

| ಡಾ. ದ್ರಾಕ್ಷಾಯಿಣಿ ಸಿ.ಎಲ್., ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಶಿವಮೊಗ್ಗ
ಒಡಲಲ್ಲಿ ಕುಡಿಯೊಂದು ಚಿಗುರುವುದು ಅಷ್ಟು ಸುಲಭದ ಮಾತಲ್ಲ. ಇದು ಪ್ರಕೃತಿಯ ನಿಯಮವಾದರೂ ಮಹಿಳೆಯರು ತಮ್ಮಲ್ಲೇ ಒಂದಷ್ಟು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಮೊದಲೆಲ್ಲ ಕೆಲಸದ ಒತ್ತಡ, ಮಾನಸಿಕ ಹಿಂಸೆ ಇರುತ್ತಿರಲಿಲ್ಲವಾದ್ದರಿಂದ ಸಹಜವಾಗಿಯೇ ಮಹಿಳೆ ಗರ್ಭಧರಿಸುತ್ತಿದ್ದಳು. ಆದರೀಗ ಆಧುನಿಕ ಕಾಲಘಟ್ಟದಲ್ಲಿ ಮಹಿಳೆಯೂ ಕಾಲದೊಂದಿಗೆ ಓಡುತ್ತಿದ್ದಾಳೆ. ಪರಿಣಾಮ ಒತ್ತಡ ಹೆಚ್ಚಾಗಿ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಪಿಸಿಒಡಿ, ಹಾಮೋನ್ನಲ್ಲಿ ಬದಲಾವಣೆ, ತೂಕ ಹೆಚ್ಚಳ, ಅನಿಯಮಿತ ಮುಟ್ಟಿನಿಂದ ಗರ್ಭಧಾರಣೆಯಲ್ಲಿ ಏರುಪೇರಾಗುತ್ತದೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು? ಯಾವ ಆಹಾರ ಸೇವನೆ ಉತ್ತಮ ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.
ಯಾವ ವಯಸ್ಸು ಉತ್ತಮ: 20ರಿಂದ 30 ವರ್ಷದೊಳಗೆ ಗರ್ಭಿಣಿಯಾಗುವುದು ಒಳ್ಳೆಯದು. 30 ವರ್ಷದ ನಂತರ ಗರ್ಭಿಣಿಯಾಗಬಾರದು ಎಂದು ಅರ್ಥ ಅಲ್ಲ. 30ರ ನಂತರ ಗರ್ಭ ಧರಿಸುವ ಸಾಧ್ಯತೆ ಕಡಿಮೆಯಾಗುತ್ತದೆ. 35ರ ನಂತರ ಇನ್ನೂ ತೀವ್ರವಾಗಿ ಕುಸಿಯುತ್ತದೆ ಮತ್ತು ವಯಸ್ಸು ಹೆಚ್ಚಾದಂತೆ ಕೆಲವೊಂದು chromosome ತೊಂದರೆಗಳಾಗಬಹುದು. ತಾಯಂದಿರಿಗೆ ಅಧಿಕ ರಕ್ತದೊತ್ತಡದಿಂದ ಅಂಡಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಕಡಿಮೆಯಾಗಿ ಸಕ್ಕರೆ ಕಾಯಿಲೆ ಎಂಬಿತ್ಯಾದಿ ತೊಂದರೆಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವೇನು ಅನ್ನುವ ಹಾಗೆ ಹೋದ ವಯಸ್ಸನ್ನು ಮರಳಿ ತರಲು ಆಗುವುದಿಲ್ಲ. ಆದ್ದರಿಂದ ವಯಸ್ಸಿದ್ದಾಗಲೇ ಗರ್ಭಧಾರಣೆ ಸೂಕ್ತ. ಇದೇ ರೀತಿ ವಯಸ್ಸು ಮೀರಿದ ಮೇಲೆ ಹೇಗೆ ಗರ್ಭಧರಿಸುವುದರಿಂದ ತೊಂದರೆಗಳಾಗುತ್ತವೆಯೋ ಚಿಕ್ಕ ವಯಸ್ಸಿನಲ್ಲಿ ಗರ್ಭ ಧರಿಸುವುದರಿಂದ ಅಧಿಕ ರಕ್ತದೊತ್ತಡ, ರಕ್ತ ಹೀನತೆಯಂತಹ ತೊಂದರೆಗಳಾಗುವ ಸಾಧ್ಯತೆ ಇರುತ್ತದೆ. ಸಂಬಂಧದಲ್ಲಿ ಮದುವೆ: ಎಲ್ಲ ಸಂದರ್ಭದಲ್ಲೂ ತೊಂದರೆಗಳಾಗುತ್ತವೆ ಎಂದು ಹೇಳಲಾಗುವುದಿಲ್ಲ. ಕೆಲವೊಂದು ಅನುವಂಶೀಯವಾಗಿ ಬರುವಂತಹ ತೊಂದರೆಗಳು ನಿಮ್ಮ ಕುಟುಂಬದಲ್ಲಿದ್ದರೆ ಮಗುವಿನಲ್ಲಿ ಈ ತೊಂದರೆಗಳು ಉಲ್ಭಣಿಸುವ ಸಾಧ್ಯತೆ ಹೆಚ್ಚಿರುತ್ತವೆ.
ಮಹಿಳೆಯರ ರೀತಿ ಪುರುಷರ ಪಾತ್ರ ಸಹ ಅಷ್ಟೇ ಮುಖ್ಯವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಒಳ್ಳೆಯ ಸಮಯವನ್ನು ಕಳೆಯಿರಿ. ಅವಳ ಬೇಕು, ಬೇಡಗಳನ್ನು ಅರ್ಥಮಾಡಿಕೊಂಡು ಅವಳೊಂದಿಗೆ ಸದಾಕಾಲ ಚೆನ್ನಾಗಿರಿ. ಇದರಿಂದ ಅವಳ ಆತ್ಮವಿಶ್ವಾಸ ಹೆಚ್ಚುತ್ತದೆ. ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯ ಕೂಡ ಮುಖ್ಯವಾಗಿರುತ್ತದೆ. ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ. ಇಂತಹ ಚಟಗಳಿದ್ದರೆ ತಕ್ಷಣವೇ ನಿಲ್ಲಿಸಿ, ರೇಡಿಯೇಷನ್ನಿಂದ ದೂರವಿರಿ. ಆರ್ಥಿಕ, ಸಾಮಾಜಿಕವಾಗಿ ಸ್ಥಿರವಾಗಿ, ಒಟ್ಟಿನಲ್ಲಿ ನಿಮ್ಮ ಆಸೆಯಂತೆ ಒಂದು ಸುಂದರ ಮಗು ನಿಮ್ಮದಾಗಲಿ.