

ಕರ್ನಾಟಕದಲ್ಲಿ ನಾಡಹಬ್ಬವೆಂದರೆ ದಸರಾ. ಅಂತೆಯೇ ಮಹಾರಾಷ್ಟ್ರ ಸರ್ಕಾರ ಗಣೇಶ ಉತ್ಸವವನ್ನು ‘ರಾಜ್ಯ ಉತ್ಸವ’ ಎಂದು ಅಧಿಕೃತವಾಗಿ ಘೊಷಿಸಿದೆ. ಈ ಮೂಲಕ ಈ ಪರ್ವಕ್ಕೆ ಇನ್ನಷ್ಟು ಮೆರುಗು ತುಂಬಲಾಗುವುದು ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಮಹಾರಾಷ್ಟ್ರದ ಸಾಂಸ್ಕೃತಿಕ ಏಕತೆ, ಭವ್ಯತೆಯ ಪ್ರತೀಕವಾಗಿ ಬೆಳೆದು ಬಂದಿರುವ ಗಣೇಶೋತ್ಸವ ಪ್ರಸಕ್ತ ದೇಶ-ವಿದೇಶಗಳಲ್ಲೂ ಪ್ರಸಿದ್ಧ. ರಾಷ್ಟ್ರೀಯತೆ, ಸಾಮಾಜಿಕ ಏಕತೆ, ಸಾಮರಸ್ಯದ ಭಾವವನ್ನು ಇವು ಗಟ್ಟಿಗೊಳಿಸುತ್ತಿವೆ. ಅಲ್ಲದೆ, ಮುಂಬೈ ಮತ್ತು ಪುಣೆಯ ಗಣೇಶೋತ್ಸವಗಳು, ಅಲ್ಲಿನ ಅಲಂಕಾರ ಭಾರಿ ಖ್ಯಾತಿ ಗಳಿಸಿವೆ. ಗಣೇಶ ಮಂಡಳಿಗಳು ಸಮಾಜಮುಖಿಯಾಗಿ ಕೆಲಸ ಮಾಡುತ್ತಿವೆ. ಈ ಕುರಿತಾದ ವಿವರ ಇಲ್ಲಿದೆ.
ಗಣೇಶನ ಆಗಮನವೆಂದರೆ ಅದೊಂದು ಭಾರಿ ಸಂಭ್ರಮದ, ಉತ್ಸಾಹದ ಪರ್ವ. ಹೋದ ವರ್ಷ ಗಣೇಶನ ವಿಸರ್ಜನೆ ಮಾಡಿದ ನಂತರದ ದಿನದಿಂದಲೇ ಗಣೇಶನ ಆಗಮನಕ್ಕಾಗಿ ಕಾತರ ಹೆಚ್ಚುತ್ತದೆ. ಅದಕ್ಕೆಂದೆ, ‘ಗಣಪತಿ ಬಪ್ಪಾ ಮೊರಯಾ, ಪುಢಚಾ ವರ್ಷಿ ಲೌಕರ್ ಯಾ’ (ಗಣಪತಿಗೆ ಜಯಜಕಾರ, ಮುಂದಿನ ವರ್ಷ ಬೇಗ ಬನ್ನಿ) ಎಂಬ ಘೋಷಣೆ ಮುಗಿಲು ಮುಟ್ಟಿರುತ್ತದೆ. ಗಣೇಶೋತ್ಸವಕ್ಕಾಗಿ ತಿಂಗಳುಗಟ್ಟಲೇ ತಯಾರಿ ನಡೆಯುತ್ತದೆ.
ಥೀಮ್ ಅಲಂಕಾರ, ವಿಶೇಷ ನೈವೇದ್ಯ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ವಯೋಮಾನದವರಿಗೆ ಸ್ಪರ್ಧೆಗಳು, ಭಕ್ತರ ಸುರಕ್ಷೆ, ಸಂಚಾರ ಸಿಕ್ಕು ನಿಯಂತ್ರಣ ಸೇರಿದಂತೆ ಹತ್ತುಹಲವು ಸಂಗತಿಗಳ ಬಗ್ಗೆ ಸೂಕ್ತ ಯೋಜನೆ ರೂಪಿಸಿ, ಅದಕ್ಕೆ ಭರ್ಜರಿ ಸಿದ್ಧತೆ ನಡೆಸುವುದೇ ಗಣೇಶ ಮಂಡಳಿಗಳು. ಸಾಂಸ್ಕೃತಿಕ ಇತಿಹಾಸವನ್ನು ಹೊಂದಿರುವ ಈ ಮಂಡಳಿಗಳು ಜನರಿಂದ ಸಂಗ್ರಹಗೊಂಡ ದುಡ್ಡನ್ನೆಲ್ಲ ಉತ್ಸವಕ್ಕಾಗಿ ಖರ್ಚು ಮಾಡುವುದಿಲ್ಲ. ಬದಲಾಗಿ, ಉಚಿತ ಆರೋಗ್ಯ ತಪಾಸಣೆ, ಕಣ್ಣಿನ ಚಿಕಿತ್ಸೆಯ ಆಯೋಜನೆ, ಅನಾಥ ಮಕ್ಕಳಿಗೆ, ಹಿರಿಯರಿಗೆ ನೆರವು, ಬಡಮಕ್ಕಳ ಶಿಕ್ಷಣಕ್ಕೆ ನೆರವು, ಅನ್ನಸಂತರ್ಪಣೆ ಹೀಗೆ ಹಲವು ಸಾರ್ಥಕ ಕಾರ್ಯಗಳಿಗಾಗಿ ಪಾರದರ್ಶಕವಾಗಿ ಹಣವನ್ನು ವಿನಿಯೋಗಿಸುತ್ತವೆ ಮತ್ತು ಉತ್ಸವದ ಹತ್ತೂ ದಿನಗಳ ಅವಧಿಯಲ್ಲೂ ಮಂಡಳಿಯ ಘನತೆ ಹೆಚ್ಚಿಸುವಂಥ ಕಾರ್ಯಕ್ರಮಗಳನ್ನೇ ಆಯೋಜಿಸುತ್ತವೆ.
ಹಾಗಾಗಿಯೇ, ಮುಂಬೈ ಮತ್ತು ಪುಣೆಯ ಪ್ರಸಿದ್ಧ ಮಂಡಳಿಗಳ ಗಣೇಶ ದರ್ಶನಕ್ಕಾಗಿ ಈ ಅವಧಿಯಲ್ಲಿ ದೇಶ-ವಿದೇಶದಿಂದ ಅಸಂಖ್ಯ ಜನರು ಆಗಮಿಸುತ್ತಾರೆ. ದಿನನಿತ್ಯದ ಜಂಜಾಜ, ಲೋಕನ್ ಟ್ರೖೆನ್ನ ಗೋಳಾಟದಲ್ಲಿ ಮುಳುಗಿರುವ ಮುಂಬೈಗರು 10 ದಿನಗಳ ಕಾಲ (ಅನಂತ ಚತುರ್ದಶಿಗೆ ವಿಸರ್ಜನೆ) ಅ ಕಿರಿಕಿರಿಗಳನ್ನು ಮರೆತು ಭಕ್ತಿಭಾವದಲ್ಲಿ ಒಂದಾಗುತ್ತಾರೆ. ಹಾಡು, ನೃತ್ಯದ ಮೂಲಕ ನಲಿಯುತ್ತಾರೆ.
ಟಾಟಾ ಸ್ಪೇಶಲ್ ಸ್ಟೀಲ್ ಆಂಡ್ ಎಕ್ಸೆಲ್ ಇಂಡಸ್ಟ್ರೀಸ್ ಲಿಮಿಟೆಡ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಒಟ್ಟು ಸೇರಿ 1966ರಲ್ಲಿ ಅಂಧೇರಿಯ ರಾಜಾನನ್ನು ಸ್ಥಾಪಿಸಿದರು. ಕಳೆದ ಹಲವು ವರ್ಷಗಳಿಂದ ಬಾಲಿವುಡ್ ನಟ-ನಟಿಯರಿಗೆ ಇದು ಶ್ರದ್ಧಾ ಕೇಂದ್ರವಾಗಿದ್ದು, ಸಾಲಿನಲ್ಲಿ ಸಾಮಾನ್ಯ ಭಕ್ತರ ಜತೆ ನಿಂತು ದರ್ಶನ ಪಡೆಯುತ್ತಾರೆ.
ಕೇಶವಜೀ ನಾಯಿಕ್ ಚಾಳನ ಗಣೇಶೋತ್ಸವಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಲೋಕಮಾನ್ಯ ಬಾಲಗಂಗಾಧರ ತಿಲಕರು 1893ರಲ್ಲಿ ಮೊದಲಬಾರಿಗೆ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದ್ದು ಇಲ್ಲಿಯೇ. ಹಾಗಾಗಿ, ಈ ಪ್ರದೇಶ ಮತ್ತು ಇಲ್ಲಿನ ಗಣೇಶ ಮುಂಬೈಗರ ಹೃದಯದಲ್ಲಿ ವಿಶಿಷ್ಟ ಸ್ಥಾನವನ್ನೇ ಪಡೆದುಕೊಂಡಿದೆ.
ಪುಣೆಯ ವ್ಯಾಪಾರಿ ದಗಡುಶೇಟ್ ಹಲ್ವಾಯಿ ಅವರಿಂದ 1893ರಲ್ಲಿ ಸ್ಥಾಪಿಸಲ್ಪಟ್ಟ ಶ್ರೀಮಂತ ದಗಡುಶೇಟ್ ಹಲ್ವಾಯಿ ಗಣಪತಿ ಮಂದಿರ ಮಹಾರಾಷ್ಟ್ರದ ಸುಪ್ರಸಿದ್ಧ ದೇಗುಳಗಳಲ್ಲೊಂದು. ಲೋಕಮಾನ್ಯ ಬಾಲಗಂಗಾಧರ ತಿಲಕರೇ ಇಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದ್ದು ವಿಶೇಷ. 1894ರಲ್ಲಿ ಮಂದಿರದ ವತಿಯಿಂದ ಸಾರ್ವಜನಿಕ ಗಣೇಶೋತ್ಸವ ಪ್ರಾರಂಭಿಸಲಾಯಿತು. ದಗಡುಶೇಟ್ರ ನಿಧನದ ತರುವಾಯವೂ ಈ ಪರಂಪರೆ ಮುಂದುವರಿಯಿತು.
ಮಂದಿರದ ಟ್ರಸ್ಟ್ ಸಮಾಜಮುಖಿಯಾಗಿ ಸಾರ್ವಜನಿಕ ಗಣೇಶೋತ್ಸವ ಆಚರಿಸುತ್ತಿದ್ದು, ಸಾವಿರಾರು ಜನರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ದೇವಾಲಯಕ್ಕೆ ಮಹಾರಾಷ್ಟ್ರ ಮಾತ್ರವಲ್ಲದೆ ಹೊರರಾಜ್ಯದ ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇದಲ್ಲದೆ, ಕಸಬಾ ಗಣಪತಿ, ಪುಣೆಯ ಗ್ರಾಮದೇವತೆಯಾಗಿದ್ದು, ಮೊದಲ ಪೂಜೆ ಇಲ್ಲಿ ಸಲ್ಲುತ್ತದೆ. ತುಳಸಿಬಾಗ್ ಗಣಪತಿ, ಕೇಸರಿವಾಡಾ ಗಣಪತಿ, ಗುರೂಜಿ ತಾಲಿಮ್ ಮಂಡಳ, ಜಿಬಿಯಾ ಮಾರುತಿ ಮಂಡಳಿಯ ಗಣೇಶೋತ್ಸವಗಳು ಜನಾಕರ್ಷಣೆಯ ಕೇಂದ್ರಗಳಾಗಿವೆ.
ಚಿಂಚಪೋಕಲಿ ರಾಜಾನನ್ನು 1920ರಲ್ಲಿ ಸ್ಥಾಪಿಸಲಾಯಿತು. ಗಣೇಶನ ಆಗಮನ ಮತ್ತು ವಿಸರ್ಜನೆಯ ಮೆರವಣಿಗೆಯನ್ನು ಈ ಮಂಡಳಿ ಭವ್ಯವಾಗಿ ನಡೆಸುತ್ತದೆ. ಈ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಳ್ಳುತ್ತಾರೆ. ಅಲ್ಲದೆ, ಆಗಮನ ಮತ್ತು ವಿಸರ್ಜನಾ ಮೆರವಣಿಗೆಯಲ್ಲಿ ಸಿನಿಮಾ ಹಾಡುಗಳನ್ನು ಹಾಕದೇ ಭಕ್ತಿಮಯ ಹಾಡುಗಳಿಂದ ಗಣೇಶನನ್ನು ಸ್ತುತಿಸಲಾಗುತ್ತದೆ.
ಕರ್ನಾಟಕದಿಂದ ಮುಂಬೈಗೆ ಬಂದ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್ಬಿ) ಸಮುದಾಯದವರು 1954ರಲ್ಲಿ ಈ ಮಂಡಳಿಯನ್ನು ಸ್ಥಾಪಿಸಿದರು. ಪ್ರಸ್ತುತ ಮುಂಬೈಯ ಖ್ಯಾತ ಗಣೇಶ ಮಂಡಳಿ ಗಳ ಪೈಕಿ ಒಂದಾಗಿದ್ದು, ಈ ವರ್ಷದ ಗಣೇಶನಿಗೆ 474.46 ಕೋಟಿ ರೂ. ವಿಮೆ ಕವರೇಜ್ ಸೌಲಭ್ಯ ಪಡೆಯಲಾಗಿದೆ. ಇಲ್ಲಿ ಕೂರಿಸಲಾಗುವ ಗಣೇಶ ಮಣ್ಣಿನಿಂದ ತಯಾರಿಸಿದ್ದಾದರೂ, ಅಲಂಕಾರ ನಯನಮನೋಹರವಾಗಿರುತ್ತದೆ. ನೂರಾರು ಕೆಜಿ ಚಿನ್ನದಿಂದ ಗಣೇಶ ಸುಶೋಭಿತನಾಗುತ್ತಾನೆ.
ಮುಂಬೈಯ ಖೇತವಾಡಿ ಪ್ರದೇಶದಲ್ಲಿ 13 ಬಡಾವಣೆಗಳಿವೆ. ಈ ಹದಿಮೂರೂ ಬಡಾವಣೆಗಳಲ್ಲಿ ಪ್ರತ್ಯೇಕವಾಗಿ ಗಣೇಶನನ್ನು ಕೂರಿಸಲಾಗುತ್ತದೆ. ಆದರೆ, 12ನೇ ಬಡಾವಣೆಯಲ್ಲಿ ಸ್ಥಾಪನೆಯಾಗುವ ಗಣೇಶ ತುಂಬ ಪ್ರಸಿದ್ಧ. 1959ರಿಂದ ಖೇತವಾಡಿಯ ರಾಜಾ ಮಂಡಳಿ ಗಣೇಶನನ್ನು ಪ್ರತಿಷ್ಠಾಪಿಸುತ್ತಿದ್ದು, ಇಲ್ಲಿ ಎತ್ತರದ ಮೂರ್ತಿಯನ್ನು ಕೂರಿಸುವುದು ವೈಶಿಷ್ಟ್ಯ.
ಪರೇಲ್ನ ರಾಜಾ ತನ್ನ ಅಲಂಕಾರದಿಂದ ಗಮನ ಸೆಳೆಯುವ ಜತೆಗೆ, ಈ ಗಣೇಶೋತ್ಸವ ಮಂಡಳಿ ಪ್ರತಿವರ್ಷವೂ ಪ್ರಮುಖವಾದ ಸಾಮಾಜಿಕ ವಿಷಯವನ್ನು ಆಯ್ಕೆ ಮಾಡಿ, ಅದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತದೆ. ಇಲ್ಲಿನ ಗಣೇಶ ನಿಂತಿರುವ ಭಂಗಿಯಲ್ಲಿ ಇರುತ್ತದೆ. 1947ರಿಂದ ಪರೇಲ್ನ ರಾಜಾವನ್ನು ಸ್ಥಾಪಿಸಲಾಗುತ್ತಿದ್ದು, 79 ವರ್ಷಗಳ ಅನನ್ಯ ಪಯಣ ಅಷ್ಟೇ ಉತ್ಸಾಹದಿಂದ ಮುಂದುವರಿದಿದೆ.
ಲಾಲ್ಬಾಗ್ನ ರಾಜಾ ಈಗ ಮುಂಬೈಯ ರಾಜಾ ಎಂದೇ ಪ್ರಸಿದ್ಧ. ಮುಂಬೈಯ ಪರೇಲ್ ಬಡಾವಣೆಯ ಲಾಲ್ಬಾಗ್ ಮಾರುಕಟ್ಟೆಯಲ್ಲಿ ಈ ಗಣೇಶ ವಿರಾಜಮಾನ. 1934ರಲ್ಲಿ ಲಾಲ್ಬಾಗ್ ರಾಜಾನನ್ನು ಸ್ಥಾಪಿಸಲಾಯಿತು. ಅಲ್ಲಿಂದ ವರ್ಷದಿಂದ ವರ್ಷಕ್ಕೆ ಇದರ ಭವ್ಯತೆ, ಅಗಾಧತೆ ಹೆಚ್ಚುತ್ತಲೇ ಸಾಗಿದೆ. ಪ್ರತಿ ವರ್ಷವೂ ಗಣೇಶನ ಹೊಸಮೂರ್ತಿಯ ಆಗಮನವಾಗುತ್ತದೆ. ಈ ರಾಜಾನನ್ನು ನೋಡಲು ಲಕ್ಷಾಂತರ ಜನರು ಪೆಂಡಾಲ್ಗೆ ಆಗಮಿಸುತ್ತಾರೆ. ‘ಲಾಲ್ಬಾಗ್ ಚಾ ರಾಜಾ ಸಾರ್ವಜನಿಕ ಗಣೇಶೋತ್ಸವ ಮಂಡಳ’ ಈ ಬಾರಿ 92ನೇ ಗಣೇಶೋತ್ಸವವನ್ನು ಆಚರಿಸುತ್ತಿದೆ. 1,200 ಸ್ವಯಂಸೇವಕರು ವರ್ಷವಿಡೀ ಸಿದ್ಧತೆಯಲ್ಲಿ ತೊಡಗಿರುತ್ತಾರೆ.
ಸಮಾಜಕ್ಕೆ ಕೊಡುಗೆ: ಬಡ ಕುಟುಂಬದ ಕಿಡ್ನಿ ರೋಗಿಗಳಿಗೆ ಲಾಲ್ಬಾಗ್ನ ಚಿವಡಾ ಗಲ್ಲಿಯಲ್ಲಿ ಡಯಾಲಿಸಿಸ್ಕೇಂದ್ರ ಆರಂಭಿಸಿದ್ದು, ಇಲ್ಲಿ ಸಾಂಕೇತಿಕವಾಗಿ 100 ರೂ. ಶುಲ್ಕದಲ್ಲಿ ಡಯಾಲಿಸಿಸ್ ಸೌಲಭ್ಯ ಒದಗಿಸಲಾಗುತ್ತಿದೆ. ಅಲ್ಲದೆ, 2006ರಲ್ಲಿ ಸ್ವಾತಂತ್ರ್ಯವೀರ ಸಾವರ್ಕರ್ ಗ್ರಂಥಾಲಯವನ್ನು ನಿರ್ವಿುಸಿದ್ದು, ಉಚಿತ ಯೋಗ ಕೇಂದ್ರವನ್ನು 2010ರಿಂದ ನಿರ್ವಹಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ಕಂಪ್ಯೂಟರ್ ತರಬೇತಿ ಕೇಂದ್ರ ನಡೆಸಲಾಗುತ್ತಿದೆ.
ಗಣೇಶ ಚತುರ್ಥಿಗೆ (ಭಾದ್ರಪದ ಮಾಸ) ಗಣೇಶನನ್ನು ಭಕ್ತಿಯಿಂದ ಆರಾಧಿಸುವ ಪರಂಪರೆ ಬಹುಹಿಂದಿನಿಂದಲೂ ಮಹಾರಾಷ್ಟ್ರ ಸೇರಿದಂತೆ ದೇಶದ ಬೇರೆ ಬೇರೆ ಭಾಗಗಳಲ್ಲಿದೆ. ಆದರೆ, ಈ ಆಚರಣೆ ಮನೆಗಳಿಗೆ ಸೀಮಿತವಾಗಿತ್ತು. ಗಣೇಶನ ಕುರಿತಾದ ಜನರ ಭಕ್ತಿ, ಭಾವನೆಗಳನ್ನು ಗುರುತಿಸಿದ ಲೋಕಮಾನ್ಯ ಬಾಲಗಂಗಾಧರ ತಿಲಕರು ಇದನ್ನು ಸಾರ್ವಜನಿಕ ಉತ್ಸವವನ್ನಾಗಿಸಿದರು. ಇದಕ್ಕೆ ಪ್ರಮುಖ ಕಾರಣ ಬ್ರಿಟಿಷರ ವಿರುದ್ಧ ಭಾರತೀಯರನ್ನು ಸಂಘಟಿಸುವುದಾಗಿತ್ತು, ಆ ಮೂಲಕ ಸ್ವಾತಂತ್ರ್ಯ ಹೋರಾಟದ ಜ್ವಾಲೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿತ್ತು. ತಿಲಕರು 1893ರಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರು. ತಿಲಕರ ಆಶಯ ನೆರವೇರಿತು. ಮನೆಯಿಂದ ಬೀದಿಗೆ ಬಂದು ರಾರಾಜಿಸಿದ ಗಣೇಶ ಸ್ವರಾಜ್ಯದ ಕನಸಿಗೆ ಬಲ ತುಂಬಿದ, ಆಂತರಿಕ ಭಿನ್ನಾಭಿಪ್ರಾಯ ಮರೆತು ದೇಶಕ್ಕಾಗಿ ಒಂದಾಗುವಂತೆ ಜನರಿಗೆ ಸದ್ಭುದಿ ನೀಡಿದ.