

| ಜಿ.ವಿ.ರೇಣುಕಾ
ಮದುವೆಯಾಗಿ ವರ್ಷ ಕಳೆದರೂ ಮಗುವಿನ ಸುಳಿವಿಲ್ಲ ಎಂದಾಗ ಕುಟುಂಬದವರ ಮತ್ತು ನೆರೆ ಹೊರೆ, ಬಂಧು-ಬಳಗದವರ ಗಮನ ಹೋಗುವುದು ಮಹಿಳೆಯ ಕಡೆ! ಇದು ಎಷ್ಟು ಸಹಜವಾಗಿದೆ ಎಂದರೆ, ಪುರುಷನಲ್ಲೂ ದೋಷವಿರಬಹುದು ಎಂಬುದರ ಬಗ್ಗೆ ಅವರು ಕಿಂಚಿತ್ತೂ ಯೋಚಿಸುವುದಿಲ್ಲ. ಪರಿಣಾಮವಾಗಿ ‘ಬಂಜೆ’ ಎಂಬ ಹೆಸರು ಹೊತ್ತ ಮಹಿಳೆ ಪೂಜೆ, ವ್ರತ, ಹರಕೆ, ವೈದ್ಯಕೀಯ ತಪಾಸಣೆ ಚಿಕಿತ್ಸೆಗಳಿಗೆ ಒಳಗಾಗುತ್ತಾಳೆ. ಸಾಕ್ಷರತೆ, ವೈಜ್ಞಾನಿಕ ಬೆಳವಣಿಗೆಗಳ ಪರಿಣಾಮವಾಗಿ ಇಂದು ಜನರ ಚಿಂತನೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆಯಾದರೂ ಹಳ್ಳಿಗಾಡುಗಳಲ್ಲಿ ಮಾತ್ರವಲ್ಲ, ಕೆಲ ನಗರವಾಸಿಗಳಲ್ಲಿಯೂ ಬಂಜೆ ಎಂಬ ಶಬ್ದ ಉಡುಗಿಹೋಗಿದೆ ಎನ್ನಲಾಗದು. ಹಳ್ಳಿಗಾಡಿನ ಜನರು ಒರಟಾಗಿ ಹೇಳಬಹುದು, ವರ್ತಿಸಬಹುದು. ಆದರೆ, ನಾಗರಿಕರು ಸಭ್ಯತೆಯ ತೆರೆಮರೆಯಲ್ಲಿ ಅದೇ ಅಭಿಪ್ರಾಯಗಳನ್ನು ಇರಿಸಿಕೊಂಡಿದ್ದಾರೆ ಎಂಬುದು ಅಚ್ಚರಿಯಲ್ಲದ ನಗ್ನಸತ್ಯ.
ಮಗುವಿಗೆ ಪ್ರೀತಿ ಕೊಡಿ: ಇದು ವೈಜ್ಞಾನಿಕ ಯುಗ. ‘ಬಂಜೆತನ’ವನ್ನು ನೀಗಿಸಿಕೊಳ್ಳಲು ಸಾಕಷ್ಟು ಮಾರ್ಗಗಳಿವೆ. ಸಾಧ್ಯವಾಗದಿದ್ದರೆ ದತ್ತು ತೆಗೆದುಕೊಂಡು ಒಂದು ಅನಾಥ ಮಗುವಿಗೆ ತಂದೆ-ತಾಯಿ ಪ್ರೀತಿ ಕೊಡುವುದು ಹಾಗೂ ತಾಯಿ-ತಂದೆಗಳಾಗಿ ಮಗುವಿನ ಲಾಲನೆ-ಪಾಲನೆ, ಪ್ರೀತಿಯಲ್ಲಿ ಸುಖಿಸುವುದು ನಮ್ಮ ಕೈಯಲ್ಲೇ ಇದೆ. ಅಂದ ಮೇಲೆ ‘ಬಂಜೆ’ ಎಂಬ ಶಬ್ದ ಏಕೆ ತಾನೇ ಬೇಕು?
ಮನಸ್ಥಿತಿಯ ನಗ್ನ ದರ್ಶನ: ‘ಮಕ್ಕಳಾದರೆ ಕೇಡೇ, ಮಳೆ ಬಂದರೆ ಕೇಡೇ’ ಎಂಬ ಮನೋಭಾವದ ಹಳೇ ತಲೆಮಾರಿನ ಜನರು ‘ಹತ್ತು ಮಕ್ಕಳಿರಬಹುದು’, ‘ಮಕ್ಕಳಿರಲವ್ವ ಮನೆ ತುಂಬ’ ಎಂದು ಆಸೆಪಟ್ಟವರಾಗಿದ್ದಾರೆ. ಜನಪದಗಳನ್ನು ಹಾಡಿದವರು ಜೀವನದಲ್ಲಿ ಕಂಡುಂಡ ಸತ್ಯ, ಅನುಭವ, ಅಭಿಪ್ರಾಯಗಳನ್ನು ಪದಗಳಲ್ಲಿ ಅಭಿವ್ಯಕ್ತಿಸಿದ್ದಾರೆ. ಅವುಗಳಲ್ಲಿ ಮಕ್ಕಳಿಲ್ಲದ ಮಹಿಳೆಯ ಬಗೆಗಿನ ಜನರ ಅಭಿಪ್ರಾಯ, ಮನೋಭಾವಗಳನ್ನು ದರ್ಶಿಸುವ ಹಾಡುಗಳಿವೆ. ಅದರೊಂದಿಗೆ ಮಕ್ಕಳಿಲ್ಲದೇ ಬಂಜೆ ಎಂದು ಹೆಸರು ಹೊತ್ತುಕೊಳ್ಳುವ ಮಹಿಳೆಯ ನೋವು, ಸಂಕಟ, ಕಾತರಗಳನ್ನು ಮನಗಾಣಿಸುವ ಹಾಡುಗಳೂ ಇರುವುದು ವಿಶೇಷ.! ಇವರಿಂದ ಸಮಾಜದಲ್ಲಿ ತನ್ನದೇ ಕುಟುಂಬದಲ್ಲಿ ಅವಳ ಸ್ಥಾನಮಾನಗಳ ಬಗ್ಗೆ ಹಾಗೂ ಅವಳ ಮನಸ್ಥಿತಿಯ ನಗ್ನ ದರ್ಶನವು ಆಗುತ್ತದೆ...
ಊರು-ಕೇರಿಯವರೆಲ್ಲ ಅಂದಾಗ...: ಮಕ್ಕಳಿಲ್ಲದ ಮಹಿಳೆಯ ಬದುಕು ಬದುಕೇ ಅಲ್ಲ. ಅವಳೊಂದು ವ್ಯರ್ಥಜೀವ. ಅವಳ ಬಾಳೆಲ್ಲಾ ಕೇವಲ ದುಡಿಮೆಗೆ ಮೀಸಲಾಗುತ್ತದೆ ಎಂಬ ಹೇಳಿಕೆಗಳನ್ನು ಕಾಣುತ್ತೇವೆ. ಬಂದಿ, ಬಂಗಾರ, ಸೀರೆ, ಒಡವೆ ವಸ್ತ್ರಗಳನ್ನು ಮಗನ ತಾಯಂದಿರು ಮಾತ್ರ ಉಟ್ಟುಕೊಂಡರೆ, ತೊಟ್ಟುಕೊಂಡರೆ ಚೆಂದ. ಮಕ್ಕಳಿಲ್ಲದ ಮಹಿಳೆ ಏನು ಉಟ್ಟರೇನು, ಏನು ತೊಟ್ಟರೇನು ಎಂಬ ತಾತ್ಸಾರದ ಮನೋಭಾವ ಕೆಲವೆಡೆ ಇದೆ. ಮಹಿಳೆ ತಾಯಿಯಾದರೆ ಸಾಲದು, ಗಂಡು ಮಗನ ತಾಯಿಯೇ ಆಗಬೇಕೆಂಬ ಮನೀಷೆ! ಮಹಿಳೆ ಬಗ್ಗೆ ಅದೆಷ್ಟು ನಿರೀಕ್ಷೆ! ಅದೆಷ್ಟು ಮಾನಸಿಕ ಹಿಂಸೆ, ಒತ್ತಾಯಗಳು!
ದೃಷ್ಟಿಕೋನ ಬದಲಾಗಲಿ: ಊರು ಕೇರಿಯವರಲ್ಲದೆ ಮನೆ ಮಂದಿಯವರೆಲ್ಲರೂ ತನ್ನನ್ನು ‘ಬಂಜೆ’ ಎಂದು ಹೀನಾಯವಾಗಿ ಕಂಡಾಗ ಅವಳ ಮನೋವೇದನೆ ‘ಹೆಣ್ಣಾಗಿರುವುದಕ್ಕಿಂತ ಮಣ್ಣಾಗಿರುವುದೇ ಲೇಸು’ ಎಂದು ವ್ಯಕ್ತವಾಗುತ್ತದೆ. ದುಃಖ ದುಮ್ಮಾನಗಳನ್ನು ತನ್ನ ಗೆಳತಿಯ ಮುಂದೆ ತೋಡಿಕೊಂಡು ನೊಂದುಕೊಳ್ಳುತ್ತಾಳೆ. ಮಕ್ಕಳನ್ನು ಪಡೆಯುವ ಸಲುವಾಗಿ ತಮ್ಮ ತನು-ಮನ-ಧನಗಳನ್ನು ಅರ್ಪಿಸಲು ಸಿದ್ಧರಾಗುತ್ತಾರೆ. ಆದರೆ ‘ಬಂಜೆ’ ಎಂಬ ಹೆಸರು ಗಳಿಸಲು ಮಾತ್ರ ಅವರು ಸಿದ್ಧರಿಲ್ಲ! ‘ಹೆಣ್ಣು ತಾಯಿ ಆಗುವ ಮೂಲಕ ಪರಿಪುರ್ಣತೆ ಪಡೆಯುತ್ತಾಳೆ’ ಎಂದು ಜನಜನಿತವಾಗಿರುವ ಅಭಿಪ್ರಾಯ ಇಂದಿನ ಕಾಲದ್ದಾಗಿದೆ! ವಿಶಾಲ ದೃಷ್ಟಿಕೋನ, ಮನೋಭಾವಗಳ ಕೊರತೆ ಈ ಬಗೆಯ ಅಭಿಪ್ರಾಯಕ್ಕೆ ಕಾರಣವಾಗಿದೆ. ಪ್ರಾಕೃತಿಕವಾಗಿ ಅಥವಾ ಬೇರೆ ರೀತಿಯ ಅನಿವಾರ್ಯ ಕಾರಣಗಳಿಂದ ತಾಯ್ತನಕ್ಕೆ ಹೊರತಾದ ಮಹಿಳೆಯನ್ನು ‘ತಾಯಿಯ ಭಾವನೆಗಳನ್ನು ಅನುಭವಕ್ಕೆ ತಂದುಕೊಳ್ಳಲಾಗದವರು, ತಾಯ್ತನ ಅರಿಯದವರು, ಅಪರಿಪೂರ್ಣರು. ಮುಂತಾಗಿ ಹೇಳುವುದು ಸಂಕುಚಿತ ದೃಷ್ಟಿಯ, ಕೀಳು ಭಾವನೆಯ ಅಭಿವ್ಯಕ್ತಿಯಷ್ಟೆ.
ಹಡೆದವರಲ್ಲ, ಪಡೆದವರು!: ಹೆತ್ತ ತಾಯಿಗಿಂತಲೂ ಒಂದು ಕೈ ಮಿಗಿಲಾಗಿ ಸಾಕು ತಾಯಿಯ ಪ್ರೀತಿ, ವಾತ್ಸಲ್ಯ ಇರುತ್ತವೆ ಎಂಬುದನ್ನು ಕೃಷ್ಣನನ್ನು ಸಾಕಿದ ಯಶೋದೆಯಲ್ಲಿ ಕಾಣುತ್ತೇವೆ. ಮಹಿಳೆಯ ಪ್ರೀತಿ, ವಾತ್ಸಲ್ಯವನ್ನು ಕೇವಲ ಆಕೆಯ ಮಕ್ಕಳು ಮಾತ್ರ ಅನುಭವಿಸಬೇಕೆಂಬ ಯಾವ ನಿಯಮವೂ ಇಲ್ಲ. ಮಕ್ಕಳಾಗದಿದ್ದಲ್ಲಿ ವಂಶ ಉದ್ಧಾರವಾಗುವುದಿಲ್ಲ ಎಂಬ ತಪು್ಪ ಕಲ್ಪನೆ, ಪೊಳ್ಳು ಅಭಿಮಾನವಲ್ಲದೆ ಬೇರಲ್ಲ ವಿಶಾಲ ಮನೋಭಾವ ಇದ್ದಲ್ಲಿ ಸಮಾಜ, ದೇಶ, ಇಡೀ ವಿಶ್ವವೇ ಆಕೆಯ ಕುಟುಂಬವಾಗಬಲ್ಲದು. ಶಾರದಾದೇವಿ, ಥೆರೆಸಾ ಅವರ ಕುಟುಂಬದಷ್ಟು ದೊಡ್ಡ ಕುಟುಂಬ ಯಾರದ್ದಿದೆ? ತಮ್ಮ ಹೆಸರಿನೊಂದಿಗೆ ‘ಮಾತೆ’, ಮದರ್ ಎಂಬುದನ್ನು ಅನ್ವರ್ಥವಾಗಿ ಪಡೆದುಕೊಂಡು ವಿಖ್ಯಾತರಾಗಿರುವ ಇವರು ಮಕ್ಕಳನ್ನು ಹಡೆದವರಲ್ಲ, ಆದರೆ ನೂರಾರು, ಸಾವಿರಾರು ಮಕ್ಕಳನ್ನು ಪಡೆದವರಾಗಿದ್ದಾರೆ! ಇವರು ಕೇವಲ ‘ತಾಯಿ’ ಅಲ್ಲ ‘ಮಹಾತಾಯಿ’ಯರು!! ಇದಕ್ಕೆ ಪೂರಕವಾಗಿ ಹಳ್ಳಿಗಾಡಿನ ಜನರ ಅಷ್ಟೇನೂ ಪುರಾತನವಲ್ಲದ ಹಾಡುಗಳಲ್ಲೂ ಬದಲಾವಣೆಯನ್ನು, ವಿಶಾಲ ಮನೋಭಾವವನ್ನು ಕಾಣುತ್ತೇವೆ. ‘ತನ್ನ ಮಕ್ಕಳಂತೆಯೇ ಇತರ ಮಕ್ಕಳನ್ನೂ ನೋಡದವಳು ತಾಯಿಯಾದರೂ ಬಂಜೆ, ತನಗೆ ಮಕ್ಕಳಿಲ್ಲದಿದ್ದರೂ ಇತರ ಮಕ್ಕಳನ್ನು ಎತ್ತಿ ಮುದ್ದಾಡಿಸದೆ ಮತ್ಸರದಿಂದ ನೋಡುವವಳೇ ಹಿರಿಬಂಜೆ’ ಎಂದು ಬಂಜೆ ಎಂಬ ಶಬ್ದಕ್ಕೆ ಅರ್ಥ ವಿವರಣೆ ನೀಡಿದ್ದಾರೆ ಯಾರೋ ಮಹಾನುಭಾವರು.