

ದೇಶದ ಯುವಜನರ ಪೈಕಿ ಉದ್ಯೋಗ ಯೋಗ್ಯರು ಅಥವಾ ಎಂಪ್ಲಾಯೆಬಲ್ ಎಂದು ಹೇಳಬಲ್ಲವರ ಸಂಖ್ಯೆ ಶೇಕಡ 50ಕ್ಕಿಂತ ಕಡಿಮೆ ಇದೆ. ಆದಾಗ್ಯೂ ಕೌಶಲ ಹೊಂದಿದ ಯುವಜನರ ಸಂಖ್ಯೆಯಲ್ಲಿ ವೃದ್ಧಿ ಕಂಡುಬಂದಿದೆ. ಹಿಂದೆಂದಿಗಿಂತಲೂ ಹೆಚ್ಚು ಯುವಜನರು ವಿದ್ಯಾರ್ಥಿ ದೆಸೆಯಲ್ಲೇ ಕೌಶಲ ಪಡೆಯಲಾರಂಭಿಸಿದ್ದಾರೆ. ದೇಶದ ಯುವ ಪದವೀಧರರ ಪೈಕಿ ಶೇಕಡ 50ಕ್ಕೂ ಹೆಚ್ಚು ಯುವಜನರಿಗೆ ಕೌಶಲ ಇಲ್ಲದ ಕಾರಣ ಉದ್ಯೋಗ ಯೋಗ್ಯತೆ ಇಲ್ಲ. ಹೀಗಾಗಿ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಇಂಡಿಯಾ ಸ್ಕಿಲ್ ರಿಪೋರ್ಟ್ 2022 ರ ಪ್ರಕಾರ, 2022 ರಲ್ಲಿ ಕೇವಲ 46.2% ವಿದ್ಯಾರ್ಥಿಗಳು ಮಾತ್ರ ಉದ್ಯೋಗಕ್ಕೆ ಅರ್ಹರಾಗಿ ಹೊರಹೊಮ್ಮಲಿದ್ದಾರೆ. 2021 ರಲ್ಲಿ, ಈ ಅಂಕಿ ಅಂಶವು ಕೇವಲ 45.9% ಆಗಿತ್ತು. ಆದಾಗ್ಯೂ ಈ ಪ್ರಮಾಣ ಕರೊನಾ ಸಂಕಷ್ಟ ಪೂರ್ವಕ್ಕೆ ಹೋಲಿಸಿದರೆ (2019ರಲ್ಲಿ 47.38%) ಕಡಿಮೆ ಇದೆ.
ಸ್ಕಿಲ್ ರಿಪೋರ್ಟ್ ಡೇಟಾ ಪ್ರಕಾರ ವಿಶ್ಲೇಷಣೆ ನಡೆಸಿದರೆ, ಬಿಇ/ಬಿಟೆಕ್ ಪದವೀಧರರು ಹೆಚ್ಚಿನ ಉದ್ಯೋಗಾರ್ಹ ಕೌಶಲ ಹೊಂದಿದ್ದಾರೆ. ಇದೇ ವೇಳೆ ಪಾಲಿಟೆಕ್ನಿಕ್ ಮತ್ತು ಎಂಸಿಎ ಕಲಿತವರು ಕಡಿಮೆ ಉದ್ಯೋಗ ಯೋಗ್ಯ ಕೌಶಲ ಹೊಂದಿದ್ದು, ಉದ್ಯೋಗಾವಕಾಶವೂ ಕಡಿಮೆ ಇದೆ. ಬಿಎಫ್ಎಸ್ಐ, ಸಾಫ್ಟ್ವೇರ್, ಹಾರ್ಡ್ವೇರ್ ಐಇಟಿ ಮತ್ತು ಇಂಟರ್ನೆಟ್ ಸಂಬಂಧಿತ ಕ್ಷೇತ್ರಗಳು ಈ ವರ್ಷ ಹೆಚ್ಚಿನ ಉದ್ಯೋಗಾವಕಾಶವನ್ನು ಸೃಷ್ಟಿಸಿವೆ. ಇದೇ ಟ್ರೆಂಡ್ 2022ರಲ್ಲೂ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ.
ರಾಜ್ಯವಾರು ಉದ್ಯೋಗ ಯೋಗ್ಯ ಯುವಜನರ ಲೆಕ್ಕಾಚಾರ ತೆಗೆದುಕೊಂಡರೆ, ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಉತ್ತರ ಪ್ರದೇಶ ಮತ್ತು ಕೇರಳ ನಂತರದ ಸ್ಥಾನದಲ್ಲಿವೆ. ದೇಶದಲ್ಲಿ ಒಟ್ಟಾರೆ ಶೇಕಡ 66 ಯುವ ಜನರು ಉನ್ನತ ಶಿಕ್ಷಣ/ವೃತ್ತಿಶಿಕ್ಷಣದ ತರುವಾಯ ಉದ್ಯೋಗ ಯೋಗ್ಯರಾಗಿ ಹೊರಹೊಮ್ಮಿದ್ದಾರೆ. ಮುಂಚೂಣಿ ರಾಜ್ಯಗಳ ಶೇಕಡವಾರು ಚಿತ್ರಣ ಇಲ್ಲಿದೆ.
ಉದ್ಯೋಗ ಕ್ಷೇತ್ರದಲ್ಲಿ ಬದಲಾದ ಸನ್ನಿವೇಶದಲ್ಲಿ ಹೊಸ ಉದ್ಯೋಗ ಪಾತ್ರಗಳು ಸೃಷ್ಟಿಯಾಗುತ್ತಿವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರ ಮತ್ತು ಅದಕ್ಕೆ ಪೂರಕ ಕ್ಷೇತ್ರಗಳಲ್ಲಿ ಮತ್ತು ನವೋದ್ಯಮಗಳು ಈ ಹೊಸ ಹೊಸ ಪಾತ್ರಗಳ ಸೃಷ್ಟಿಯಲ್ಲಿ ಪ್ರಮುಖ ಪಾತ್ರವಹಿಸಿವೆ. ಅಷ್ಟೇ ಅಲ್ಲ, ಉದ್ಯೋಗಿಗಳ ಕೌಶಲ ಉನ್ನತೀಕರಿಸುವುದಕ್ಕೆ ತರಬೇತಿಯನ್ನೂ ಒದಗಿಸುತ್ತಿವೆ. ಬಿಜಿನೆಸ್ ಸರ್ವೀಸ್ ಪ್ರೊವೈಡರ್ಸ್ ಕೋರ್ಸ್ ವರದಿ ಪ್ರಕಾರ, ಟೆಸ್ಟಿಂಗ್ ಕೌಶಲ ಅರಿತವರಿಗೆ ಬೇಡಿಕೆ ಗರಿಷ್ಠ ಅಂದರೆ ಶೇಕಡ 43 ಇದೆ. ಇದೆ ರೀತಿ ಬೇರೆ ಬೇರೆ ಹೊಸ ಕೌಶಲಗಳನ್ನು ಹೊಂದಿದವರಿಗೆ ವಿಶೇಷವಾಗಿ ಅನಲಿಟಿಕ್ಸ್ ಕೌಶಲ ಹೊಂದಿದವರಿಗೆ ಕೂಡ ಇದೇ ರೀತಿಯ ಬೇಡಿಕೆ ಕಂಡುಬಂದಿದೆ.
ಬೇಡಿಕೆಯಲ್ಲಿರುವ ಐದು ಕೌಶಲಗಳು: ನವೋದ್ಯಮ ಮತ್ತು ಐಟಿ, ಪೂರಕ ಕ್ಷೇತ್ರಗಳಲ್ಲಿ 2021ರ ಸೆಪ್ಟೆಂಬರ್-ನವೆಂಬರ್ ನಡುವೆ ಬಹುಬೇಡಿಕೆಯಲ್ಲಿದ್ದ ಕೌಶಲಗಳ ಪೈಕಿ ಟೆಸ್ಟಿಂಗ್, ಪ್ಲಾಟ್ಫಾರಂ ಟೆಕ್ನಾಲಜಿ, ಜಾವಾ, ಕ್ಲೌಡ್ ಇನ್ಫ್ರಾ, ಡೇಟಾ ಅನಲಿಟಿಕ್ಸ್ ಇವು ಐದು ಪ್ರಮುಖವಾದವು. ಟೆಸ್ಟಿಂಗ್ ಟೆಕ್ನಾಲಜೀಸ್ನಲ್ಲಿ ಜೂನ್-ಆಗಸ್ಟ್ಗೆ ಹೋಲಿಸಿದರೆ ಸೆಪ್ಟೆಂಬರ್-ನವೆಂಬರ್ನಲ್ಲಿ ಶೇಕಡ 18 ಹೆಚ್ಚು ಉದ್ಯೋಗಾವಕಾಶ ಸೃಷ್ಟಿಯಾಗಿದೆ. ಇದೇ ರೀತಿ ಕ್ಲೌಡ್ ಇನ್ಫ್ರಾದಲ್ಲಿ ಶೇಕಡ 131 ಹೆಚ್ಚು, ಡೇಟಾ ಅನಲಿಟಿಕ್ಸ್ನಲ್ಲಿ ಶೇಕಡ 454 ಉದ್ಯೋಗ ಸೃಜನೆಯಾಗಿದೆ.
ನಗರಗಳಲ್ಲಿ ಡಿಜಿಟಲ್ ಕೌಶಲ ಹೊಂದುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇಂಥವರಿಗೆ ಐಟಿ ಹಬ್ಗಳಲ್ಲಿ ಹೆಚ್ಚು ಬೇಡಿಕೆ ಇದೆ. ಈ ರೀತಿ ಉದ್ಯೋಗ ಸೃಷ್ಟಿಸುವಲ್ಲಿ ಬೆಂಗಳೂರು ಮುಂಚೂಣಿಯಲ್ಲಿದ್ದು, ಶೇಕಡ 40 ಹೆಚ್ಚು ಉದ್ಯೋಗ ಸೃಜಿಸಿ ಟಾಪ್ನಲ್ಲಿದೆ. ಹೈದರಾಬಾದ್ನಲ್ಲಿ ಶೇಕಡ 20, ಪುಣೆಯಲ್ಲಿ ಶೇಕಡ 20, ಚೆನ್ನೈನಲ್ಲಿ ಶೇಕಡ 10, ದೆಹಲಿಯಲ್ಲಿ ಶೇಕಡ 5ರಷ್ಟು ಹೆಚ್ಚುವರಿ ಉದ್ಯೋಗ ಸೃಜನೆಯಾಗಿದ್ದು, ಡಿಜಿಟಲ್, ಅನಲಿಟಿಕಲ್ ಕೌಶಲ ಹೊಂದಿದವರ ಬೇಡಿಕೆಯನ್ನು ಸೃಷ್ಟಿಸಿವೆ.