

ಕ್ಯಾನ್ಸರ್ ಎಂದರೆ ಸಾಕು ಎಲ್ಲರಿಗೂ ಏನೋ ಭಯ ಮತ್ತು ಆತಂಕ. ಇನ್ನೇನು ನಮ್ಮ ಜೀವನ ಮುಗಿದೇ ಹೋಯಿತು ಅಂದುಕೊಳ್ಳುವರೇ ಹೆಚ್ಚು, ಕ್ಯಾನ್ಸರ್ ಯಾವ ಕಾರಣಕ್ಕೆ ಬರುತ್ತದೆ. ನಮಗೆ ಕ್ಯಾನ್ಸರ್ ಬರುವ ಸಂಭವ ಇದೆ ಎಂದು ಮೊದಲೇ ತಿಳಿದುಕೊಳ್ಳಲು ಸಾಧ್ಯವಿಲ್ಲವೆ ಎಂಬಿತ್ಯಾದಿ ಪ್ರಶ್ನೆಗಳು ತಲೆಯಲ್ಲಿ ಸುಳಿಯುವುದು ಸಾಮಾನ್ಯ. ಕ್ಯಾನ್ಸರ್ ಬರದಿರಲು ಏನಾದರೂ ಔಷಧ ಅಥವಾ ಲಸಿಕೆಗಳಿವೆ ಎಂದು ವೈದ್ಯರಲ್ಲಿ ಕೇಳುವುದು ಸಾಮಾನ್ಯ. ಕ್ಯಾನ್ಸರ್ನಲ್ಲಿ ಅನೇಕ ವಿಧಗಳಿವೆ. ಪ್ರಾರಂಭದಲ್ಲಿ ಕೆಲವೊಂದು ರೋಗಲಕ್ಷಣಗಳಿಂದ ಮತ್ತು ಅಗತ್ಯ ಔಷಧಗಳಿಂದ ಈ ರೋಗ ತಡೆಗಟ್ಟಬಹುದು.
ಗರ್ಭಕೋಶ ಕ್ಯಾನ್ಸರ್ ಬರಲು ಕಾರಣ: ಇದು ಎಚ್ಪಿವಿ (ಹ್ಮೂಮನ್ ಪ್ಯಾಪಿಲೋಮ ವೈರಸ್) ಸೋಂಕಿ ನಿಂದ ಬರುತ್ತದೆ. ಈ ವೈರಸ್ನಲ್ಲಿ ನೂರಾರು ಪ್ರಭೇದಗಳಿವೆ. ಅದರಲ್ಲಿ 16 ಪ್ರಭೇದಗಳು ಕ್ಯಾನ್ಸರ್ ಬರಲು ಅನುವು ಮಾಡಿಕೊಡುತ್ತವೆ. ಇವನ್ನು ಅಪಾಯಕಾರಿ ಪ್ರಭೇದಗಳೆನ್ನುತ್ತಾರೆ. 16 ಮತ್ತು 18 ಪ್ರಭೇದದಿಂದ ಶೇ.70ರಷ್ಟು ಗರ್ಭಕೋಶ ಕಂಠದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಎಚ್ವಿಪಿ ಸೋಂಕು ಇರುವವರಲ್ಲಿ, ಬಹಳಷ್ಟು ಮಂದಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ, ಧೂಮಪಾನ ಮಾಡುವು ದರಿಂದ, ಗರ್ಭನಿರೋಧಕ ಮಾತ್ರೆಗಳನ್ನು 5 ವರ್ಷಕ್ಕೂ ಅಧಿಕವಾಗಿ ಉಪಯೋಗಿಸುವುದರಿಂದ, ಜನನಾಂಗದಲ್ಲಿ ಹರ್ಪೀಸ್ ಅಥವಾ ಇತರ ಸೋಂಕುಗಳಿದ್ದರೆ ಹಾಗೂ ಮೂರಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯುವವರಲ್ಲಿ ಗರ್ಭಕೋಶ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು.
ಲಕ್ಷಣಗಳು: ಮಹಿಳೆಯರಲ್ಲಿ ಅಸಾಮಾನ್ಯ ಹಾಗೂ ಅನಿಯಮಿತವಾಗಿ ರಕ್ತಸ್ರಾವವಾಗುತ್ತದೆ. ಲೈಂಗಿಕ ಕ್ರಿಯೆಯ ನಂತರ ರಕ್ತಸ್ರಾವವಾಗುವ ಸಾಧ್ಯತೆ ಇರುತ್ತದೆ, ಕೆಲವರಿಗೆ ಕೆಳ ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇನ್ನು ಕೆಲ ಮಹಿಳೆಯರಿಗೆ ಅನಿಯಮಿತವಾಗಿ ಬಿಳಿಮುಟ್ಟು ಹೋಗುತ್ತದೆ. ಕೊನೇ ಹಂತದ ಕ್ಯಾನ್ಸರ್ ಇದ್ದಲ್ಲಿ ಮೂತ್ರ ಹಾಗೂ ಮಲವಿಸರ್ಜನೆ ಮಾಡುವಾಗ ರಕ್ತ ಬರುತ್ತದೆ. ಕಾಲು ಊತ ಬರುತ್ತದೆ. ಆಗಾಗ ಅತಿಯಾದ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ತೂಕ ಕಡಿಮೆಯಾಗುತ್ತದೆ. ಹಸಿವು ಇರುವುದಿಲ್ಲ.
ನಮ್ಮ ಆರೋಗ್ಯ ನಮ್ಮ ಕೈಯಲ್ಲಿ: ಗರ್ಭಕಂಠದ ಕ್ಯಾನ್ಸರ್ ಅಲ್ಲದೆ ನಾಲಿಗೆ ಮತ್ತು ಗಂಟಲಿನ ಹಿಂಭಾಗದ ಕ್ಯಾನ್ಸರ್, ಪುರುಷರಿಗೆ ಶಿಶ್ನದ ಕ್ಯಾನ್ಸರ್, ಮಹಿಳೆಯರಿಗೆ ಯೋನಿ ಮತ್ತು ಗುದದ್ವಾರದ ಕ್ಯಾನ್ಸರ್, ಯೋನಿ ಹೊರಭಾಗದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಎಚ್ಪಿವಿ ಲಸಿಕೆ ಪಡೆಯುವುದರಿಂದ ಎಚ್ಪಿವಿ ಸೋಂಕಿನಿಂದ ಬರುವ ಕ್ಯಾನ್ಸರ್ಗಳಿಂದ ನಮ್ಮನ್ನು ರಕ್ಷಿಸುತ್ತದೆ. ಈ ಲಸಿಕೆಯನ್ನು 11ರಿಂದ 12 ವಯೋಮಾನದವರಿಗೆ ಕೊಡುವುದು ಉತ್ತಮ. 9ರಿಂದ 26 ವರ್ಷದವರಿಗೆ ಕೊಟ್ಟರೂ ತೊಂದರೆ ಇಲ್ಲ. ಮುಂದೊಂದು ದಿನ ಏನೋ ತೊಂದರೆ ಆದಾಗ ಛೇ.. ನಾವು ಯಾಕೆ ಮೊದಲೇ ಲಸಿಕೆ ತೆಗೆದುಕೊಳ್ಳಲಿಲ್ಲ. ಸ್ಕೀನಿಂಗ್ ಟೆಸ್ಟ್ ಮಾಡಿಸಿಕೊಳ್ಳಲಿಲ್ಲ ಎಂದು ಪಶ್ಚಾತ್ತಾಪ ಪಡುವುದಕ್ಕಿಂತ ಈಗಲೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಏಕೆಂದರೆ ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ.