ನವಭಾರತ ನಿರ್ಮಾಣದ ಹರಿಕಾರ ಲಾಲಾ ಲಜಪತ್ ರಾಯ್

4-6797c7cf222d7
Published on
ಒಂದು ದೇಶದ ಭಾಗ್ಯ ವಿಶೇಷದಿಂದ ಮಹತ್ವದ ಕಾಲಘಟ್ಟದಲ್ಲಿ ಹಲವು ಮಹಾಪುರುಷರು ಜನ್ಮವೆತ್ತಿ ತಾವು ಹುಟ್ಟಿದ ದೇಶ, ಜನತೆ ಮತ್ತು ಮಾನವೀಯತೆಗೆ ಮಹತ್ವವಾದ ಕೊಡುಗೆಗಳನ್ನು ನೀಡಿ, ದೇಶಭಕ್ತರಿಗೆ ನಿರಂತರವಾಗಿ ಪ್ರೇರಣೆ ನೀಡುತ್ತಾರೆ. ಅಂತಹ ಮಹಾಪುರುಷರಲ್ಲಿ ಲಾಲಾ ಲಜಪತ್ ರಾಯ್ರೊಬ್ಬರು. ಕಠಿಣ ಪರಿಸ್ಥಿತಿಯಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ, ಯಶಸ್ವಿ ವಕೀಲ ವೃತ್ತಿಯನ್ನೂ ತೊರೆದು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಹಲವಾರು ಬಾರಿ ಸೆರೆಮನೆ ವಾಸವನ್ನು ಕಂಡವರು ಲಾಲಾಜೀ.

ಶಿಕ್ಷಣ ತಜ್ಞರಾಗಿ ದಯಾನಂದ ಆಂಗ್ಲೋ ವೇದಿಕ್ ವಿದ್ಯಾಸಂಸ್ಥೆ ಸೇರಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಲಾಲಾಜಿ ಸಮಾಜ ಸುಧಾರಕರಾಗಿ ಸೇವೆ ಸಲ್ಲಿಸಿದರು. ವಿಧವಾ ವಿವಾಹ, ಬಾಲಕಿಯರ ಶಿಕ್ಷಣ, ಅನಾಥಾಲಯಗಳ ಸ್ಥಾಪನೆ, ಗ್ರಂಥಾಲಯಗಳ ಸ್ಥಾಪನೆ, ಆಸ್ಪತ್ರೆಗಳ ಸ್ಥಾಪನೆ, ನ್ಯಾಯಾಂಗ ವ್ಯವಸ್ಥೆಯ ಸುಧಾರಣೆ, ಬಲವಂತ, ಆಸೆ, ಆಮಿಷಗಳಿಂದ ಮತಾಂರಗೊಂಡವರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರುವ ಅಭಿಯಾನ ಕಾರ್ಯಕ್ರಮಗಳಲ್ಲಿ ಲಾಲಾಜಿ ಅತಿಪ್ರಮುಖ ಪಾತ್ರ ವಹಿಸಿದ್ದರು.

ಭದ್ರ ಭಾರತ ನಿರ್ವಣಕ್ಕೆ, ಭಾರತದ ಆರ್ಥಿಕಾಭಿವೃದ್ಧಿಗೆ ರಾಷ್ಟ್ರೀಯ ತತ್ವ ಪ್ರತಿಪಾದಿಸುವ ಬ್ಯಾಂಕ್, ವಿಮಾ ಕಂಪನಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಸಣ್ಣ ವಯಸ್ಸಿನಲ್ಲೇ ಮನಗಂಡಿದ್ದ ಲಾಲಾಜೀ 1895ರ ಏಪ್ರಿಲ್ 13ರಂದು ಲಾಹೋರಿನಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಾರಂಭಿಸಿದರು. 1920ರಲ್ಲಿ ಲಕ್ಷ್ಮೀ ವಿಮಾ ಕಂಪನಿಯನ್ನು ಪ್ರಾರಂಭಿಸಿದರು. ಲಾಹೋರಿನಲ್ಲಿ ತನ್ನ ತಾಯಿಯ ನೆನಪಿನಲ್ಲಿ ಗುಲಾಬ್ ದೇವಿ ಸ್ಮಾರಕ ಕ್ಷಯರೋಗ ಆಸ್ಪತ್ರೆ ಪ್ರಾರಂಭಿಸಿದರು. ಲಾಹೋರಿನಲ್ಲಿ ನ್ಯಾಷನಲ್ ಕಾಲೇಜ್, ತಿಲಕ್ತ್ ರಾಜನೀತಿ ಶಾಸ್ತ್ರ ವಿದ್ಯಾಲಯ, ಪಂಜಾಬೀ ವಂದೇ ಮಾತರಂ, ದಿ ಪೀಪಲ್ ಪತ್ರಿಕೆಗಳನ್ನು ಪ್ರಾರಂಭಿಸಿದರು. ಅಂತೆಯೇ ಲೋಕಸೇವಕ ಸಮಾಜವನ್ನು ಪ್ರಾರಂಭಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಒಟ್ಟು 3 ವರ್ಷ 24 ದಿನಗಳ ಸೆರೆಮನೆ ವಾಸ ಅನುಭವಿಸಿದ ಲಾಲಾಜೀ ವಿದೇಶದಲ್ಲಿ 3 ವರ್ಷ 8 ತಿಂಗಳು ಭಾರತದ ಪರವಾಗಿ ಹಲವು ರೀತಿಯಲ್ಲಿ ಕಾರ್ಯನಿರ್ವಹಿಸಿದರು ಮತ್ತು 5 ವರ್ಷಗಳ ರಾಜಕೀಯ ಆಶ್ರಯ ಪಡೆದುಕೊಂಡು ಅಮೆರಿಕದಾದ್ಯಂತ ಭಾರತದ ಪರವಾಗಿ ಸದಭಿಪ್ರಾಯ ಮೂಡಿಸಿದರು. ಲಾಲಾಜಿ ಸ್ವಾತಂತ್ರ್ಯಪೂರ್ವದಲ್ಲಿ ಭಾರತದ ಸಾಂಸ್ಕೃತಿಕ ಮತ್ತು ರಾಜಕೀಯ ರಾಯಭಾರಿಯಾಗಿದ್ದರು.

‘ದುಃಖಿತ ಭಾರತ’ (unhappy India), ‘ಭಾರತಕ್ಕೆ ಇಂಗ್ಲೆಂಡ್ ಕೊಡಬೇಕಾಗಿರುವ ಸಾಲ’, ‘ಶಿವಾಜಿ’, ‘ಶ್ರೀಕೃಷ್ಣ’, ‘ಮ್ಯಾಜಿನಿ’, ‘ಗ್ಯಾರಿಬಾಲ್ಡಿ’, ‘ಭಾರತದ ರಾಜಕೀಯ ಭವಿಷ್ಯ’ ಸೆರಿದಂತೆ 30ಕ್ಕೂ ಹೆಚ್ಚಿನ ಪ್ರೇರಣಾದಾಯಕವಾದ ಪುಸ್ತಕಗಳನ್ನು ಬರೆದ ಲಾಲಾಜಿ 1920ರ ಜನವರಿ 5ರಂದು ‘ಅಖಿಲ ಭಾರತ ಕಾರ್ವಿುಕರ ಒಕ್ಕೂಟ’ವನ್ನು ಪ್ರಾರಂಭಿಸಿದರು. ಅದೇ ವರ್ಷ ಕೋಲ್ಕತ್ತದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸಿನ ವಿಶೇಷ ಅಧಿವೇಶನದ ಅಧ್ಯಕ್ಷರಾದರು ಮತ್ತು ಹಿಂದೂ ಮಹಾಸಭಾದ ಅಧ್ಯಕ್ಷರೂ ಆದರು. ಹಿಂದೂ ಮುಸ್ಲಿಂ ಐಕ್ಯತೆಗೆ ಶ್ರಮಿಸಿದರು.

ಕೇಂದ್ರ ಶಾಸನ ಸಭೆಯ ಸದಸ್ಯರಾಗಿದ್ದ ಲಾಲಾಜೀ ಅಮೋಘ, ಅವಿಸ್ಮರಣೀಯ ಸೇವೆ ಸಲ್ಲಿಸಿದರು. ಭಾರತೀಯ ಸದಸ್ಯರೊಂದಿಗೆ ನೈಜವಾಗಿ ಪಕ್ಷಭೇದ ರಹಿತವಾಗಿ ಒಟ್ಟಾಗಿ ಭಾರತದ ಪರವಾಗಿ ಹೊಸ ಕಾಯ್ದೆಗಳನ್ನು ರೂಪಿಸುವಲ್ಲಿ ಯಶಸ್ವಿಯಾದರು ಮತ್ತು ಭಾರತದ ವಾಣಿಜ್ಯ, ಕೈಗಾರಿಕೆ, ಕೃಷಿಯ ಹಿತರಕ್ಷಣೆಗಾಗಿ ಅವಿಶ್ರಾಂತವಾಗಿ ತಮ್ಮ ಪ್ರಖರ ನಿಷ್ಠೆಯನ್ನು ನಿರೂಪಿಸಿದರು. ತಮ್ಮೆಲ್ಲ ಆಸ್ತಿಯನ್ನು ಭಾರತ ದೇಶದ ಅಭಿವೃದ್ಧಿಗಾಗಿ ದಾನ ನೀಡಿದರು.

ಭಾರತದ ಬ್ರಿಟಿಷ್ ಆಡಳಿತದಲ್ಲಿ ಸುಧಾರಣೆಗಳನ್ನು ಸೂಚಿಸಲು ಬಂದಿದ್ದ ಸೈಮನ್ ಆಯೋಗವನ್ನು ಎಲ್ಲ ರಾಜಕೀಯ ಪಕ್ಷಗಳು ಒಟ್ಟಾಗಿ ಬಹಿಷ್ಕಾರ ಮಾಡಲು ಸರ್ವಾನುಮತ -ಒಟ್ಟಾಭಿಪ್ರಾಯವನ್ನು ರೂಪಿಸಿದರು. ಸೈಮನ್ ಆಯೋಗ ಬಹಿಷ್ಕಾರ ನಿರ್ಣಯಕ್ಕೆ ಕೇಂದ್ರ ಶಾಸನ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಸೈಮನ್ ಆಯೋಗದ ವಿರುದ್ಧ ಲಾಹೋರ್​ನಲ್ಲಿ ನಡೆದ ಭಾರಿ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿ ಪೊಲೀಸ್ ಲಾಠಿ ಏಟಿನಿಂದ ಜರ್ಜರಿತರಾಗಿ 1928ರ ನವೆಂಬರ್ 17ರಂದು ಹುತಾತ್ಮರಾದರು.

ನವ ಭಾರತ ನಿರ್ವಣದ ನವ್ಯ ಹರಿಕಾರರಲ್ಲಿ ಪ್ರಮುಖರಾದ ಲಾಲಾ ಲಜಪತ್ ರಾಯರ ನೆನಪಿನಲ್ಲಿ ನವದೆಹಲಿಯಲ್ಲಿ ಲಾಲಾ ಲಜಪತ್ ರಾಯ್ ಮೆಮೋರಿಯಲ್ ಪಾರ್ಕ್ ನಿರ್ವಿುಸಲಾಗಿದೆ. 2022ರಲ್ಲಿ ಗಣರಾಜ್ಯೋತ್ಸವದ ಕಾರ್ಯಕ್ರಮಗಳು ನೇತಾಜಿ ಸುಭಾಷಚಂದ್ರ ಬೋಸರ ಜನ್ಮದಿನದಿಂದ ಅಂದರೆ ಜನವರಿ 23ರಿಂದ ಪ್ರಾರಂಭವಾಗಿ ಜನವರಿ 28ರವರೆಗೆ ನಡೆದಿದ್ದವು. ಜನವರಿ 28ಕ್ಕೆ ಲಾಲಾ ಲಜಪತ್ ರಾಯರ ಜನ್ಮದಿನಾಚರಣೆಯ ಜೊತೆ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಸಮಾರೋಪಗೊಳಿಸಲು ಕೇಂದ್ರ ಸರ್ಕಾರ ಮುಂದಾಗಲಿ. ಮರೆತ ಮಹಾನ್ ದಾರ್ಶನಿಕ, ಅಪ್ರತಿಮ ದೇಶಭಕ್ತ, ಸಮಾಜ ಸುಧಾರಕ, ಶಿಕ್ಷಣ ತಜ್ಞ, ಶ್ರೇಷ್ಠ ಮಾನವತಾವಾದಿ ಲಾಲಾ ಲಜಪತ್ ರಾಯರವರಿಗೆ ಗೌರವ ಸಲ್ಲಿಸುವ ಈ ಅವಕಾಶವನ್ನು ಭಾರತ ಸರ್ಕಾರ ಸದುಪಯೋಗ ಪಡಿಸಿಕೊಳ್ಳಬೇಕು.

(ಲೇಖಕರು ರಾಷ್ಟ್ರಗೌರವ ಸಂರಕ್ಷಣ ಪರಿಷತ್ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net