

ತ್ರಿಪದಿ ಕವಿ, ಜನರ ಕವಿ ಎಂದೇ ಪ್ರಸಿದ್ಧಿ ಪಡೆದ ಸರ್ವಜ್ಞನ ಹೆಸರಲ್ಲಿ ಪ್ರಾಧಿಕಾರ ರಚನೆಯಾಗಿ ಎಂಟು ವರ್ಷ ಕಳೆದಿವೆ. ಆದರೆ, ಅದಿನ್ನೂ ಸರ್ಕಾರದ ಕಡತದಲ್ಲೇ ಉಳಿದುಕೊಂಡಿದ್ದು, ಕಾರ್ಯರೂಪಕ್ಕೆ ಬರದಿರುವುದು ಸರ್ವಜ್ಞನ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಸರ್ವಜ್ಞನ ವಿಚಾರಧಾರೆ, ಆದರ್ಶಗಳನ್ನು ಜನತೆಗೆ ತಿಳಿಸಲು ಹಾಗೂ ಅವರ ಹುಟ್ಟೂರಾದ ಅಬಲೂರ, ಮಾಸೂರನ್ನು ಪ್ರವಾಸೋದ್ಯಮ ಸ್ಥಳಗಳನ್ನಾಗಿ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 2012 ಮೇ 28 ರಂದು ಕಂದಾಯ ಇಲಾಖೆ ಉಪಕಾರ್ಯದರ್ಶಿ ಸಿದ್ದಲಿಂಗಯ್ಯ ರಾಜ್ಯಪಾಲರ ಆಜ್ಞೆಯಂತೆ ಸರ್ವಜ್ಞ ಪ್ರಾಧಿಕಾರ ರಚಿಸಿ ಆದೇಶ ಹೊರಡಿಸಿದ್ದರು. ಆದರೆ, ಸರ್ಕಾರ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಪ್ರಾಧಿಕಾರ ಎಂಟು ವರ್ಷಗಳಿಂದ ಕಾರ್ಯಾರಂಭ ಮಾಡದೇ ಬರೀ ಘೊಷಣೆಗೆ ಸೀಮಿತವಾಗಿದೆ.
17ನೇ ಶತಮಾನದ ಆದಿ ಭಾಗದಲ್ಲಿದ್ದ ಕವಿ ಸರ್ವಜ್ಞ ದೇಶ ಕಂಡ ಅಪರೂಪದ ತ್ರಿಪದಿಕವಿ, ನಿಷ್ಠುರವಾದಿಯಾದ ಸರ್ವಜ್ಞನಿಗೆ ಅನುಭವವೇ ವೇದಶಾಸ್ತ್ರಗಳು, ಜೀವನವೇ ಪಾಠಶಾಲೆ. ತನ್ನ ತ್ರಿಪದಿಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದವರು. ಫೆಬ್ರವರಿ 20ರಂದು ಸರ್ವಜ್ಞ ಕವಿಯ ಜಯಂತಿ ಉತ್ಸವ ನಡೆಯಲಿದೆ. ಇನ್ನಾದರೂ ಪ್ರಾಧಿಕಾರ ಕಾರ್ಯಾರಂಭ ಮಾಡಲಿ. ಆ ಮೂಲಕ ದೀರ್ಘಾವಧಿಯ ಆಶಯ ಈಡೇರಲಿ.
| ಎಂ.ಎಂ. ಬನೋಶಿ, ವಿಜಯಪುರ