ಇದು ಎಂಥಾ ಲೋಕವಯ್ಯಾ...!; ಬೆಕ್ಕಿಗಾಗಿ ಕಾನೂನು ಹೋರಾಟ

BEKKU
Published on

ಬೆಕ್ಕಿಗಾಗಿ ವಕೀಲರಿಗೆ ಫೀಸು ಕೊಟ್ಟಿದ್ದು ಎಲ್ಲಾದರೂ ಕೇಳಿದ್ದೀರಾ? ಅದೂ ಒಂದಲ್ಲ, ಎರಡಲ್ಲ... ಬರೋಬ್ಬರಿ 25 ಲಕ್ಷ ರೂ.! ಇಂಥದ್ದೊಂದು ಘಟನೆ ಈಚೆಗೆ ಇಂಗ್ಲೆಂಡ್​ನಲ್ಲಿ ನಡೆದಿದೆ. ಅಷ್ಟಕ್ಕೂ ಬೆಕ್ಕಿನ ಕೇಸೇಕೆ ಕೋರ್ಟ್​ವರೆಗೆ ಹೋಯಿತು ಅಂತೀರಾ? ಇದನ್ನು ತಿಳಿಯಲು ನಾವು ಆರು ವರ್ಷ ಹಿಂದಕ್ಕೆ ಹೋಗಬೇಕು.

ಜಾಕಿ ಹಾವುಲ್ ಎಂಬಾಕೆ ತನ್ನ ಪ್ರೀತಿಯ ಮಗಳಿಗೆ ಬರ್ತ್​ಡೇ ಗಿಫ್ಟ್ ಆಗಿ 50 ಸಾವಿರ ರೂ. ಬೆಲೆಯ ವಿಶೇಷ ಜಾತಿಯ ಬೆಕ್ಕನ್ನು ತಂದಿದ್ದಳು. ಆದರೆ ಆ ಬೆಕ್ಕು ಇವರ ಮನೆಗಿಂತ ಹೆಚ್ಚಾಗಿ ಪಕ್ಕದ ಮನೆಯಲ್ಲಿಯೇ ಇರುತ್ತಿತ್ತು. ಇದ್ಯಾಕೆ ಹೀಗೆ ಎಂದು ಜಾಕಿ ನೋಡಿದಾಗ, ಪಕ್ಕದ ಮನೆಯೊಡತಿ ನಿಕೋಲಾ ಬೆಕ್ಕಿಗೆ ಮುದ್ದು ಮಾಡುತ್ತಾ, ಒಳ್ಳೊಳ್ಳೆ ಊಟ ನೀಡುತ್ತಿದ್ದುದು ಜಾಕಿಗೆ ಕಾಣಿಸಿತು. ಜಗಳ ತೆಗೆದ ಜಾಕಿ, ಊಟ ಹಾಕುವುದನ್ನು ನಿಲ್ಲಿಸುವಂತೆ ತಾಕೀತು ಮಾಡಿದಳು.

ಅದಕ್ಕೆ ನಿಕೋಲಾ ‘ನಾನೇನು ಮಾಡಲಿ, ನಿಮ್ಮ ಬೆಕ್ಕೇ ಇಲ್ಲಿ ಬರುತ್ತದೆ, ನಾನು ಊಟ ಹಾಕುತ್ತೇನಷ್ಟೇ. ಇದನ್ನು ನಾನು ತುಂಬಾ ಪ್ರೀತಿ ಮಾಡುತ್ತೇನೆ, ಊಟ ಕೊಡಬೇಡ ಎಂದರೆ ನನ್ನಿಂದ ಆಗದು’ ಎಂದಳು. ಅಷ್ಟೇ. ವಿಷಯ ಕೋರ್ಟ್​ಗೆ ಹೋಯಿತು. ಆರು ವರ್ಷವಾದರೂ ಕೇಸು ಮುಗಿಯಲಿಲ್ಲ. ಇಬ್ಬರು ಮಹಿಳಾಮಣಿಗಳೂ ಸುಸ್ತಾದರು. ಕೊನೆಗೆ ರಾಜಿ ಮಾಡಿಕೊಳ್ಳೋಣವೆಂದು ನಿರ್ಧರಿಸಿದರು. ‘ಇನ್ನು ಮುಂದೆ ನಾನು ಊಟ ಹಾಕುವುದಿಲ್ಲ’ ಎಂದು ನಿಕೋಲಾ ಹೇಳಿದಳು. ಅಲ್ಲಿಗೆ ಕೇಸ್ ಖತಂ. ಆದರೆ ಆರು ವರ್ಷ ವಕೀಲರಿಗೆ ಕೊಟ್ಟ ಫೀಸನ್ನು ನಿಕೋಲಾ ಲೆಕ್ಕ ಹಾಕಿದಾಗ ಅದು ಬರೋಬರಿ 25 ಲಕ್ಷ ರೂ. ಆಗಿತ್ತು!

| ಸುಚೇತನಾ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net