

ಇಡೀ ಜೀವನವನ್ನು ಆವರಿಸುವಂತೆ ಧರ್ಮಕ್ಕೆ ಯಾಕೆ ಇಷ್ಟೊಂದು ವ್ಯಾಪಕವಾದ ಸ್ಥಾನ ನೀಡಬೇಕೆನ್ನುವುದು ಹಾಗೂ ಅದನ್ನು ಅತಿಕ್ರಮಿಸಲು ಶಾಸಕಾಂಗವನ್ನು ಏಕೆ ತಡೆಯಲಾಗುತ್ತದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಅಷ್ಟಕ್ಕೂ ನಮಗೆ ಸ್ವಾತಂತ್ರ್ಯ ಇರುವುದಾದರೂ ಯಾಕಾಗಿ?. ನಮ್ಮ ಮೂಲಭೂತ ಹಕ್ಕುಗಳಿಗೆ ವ್ಯತಿರಿಕ್ತವಾದ; ಅಸಮಾನತೆ, ತಾರತಮ್ಯಗಳು ತುಂಬಿತುಳುಕುತ್ತಿರುವ ನಮ್ಮ ಸಮಾಜವನ್ನು ಸುಧಾರಿಸಲೆಂದೇ ನಮಗೆ ಈ ಸ್ವಾತಂತ್ರ್ಯವಿರುವುದು.
| ಡಾ. ಬಿ.ಆರ್. ಅಂಬೇಡ್ಕರ್
ಈ ಎಲ್ಲ ಕಾರಣಗಳಿಂದಾಗಿ ಮದುವೆ ಮತ್ತು ವಾರಸುದಾರಿಕೆಯಂಥ ಅತಿ ಪ್ರಮುಖ ವಿಚಾರಗಳನ್ನು ನಿಭಾಯಿಸಲು ಏಕರೂಪ ಕಾನೂನು ಅಗತ್ಯವೆಂಬ ಭಾವನೆ ಬಲವಾಗಿದೆ. ಅದು ಸಮಾನತೆಯನ್ನು ಸಾಧಿಸಲು ನೆರವಾಗುತ್ತದೆ ಹಾಗೂ ಅದೇ ಸಮಯಕ್ಕೆ ಧಾರ್ವಿುಕತೆಯ ಹೊಂದಾಣಿಕೆಯನ್ನೂ ರಕ್ಷಿಸುತ್ತದೆ. ನಮ್ಮ ಸಂವಿಧಾನದ ಆದರ್ಶಗಳಿಗೆ ಹೊಂದಿಕೆಯಾಗದ, ಬೇರೆಯೇ ವಿಚಾರಗಳಿಗೆ ನಿಷ್ಠವಾಗಿರುವುದನ್ನು ತೊಡೆದುಹಾಕುವತ್ತ ದೊಡ್ಡ ಹೆಜ್ಜೆಯಿಡಲು ಕೂಡ ಇಂಥ ಏಕರೂಪ ಕಾನೂನು ಸಹಾಯಕವಾಗುತ್ತದೆ. ಜನರು ಯಾವುದೇ ಧರ್ಮ ಆಚರಿಸುತ್ತಿರಲಿ, ಅದರ ಪರಿಗಣನೆಯಿಲ್ಲದೆ ಎಲ್ಲ ನಾಗರಿಕರನ್ನು ಒಂದಾಗಿಸುವುದು ಹಾಗೂ ರಾಷ್ಟ್ರೀಯ ಸಮಗ್ರತೆ ಸಾಧಿಸುವುದು ಈ ಕಾನೂನಿನ ಒಂದು ಮಹತ್ವದ ಪರಿಣಾಮವಾಗಿರುತ್ತದೆ. ಭಾರತೀಯ ಸಂವಿಧಾನದ 25ನೇ ವಿಧಿ ಧಾರ್ವಿುಕ ಸ್ವಾತಂತ್ರ್ಯವನ್ನು ಖಾತರಿಪಡಿಸಿದೆ. ಸಮಾನ ನಾಗರಿಕ ನೀತಿ ಸಂಹಿತೆ ರೂಪಿಸಲು ಅಡ್ಡಿಯಾಗುವ ರೀತಿಯಲ್ಲಿ ಅದನ್ನು ತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿದೆ. ವಾಸ್ತವವಾಗಿ ಅದು ನೈತಿಕತೆ, ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಮೂಲಕ ಏಕರೂಪ ಕಾನೂನಿಗೆ ಹಾದಿ ಸುಗಮಗೊಳಿಸುತ್ತದೆ. 1935ರವರೆಗೆ ವಾಯವ್ಯ ಪ್ರಾಂತ್ಯವು ಷರಿಯತ್ ಕಾನೂನಿಗೆ ಒಳಪಟ್ಟಿರಲಿಲ್ಲ ಹಾಗೂ ವಾರಸುದಾರಿಕೆ ಹಾಗೂ ಇತರ ವಿಚಾರಗಳಲ್ಲಿ ಹಿಂದು ಕಾನೂನನ್ನು ಅಲ್ಲಿ ಅನುಸರಿಸಲಾಗುತ್ತಿತ್ತು ಎನ್ನುವುದು ಬಹಳ ಜನರಿಗೆ ಗೊತ್ತಿರಲಾರದು. 1939ರಲ್ಲಿ ಕೇಂದ್ರ ಶಾಸನಸಭೆ ರಂಗಪ್ರವೇಶಿಸಿ ಮುಸ್ಲಿಂರಿಗೆ ಹಿಂದು ಕಾನೂನು ಅನ್ವಯವಾಗುವುದನ್ನು ರದ್ದುಪಡಿಸಿ ಷರಿಯತ್ ಕಾನೂನನ್ನು ಅನ್ವಯಗೊಳಿಸಿತು. ಅಷ್ಟು ಮಾತ್ರವೇ ಅಲ್ಲ, ಸಂಯುಕ್ತ ಪ್ರಾಂತ್ಯಗಳು, ಕೇಂದ್ರ ಪ್ರಾಂತ್ಯಗಳು ಮತ್ತು ಮುಂಬೈಯಂಥ ಭಾರತದ ಹಲವು ಭಾಗಗಳಲ್ಲಿ ವಂಶಪಾರಂಪರ್ಯತೆ ವಿಚಾರದಲ್ಲಿ ಮುಸ್ಲಿಮರು ಬಹುತೇಕವಾಗಿ ಹಿಂದು ಕಾನೂನಿಗೆ ಒಳಪಟ್ಟಿದ್ದರು. ಅವರನ್ನು ಷರಿಯತ್ ಕಾನೂನು ಅನುಸರಿಸುವ ದೇಶದ ಇತರ ಮುಸ್ಲಿಮರೊಂದಿಗೆ ಸರಿಸಮಗೊಳಿಸುವ ಉದ್ದೇಶದಿಂದ 1937ರಲ್ಲಿ ಶಾಸಕಾಂಗ ಮಧ್ಯಪ್ರವೇಶ ಮಾಡಿ ದೇಶದ ಇತರ ಭಾಗಗಳಿಗೂ ಷರಿಯತ್ ಅನ್ವಯಿಸುವ ಕಾನೂನು ರೂಪಿಸಿತು.
ಸಮಗ್ರತೆಗೆ ಅಪಾಯ: ಇತ್ತೀಚಿನ ದಿನಗಳಲ್ಲಿ ಪ್ರಾದೇಶಿಕತೆ ಹಾಗೂ ಕೋಮುವಾದದಿಂದ ದೇಶದ ಸಮಗ್ರತೆಗೆ ಅಪಾಯ ಉಂಟಾಗುತ್ತಿದೆ. ಭಾಷೆ, ಪ್ರಾಂತ್ಯ ಹಾಗೂ ಧಾರ್ವಿುಕ ನಿಷ್ಠೆಗಳು ರಾಷ್ಟ್ರೀಯ ಜೀವನದಲ್ಲಿ ಮೇಲುಗೈ ಪಡೆದು ನಮ್ಮ ದೇಶದ ಸಮಗ್ರತೆಯನ್ನು ನಾಶಮಾಡಲು ಯತ್ನಿಸುತ್ತಿವೆ. ಇದು ನಮ್ಮ ಸಂವಿಧಾನದ ಆಶಯಕ್ಕೆ ತೀರಾ ವ್ಯತಿರಿಕ್ತವಾದುದು.
ಸಂವಿಧಾನದ ಮುನ್ನುಡಿ ಎಲ್ಲ ಪ್ರಜೆಗಳ ಸೌಹಾರ್ದತೆ, ಘನತೆ ಮತ್ತು ದೇಶದ ಏಕತೆ ಮತ್ತು ಸಮಗ್ರತೆಯನ್ನು ಖಾತರಿಪಡಿಸುತ್ತದೆ. ನಿರ್ದೇಶಕ ತತ್ತ್ವಗಳು ವೈವಿಧ್ಯತೆಯನ್ನು ಪ್ರೋತ್ಸಾಹಿಸುತ್ತದೆ ಹಾಗೂ ವಿವಿಧ ಧಾರ್ವಿುಕ ನಂಬಿಕೆಗಳ ಜನರ ನಡುವೆ ಏಕತೆಯನ್ನು ಬೆಸೆಯಲು ಪ್ರಯತ್ನಿಸುತ್ತದೆ. ನಾಗರಿಕರಿಗೆ ಸಮಾನ ನಾಗರಿಕ ನೀತಿಸಂಹಿತೆ ರೂಪಿಸಲು ಪ್ರಭುತ್ವ (ಸರ್ಕಾರ) ಪ್ರಯತ್ನಿಸಬೇಕು ಎಂದು 44ನೇ ವಿಧಿ ಹೇಳಿದೆ.
25ನೇ ವಿಧಿಯನ್ನು ಇದರ ಬೆಳಕಿನಲ್ಲಿ ಸೂಕ್ಷ್ಮವಾಗಿ ಪರಿಶೀಲಿಸಬೇಕು. ಆಯಾ ಧರ್ಮವನ್ನು ಮುಕ್ತವಾಗಿ ಪ್ರತಿಪಾದಿಸಲು, ಅಚರಿಸಲು ಮತ್ತು ಪ್ರಚಾರ ಮಾಡಲು ಈ ವಿಧಿ ವೈಯಕ್ತಿಕ ಹಕ್ಕನ್ನು ಸಂರಕ್ಷಿಸಿದೆ. ವ್ಯಕ್ತಿಯ ಧರ್ಮನಿಷ್ಠೆ ಸಾಮಾಜಿಕ ಸಂಬಂಧಗಳಿಗೆ ಅಡ್ಡಿಯಾಗದ ರೀತಿಯಲ್ಲಿ ಈ ವಿಧಿಯನ್ನು ರೂಪಿಸಲಾಗಿದೆ. ಸಾಮೂಹಿಕ ವರ್ತನೆಯನ್ನು ನಿಯಂತ್ರಿಸಲು ಸರ್ಕಾರಕ್ಕೆ ಅವಕಾಶ ಕಲ್ಪಿಸುತ್ತದೆ. 25ನೇ ವಿಧಿಯ ಯಾವುದೇ ಅಂಶ, ಅಸ್ತಿತ್ವದಲ್ಲಿರುವ ಯಾವುದೇ ಕಾನೂನಿನ ಕಾರ್ಯಾಚರಣೆ ಮೇಲೆ ಪರಿಣಾಮ ಬೀರುವುದಿಲ್ಲ. ಅಥವಾ ಯಾವುದೇ ಆರ್ಥಿಕ, ಹಣಕಾಸು, ರಾಜಕೀಯ ಅಥವಾ ಧಾರ್ವಿುಕ ಆಚರಣೆಗೆ ಸಂಬಂಧಿಸಿದ ಯಾವುದೇ ಜಾತ್ಯತೀತ ಚಟುವಟಿಕೆಯನ್ನು ನಿಯಂತ್ರಿಸಲು ಅಥವಾ ಸಾಮಾಜಿಕ ಕಲ್ಯಾಣದ ಸೌಲಭ್ಯ ಒದಗಿಸಲು ಅಥವಾ ಸುಧಾರಣೆ ಮಾಡಲು ಕಾನೂನು ರೂಪಿಸುವುದರಿಂದ ಸರ್ಕಾರಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ.
‘ನಾಗರಿಕ ಸಮಾಜದಲ್ಲಿ ಧಾರ್ವಿುಕ ಮತ್ತು ವೈಯಕ್ತಿಕ ಕಾನೂನು ನಡುವೆ ಸಂಬಂಧ ಇರಬೇಕಾದ್ದಿಲ್ಲ’ ಎಂದು ಜಾನ್ ವಲ್ಲಮಟ್ಟಂ ವರ್ಸಸ್ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಿದಾಗ ಸಮಾನ ನಾಗರಿಕ ನೀತಿಸಂಹಿತೆ ರೂಪಿಸಲು ಯತ್ನಿಸುವುದು ಸರ್ಕಾರದ ಹೊಣೆ ಎಂಬುದು ನಿಚ್ಚಳವಾಗುತ್ತದೆ.
ನಮ್ಮದು ಮುಂದುವರಿಯುತ್ತಿರುವ ಸಮಾಜವಾಗಿದೆ. ಧಾರ್ವಿುಕ ಆಚರಣೆ ಗಳಲ್ಲಿ ಯಾವುದೇ ಹಸ್ತಕ್ಷೇಪ ಮಾಡದೆಯೇ ದೇಶವನ್ನು ಒಗ್ಗೂಡಿಸುವ ಹಾಗೂ ಸಮಗ್ರಗೊಳಿಸುವ ಒಂದು ಹಂತದಲ್ಲಿದ್ದೇವೆ. ಹಿಂದೆ ಜೀವನದ ಎಲ್ಲ ರಂಗಗಳನ್ನು ಆವರಿಸುವ ರೀತಿಯಲ್ಲಿ ಧಾರ್ವಿುಕ ಪದ್ಧತಿ, ಆಚರಣೆಗಳು ರೂಪುಗೊಂಡಿದ್ದವು. ಆದರೀಗ ನಾವು ಅವುಗಳನ್ನು ಬದಿಗೆ ಸರಿಸಿ ಈ ವಿಚಾರಗಳು ಧಾರ್ವಿುಕ ಅಲ್ಲ, ಅವುಗಳು ಶುದ್ಧಾಂಗವಾಗಿ ಜಾತ್ಯತೀತ ಕಾನೂನುಗಳಿಗಾಗಿರುವ ವಿಚಾರಗಳು ಎಂದು ಕರೆಯಬೇಕಾದಂಥ ಹಂತವನ್ನು ತಲುಪಿದ್ದೇವೆ. ಧರ್ಮವನ್ನು ವೈಯಕ್ತಿಕ ಕಾನೂನುಗಳಿಂದ ಪ್ರತ್ಯೇಕಿಸಬೇಕೆನ್ನುವ ಬಗ್ಗೆ ಒಮ್ಮತವಿತ್ತೆಂಬುದು ಸಂವಿಧಾನ ರಚನಾ ಸಭೆಯ ಚರ್ಚೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ ಗೊತ್ತಾಗುತ್ತದೆ.
ಮಾನವ ಸಂಬಂಧಗಳ ಬಹುತೇಕ ಎಲ್ಲ ವಿಚಾರಗಳನ್ನು ನಿರ್ವಹಿಸುವ ಸಮಾನ ಕಾನೂನು ಸಂಹಿತೆಯನ್ನು ನಾವು ಹೊಂದಿದ್ದೇವೆ. ಇಡೀ ದೇಶಕ್ಕೆ ಅನ್ವಯವಾಗುವ ಸಮಾನ ಹಾಗೂ ಸಂಪೂರ್ಣ ಅಪರಾಧ ದಂಡ ಸಂಹಿತೆ ನಮ್ಮಲ್ಲಿದೆ. ಆಸ್ತಿ ಸಂಬಂಧ ನಿರ್ವಹಿಸುವ, ಆಸ್ತಿ ವರ್ಗಾವಣೆ ಕಾನೂನು ಇದೆ. ವಾಸ್ತವವಾಗಿ ಇಡೀ ದೇಶಕ್ಕೆ ಅನ್ವಯವಾಗುವಂಥ ನಾಗರಿಕ ಸಂಹಿತೆಯ ಸ್ವರೂಪ ಹೊಂದಿದ ಇನ್ನೂ ಹಲವು ಕಾನೂನುಗಳು ನಮ್ಮಲ್ಲಿವೆ ಎಂದು ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚನಾ ಸಭೆಯಲ್ಲಿ ಹೇಳಿದ್ದರು. ಸಿವಿಲ್ ಕಾನೂನು ಪ್ರವೇಶ ಮಾಡಲಾಗದ ಒಂದೇ ಕ್ಷೇತ್ರವೆಂದರೆ ಮದುವೆ ಹಾಗೂ ವಾರಸುದಾರಿಕೆ. ಅದರತ್ತ ಸಾಗುವುದೇ ಸಂವಿಧಾನದ 44ನೇ ವಿಧಿಯನ್ನು ಸೇರಿಸಿರುವವರ ಆಶಯವಾಗಿದೆ.
ಸಂವಿಧಾನವನ್ನು ರೂಪಿಸುವವರ ಈ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಮ್ಮ ಸಂವಿಧಾನದ ಮೃತ ಅಂಶಕ್ಕೆ ಅಂದರೆ 44ನೇ ವಿಧಿಗೆ ಜೀವ ಕೊಡಲು ಸುಪ್ರೀಂ ಕೋರ್ಟ್ ಅನೇಕ ಪ್ರಕರಣಗಳಲ್ಲಿ ಪ್ರಯತ್ನಿಸಿದೆ. ದೇಶದ ಪ್ರಜೆಗಳಿಗೆ ಸಮಾನ ನಾಗರಿಕ ನೀತಿ ಸಂಹಿತೆ ಕೊಡುವುದನ್ನು ಖಾತರಿ ಪಡಿಸುವುದು ಸರ್ಕಾರದ ಕರ್ತವ್ಯ. ಹಾಗೆ ಮಾಡಲು ಅದಕ್ಕೆ ಶಾಸಕಾಂಗ ಅರ್ಹತೆಯೂ ಪ್ರಶ್ನಾತೀತವಾಗಿ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಂವಿಧಾನ 44ನೇ ವಿಧಿ ಬಗ್ಗೆ ಗಮನಹರಿಸಿ ಭಾರತದಾದ್ಯಂತ ಅನ್ವಯವಾಗುವ ಸಮಾನ ನಾಗರಿಕ ನೀತಿ ಸಂಹಿತೆ ರೂಪಿಸಲು ಪ್ರಯತ್ನಿಸುವಂತೆಯೂ ಅದು ಭಾರತ ಸರ್ಕಾರಕ್ಕೆ ಮನವಿ ಕೂಡ ಮಾಡಿದೆ.
ಗೋವಾ ಮಾದರಿ: ಎಲ್ಲರಿಗೂ ಅನ್ವಯವಾಗುವ ಸಮಾನ ನಾಗರಿಕ ನೀತಿ ಸಂಹಿತೆ ಹೊಂದಿರುವುದಕ್ಕೆ ಗೋವಾ ರಾಜ್ಯ ಒಂದು ಉತ್ತಮ ಉದಾಹರಣೆ. ಅಲ್ಲಿ ಕೆಲವು ನಿರ್ದಿಷ್ಟ ಹಕ್ಕುಗಳನ್ನು ಹೊರತುಪಡಿಸಿದಂತೆ ಯಾವುದೇ ಧಾರ್ವಿುಕ ಪರಿಗಣನೆಯಿಲ್ಲದೆ ಎಲ್ಲರಿಗೂ ಕಾನೂನು ಅನ್ವಯವಾಗುತ್ತದೆ.
ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಸಮಾನ ನಾಗರಿಕ ನೀತಿ ಸಂಹಿತೆ ರೂಪಿಸಲು ಕಾನೂನು ಆಯೋಗಕ್ಕೆ ಭಾರತದ ನ್ಯಾಯಾಂಗ ನಿರ್ದೇಶನ ನೀಡುವಂತೆ ಮಾಡಲು ಹೋರಾಟಗಾರರು ಹಲವು ಗಂಭೀರ ಪ್ರಯತ್ನಗಳನ್ನು ಮಾಡಿದ್ದಾರೆ. ಹಾಗೆ ರೂಪಿಸಿದ ಕರಡನ್ನು ವ್ಯಾಪಕ ಚರ್ಚೆ ಹಾಗೂ ಫೀಡ್ಬ್ಯಾಕ್ಗಾಗಿ ಸಾರ್ವಜನಿಕವಾಗಿ ಪ್ರಕಟಿಸಬೇಕೆನ್ನುವುದೂ ಕಾರ್ಯಕರ್ತರ ಉದ್ದೇಶವಾಗಿದೆ. ಆದರೆ ಈ ವಿಚಾರದಲ್ಲಿ ಅರ್ಥಪೂರ್ಣ ಚರ್ಚೆ ನಡೆದೇ ಇಲ್ಲ. ಮಿಥ್ಯೆಗಳು ಹಾಗೂ ಕಲ್ಪಿತ ಕಳವಳಗಳನ್ನು ತೊಡೆದುಹಾಕಲು ವ್ಯಾಪಕ ಹಾಗೂ ಅರ್ಥಪೂರ್ಣ ಸಂವಾದ ಅಗತ್ಯ. ಕಾನೂನು ಆಯೋಗದಂಥ ತಜ್ಞ ಸಂಸ್ಥೆಗಳು ಈ ಸಂಬಂಧ ವಾಸ್ತವಿಕ ವಿವರವಾದ ಅಧ್ಯಯನ ನಡೆಸುವುದು ಅಗತ್ಯ. ಸಂವಿಧಾನದ 44ನೇ ವಿಧಿಯಲ್ಲಿ ಅಡಕವಾಗಿರುವ ನಿರ್ದೇಶಕ ತತ್ತ್ವವನ್ನು ಶೀಘ್ರ ಸಾಕಾರಗೊಳಿಸಲು ಇದು ಅತ್ಯಗತ್ಯ.
(ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)