

| ಸುಮಾ ಗುರುರಾಜ್ ಬೆಂಗಳೂರು
ಕೆಲವೊಂದು ಮದುವೆ ಸಮಾರಂಭಗಳಲ್ಲಿ ಬಂದ ಅತಿಥಿಗಳನ್ನು ಸತ್ಕರಿಸುವುದು ಇರಲಿ, ಮಾತಾಡಿಸಲೂ ಬಿಡುವಿಲ್ಲದಂತೆ ಓಡಾಡುತ್ತಿರುತ್ತಾರೆ. ಬಂದ ತಪ್ಪಿಗೆ ಉಡುಗೊರೆ ನೀಡಿ ಊಟ ಮಾಡದೆಯೆ ಹೊರಡುತ್ತಾರೆ ಎಷ್ಟೋ ಮಂದಿ... ಬಂದಿದ್ದಾರೆ ಉಂಡು ಹೋಗುತ್ತಾರೆ ಎಂಬ ತಾತ್ಸಾರ ಖಂಡಿತ ಸಲ್ಲದು.
ಸಂಬಂಧ ಉಳಿಸಿಕೊಳ್ಳಲು, ಆಹ್ವಾನವನ್ನು ಗೌರವಿಸಿ, ಅತ್ಯಮೂಲ್ಯ ಸಮಯ ಮೀಸಲಿಟ್ಟು, ತ್ರಾಸದಾಯಕ ಪ್ರಯಾಣ ಮಾಡಿ ಘನತೆಗೆ ತಕ್ಕಂತಹ ಉಡುಗೊರೆ ನೀಡಿ ಹೊರಡುವ ಆಹ್ವಾನಿತರು ಬಯಸುವುದು ಆತ್ಮೀಯವಾಗಿ ಮಾತಾಡಿ ಉಪಚರಿಸುವುದು ಅಷ್ಟೇ....ಸಮಾರಂಭದ ಊಟ ಮಾಡುವುದಕ್ಕಾಗಿ ಖಂಡಿತ ಯಾರೂ ಬರುವುದಿಲ್ಲ..ಯಾರನ್ನೂ ಅನುಮಾನಿಸಿ ಅವಮಾನಿಸುವುದು ತರವಲ್ಲ. ಕದ್ದೊಯ್ಯಲು ಯಾರೂ ಬರುವುದಿಲ್ಲ. ಎಲ್ಲರನ್ನೂ ಕರೆಯಲೇಬೇಕೆಂಬ ನಿಯಮವೇನೂ ಇಲ್ಲ. ಒಂದು ಹೊತ್ತಿನ ಸಮಾರಂಭದ ಊಟ ಮಾಡಿದರೆ ಯಾರ ಜೀವನವೂ ಬದಲಾಗದು, ಮತ್ತು ಕೊಡುವ ಸಣ್ಣ-ಪುಟ್ಟ ಉಡುಗೊರೆಗಳಿಂದಲೂ ಬದಲಾವಣೆಯಾಗದು.
ಆಹ್ವಾನ ನೀಡುವ ಮುನ್ನ ಯೋಚಿಸಿ, ಎಷ್ಟು ಜನರನ್ನು ಗೌರವಯುತವಾಗಿ ಸತ್ಕಾರ ನೀಡಬಹುದೋ ಅಷ್ಟೇ ಆಪ್ತರನ್ನು ಆಹ್ವಾನಿಸಿ. ಆತ್ಮೀಯವಾಗಿ ಆಧರಿಸಿ ಔತಣ ನೀಡಿ. ಆಹ್ವಾನಿತರಿಗೆ ಬೇಸರವಾಗದಂತೆ ನಡೆಸಿಕೊಳ್ಳಿ. ಮದುವೆ ಮನೆಯಲ್ಲಿ ಆರತಕ್ಷತೆಗೆ ಬಂದವರಿಗಂತೂ ಪೀಕಲಾಟ. ಬೇಗ ಮುಗಿಸಿ ಮೂರ್ನಾಲ್ಕು ತಾಸು ಪ್ರಯಾಣ ಮಾಡಿ ಮನೆ ಸೇರಬೇಕು. ಆದರೆ ಹುಡುಗ-ಹುಡುಗಿ, ಅಪ್ಪ-ಅಮ್ಮನ ಫೋಟೋ ಶೂಟ್ ಮುಗಿಯುವುದೇ ತಡವಾಗಿ, ಬಂದ ಅತಿಥಿಗಳ ಸಮಯಕ್ಕೆ ಬೆಲೆ ಇಲ್ಲದಂತೆ. ಗಂಟೆ ಎಂಟಾದರೂ ಆಸನಕ್ಕೆ ಬಂದು ಕೂರದೆ ಕಾಯಿಸುವುದೇ ದೊಡ್ಡತನ ಎಂಬಂತೆ...
ಧರಿಸಿರುವ ದುಬಾರಿ ಒಡವೆಗಳಿಗಿಂತ, ತೊಟ್ಟ ತುಟ್ಟಿ ವಸ್ತ್ರಗಳಿಗಿಂತ, ಮುಖಕ್ಕೆ ಹಚ್ಚಿದ ವರ್ಣಮಯ ಬಣ್ಣಗಳಿಗಿಂತ ಮಿಗಿಲಾಗಿದ್ದು ಒಂದು ಪರಿಚಯದ ಮುಗುಳುನಗೆ, ನಿಸ್ವಾರ್ಥದ ಮಂದಹಾಸ.ಒಂದೆರಡು ಕುಶಲೋಪರಿ ಮಾತು...ಒಂದೆರಡು ನಿಮಿಷದ ವರ್ತನೆ ಅತಿಥಿಗಳಿಗೆ ಸಂತೋಷ ತರಬಲ್ಲದು.. ಇದೇ ಸಂಸ್ಕಾರ ಮುಂದುವರಿದರೆ ಆಹ್ವಾನಿತರಿಗೂ, ಆಹ್ವಾನ ಇತ್ತವರಿಗೂ ಗೌರವ ಸಲ್ಲುತ್ತವೆ. ಅತಿಥಿ ದೇವೋಭವ ಪದವನ್ನು ಸಾರ್ಥಕವಾಗಿಸೋಣ...