒಂದು ಮಾತಿದೆ. ಜೀವನದಲ್ಲಿ ಡಿಸಿಪ್ಲೀನ್ ಇರಬೇಕು ಎಂದು ನಾನು ಚಿಕ್ಕವನಿದ್ದಾಗ ಅಪ್ಪಾಜಿ ಪದೇಪದೆ ಹೇಳುತ್ತಿದ್ದರು. ನನಗೆ ಆರಂಭದಲ್ಲಿ ಅರ್ಥವಾಗುತ್ತಿರಲಿಲ್ಲ. ಇದೇನು ಯಾವಾಗಲೂ ಶಿಸ್ತು ಅನ್ನುತ್ತಿರುತ್ತಾರಲ್ಲ ಎಂಬ ಪ್ರಶ್ನೆ ಬರುತ್ತಿತ್ತು. ಅವರೇ ಒಂದು ದಿನ ಅರ್ಥ ಮಾಡಿಸಿದರು. ‘ನಾವು ಸೈಕಲ್ ಕಲಿಯುವಾಗ ಯಾರಾದರೂ ಜತೆಗಿದ್ದು ಹೇಳಿಕೊಡುತ್ತಾರೆ. ಬ್ಯಾಲೆನ್ಸ್ ಮಾಡುವುದನ್ನು ಕಲಿಸಿಕೊಡುತ್ತಾರೆ. ಒಮ್ಮೆ ಬ್ಯಾಲೆನ್ಸ್ ಬಂತೆಂದರೆ ಯಾರೂ ಜತೆಗೆ ಬೇಕಾಗುವುದಿಲ್ಲ. ಅಭ್ಯಾಸ ಆಗುತ್ತಾ ಆಗುತ್ತಾ, ನಾವು ನಮ್ಮ ಪಾಡಿಗೆ ಓಡಿಸಿಕೊಂಡು ಹೋಗುತ್ತೇವೆ. ಶಿಸ್ತು ಸಹ ಅಷ್ಟೇ. ಜೀವನದಲ್ಲಿ ಶಿಸ್ತು ಅಭ್ಯಾಸ ಮಾಡಿಕೊಂಡರೆ, ಆಗ ಎಲ್ಲವೂ ಸುಲಭವಾಗುತ್ತದೆ’ ಎಂದು ವಿವರಿಸಿದರು.
ಶಿಸ್ತು ಎಂದರೆ ಸಮಯಪಾಲನೆ ಎಂಬುದು ಜನಜನಿತವಾಗಿಬಿಟ್ಟಿದೆ. ಸಮಯ ಪಾಲಿಸುವುದು, ಅಚ್ಚುಕಟ್ಟಾಗಿ ಕೆಲಸ ಮಾಡುವುದಷ್ಟೇ ಶಿಸ್ತಲ್ಲ. ಶಿಸ್ತು ಎಂದರೆ ಅದೊಂದು ಜೀವನ ಪದ್ಧತಿ. ನಮ್ಮ ನಡವಳಿಕೆ ಹೇಗಿದೆ, ಬೇರೆಯವರನ್ನು ನಾವು ಹೇಗೆ ನಡೆಸಿಕೊಳ್ಳುತ್ತೇವೆ ಎಂಬುದು ಸಹ ಬಹಳ ಮುಖ್ಯ. ‘ಜೀವನ ಎಂದರೆ ಹುಡುಗಾಟವಲ್ಲ, ಬಹಳ ಸೀರಿಯಸ್ ಆಗಿ ತೆಗೆದುಕೊಳ್ಳಬೇಕು’ ಎಂದು ಹಲವರು ಹೇಳುವುದನ್ನು ಕೇಳಿರುತ್ತೇವೆ. ಜೀವನವನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವುದು ಎಂದರೆ ನಾವು ಸೀರಿಯಸ್ ಆಗಿ ಇರುವುದಲ್ಲ. ಸೀರಿಯಸ್ನೆಸ್ಗೂ-ಸೀರಿಯಸ್ಗೂ ನಡುವೆ ಒಂದು ಸಣ್ಣ ಎಳೆಯಿದೆ. ಅದನ್ನು ಮೊದಲಿಗೆ ಅರ್ಥಮಾಡಿಕೊಳ್ಳಬೇಕು. ವೈಯಕ್ತಿಕವಾಗಿ ನಾವು ಎಷ್ಟೇ ಜಾಲಿಯಾಗಿದ್ದರೂ, ಎಷ್ಟೇ ತಮಾಷೆ ಮಾಡಿದರೂ, ಜೀವನದ ಕುರಿತಾಗಿ ನಮ್ಮ ದೃಷ್ಟಿಕೋನ ಹೇಗಿದೆ ಎನ್ನುವುದು ಬಹಳ ಮುಖ್ಯ. ನಾವು ಶಿಸ್ತುಬದ್ಧವಾಗಿ ಜೀವನ ನಡೆಸಿದರೆ, ಆಗ ಎಲ್ಲವೂ ಒಳ್ಳೆಯದೇ ಆಗುತ್ತದೆ.
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ಡಿಪ್ರೆಶನ್ಗೆ ಒಳಗಾಗಿರುವ ಕುರಿತು ಮಾತಾಡುವುದನ್ನು ನೀವು ಕೇಳಿರಬಹುದು. ಡಿಪ್ರೆಶನ್ ಎನ್ನುವುದು ಫ್ಯಾಶನ್ ಆಗಿಹೋಗಿದೆ. ಇಷ್ಟಕ್ಕೂ ಅವರಿಗೆ ಏನಾಗಿದೆ ಎಂದು ಕೇಳಿದರೆ, ಕೆಲವೊಮ್ಮೆ ಕ್ಷುಲ್ಲಕ ಕಾರಣಗಳನ್ನು ಮುಂದಿಡುತ್ತಾರೆ. ನನ್ನ ಜತೆಗೆ ಮಾತಾಡೋಕೆ ಯಾರೂ ಇಲ್ಲ, ಯಾರೋ ಏನೋ ಅಂದುಬಿಟ್ಟರು, ನನಗೆ ಕೆಲಸ ಇಲ್ಲ, ದುಡ್ಡಿಲ್ಲ ... ಹೀಗೆ ಹಲವು ಕಾರಣಗಳನ್ನು ಹೇಳುತ್ತಾರೆ. ಅಂಥವರಿಗೆ ನಾನು ಕೇಳುವ ಒಂದೇ ಮಾತು ಎಂದರೆ, ಎರಡು ಹೊತ್ತು ಊಟಕ್ಕಿದೆಯಾ? ಎಂದು. ನಮಗೆ ಲಕ್ಷುರಿ ಇಲ್ಲದಿರಬಹುದು; ಕಾಂಟಿನೆಂಟಲ್ ಡಿಶ್ಗಳನ್ನು ತಿನ್ನುವುದಕ್ಕೆ ಸಾಧ್ಯವಿಲ್ಲದಿರಬಹುದು. ಹಾಗಂತ, ಎರಡು ಹೊತ್ತಿನ ಊಟಕ್ಕೆ ಮೋಸವಿರುವುದಿಲ್ಲ. ಇವೆಲ್ಲ ಆಗುವುದು ಪ್ರಲೋಭನೆಗೆ ಒಳಗಾಗುವುದರಿಂದ, ಕೃತಕ ಜೀವನಕ್ಕೆ ಒಡ್ಡಿಕೊಳ್ಳುವುದರಿಂದ.
ಶಿಸ್ತು ಪ್ರಾರಂಭವಾಗುವುದೇ ಅಲ್ಲಿಂದ. ನಾವು ನಮ್ಮ ಜೀವನವನ್ನು ಹೇಗೆ ನಡೆಸಿಕೊಳ್ಳುತ್ತಿದ್ದೇವೆ, ನಮಗಿರುವ ಸಮಯವನ್ನು ಹೇಗೆ ಬಳಸಿಕೊಳ್ಳುತ್ತಿದ್ದೇವೆ, ನಮಗಿರುವ ಅವಕಾಶಗಳನ್ನು ಮತ್ತು ಸೌಕರ್ಯಗಳನ್ನು ಸೌಜನ್ಯಯುತವಾಗಿ ಹೇಗೆ ಉಪಯೋಗಿಸಿಕೊಳ್ಳುತ್ತೇವೆ ... ಈ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳಬೇಕು. ಏಕೆಂದರೆ, ಇವೆಲ್ಲವೂ ಒಂದಕ್ಕೊಂದು ಬೆಸೆದುಕೊಂಡಿವೆ. ಶಿಸ್ತು ಎಂದರೆ ಅದೊಂದು ಮನಸ್ಥಿತಿ. ಅದು ಜೀವನಪ್ರೀತಿ. ಇತ್ತೀಚೆಗೆ ಒಂದು ಆಡಿಯೋ ಕೇಳುತ್ತಿದ್ದೆ. ಪ್ರತಿಯೊಬ್ಬರಿಗೂ ಜೀವನ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯಾಗಿ ಏನೋ ಕೊಡುತ್ತದಂತೆ. ಆದರೆ, ನಾವು ಎಷ್ಟು ಕಷ್ಟಪಡುತ್ತೇವೋ ಅಷ್ಟಕ್ಕೆ ಮಾತ್ರ ಕೊಡುತ್ತದಂತೆ. ಹಾಗೆ ನಮಗೆ ಸಿಗಬೇಕು ಎಂದರೆ ಅದಕ್ಕೆ ಮುಖ್ಯವಾಗಿ ಶಿಸ್ತಿರಬೇಕು. ಯಾರಿಗಾದರೂ ಏನಾದರೂ ಸಿಕ್ಕರೆ, ನಾವು ಬಹಳ ಸಲೀಸಾಗಿ ‘ಅವನಿಗೆ ಅದೃಷ್ಟ ಬಂದಿದೆ’ ಎಂದುಬಿಡುತ್ತೇವೆ. ಆದರೆ, ಅವನಿಗೆ ಬೇರೆ ಯಾವುದೋ ಶಿಸ್ತು ಇರಬಹುದು. ಆ ಕಾರಣಕ್ಕೆ ಏನೋ ಸಿಕ್ಕಿರುತ್ತದೆ. ಅದನ್ನು ನಾವು ಅರ್ಥಮಾಡಿಕೊಳ್ಳಬೇಕು.
ಮುಖ್ಯವಾಗಿ ನಾವು ಯಾವುದರ ಬಗ್ಗೆಯೂ, ಯಾರ ಬಗ್ಗೆಯೂ ಹಗುರವಾಗಿ ಮಾತನಾಡಬಾರದು. ಅದೇ ದೊಡ್ಡ ಶಿಸ್ತು. ನನ್ನ ಪ್ರಕಾರ, ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಕೊಡಬೇಕಾದ ಗೌರವವನ್ನು ಸರಿಯಾಗಿ ಕೊಟ್ಟುಬಿಟ್ಟರೆ, ಜಗತ್ತಿನ ಅರ್ಧ ಸಮಸ್ಯೆಗಳು ಬಗೆಹರಿದುಹೋಗುತ್ತವೆ. ಗೌರವ ಎಂದರೆ, ಬರೀ ಕಿರಿಯರು ಹಿರಿಯರಿಗೆ ಗೌರವ ಕೊಡಬೇಕು ಅನ್ನುವುದಷ್ಟಕ್ಕೇ ಸೀಮಿತವಲ್ಲ. ಎಲ್ಲರೂ ಎಲ್ಲರಿಗೂ ಗೌರವ ಕೊಟ್ಟರೆ, ಆಗ ಸಮಸ್ಯೆಯೇ ಇರುವುದಿಲ್ಲ. ಯಾರಾದರೂ ಆಗಲಿ ಇನ್ನೊಬ್ಬರಿಂದ ಏನು ಅಪೇಕ್ಷಿಸುತ್ತಾರೆ? ತಮ್ಮನ್ನು ಪ್ರೀತಿ ಮತ್ತು ಗೌರವದಿಂದ ಮಾತಾಡಿಸಬೇಕು ಎಂದಷ್ಟೇ. ಅದಕ್ಕಿಂತ ಒಂದು ಸಂಬಂಧದಲ್ಲಿ ಹೆಚ್ಚು ನಿರೀಕ್ಷೆಗಳಿರುವುದಿಲ್ಲ. ನಾವು ಅದನ್ನೇ ಮಾಡದೆ ಹೋದರೆ? ಏನೇ ಸಮಸ್ಯೆ ಇದ್ದರೂ ತಾಳ್ಮೆಯಿಂದ ಮಾತಾಡಿದರೆ ಎಲ್ಲವೂ ಸರಿಹೋಗುತ್ತದೆ. ಯಾರಾದರೂ ಬಗ್ಗದಿದ್ದರೆ, ನಾವು ಸ್ವಲ್ಪ ಕುಗ್ಗಿದರೆ ಪರವಾಗಿಲ್ಲ ಎನ್ನುವ ಮನಸ್ಥಿತಿ ಇದೆಯಲ್ಲ, ಅದರಿಂದ ಹಲವು ಸಮಸ್ಯೆಗಳು ಬಗೆಹರಿಯುತ್ತವೆ.
ಜೀವನದಲ್ಲಿ ಪ್ಲಸ್, ಮೈನಸ್ ಎರಡೂ ಇರುತ್ತವೆ. ನಾವು ಶಿಸ್ತಿನಿಂದ ಇದ್ದರೆ, ಆ ಸೋಲು-ಗೆಲುವು ಎರಡೂ ಹೆಚ್ಚು ಬಾಧಿಸುವುದಿಲ್ಲ. ಗೆಲುವು ಬಂದಾಗ ಹಿಗ್ಗುವುದಿಲ್ಲ, ಸೋಲು ಬಂದಾಗ ಕುಗ್ಗುವುದಿಲ್ಲ. ಎರಡನ್ನೂ ಸಮನಾಗಿ ಸ್ವೀಕರಿಸುವಂತಾಗುತ್ತದೆ. ಏಕೆಂದರೆ, ಇವತ್ತು ಯಶಸ್ಸಿದ್ದರೂ, ನಾಳೆ ಹೇಗಿರಬಹುದು ಎಂಬ ಸಣ್ಣ ಆತಂಕ ಇರುತ್ತದೆ. ನಾಳೆ ಸೋತಾಗ, ಮುಂದೆ ಒಳ್ಳೆಯ ಸಮಯ ಬರಬಹುದು ಎಂಬ ಆಶಾಭಾವನೆ ಇರುತ್ತದೆ. ಹಾಗಾಗಿ, ಏನೇ ಬಂದರೂ ನೆಲದ ಮೇಲೆ ನಿಲ್ಲುವಂತೆ ಮಾಡುತ್ತದೆ. ನನ್ನ ವಿಷಯವನ್ನೇ ತೆಗೆದುಕೊಂಡರೆ, ವೃತ್ತಿಜೀವನದಲ್ಲಿ ಸಾಕಷ್ಟು ಸೋಲು ಕಂಡಿದ್ದೇನೆ. ಹತ್ತು ವರ್ಷಗಳಿಗೂ ಹೆಚ್ಚು ಕಾಲ ನಾನು ಯಶಸ್ಸು ನೋಡುವುದಕ್ಕೆ ಸಾಧ್ಯವಾಗಲಿಲ್ಲ. ‘ಕಲ್ಲರಳಿ ಹೂವಾಗಿ’, ‘ಸೇವಂತಿ ಸೇವಂತಿ’ ತರಹದ ಗೆಲುವನ್ನು ಮತ್ತೆ ಕೊಡುವುದಕ್ಕೆ ಆಗಲಿಲ್ಲ. ಆದರೆ, ಯಾರು ಸಹ ಅದು ಸೋಲು ಎನ್ನಲಿಲ್ಲ. ‘ನಿಮಗೆ ಒಳ್ಳೆಯದಾಗಬೇಕು’ ಎಂದು ಹಾರೈಸುತ್ತಾರೆ. ಇದೆಲ್ಲದರ ನಡುವೆಯೂ ಜನ ನನ್ನ ಜತೆಗೆ ಕೆಲಸ ಮಾಡುವುದಕ್ಕೆ ಪ್ರೀತಿಯಿಂದ ಬರುತ್ತಾರೆ. ಅದಕ್ಕೆ ಕಾರಣ ನಾನು ಯಾವತ್ತೂ ಖುಷಿಯಾಗಿರುತ್ತೇನೆ. ಏನೇ ಕೆಲಸ ಬಂದರೂ ಅದನ್ನು ಮಾಡಿಕೊಂಡು ಹೋಗುತ್ತೇನೆ. ಖ್ಯಾತ ನೃತ್ಯ ನಿರ್ದೇಶಕ ಚಿನ್ನಿಪ್ರಕಾಶ್ ಮಾಸ್ಟರ್ ಒಮ್ಮೆ ಹೇಳಿದ್ದರು- ‘ರಾಜ, ವರ್ಕ್ ಕಮ್್ಸ ಫ್ರಮ್ ವರ್ಕ್’ ಅಂತ. ಅಂದರೆ ನಮ್ಮ ಕೆಲಸ ನೋಡಿ, ಇನ್ನೊಂದು ಕೆಲಸ ಸಿಗುತ್ತದೆ ಅಂತ. ನಾವು ಸರಿಯಾಗಿ ಕೆಲಸ ಮಾಡಿದರೆ, ಶಿಸ್ತುಬದ್ಧರಾಗಿದ್ದರೆ ಕೆಲಸ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಯಾವುದೇ ಕೆಲಸವಾದರೂ ಖುಷಿಯಿಂದ ಮಾಡುತ್ತೀನಿ ಎಂಬ ಮನಸ್ಥಿತಿ ಇರಬೇಕು ಅಷ್ಟೇ. ಹಾಗಾಗಿ, ಯಾವುದೇ ಕೆಲಸವಾದರೂ, ಅದು ನನಗೆ ಇಷ್ಟವಾದರೆ ಖಂಡಿತಾ ಮಾಡುತ್ತೇನೆ.
ಶಿಸ್ತು ಚಿಕ್ಕಂದಿನಿಂದಲೇ ಬರಬೇಕು. ಮಕ್ಕಳನ್ನು ಮುದ್ದು ಮಾಡುವುದು, ಅವರೊಂದಿಗೆ ತಮಾಷೆಯಾಗಿರುವುದು ಎಲ್ಲ ಸಹಜವೇ. ಆದರೆ, ಶಿಸ್ತಿನ ವಿಚಾರದಲ್ಲಿ ರಾಜಿ ಇರಬಾರದು. ನಾವು ಮಕ್ಕಳಿಗೆ ವಿಜ್ಞಾನ, ಗಣಿತ, ಕನ್ನಡ ಎಲ್ಲ ಹೇಳಿಕೊಡುತ್ತೇವೆ. ಆದರೆ, ಫೋಕಸ್ ವಿಷಯದಲ್ಲಿ ಏನನ್ನೂ ಹೇಳಿಕೊಡುವುದಿಲ್ಲ. ಮಕ್ಕಳಿಗೆ ಸಮಯಪಾಲನೆಯ ಬಗ್ಗೆ, ಗಮನಹರಿಸುವ ಬಗ್ಗೆ ಚಿಕ್ಕಂದಿನಿಂದಲೇ ಹೇಳುತ್ತಿರಬೇಕು. ಅದು ಸಹ ಬಹಳ ಮುಖ್ಯ. ಬರೀ ಹೇಳಿದರಷ್ಟೇ ಸಾಲದು, ಕಲಿಸಿಕೊಡಿ. ಫೋಕಸ್ ಇಲ್ಲದಿದ್ದರೆ ಶಿಸ್ತು ಬರುವುದಿಲ್ಲ. ಆ ಶಿಸ್ತು ಮೊದಲು ಬರಬೇಕಾಗಿರುವುದು ಮನೆಯಿಂದ. ಹಾಗಾಗಿ, ಶಿಸ್ತಿನ ಪಾಠ ಮನೆಯಿಂದಲೇ ಪ್ರಾರಂಭವಾಗಲಿ...