ದಿವಂಗತ ನಾ.ಸು.ಭರತನಹಳ್ಳಿ ಅವರ ಕೊನೆಯ ಅಂಕಣ; ಸಹೋದರಿಗೆ ಸಾಂತ್ವನ ಹೇಳಿದ ಅರ್ಜುನ

arjun
Published on
ಪ್ರಾಗ್ಜ್ಯೋತಿಷಪುರದಿಂದ ಹೊರಟ ಯಜ್ಞಾಶ್ವವು ಮುನ್ನಡೆಯುತ್ತ ಸಿಂಧುರಾಜ್ಯವನ್ನು ಪ್ರವೇಶಿಸಿತು. ಅಲ್ಲಿ ಬಲವಾದ ಸಂಘರ್ಷ ಎದುರಾಯಿತು. ಆ ರಾಜ್ಯದ ದೊರೆಯಾಗಿದ್ದ ಜಯದ್ರಥ ಚರಿತ್ರವಾನ್ ಕ್ಷತ್ರಿಯವೀರ. ಅವನು ಧೃತರಾಷ್ಟ್ರನ ಪುತ್ರಿ ದುಶ್ಶಲಾಳ ಪತಿ. ಕೌರವರ ಬಾವ, ಸಂಬಂಧಿ. ಆದರೆ ಅವನು ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನಿಂದಲೇ ಹತನಾಗಿದ್ದ. ಹಾಗಾಗಿ ಸಿಂಧುರಾಜ್ಯದ ಅನ್ಯ ಎಲ್ಲ ವೀರ ಯೋಧರೂ ವಿಶೇಷವಾಗಿ ಅರ್ಜುನನ ಮೇಲೆ ಹಗೆ ಕಾರುತ್ತಿದ್ದರು. ಆತನನ ರಕ್ಷಣೆಯಲ್ಲಿ ಯಜ್ಞಾಶ್ವವು ಸ್ವೇಚ್ಛೆಯಾಗಿ ಸಂಚರಿಸುತ್ತಿದೆ, ಅದೀಗ ತಮ್ಮ ರಾಜ್ಯವನ್ನು ಪ್ರವೇಶಿಸಿದೆ ಎಂದು ತಿಳಿದ ಸೈಂಧವವೀರರು ರೊಚ್ಚಿಗೆದ್ದು ದಂಡು ಕಟ್ಟಿ ಮುಗಿಬಿದ್ದು ಆ ಅಶ್ವವನ್ನು ಬಂಧಿಸಿ ಅರ್ಜುನನಿಗೆ ಯುದ್ಧಾಹ್ವಾನವಿತ್ತು ಕೇಕೆ ಹಾಕಿದ್ದರು. ಅರ್ಜುನನಿಗೆ ಆ ಘೋರ ಸಂಗ್ರಾಮ ಎದುರಾಯಿತು.

ಅಶ್ವದ ಅನತಿ ದೂರದಲ್ಲಿ ನೆಲದ ಮೇಲೇ ಹೆಜ್ಜೆ ಹಾಕುತ್ತಿದ್ದ ಅರ್ಜುನನು ಸೆಟೆದು ಸೈಂಧವವೀರರನ್ನು ಪ್ರತಿರೋಧಿಸಲು ನಿಂತನು. ಆದರೂ ಪರಸ್ಪರ ಯೋಧರು ನಷ್ಟಗೊಳ್ಳಬಾರದೆಂದು ಯೋಚಿಸಿದ ಅರ್ಜುನನು ತನ್ನ ಸೈನ್ಯವನ್ನೆಲ್ಲ ಎರಡನೇ ಸುತ್ತಿನಲ್ಲಿರಿಸಿ ತಾನೋರ್ವನೇ ಮುಂದಾಗಿ ಎದುರಾಳಿಗಳನ್ನು ಪ್ರತಿರೋಧಿಸತೊಡಗಿದನು. ಕುರುಕ್ಷೇತ್ರ ಯುದ್ಧದಲ್ಲಿ ಅಪಾರ ಹಾನಿ ಹೊಂದಿದ್ದ ಸೈಂಧವವೀರರು ಹಗೆ ತೀರಿಸಿಕೊಳ್ಳಲು ಕುದಿಯುತ್ತಲಿದ್ದರು. ಅವರು ಒಂದು ಸಾವಿರ ರಥಿಕರೂ, ಹತ್ತು ಸಾವಿರ ಅಶ್ವಾರೋಹಿ ಯೋಧರೂ ಕಲೆತು ಸಮುದ್ರದ ಮಹಾ ಅಲೆಗಳಂತೆ ಅಬ್ಬರದಿಂದ ಎರಗಿ ಬಂದಿದ್ದರು. ಅವರೆಲ್ಲ ಪ್ರಯೋಗಿಸುತ್ತಲಿದ್ದ ವಿವಿಧ ಅಸ್ತ್ರಗಳು ಅರ್ಜುನನೆಡೆಗೇ ಮುಸುಕುತ್ತಿದ್ದವು. ಅಲ್ಲೊಂದು ಅದ್ಭುತ ದೃಶ್ಯವೇರ್ಪಟ್ಟಿತ್ತು.

ಇತ್ತ ಅರ್ಜುನನೋರ್ವನೇ ಅವರ ಆಹತವನ್ನು ಎದುರಿಸುತ್ತಲಿದ್ದನು. ಒಮ್ಮೆ ಬಲವಾದ ಅಸ್ತ್ರಾಘಾತಕ್ಕೆ ಗುರಿಯಾಗಿ ರಕ್ತ ಸುರಿದು ನಿಶ್ಚೇಷ್ಟಿತನಾಗಿಬಿಟ್ಟನು. ಆಗೊಂದು ಅಲೌಕಿಕ ಘಟನೆ ತೋರಿತು. ಆಕಾಶದಲ್ಲಿ ದೇವತೆಗಳೂ ಕಾಣಿಸಿಕೊಂಡು ಅರ್ಜುನನಿಗೆ ಪುನಶ್ಚೇತನ ಅನುಗ್ರಹಿಸತೊಡಗಿದರು, ಋಷಿಪುಂಗವರು ಮಂತ್ರ ಜಪಿಸಿ ಹರಸತೊಡಗಿದರು. ಅದರಿಂದ ಪಾರ್ಥನು ಪುನಶ್ಚೇತನ ಹೊಂದಿ ವೈರಿಗಳ ಎದೆ ನಡುಗುವಂತೆ ಪ್ರತ್ಯಾಸ್ತ್ರಗಳನ್ನು ಪ್ರಯೋಗಿಸುತ್ತ ಬಿರುಗಾಳಿಯು ಮೋಡವನ್ನು ಚದುರಿಸುವಂತೆ ವೈರಿ ಸೈನ್ಯದವರನ್ನೂ, ರಥಿಕರನ್ನೂ ಹಿಮ್ಮೆಟ್ಟಿಸಿ ದುರ್ಜಯನೆನಿಸಿದನು.

ಅಪಾರ ಸಂಖ್ಯೆಯಲ್ಲಿ ನಷ್ಟಗೊಂಡಿದ್ದ ಸೈಂಧವ ವೀರರು ಪುನಃ ಯುದ್ಧಕ್ಕೆ ಸಂಘಟಿತರಾಗತೊಡಗಿದ್ದರು. ಅದನ್ನು ಕಂಡ ಅರ್ಜುನನು ಏರು ಧ್ವನಿಗೈದು - ‘ಸೈಂಧವವೀರರೇ! ನನ್ನ ಮಾತು ಕೇಳಿ; ನಮ್ಮ ಅಶ್ವವನ್ನು ನಿಮ್ಮಿಂದ ಬಿಡಿಸಿಕೊಳ್ಳಲು ಯುದ್ಧ ಮಾಡುತ್ತಿರುವೆ, ನಿಮ್ಮನ್ನು ಕೊಲ್ಲಲಿಕ್ಕಲ್ಲ. ಯಜ್ಞದೀಕ್ಷೆ ಹೊಂದಿರುವ ಮಹಾರಾಜ ಯುಧಿಷ್ಠಿರನು ಅಶ್ವದ ರಕ್ಷಕನಾಗಿ ಕಳಿಸುವಾಗ ಒಂದು ಆದೇಶಗೈದಿರುವನು. ಅದೆಂದರೆ - ‘‘ನಿನ್ನ ಕರ್ತವ್ಯ ನಿರ್ವಹಿಸುವಾಗ ಸಾಧ್ಯವಿದ್ದಷ್ಟೂ ಕ್ಷತ್ರಿಯವೀರರನ್ನು ವಧಿಸದಂತೆ ವರ್ತಿಸು. ನಮ್ಮ ಯಜ್ಞಕಾರ್ಯಕ್ಕೆ ಆಗಮಿಸಿ ಪ್ರೀತಿಯಿಂದ ಪಾಲ್ಗೊಳ್ಳಲು ಆಹ್ವಾನಿಸು’’ - ಎಂದಿರುವನು. ಅದರಂತೆ ನೀವು ಮನ್ನಣೆಯಿತ್ತು ಕೈಜೋಡಿಸಿ’ ಎಂದು ವಿನಂತಿಸಿದನು. ಆ ಮಾತಿಗೆ ಸೈಂಧವರು ಕಿವಿಗೊಡಲಿಲ್ಲ. ಅಳಿದುಳಿದವರು ಸಂಘಟಿತರಾಗಿ ಪುನಃ ಯುದ್ಧಕ್ಕೆಳಸತೊಡಗಿದರು. ಆ ಕ್ಷಣ ರಣಭೂಮಿಯಲ್ಲೊಂದು ವಿಶೇಷ ತೋರಿಕೊಂಡಿತು.

ಸಿಂಧುದೇಶದ ರಾಣಿ - ಜಯದ್ರಥನ ಪತ್ನಿ - ದುಶ್ಶಲಾಳು ತನ್ನ ಮೊಮ್ಮಗನಾಗಿರುವ ಎಳೆಯ ಬಾಲಕ ಅರ್ಥಾತ್ ರಣರಂಗದಲ್ಲಿ ಮೃತನಾಗಿರುವ ತನ್ನ ಪುತ್ರ ಸುರಥನ ಏಕೈಕ ಪುತ್ರನನ್ನು ಜೊತೆಗಿರಿಸಿಕೊಂಡು ಆ ಯುದ್ಧಭೂಮಿಗೆ ಬಂದಿಳಿದಳು. ಬರುತ್ತಲೇ ತನ್ನವರನ್ನು ತಡೆದು ನಿಲ್ಲಿಸಿ ತಾನು ರಥ ಮುನ್ನಡೆಸಿ ನೇರವಾಗಿ ಅರ್ಜುನನ ಸಮ್ಮುಖಕ್ಕೆ ಸಾಗಿ ನಿಂತಳು. ತನ್ನ ಸಹೋದರಿಯೂ ಆಗಿರುವ ರಾಣಿ ದುಶ್ಶಲೆಯು ಏಕಾಏಕಿ ರಣಭೂಮಿಯತ್ತ ಬಂದಿಳಿದುದ ಕಂಡು ಅರ್ಜುನನಿಗೆ ದಿಗಮೆಯೇ ಆಯಿತು; ಆಕೆಯನ್ನು ಗೌರವಿಸಿ ಕುಶಲೋಪರಿ ವಿಚಾರಿಸಿದನು.

ಉಮ್ಮಳಿಸಿ ಬರುವ ದುಃಖಮಿಶ್ರಿತಳಾಗಿ ದುಶ್ಶಲೆಯು, ‘ಪಾರ್ಥ! ನೋಡು. ಈ ಮಗುವು ಸುರಥನ ಮಗನಾಗಿದ್ದು ನನ್ನ ಏಕೈಕ ಮೊಮ್ಮಗನು. ನೀನು ಸೈನ್ಯಸಹಿತನಾಗಿ ಬಂದಿರುವೆ. ತನ್ನ ಯೋಧರು ನಿಮ್ಮ ಯಜ್ಞಾಶ್ವವನ್ನು ಬಂಧಿಸಿರುವರು ಎಂಬ ವಿಷಯ ತಿಳಿಯುತ್ತಲೇ ಈ ಬಾಲಕನ ತಂದೆ ಸುರಥನು ಹೃದಯಾಘಾತದಿಂದ ಪ್ರಾಣ ಬಿಟ್ಟಿರುವನು. ಅವನ ಪುತ್ರ, ನನ್ನ ಮೊಮ್ಮಗ ಅನಾಥನಾಗಿರುವನು. ಈತನ ಪಿತಾಮಹ ಜಯದ್ರಥನ ಅಪರಾಧಗಳನ್ನೆಲ್ಲ ಈತನಿಗಾಗಿ ಮರೆತುಬಿಡು. ನಮ್ಮನ್ನೆಲ್ಲ ನಿನ್ನವರನ್ನಾಗಿ ಸ್ವೀಕರಿಸಿಕೋ!’ ಎಂದು ಅಳತೊಡಗಿದಳು. ಸಹೋದರಿಯ ದುಃಖವನ್ನು ಸಹಿಸಿಕೊಳ್ಳಲಾಗದ ಅರ್ಜುನನು ಆಕೆಯ ಬಳಿ ಬಂದು ಸಾಂತ್ವನಗೈದನು.

ಡಿ.25ರಂದು ನಿಧನರಾದ ಹಿರಿಯ ಲೇಖಕ, ಪತ್ರಕರ್ತ ನಾ. ಸು. ಭರತನಹಳ್ಳಿ ಅವರು ಡಿ. 9ರಂದು ಕಳಿಸಿದ ಕಡೆಯ ಅಂಕಣ ಬರಹವಿದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net