ನ್ಯಾಯದೇವತೆ| ತಂದೆಯ ಆಸ್ತಿಯಲ್ಲಿ ಎರಡನೇ ಹೆಂಡತಿಗೆ ಭಾಗ ಇರುತ್ತದೆಯೇ?

nyayadevate
Published on
ಪ್ರಶ್ನೆ: ನನ್ನ ಗಂಡ ನನ್ನನ್ನು ಮತ್ತು ನನ್ನ ಎರಡು ಮಕ್ಕಳನ್ನು ಬಿಟ್ಟು ತೀರಿಕೊಂಡು ಎಂಟು ವರ್ಷಗಳಾಗಿವೆ. ಆಗಿನಿಂದಲೂ ನಾನು ಮತ್ತು ನನ್ನ ಮಕ್ಕಳು ನಮ್ಮ ತಾಯಿಯ ಮನೆಯಲ್ಲಿ ಇದ್ದೇವೆ. ಈಗ ನನ್ನ ಮೈದುನ ಬಂದು ನನ್ನ ಅಪ್ರಾಪ್ತ ಮಕ್ಕಳನ್ನು ತನಗೆ ಒಪ್ಪಿಸಬೇಕೆಂದೂ, ಅವರ ಕಸ್ಟಡಿ ತನಗೇ ಕೊಡಬೇಕೆಂದೂ, ತನ್ನನ್ನೇ ಆ ಮಕ್ಕಳ ಗಾರ್ಡಿಯನ್‌ ಮಾಡಬೇಕೆಂದೂ ಪಟ್ಟು ಹಿಡಿದಿದ್ದಾರೆ. ನನ್ನ ಗಂಡನ ಆಸ್ತಿಯೆಲ್ಲಾ ಮಕ್ಕಳಿಗೆ ಹೋಗುತ್ತದೆ. ಆ ಆಸ್ತಿಗಳನ್ನು ತಾನೇ ನೋಡಿಕೊಳ್ಳುವುದಾಗಿಯೂ ತಿಳಿಸಿ ನನ್ನನ್ನು ಹೆದರಿಸುತ್ತಿದ್ದಾರೆ. ನನ್ನ ಮಕ್ಕಳನ್ನು ಅವರು ಕರೆದುಕೊಂಡು ಹೋಗಬಹುದೇ? ನನ್ನ ಗಂಡನ ಆಸ್ತಿಯನ್ನು ಅವರೇ ನೋಡಿಕೊಳ್ಳುವಂತೆ ಆದೇಶ ಆಗುತ್ತದೆಯೇ? ನನಗೆ ನನ್ನ ಮಕ್ಕಳನ್ನು ಬಿಟ್ಟರೆ ಬೇರೆ ಯಾರೂ ಇಲ್ಲ. ನನ್ನ ತಂದೆ ತಾಯಿ ಮಕ್ಕಳನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ನಾನು ಕೆಲಸಕ್ಕೆ ಹೋಗುತ್ತಿದ್ದೇನೆ. ಈ ಕಾರಣದಿಂದ ಮಕ್ಕಳನ್ನು ನನ್ನ ಮೈದುನನಿಗೇ ಕೊಡಬೇಕು ಎನ್ನುವ ಆದೇಶ ಆಗುತ್ತದೆಯೇ?

ಉತ್ತರ: ನಿಮ್ಮ ಪತಿಯ ಹೆಸರಿಗೆ ಇದ್ದ ಆಸ್ತಿ, ಅವರು ತೀರಿಕೊಂಡಾಗ, ಅವರ ತಾಯಿ ಅವರ ಪತ್ನಿ ಮತ್ತು ಮಕ್ಕಳಿಗೆ ಸಮಭಾಗವಾಗಿ ಹೋಗುತ್ತದೆ. ನಿಮ್ಮ ಪತಿಗೆ ತಾಯಿ ಇಲ್ಲದೇ ಇದ್ದಲ್ಲಿ, ನಿಮ್ಮ ಮೃತ ಪತಿಯ ಆಸ್ತಿ ನಿಮಗೆ ಮತ್ತು ನಿಮ್ಮ ಮಕ್ಕಳಿಗೆ ಸಮವಾಗಿ ಹಂಚಿಕೆ ಆಗುತ್ತದೆ. ನಿಮ್ಮ ಪತಿ ಇಲ್ಲದೇ ಇರುವುದರಿಂದ ಮಕ್ಕಳಿಗೆ ನೀವೇ ನ್ಯಾಚುರಲ್‌ ಗಾರ್ಡಿಯನ್‌ ಆಗುತ್ತೀರಿ. ನೀವು ಹೆದರ ಬೇಕಾಗಿಲ್ಲ. ಯಾವ ಸಂದರ್ಭದಲ್ಲಿ ನ್ಯಾಚುರಲ್‌ ಗಾರ್ಡಿಯನ್‌ ಮಕ್ಕಳನ್ನು ನೋಡಿಕೊಳ್ಳುವುದರಲ್ಲಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಮತ್ತು ಮಕ್ಕಳ ಏಳಿಗೆಯ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ಸಾಬೀತು ಪಡಿಸಲಾಗುತ್ತದೋ ಅಂತಹ ಸಂದರ್ಭದಲ್ಲಿ ಮಾತ್ರ ಬೇರೆಯ ಸೂಕ್ತ ವ್ಯಕ್ತಿಗಳನ್ನು ಮಕ್ಕಳ ಗಾರ್ಡಿಯನ್‌ ಆಗಿ ನ್ಯಾಯಾಲಯ ನೇಮಿಸುತ್ತದೆ. ನೀವು ಕೆಲಸಕ್ಕೆ ಹೋಗುತ್ತಿರುವ ಒಂದೇ ಕಾರಣದಿಂದ ಮಕ್ಕಳ ಕಸ್ಟಡಿಯನ್ನು, ಬೇರೆಯವರಿಗೆ ಕೊಡುವಂತೆ ನ್ಯಾಯಾಲಯ ಆದೇಶ ಮಾಡುವುದಿಲ್ಲ. ಈವರೆಗೆ ನಿಮ್ಮ ಮಕ್ಕಳು ನಿಮ್ಮ ಹತ್ತಿರವೇ ಇರುವಾಗ ಈಗ ಅವರನ್ನು ನಿಮ್ಮಿಂದ ಬೇರ್ಪಡಿಸುವ ಆದೇಶವನ್ನು ಸಾಮಾನ್ಯವಾಗಿ ನ್ಯಾಯಾಲಯ ಮಾಡುವುದಿಲ್ಲ. ನೀವು ಹೆದರಬೇಕಾಗಿಲ್ಲ. ನಿಮ್ಮ ಮಕ್ಕಳು ಮೆಜಾರಿಟಿಗೆ ಬರುವವರೆಗೆ ಅವರ ಭಾಗದ ಆಸ್ತಿಯನ್ನೂ ನೀವೇ ನೋಡಿಕೊಳ್ಳಬಹುದು. ಆದರೆ, ಯಾವುದೇ ಕಾರಣಕ್ಕೂ ನ್ಯಾಯಾಲಯದ ಅನುಮತಿ ಇಲ್ಲದೆ ಅವರ ಭಾಗದ ಆಸ್ತಿಯನ್ನು ನೀವು ಪರಭಾರೆ ಮಾಡುವಂತಿಲ್ಲ. ನಿಮ್ಮ ಮಕ್ಕಳ ಭಾಗದ ಆಸ್ತಿಯ ನಿರ್ವಹಣೆಗೆ ನಿಮ್ಮ ಮೈದುನರವರನ್ನು ನ್ಯಾಯಾಲಯ ನೇಮಿಸುವ ಅವಕಾಶ ಬಹಳ ಕಡಿಮೆ ಇರುತ್ತದೆ.

ಪ್ರಶ್ನೆ: ನಮ್ಮ ತಂದೆ ತೀರಿಕೊಂಡು ನಾಲ್ಕು ವರ್ಷ ಆಯಿತು. ನಮ್ಮ ತಂದೆಗೆ-ತಾಯಿಗೆ ನಾವು ಮೂವರು ಮಕ್ಕಳು. ನಮ್ಮ ತಂದೆಗೆ ಅವರೇ ಸಂಪಾದಿಸಿದ ಆಸ್ತಿಗಳು ತುಂಬಾ ಇವೆ. ಅವರು ವಿಲ್‌ ಮಾಡಿಲ್ಲ. ಈಗ ಒಬ್ಬ ಹೆಂಗಸು ಬಂದು ನಮ್ಮ ತಂದೆಯ ಎರಡನೇ ಹೆಂಡತಿ ಎಂದು ಹೇಳಿ ನಮ್ಮ ತಾಯಿಯ ಮೇಲೆ ಮತ್ತು ನಮ್ಮ ಮೇಲೆ ಜಗಳ ತೆಗೆದು ಆಸ್ತಿಯಲ್ಲಿ ಭಾಗ ಕೇಳುತ್ತಿದ್ದಾರೆ. ನಮ್ಮ ತಂದೆ ಸಾಯುವುದಕ್ಕೆ ಎರಡು ವರ್ಷದ ಮೊದಲು ಅವರನ್ನು ಮದುವೆ ಆಗಿರುವುದಾಗಿ ಹೇಳುತ್ತಿದ್ದಾರೆ. ಅವರಿಗೆ ಮಕ್ಕಳು ಇಲ್ಲ ಎಂದೂ ಹೇಳುತ್ತಿದ್ದಾರೆ. ನಮ್ಮ ತಂದೆಯ ಆಸ್ತಿಯಲ್ಲಿ ನಮ್ಮ ತಂದೆಯ ಎರಡನೇ ಹೆಂಡತಿಗೆ ಭಾಗ ಇರುತ್ತದೆಯೇ? ನಮ್ಮ ತಾಯಿಗೆ ತುಂಬಾ ಹೆದರಿಕೆ ಆಗಿದೆ.

ಉತ್ತರ: ಮೊದಲನೇ ಹೆಂಡತಿ ಬದುಕಿದ್ದಾಗ ಆಕೆಗೆ ವಿಚ್ಛೇದನ ಕೊಡದೇ ಎರಡನೇ ಮದುವೆ ಆಗಿದ್ದರೆ, ಆ ಎರಡನೇ ಹೆಂಡತಿಗೆ ಮೃತ ಹಿಂದೂ ಪುರುಷನ ಆಸ್ತಿಯಲ್ಲಿ ಯಾವ ಭಾಗವೂ ಸಿಗುವುದಿಲ್ಲ. ನೀವು ಮತ್ತು ನಿಮ್ಮ ತಾಯಿ ಹೆದರಬೇಕಾಗಿಲ್ಲ. ನಿಮ್ಮ ತಂದೆಯ ಎಲ್ಲಾ ಆಸ್ತಿಗಳೂ ನಿಮ್ಮ ತಾಯಿಗೆ ಮತ್ತು ನೀವು ಮೂವರು ಮಕ್ಕಳಿಗೆ ತಲಾ ನಾಲ್ಕನೇ ಒಂದು ಭಾಗದಂತೆ ಸಮವಾಗಿ ಸಿಗುತ್ತದೆ.

ಎಸ್.ಸುಶೀಲ ಚಿಂತಾಮಣಿ, (ಲೇಖಕರು ಕರ್ನಾಟಕ ಉಚ್ಛ ನ್ಯಾಯಾಲಯದ ಹಿರಿಯ ವಕೀಲರು ಮತ್ತು ಹಿರಿಯ ಮಧ್ಯಸ್ಥಿಕೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net