ಹತಾಶೆಯ ಬೇಗೆ ನಿವಾರಣೆ ಹೇಗೆ?- ಕೋವಿಡ್‌ ಟೆನ್ಷನ್‌ ನಿಭಾಯಿಸುವ ಪರಿ ಇಲ್ಲಿದೆ ನೋಡಿ...

lalitha2
Published on

ಕೋವಿಡ್​ನಿಂದಾಗಿ ಸಾವು ನೋವಿನ ಸುದ್ದಿ ಕೇಳಿ ಕೇಳಿ ಹಲವರು ಹತಾಶರಾಗಿಬಿಟ್ಟಿದ್ದಾರೆ. ಆದರೆ ಮಾನಸಿಕ ಸ್ಥೆ$ರ್ಯ ಕಳೆದುಕೊಳ್ಳದಿದ್ದರೆ ಕೋವಿಡ್​ ಗೆಲ್ಲುವುದು ಬಲುಸುಲಭ ಎಂದು ಎಷ್ಟೋ ಮಂದಿ ತಮ್ಮ ಅನುಭವ ಹಂಚಿಕೊಂಡಿರುವುದು ನಿಜವಲ್ಲವೆ? ಇಂಥ ಸಂದರ್ಭದಲ್ಲಿ ಖುದ್ದು ಧೈರ್ಯದಿಂದ ಇದ್ದು ಕುಟುಂಬಸ್ಥರನ್ನು ಗಟ್ಟಿಗೊಳಿಸುವ ಜವಾಬ್ದಾರಿ ಗೃಹಿಣಿಯ ಮೇಲಿದೆ. ಹಾಗಿದ್ದರೆ ಮಹಿಳೆ ಈ ಕ್ಲಿಷ್ಟಕರ ಸನ್ನಿವೇಶವನ್ನು ಹೇಗೆ ನಿಭಾಯಿಸಬೇಕು?

|ಆರ್​.ಬಿ.ಗುರುಬಸವರಾಜ

ನಿನ್ನೆ ಇದ್ದವರು ಇಂದು ಇಲ್ಲ, ಈ ಕ್ಷಣ ಮಾತನಾಡಿದವರು, ಮರುಕ್ಷಣ ಇಹಲೋಕ ತ್ಯಜಿಸುತ್ತಿದ್ದಾರೆ, ಆಸ್ಪತ್ರೆಗೆ ದಾಖಲಾದವರು ವಾಪಸ್​ ಸರಿಯಾಗಿ ಬರುತ್ತಾರೆ ಎಂಬ ಖಾತ್ರಿ ಇಲ್ಲ... ಇಂಥ ಸನ್ನಿವೇಶವನ್ನು ಸದ್ಯ ಕೋವಿಡ್​ ಎರಡನೆಯ ಅಲೆ ಸೃಷ್ಟಿಸಿಬಿಟ್ಟಿದೆ. ಕರೊನಾ ಗೆದ್ದು ಬಂದ ಶತಾಯುಷಿಗಳೂ ಸೇರಿದಂತೆ ಹಲವಾರು ಮಂದಿ ತಮ್ಮ ಗೆಲುವಿನ ಹಿಂದಿನ ಕಾರಣ ಹೇಳುತ್ತಿದ್ದರೂ, ಪರಿಸ್ಥಿತಿ ಹೇಗಾಗಿದೆ ಎಂದರೆ ಅವಾವುವೂ ಕಿವಿಯ ಮೇಲೆ ಬೀಳುತ್ತಿಲ್ಲ, ಬದಲಿಗೆ ಸತ್ತವರ ಮನೆಯ ಚಿತ್ರಣವೇ ಕಣ್ಮುಂದೆ ಬರುತ್ತಿದೆ.

ಆದರೆ ಇಲ್ಲಿ ಒಂದಂತೂ ಸದ್ಯ. 80&90 ವರ್ಷ ಮೇಲ್ಪಟ್ಟು ಕರೊನಾ ಗೆದ್ದವರನ್ನೇ ಕೇಳಿ, ಇಲ್ಲವೇ ಕರೊನಾ ಪಾಸಿಟಿವ್​ ಬಂದಾಗ ಏನೂ ಆಗೇ ಇಲ್ಲ ಎನ್ನುವಂತೆ ಸಮಾಧಾನ ಚಿತ್ತರಾಗಿದ್ದವರೊಮ್ಮೆ ಕೇಳಿ... ಎಲ್ಲರೂ ಹೇಳುವುದು ಒಂದೇ ಮಾತು. ಧೈರ್ಯ ಸರ್ವತ್ರ ಸಾಧನಂ ಎಂದು. ಭಯ ಬಿಟ್ಟರೆ ಕರೊನಾ ಗೆಲ್ಲಬಹುದು ಎಂದೇ ಇವರೆಲ್ಲರೂ ಹೇಳುತ್ತಿದ್ದಾರೆ.

ಆದರೆ ಇದನ್ನು ಬಿಟ್ಟು ಬರೀ ಹತಾಶೆಯ ಮಾತೇ ಎಲ್ಲೆಡೆ ಕೇಳಿಬರುತ್ತಿದೆ. ಹತಾಶೆ ಎಂಬುದು ಭಾವನಾತ್ಮಕ ಒತ್ತಡವಾಗಿದ್ದು, ಭೌತಿಕ ಮತ್ತು ಮಾನಸಿಕ ಕಿರಿಕಿರಿಯನ್ನುಂಟು ಮಾಡುತ್ತದೆ. ಅದರಲ್ಲೂ ಮಹಿಳೆಯರೇ ಅತೀ ಹೆಚ್ಚು ಹತಾಶೆಗೆ ಒಳಗಾಗುತ್ತಿದ್ದಾರೆ ಎಂದು ಸಾಕಷ್ಟು ಅಧ್ಯಯನಗಳು ತಿಳಿಸಿವೆ. ವ್ಯಕ್ತಿಯಿಂದ ವ್ಯಕ್ತಿಗೆ , ವಯಸ್ಸಿಗನುಗುಣವಾಗಿ ಭಿನ್ನ ಸ್ವರೂಪದಲ್ಲಿ ಕಾಣಿಸಿಕೊಳ್ಳುವ ಈ ಮಾನಸಿಕ ದೌರ್ಬಲ್ಯ ಗಟ್ಟಿಗರನ್ನೂ ಸಣ್ಣಗಾಗುವಂತೆ ಮಾಡುತ್ತದೆ. ಹತಾಶೆಯು ಆಂತರಿಕ ಹಾಗೂ ಬಾಹ್ಯ ಮೂಲಗಳಿಂದ ಗುರುತಿಸಬಹುದಾಗಿದ್ದು, ದೈನಂದಿನ ಅಹಿತಕರ ಘಟನೆಗಳೇ ಇದಕ್ಕೆ ಮೂಲ. ಕೋವಿಡ್​ ಹೆಸರಿನಲ್ಲಿ ಆಗುತ್ತಿರುವ ಸಾವು ನೋವುಗಳೂ ಹತಾಶೆಗೆ ಕಾರಣ ಎಂದರೆ ತಪ್ಪಲ್ಲ.

ಭಯದಲ್ಲೇ ಕೊರಗುತ್ತಿದ್ದರೆ ಹೀಗೆ ಆಗುವುದು...

ಕರೊನಾ ಭಯದಿಂದಾಗಿ ಜೀವನದಲ್ಲಿ ಹತಾಶೆ ಮೂಡಿಬಿಟ್ಟರೆ ಜೀವನವೇ ನರಕ. ದೈನಂದಿನ ಚಟುವಟಿಕೆಗಳು ಮೊಟಕುಗೊಳ್ಳುತ್ತವೆ. ದೇಹ ಮತ್ತು ಮನಸ್ಸು ಜಿಡ್ಡುಗಟ್ಟುತ್ತದೆ. ಯಾವುದೇ ಕೆಲಸ ಮಾಡಲು ಉತ್ಸಾಹ ಕುಂದುತ್ತದೆ. ಚಿಕ್ಕ ಚಿಕ್ಕ ಘಟನೆಗಳು ಉದ್ವೇಗವನ್ನು ಹೆಚ್ಚಿಸುತ್ತವೆ. ವಿಶ್ರಾಂತಿ ಮಾಯವಾಗುತ್ತದೆ. ಮನಸ್ಸು ಗೊಂದಲದ ಗೂಡಾಗುತ್ತದೆ. ಆಯ್ಕೆ ಮತ್ತು ನಿರ್ಣಯದಲ್ಲಿ ವಿಷಣ್ಣತೆ ಆವರಿಸುತ್ತದೆ. ಸಂತೋಷ ಮಾಯವಾಗಿ ಸದಾ ದುಃಖ ಮನೆಮಾಡುತ್ತದೆ. ಕೋಪದ ಅಟ್ಟಹಾಸ ಹೆಚ್ಚುತ್ತದೆ. ತಾಳ್ಮೆ ಮತ್ತು ಸಹನೆಗಳು ದೂರ ಸರಿಯುತ್ತವೆ.

ಸಮೀಪ ಬರದಿರಲಿ ಭಯ

ಭಯ, ಹತಾಶೆಯನ್ನು ಸಮೀಪ ಬರಲು ಬಿಡಬೇಡಿ. ಹಾಗಿದ್ದರೆ ನೀವು ಏನು ಮಾಡಬೇಕು?

* ನೀವು ನಂಬುವ ಆಪ್ತರೊಂದಿಗೆ ಮನದ ದುಗುಡದ ಬಗ್ಗೆ ಮಾತನಾಡಿ. ನಿಮ್ಮ ಭಾವನಾತ್ಮಕ ಅನುಭವಗಳನ್ನು ಅವರೊಂದಿಗೆ ಹಂಚಿಕೊಳ್ಳಿ. ಮನಸ್ಸು ನಿರಾಳವಾಗುತ್ತದೆ.

* ಇನ್ನೊಬ್ಬರಿಗೆ ಹೇಳಿಕೊಳ್ಳಲಾಗದ ಸಂಗತಿಗಳನ್ನು ರೆಕಾರ್ಡ್​ ಮಾಡಿ. ಸ್ವಲ್ಪ ಸಮಯದ ನಂತರ ಬೇರೊಬ್ಬರ ಮಾತು ಕೇಳುವ ಭಾವನೆಯಿಂದ ರೆಕಾರ್ಡ್​ ಮಾಡಿದ್ದನ್ನು ಕೇಳಿ. ಇದರಿಂದ ಹತಾಶೆ ದೂರವಾಗುತ್ತದೆ.

* ಅಹಿತಕರ ಎನ್ನುವಂತಹ ಎಲ್ಲಾ ಘಟನೆ/ಸನ್ನಿವೇಶಗಳನ್ನು ಪಟ್ಟಿಮಾಡಿ. ಇದರಲ್ಲಿ ಯಾವುದನ್ನು ನಿಮ್ಮಿಂದ ದೂರ ಮಾಡಲು ಸಾಧ್ಯವೋ ಅದನ್ನು ಬಿಟ್ಟುಹಾಕಿ. ಅಗತ್ಯ ಬದಲಾವಣೆಗಳನ್ನು ಅನುಸರಿಸಿ.

* ನಿಮ್ಮದಲ್ಲದ ತಪ್ಪಿಗೆ ಕೊರಗುವುದರ ಬದಲು ಹತಾಶೆಯ ಗುಂಗಿನಿಂದ ಹೊರಬನ್ನಿ.

* ಕರೊನಾ ಎನ್ನುವುದು ನಮಗೆ ಮಾತ್ರ ಬಂದ ಸಮಸ್ಯೆ ಅಲ್ಲ. ಸಾರ್ವತ್ರಿಕ ಸಮಸ್ಯೆ ಎಂಬ ಭಾವನೆ ಇರಲಿ. ಯಾಕೆಂದರೆ ಪ್ರಸ್ತುತ ಸನ್ನಿವೇಶದಲ್ಲಿ ಬಹುತೇಕರು ಇಂತಹ ಸಮಸ್ಯೆ ಅನುಭವಿಸುತ್ತಿದ್ದಾರೆ. ಅವರಿಗಿಂತ ನಮ್ಮ ಸಮಸ್ಯೆ ನಗಣ್ಯ ಎಂದುಕೊಳ್ಳಿ.

* ಕರೊನಾದಿಂದ ತುಂಬಾ ಭಯಗೊಂಡಿದ್ದರೆ ಸಾಧ್ಯವಾದಷ್ಟು ಮಟ್ಟಿಗೆ ಅಂಥ ಸುದ್ದಿಗಳನ್ನು ನೋಡಲು, ಓದಲು ಹೋಗಬೇಡಿ. ಬದಲಿಗೆ ಒಳ್ಳೊಳ್ಳೆ ಪುಸ್ತಕ ಮತ್ತು ಪತ್ರಿಕೆ ಓದಿನ ಸಾಂಗತ್ಯ ಬೆಳೆಸಿಕೊಳ್ಳಿ.

* ನಕಾರಾತ್ಮಕ ಆಲೋಚನೆಗಳ ಹಿಂದೆ ಓಡುವ ಮನಸ್ಸನ್ನು ಕಟ್ಟಿಹಾಕಿ. ಸಕಾರಾತ್ಮಕ ಕ್ರಿಯಾಯೋಜನೆಗಳನ್ನು ರೂಪಿಸಿಕೊಂಡು ಕಾರ್ಯಮಗ್ನರಾಗಿ.

*ಹಗಲಿನ ನಿದ್ದೆ ರಾತ್ರಿ ನಿದ್ದೆಯನ್ನು ನುಂಗಿ ಹಾಕಿ ಹತಾಶೆ ಹೆಚ್ಚಲು ಕಾರಣವಾಗುತ್ತದೆ. ಹಗಲಿನ ನಿದ್ದೆ ಬಿಟ್ಟು ಕ್ರಿಯಾತ್ಮಕ ಕೆಲಸದಲ್ಲಿ ತೊಡಗಿಸಿಕೊಳ್ಳಿ.

* ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಯೋಗ, ವ್ಯಾಯಾಮ ಹಾಗೂ ಪ್ರಾಣಾಯಾಮದ ಚಟುವಟಿಕೆ ರೂಢಿಸಿಕೊಳ್ಳೋಣ.

*ಅಗಲಿಕೆ ಅನಿವಾರ್ಯ ಎಂಬುದನ್ನು ಒಪ್ಪಿಕೊಳ್ಳೊಣ. ಅಗಲಿದವರ ಸದ್ಗುಣಗಳನ್ನು ಪಟ್ಟಿ ಮಾಡಿ ಅನುಸಿರಿಸಲು ಮುಂದಾಗೋಣ.

*ಮಾನಸಿಕ ತುಮುಲಗಳನ್ನು ಹತೋಟಿಗೆ ತರಲು ಇಷ್ಟವಾದ ಸಂಗೀತ ಕೇಳಿ. ಮನಸ್ಸು ಹಗುರವಾಗುತ್ತದೆ.

*ವಾಸ್ತವಿಕ ಕಾರ್ಯಗಳನ್ನು ಹಮ್ಮಿಕೊಳ್ಳಿ. ಆತ್ಮೀಯರೊಂದಿಗೆ ಆಡಿಯೋ/ವೀಡಿಯೋ ಕಾಲ್​ ಮಾಡಿ. ಆರೋಗ್ಯದ ಕಾಳಜಿ ವಹಿಸಲು ಹೇಳಿ. ಇದು ಹತಾಶೆಯನ್ನು ಹೊರಹಾಕಲು ಸಹಕಾರಿ.

*ನಿರಾಶಾದಾಯಕ ಚಿಂತೆಗಳಿಂದ ದೂರವಿರಿ. ಆಶಾದಾಯಕ ಚಿಂತನೆಗಳನ್ನು ಆಲಿಸಿ.

*ಮನೆಯಲ್ಲಿ ಚಿಕ್ಕ ಮಕ್ಕಳಾದಿಯಾಗಿ ಎಲ್ಲರೊಂದಿಗೂ ಮುಕ್ತವಾಗಿ ಮಾತನಾಡಿ. ಮನಸ್ಸಿನಲ್ಲಿನ ಯಾವ ಭಾವನೆಯನ್ನೂ ಮುಚ್ಚಿಡುವುದು ಬೇಡ.

*ನಿಯಮಿತವಾಗಿ ದೇಹಕ್ಕೆ ಬೇಡವಾದ ಭೌತಿಕ ವಸ್ತುಗಳನ್ನು ಹೊರಹಾಕುವಂತೆ ಮನಸ್ಸಿಗೆ ಬೇಡವಾದ ಅಂಶಗಳನ್ನೂ ಸಹ ಹೊರಹಾಕುವುದು ಅನಿವಾರ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net