ನೀನು ದಪ್ಪಗಿದ್ದೀಯ ಮಗಳೇ..; ಕಟುವಾದ ಮಾತು ಮಕ್ಕಳಿಗೆ ನೋವು ತರದಿರಲಿ..

Fat
Published on
ನಾನು ಇದ್ದ ಹಾಗೆ ನನ್ನನ್ನು ಒಪ್ಪಿಕೊಳ್ಳಿ ಅನ್ನುವ ಕಾಲ ಇದಲ್ಲ. ನೆರೆ-ಹೊರೆಯವರಿಂದ ನೀನು ದಪ್ಪಗಿದ್ದೀಯಾ ಅನ್ನುವ ಒಂದು ಸಣ್ಣ ಮಾತು ಕೇಳಿದರೂ ಅಲ್ಲಿಗೆ ಜೀವ ಹಿಂಡಿದಂತಾಗುತ್ತದೆ. ನಾನು ತೆಳ್ಳಗೆ ಬಳುಕುವ ಬಳ್ಳಿಯಂತಾಗಬಾರದೇ ಎಂಬ ಆಲೋಚನೆ ಮನಸ್ಸಿಗೆ ಬಂದು ಬಿಡುತ್ತದೆ. ಮಗಳು ದೊಡ್ಡವಳಾಗುತ್ತಾ ಆಕೆಯ ದೇಹದಲ್ಲಾಗುವ ಬದಲಾವಣೆಯನ್ನು ತಾಯಿ ಹೇಗೆ ಸ್ವೀಕರಿಸುತ್ತಾಳೆ, ದಪ್ಪಗಿರುವ ಮಗಳನ್ನು ತಾಯಿ ಹೇಗೆ ಸಂತೈಸುತ್ತಾಳೆ ಎನ್ನುವುದನ್ನೇ ಇಲ್ಲಿ ಚರ್ಚಿಸಲಾಗಿದೆ.

| ಕೃಷ್ಣವೇಣಿ ಪ್ರಸಾದ್ ಮುಳಿಯ

ಪುಟ್ಟ ಪಾಪು ಅತ್ತರೂ ಅದರ ಅಳುವಿನ ದನಿ ಚಂದ, ನಕ್ಕರೂ ನಗುವಿನ ಮುಖ ಚಂದ. ತಿರುಗಿದಾ ಮಗ್ಗಲು ಚಂದ, ಸೊಂಟದ ಪಟ್ಟಿ ತೊಟ್ಟ ಆ ನಡುವೇ ಚಂದ, ಸ್ನಾನದ ಬಳಿಕ ಪರಿಮಳ ಚಂದ ಹೀಗೆ ಮಗುವು ಚಂದವೋ ಚಂದ. ನೀರ ಕಲ್ಮಶ ತುಂಬಿರುವ ಮನಸ್ಸಿನಿಂದಲೇ ಏನೋ ಮಗುವನ್ನು ನಾವು ಬೇಗ ಹಚ್ಚಿಕೊಂಡು ಬಿಡುತ್ತೇವೆ. ಮಗು ಬೆಳೆಯುತ್ತಾ ಬಂದಂತೆ ಅದಕ್ಕೂ ಒಳ್ಳೆಯದು, ಕೆಟ್ಟದ್ದು, ಹಠ, ಸ್ವಾರ್ಥ ತಿಳಿಯುತ್ತಾ ಹೋಗುತ್ತದೆ. ಅದರ ಸ್ವಭಾವದಿಂದ ಮನೆಯವರ, ಬಂಧುಗಳ ಸ್ನೇಹಿತರ ಪ್ರೀತಿ ಗಳಿಸುತ್ತಾ ಹೋಗುತ್ತದೆ. ಆದರೆ ಹೆತ್ತ ತಾಯಿಗೆ ಮಗು ಹೇಗೇ ಇರಲಿ ಅದನ್ನು ದೂರ ಮಾಡಲು ಸಾಧ್ಯವಿಲ್ಲ. ತಿದ್ದುವುದೊಂದೇ ತಾಯಿಯ ಕರ್ತವ್ಯ. ಮಗು ದಪ್ಪಗಿದ್ದಾಗ ತಾಯಿಯ ಒಳ ಮನಸ್ಸು ಹೇಳುತ್ತಾ ಇರುತ್ತದೆ. ಸ್ವಲ್ಪ ತೆಳ್ಳಗೆ ಆಗಬಾರದಿತ್ತಾ, ಯಾಕೆಂದರೆ ಮನೆಗೆ ಬಂದ ನೆಂಟರು, ಸ್ನೇಹಿತರು, ಹೇ ಮಗಳು ದಪ್ಪಗಿದ್ದಾಳಲ್ಲಾ ಚೂರು ಸಪೂರ ಆದರೆ ಒಳ್ಳೇದಿತ್ತು ಎಂದಾಕ್ಷಣ ವಿಲ ವಿಲ ಅನ್ನುತ್ತಿದ್ದ ತಾಯಿಯ ಮನಸ್ಸು ಈ ಮಾತುಗಳನ್ನು ಕೇಳಿದಾಗ ಮತ್ತೂ ನೋಯುತ್ತದೆ. ಆಮೇಲಿಂದ ಶುರು, ನಿನಗೆ 2 ದೋಸೆ ಸಾಕು. ಹೀಗೆ ತಿನ್ನುತ್ತಾ ಇದ್ದರೆ ಇನ್ನೂ ದಪ್ಪಗಾಗ್ತೀಯ. ಪಾಪ ಬೆಳೆಯುವ ಮಗಳು 2 ದೋಸೆ ಎಲ್ಲಿಗೆ ಸಾಕು ಇನ್ನೊಂದು ಕೊಡಮ್ಮಾ ತಾಯಿ ಹೃದಯ ಅಲ್ಲವೇ.... ಆದರೂ ನನ್ನ ಮಗು ಹೀಗೆ ತಿಂದರೆ ಇನ್ನೂ ದಪ್ಪಗಾಗಿ ಎಲ್ಲರೂ ಆಡಿಕೊಳ್ಳುವ ಆ ಕರ್ಣ ಕಠೋರ ಮಾತುಗಳನ್ನು ಸಹಿಸಲು ಸಾಧ್ಯವಾಗದೆ ಮನೆಯಲ್ಲೇ ಯುದ್ಧ ಶುರು.

ಮುಕ್ತವಾಗಿ ಮಾತನಾಡಿ: ದಪ್ಪಗಿರುವ ಮಗಳಿಗೆ ಹೆತ್ತವರೇ ಎಮ್ಮೆ, ಕೋಣ, ದಡೂತಿ ಎನ್ನುವ ಕೆಟ್ಟ ಮಾತುಗಳಿಂದ ಬೈದು ನೋವುಂಟು ಮಾಡಬಾರದು. ಎಲ್ಲ ಮಕ್ಕಳಿಗೂ ಅದನ್ನು ಖಂಡಿಸುವಷ್ಟು ಮಾತುಗಾರಿಕೆ ಇರುವುದಿಲ್ಲ. ಅಂತಹ ಮಕ್ಕಳು ಒಳಗೊಳಗೇ ನೊಂದು ವ್ಯಥೆ ಪಡುತ್ತಾರೆ. ಇನ್ನು ಕೆಲ ಮಕ್ಕಳು ಹತ್ತಿರದ ಸಂಬಂಧಿಗಳಲ್ಲಿ ಅಥವಾ ಗೆಳತಿ/ಗೆಳೆಯರಲ್ಲಿ ಈ ವಿಷಯವನ್ನು ಹಂಚಿಕೊಳ್ಳುತ್ತಾರೆ. ತಂದೆ/ತಾಯಿಯರ ಬಳಿ ಮುಕ್ತವಾಗಿ ಮಾತನಾಡುವಷ್ಟು ಸಲಿಗೆ ಮಕ್ಕಳಿಗೆ ಇರಬೇಕು. ಆಗ ಮಕ್ಕಳು ಪ್ರೀತಿ, ಪ್ರೇಮ, ಪ್ರಣಯದಂತಹ ಹದಿ ವಯಸ್ಸಿನಲ್ಲಿ ಹಾದಿ ತಪ್ಪುವುದು ಕಡಿಮೆಯಾಗುತ್ತದೆ.

ಚಟುವಟಿಕೆಯಿಂದಿರಲು ತಿಳಿಸಿ: ಈಗಿನ ಹುಡುಗಿಯರಿಗೆ ಕುಳಿತಲ್ಲೇ ಜಗತ್ತು ನೋಡುವ ತವಕ. ಯಾವುದೇ ಆಟ, ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಕುಳಿತಲ್ಲೇ ಎಲ್ಲ ಸಿಗುವುದರಿಂದ ಅಗತ್ಯಕ್ಕಿಂತ ಹೆಚ್ಚು ರೆಸ್ಟ್ ಸಿಗುವುದರಿಂದ ಸಹಜವಾಗಿ ವಯಸ್ಸಿಗೆ ಬರುತ್ತಿದ್ದಂತೆ ದೇಹದಲ್ಲಿ ಹಾಮೋನ್​ಗಳಲ್ಲಿ ವ್ಯತ್ಯಾಸವಾಗಿ ದಪ್ಪಗಾಗುತ್ತಾರೆ. ಇಂದಿನ ಆಹಾರ ಕ್ರಮವೂ ದೇಹದ ತೂಕ ಏರಿಸುತ್ತದೆ. ಅಗತ್ಯಕ್ಕಿಂತ ಹೆಚ್ಚು ಜಂಕ್ ಬಳಕೆ, ಸೋಫಾ, ಹಾಸಿಗೆ ಮೇಲೆ ಕುಳಿತು ಟಿವಿ, ಮೊಬೈಲ್ ನೋಡುವ ದುರಾಭ್ಯಾಸ, ಹೊರಗಿನ ಆಟೋಟಗಳಲ್ಲಿ ಪಾಲ್ಗೊಳ್ಳದೆ ಇರುವುದರಿಂದ ದೇಹದ ತೂಕ ಹೆಚ್ಚುತ್ತದೆ. ವಯಸ್ಸಿಗೆ ಬಂದ ಮಕ್ಕಳಿಗೆ ತಂದೆ-ತಾಯಿಯೇ ಉತ್ತಮ ಆಹಾರ ಕ್ರಮ ಕಲಿಸಬೇಕು.

3-4 ದಿನದಲ್ಲಿ ಆಗುವ ಕೆಲಸವಲ್ಲ: ಪದೇ ಪದೆ ಮಕ್ಕಳ ಮೇಲೆ ಒತ್ತಡ ಹೇರಿದಾಗ ಅವರು ಸಣ್ಣಗಾಗುವ ಬದಲು ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ಎಲ್ಲರೊಂದಿಗೆ ಬೆರೆಯದೇ ಒಬ್ಬರೇ ಇರಲು ಪ್ರಾರಂಭಿಸುತ್ತಾರೆ. ಆಕೆಯನ್ನು ಕೂರಿಸಿಕೊಂಡು ಆರೋಗ್ಯದ ಬಗ್ಗೆ ವಿವರಿಸಿದರೆ ಎಂತಹ ಮಕ್ಕಳೂ ಅರ್ಥ ಮಾಡಿಕೊಳ್ಳುತ್ತಾರೆ. ಅಮ್ಮನಷ್ಟೇ ಅಲ್ಲದೆ ಇಲ್ಲಿ ಅಪ್ಪನ ಪಾತ್ರವೂ ಮುಖ್ಯವಾಗಿರುತ್ತದೆ. ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ. ಇದು ಹಿರಿಯರು ಹೇಳಿದ ಮಾತು. ಆದರೆ ಎಷ್ಟೊಂದು ಮಕ್ಕಳು ತಂದೆ-ತಾಯಿ ಇದ್ದೂ ಪ್ರೀತಿಯಿಂದ ವಂಚಿತರಾದವರು ಇದ್ದಾರೆ. ಅತಿ ಪ್ರೀತಿಯಿಂದ ಮಕ್ಕಳನ್ನು ಹಾಳು ಮಾಡಿದವರೂ ಇದ್ದಾರೆ!

ಯಾವಾಗ ತೆಳ್ಳಗಾಗೋದು?: ಹೆಣ್ಣು ಎಲ್ಲವನ್ನೂ ಸಹಿಸಿಕೊಳ್ಳುತ್ತಾಳೆ. ಆದರೆ ಸ್ವಾಭಿಮಾನಕ್ಕೆ ಕುತ್ತು ಬಂದರೆ ಮಾತ್ರ ಕಷ್ಟ. ಇಲ್ಲಿ ತಾಯಿ ಏನು ಮಾಡಬೇಕು ಎಂಬುದು ಚಿಂತಿಸುವ ವಿಚಾರ. ಮಗಳಿಗೆ ನೀನು ದಪ್ಪ ಇದ್ದರೆ ಆರೋಗ್ಯಕ್ಕೂ ಹಾಳು. ಬೇಕಾದಷ್ಟು (ಹಿತ-ಮಿತದಲ್ಲಿ) ತಿನ್ನು, ಆದರೆ ಅಷ್ಟೇ ಶರೀರಕ್ಕೆ ವ್ಯಾಯಾಮ ನೀಡು ಎನ್ನುವ ಬುದ್ಧಿವಾದ ಹೇಳಬೇಕು. ವ್ಯಾಯಾಮ ಮಾಡಲು ನಾವೇ ಪ್ರೋತ್ಸಾಹ ನೀಡಬೇಕು. ಮನೆ ಕೆಲಸ, ಆಟೋಟದಲ್ಲಿ ಭಾಗವಹಿಸುವ ಜತೆಗೆ ನಡೆಯಲು ಪ್ರಚೋದಿಸಬೇಕು. ಆಗ ಮಾತ್ರ ತಾಯಿ ಮಗಳಿಗೆ ನಿಜವಾದ ತಾಯಿಯಾಗುತ್ತಾಳೆ. ಇನ್ನೊಬ್ಬನ ಮಾತು ತನಗೆ ಬೇಸರವಾಗುತ್ತದೆ ಎಂದು ಮಗಳಿಗೆ, ಅವಳ ಆಕಾರವನ್ನೇ ಹೀಯಾಳಿಸುತ್ತಾ ಹೋದರೆ ಮಗಳ ಮನಸ್ಸಿಗೆ ಆಘಾತವಾಗುತ್ತದೆ. ಇದರಲ್ಲಿ ಅಪ್ಪನ ಪಾತ್ರವೂ ಅಷ್ಟೇ ಇದೆ. ಮಗಳಿಗೆ ಸಾಕಷ್ಟು ಜಂಕ್​ಫುಡ್ ತಿನ್ನಲು ಬಿಟ್ಟು ತಾನೂ ಖರೀದಿಸಿ ತಂದು ಕೊಟ್ಟು ನಂತರ ಮಗಳಿಗೆ ನೀನು ದಪ್ಪ, ಯಾವಾಗ ನೀನು ತೆಳ್ಳಗಾಗೋದು ಅಂತ ಹಂಗಿಸಿದರೆ ಮಗಳ ಸುಪ್ತ ಮನಸ್ಸಿಗೆ ಬಹಳ ನೋವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net