

| ಗೌರಿ ಚಂದ್ರಕೇಸರಿ ಶಿವಮೊಗ್ಗ
ನಿತ್ಯ ಅಡುಗೆ ಮನೆಯಲ್ಲಿ ಬೆಂಕಿ, ಚಾಕುವಿನಂತಹ ಪರಿಕರಗಳೊಂದಿಗೆ ಹೆಣಗುವ ಅವರು ಒಂದಿಲ್ಲ ಒಂದು ರೀತಿಯ ನೋವುಗಳನ್ನು ಉಣ್ಣುತ್ತಲೇ ಇರುತ್ತಾರೆ. ತರಕಾರಿಗಳನ್ನು ಹೆಚ್ಚುವಾಗ ಬೆರಳಿಗೆ ಗಾಯವಾಗುವುದು, ರೊಟ್ಟಿ ಬೇಯಿಸುವಾಗ ಹಬೆ ತಾಗುವುದು, ಒಲೆಯ ಮೇಲಿಂದ ಪಾತ್ರೆಗಳನ್ನು ಇಳಿಸುವಾಗ ಬಿಸಿ ತಾಗುವುದು ನಿತ್ಯ ಸಾಮಾನ್ಯ ಸಂಗತಿಗಳಾಗಿರುತ್ತವೆ. ಆ ನೋವಿನಲ್ಲೂ ಆಕೆ ಏನೂ ಆಗಿಲ್ಲ ಎಂಬಂತೆ ಮತ್ತೆ ಮರು ದಿನದ ತಿಂಡಿ, ಅಡುಗೆಯನ್ನು ಸಂಭ್ರಮದಿಂದಲೇ ಮಾಡುತ್ತಾಳೆ. ಕೊಯ್ದುಕೊಂಡ ಬೆರಳಿಗೊಂದು ಬ್ಯಾಂಡೆಡ್ ಹಾಕಿಕೊಂಡು ಮತ್ತದೇ ಏಕಾಗ್ರತೆಯಿಂದ ಪಾತ್ರೆಗಳನ್ನು ತೊಳೆಯುತ್ತಾಳೆ, ಬಟ್ಟೆಗಳನ್ನು ಸ್ವಚ್ಛಗೊಳಿಸುತ್ತಾಳೆ.
ಕುಟುಂಬದ ಸದಸ್ಯರ ಹೊಟ್ಟೆಯನ್ನು ತಣ್ಣಗಿಡಲು ಅಮ್ಮಂದಿರು ನಿತ್ಯ ಹೆಣಗಾಡುತ್ತಲೇ ಇರುತ್ತಾರೆ. ಮರುದಿನ ತಯಾರಿಸುವ ಕೆಲ ಊಟ-ತಿಂಡಿಗಳಿಗೆ ಹಿಂದಿನ ದಿನವೇ ತಯಾರಿ ಮಾಡಿಕೊಳ್ಳಬೇಕು. ಒಬ್ಬರಿಗೆ ಇಷ್ಟವಾದ ತಿಂಡಿ ತಿನ್ನಲು ಇನ್ನೊಬ್ಬರಿಗೆ ಕಷ್ಟವಾಗುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಅವರವರ ಇಷ್ಟದ ಅಡುಗೆಗಳನ್ನು ಬೇಸರಿಸದೇ ಮಾಡುವವರು ಅಮ್ಮಂದಿರು. ಪ್ರೀತಿ, ಕಾಳಜಿ, ಶ್ರಮ, ಕೌಶಲಗಳೆಲ್ಲವನ್ನೂ ಒಟ್ಟುಗೂಡಿಸಿ ತಯಾರಿಸಿದ ಅಡುಗೆಯನ್ನು ತಟ್ಟೆಗೆ ಬಡಿಸಿ ಅವಳು ನಿರೀಕ್ಷಿಸುವುದು ಚೆನ್ನಾಗಿದೆ ಎಂಬ ಒಂದು ಮಾತನ್ನು ಮಾತ್ರ. ಅದರ ಬದಲಾಗಿ ನಾವು ಊಟದ ಕುರಿತು ಒಂದು ಕೊಂಕು ನುಡಿದರೂ ಆಕೆಯ ಕಾಯಕದ ಹಿಂದಿನ ಪರಿಶ್ರಮ ಗೌಣವಾಗಿ ಬಿಡುತ್ತದೆ. ತನ್ನದೇ ಏಕಾಗ್ರತೆಯಲ್ಲಿ ಏನೋ ಕೊರತೆಯಾಗಿರಬೇಕೆಂದು ಹಳಹಳಿಸುತ್ತಾಳೆ. ತಾನೇ ತಯಾರಿಸಿದ ಅಡುಗೆಯಲ್ಲಿ ಸ್ವಾದವನ್ನು ತರಲು ಮತ್ತೊಮ್ಮೆ ಪ್ರಯತ್ನಪಡುತ್ತಾಳೆ.
ವಿವಾಹವಾದ ಬೆನ್ನಲ್ಲೇ ಅಡುಗೆ ಮನೆಯ ಜವಾಬ್ದಾರಿ ಹೆಣ್ಣಿಗೆ ಅಂಟಿಕೊಂಡು ಬಿಡುತ್ತದೆ. ಬದುಕಿನುದ್ದಕ್ಕೂ ಅದು ಬಿಡಲಾರದ ನಂಟು. ಹೊಸತರಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುವ ಅವಳು ದಿನ ಕಳೆದಂತೆ ಅಡುಗೆ ಮನೆಗೆ ಹೊಂದಿಕೊಂಡು ಬಿಡುತ್ತಾಳೆ. ಕುಟುಂಬದವರ ಇಷ್ಟಗಳನ್ನು ತಿಳಿದುಕೊಂಡು ಎಲ್ಲರ ಹೃದಯ ಗೆಲ್ಲಲು ಪ್ರಯತ್ನಿಸುತ್ತಾಳೆ. ಆದರೆ ನಾವು ಅವಳ ಅಡುಗೆ ತಯಾರಿ ಹಿಂದಿರುವ ಪರಿಶ್ರಮ ಗುರುತಿಸುವುದೇ ಇಲ್ಲ. ಕನಿಷ್ಠ ಪಕ್ಷ ಅಮ್ಮನ ಕೈ ರುಚಿ ನಮ್ಮನ್ನು ಸಂತೃಪ್ತಗೊಳಿಸಿದಾಗಲಾದರೂ ಒಂದೊಳ್ಳೆಯ ಅಥವಾ ಹೊಗಳಿಕೆಯ ಮಾತು ಆಡುವುದಿಲ್ಲ.
ನಿತ್ಯ ಅಡುಗೆ ಮನೆಯಲ್ಲಿ ಸವೆಯುವ ಅಮ್ಮಂದಿರ ಮೃದುವಾದ ಕೈಗಳು ಬೆಂಕಿಯೊಡನೆ ಸರಸವಾಡಿ ಅಕ್ಷರಶಃ ದದ್ದು ಬಿದ್ದು ಹೋಗಿರುತ್ತವೆ. ಅಡುಗೆ ಮನೆಗೆ ಅಪರಿಚಿತರಂತೆ ಇರುವ ಗಂಡಸರು, ಮಕ್ಕಳು ಸ್ವಲ್ಪ ಬಿಸಿಯಾಗಿರುವ ಪಾತ್ರೆಯನ್ನು ಒಲೆಯ ಮೇಲಿಂದ ಇಳಿಸಲು ಇಕ್ಕಳ ಇಲ್ಲವೇ ಬಟ್ಟೆಯ ಮೊರೆ ಹೋಗುತ್ತಾರೆ. ಆದರೆ ಅಮ್ಮಂದಿರು ಉಕ್ಕುತ್ತಿರುವ ಹಾಲಿನ ಪಾತ್ರೆಯನ್ನೇ ಬರಿಗೈಯಿಂದ ಕೆಳಕ್ಕಿಳಿಸಿ ಬಿಡುತ್ತಾರೆ. ಅಮ್ಮಂದಿರು ಮಾಡುವ ಅಡುಗೆ ಅಮೃತಕ್ಕೆ ಸಮಾನ. ಹೊಟ್ಟೆ ಹಸಿದು ತಾಳ ಹಾಕುವ ಮೊದಲೇ ಕರೆದು ವಾತ್ಸಲ್ಯದಿಂದ ಉಣಬಡಿಸುವ ಅವರ ಅಡುಗೆಗೊಂದು ಹೆಸರಿಡುವ ಮೊದಲು ಅವರ ಕೈ ಮೇಲೆ ಉಳಿದಿರುವ ಸುಟ್ಟ ಕಲೆಗಳ ಮೇಲೆ ಒಮ್ಮೆ ಗಮನ ಹರಿಸೋಣ.