ಟಗರು ಸಾಕಣೆಯಿಂದ ಲಕ್ಷ ಲಕ್ಷ ಆದಾಯ!; ಖಾಸಗಿ ಕಂಪನಿ ಕೆಲಸ ತೊರೆದ ಯುವ ಇಂಜಿನಿಯರ್

Tagaru
Published on

ಓದಿದ್ದು ಇಂಜಿನಿಯರಿಂಗ್, ಕೈತುಂಬ ಸಂಬಳದ ಉದ್ಯೋಗ. ಆದರೆ ಆತ ಮಾಡಿದ ವಿದೇಶ ಪ್ರವಾಸ ಹೊಸ ಚಿಂತನೆಗೆ ಮುನ್ನುಡಿಯಾಯಿತು. ಖಾಸಗಿ ಉದ್ಯೋಗಕ್ಕೆ ತಿಲಾಂಜಲಿಯಿತ್ತು ಊರಿಗೆ ಬಂದು ಟಗರು ಸಾಕಣೆಗೆ ಮುಂದಾದರು. ಆರಂಭದಲ್ಲಿ ಹಾನಿಯಾದರೂ ಛಲ ಬಿಡದೆ ಮುನ್ನುಗ್ಗಿದ ಪರಿಣಾಮ ಇಂದು ಟಗರು ಉದ್ಯಮ ಕೈ ಹಿಡಿದಿದೆ. ಅದರಿಂದಲೇ ಲಕ್ಷ ಲಕ್ಷ ಆದಾಯ ಪಡೆಯುತ್ತಿದ್ದಾರೆ. ಅವರ ಸಾಧನೆಯ ಯಶೋಗಾಥೆ ಇಲ್ಲಿದೆ.

| ಅಶೋಕ ಶೆಟ್ಟರ ಬಾಗಲಕೋಟೆ

ಬಾಗಲಕೋಟೆ ಜಿಲ್ಲೆ ಇಳಕಲ್ಲ ತಾಲೂಕಿನ ಚಿಕ್ಕಕಮಲದಿನ್ನಿ ಗ್ರಾಮದ ಇಂಜಿನಿಯರಿಂಗ್ ಪದವೀಧರ 36 ವರ್ಷದ ರಾಜುಗೌಡ ಹನಮಗೌಡ ತಮ್ಮ ಐಟಿ ಉದ್ಯಮ ಬಿಟ್ಟು ಟಗರು ಸಾಕಣೆ ಮಾಡಿ ಯಶಸ್ವಿ ಕೃಷಿಕನಾಗಿ ಯುವಕರಿಗೆ ಮಾದರಿಯಾಗಿದ್ದಾರೆ. ತಮ್ಮ ಜಮೀನಿನಲ್ಲಿ ಅಂದಾಜು ಏಳು ಲಕ್ಷ ರೂ. ಖರ್ಚು ಮಾಡಿ ಶೆಡ್ಡನ್ನು ಹಾಕಿ, ಒಂದು ಸಲಕ್ಕೆ 40 ಟಗರುಗಳನ್ನು ಸಾಕಣೆ ಮಾಡಿ ಅವುಗಳನ್ನು ಮಾರುವ ಮೂಲಕ ಒಂದು ಸಲಕ್ಕೆ 4ರಿಂದ 5 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ. ಈ ಆದಾಯವು ಟಗರುಗಳ ಬೆಳವಣಿಗೆ, ಮಾರುವ ವೇಳೆ ಮಾರುಕಟ್ಟೆಯಲ್ಲಿರುವ ದರವನ್ನು ಆಧರಿಸಿರುತ್ತದೆ. ಐದಾರು ತಿಂಗಳು ವಯಸ್ಸಿನ ಟಗರಿನ ಮರಿಯನ್ನು ತಂದು ಮುಂದೆ ಏಳೆಂಟು ತಿಂಗಳು ಅವುಗಳನ್ನು ಸಾಕಿದ ಬಳಿಕ ಮಾರಾಟ ಮಾಡುತ್ತಾರೆ. ಹೀಗೆ ಕಳೆದ ಮೂರು ವರ್ಷಗಳಿಂದ ಟಗರಿನ ಉದ್ಯಮದಲ್ಲಿ ಲಾಭ ಪಡೆಯುವ ಮೂಲಕ ‘ಖಾಸಗಿ ಕಂಪನಿ ಕೆಲಸ ಬಿಟ್ಟಿದ್ದು ವ್ಯರ್ಥವಾಗಲಿಲ್ಲ’ ಎಂದು ಗ್ರಾಮಸ್ಥರಿಗೆ ತೋರಿಸಿಕೊಟ್ಟಿದ್ದಾರೆ.

ನಿರಂತರ ಹಾನಿಗೆ ಕುಗ್ಗಲಿಲ್ಲ

ಬೆಂಗಳೂರಿನಲ್ಲಿ ಇದ್ದ ಐಟಿ ಉದ್ಯೋಗ ಬಿಟ್ಟು 2017ರಲ್ಲಿ ಊರಿಗೆ ಬಂದ ರಾಜುಗೌಡ ಅವರು ತಮ್ಮ ಜಮೀನಿನಲ್ಲಿ 8030 ಅಳತೆಯಲ್ಲಿ ಅಚ್ಚುಕಟ್ಟಾದ ಶೆಡ್ ನಿರ್ವಿುಸಿ, ಕುರಿಮರಿ ಸಾಕಣೆ ಆರಂಭಿಸಿದರು. ಚಿಕ್ಕ ಚಿಕ್ಕ ಮರಿ ತಂದಿದ್ದರಿಂದ ಅದು ನಷ್ಟ ತಂದಿತು. ಮರು ವರ್ಷ ಆಡು ಸಾಕಾಣಿಕೆಗೆ ಮುಂದಾದರಾದರೂ ಅದರಲ್ಲಿ ನಿರ್ವಹಣೆ ವೆಚ್ಚವೇ ಅಧಿಕವಾಗಿ ಲಾಭ ಆಗಲಿಲ್ಲ. ಆದರೂ ಎದೆಗುಂದದೇ ಟಗರು ಸಾಕಣೆಗೆ ಯೋಜನೆ ರೂಪಿಸಿ ಸ್ಥಳೀಯ ಎಳಗ ತಳಿಯ ಟಗರು ಸಾಕಣೆ ಆರಂಭಿಸಿದರು. ಬಕ್ರೀದ್ ಹಬ್ಬವನ್ನು ಗಮನದಲ್ಲಿಟ್ಟುಕೊಂಡು ಸಾಕಣೆ ನಡೆಸಿದ್ದು ಅವರ ಕೈಹಿಡಿಯಿತು. ಇದರಲ್ಲಿ ಮೂರು ವರ್ಷಗಳಿಂದ ಲಾಭ ಪಡೆಯುತ್ತಿದ್ದಾರೆ.

ಲಾಭವಾಗಿದ್ದು ಹೇಗೆ?

ಸಾಕಣೆ ಮಾಡಿರುವ ಟಗರುಗಳ ಜತೆ ಇಂಜಿನಿಯರ್ ರಾಜುಗೌಡ

ಐದಾರು ತಿಂಗಳ ಟಗರು ಮರಿಯನ್ನು 7ರಿಂದ 9 ಸಾವಿರ ರೂ.ಗೆ ಖರೀದಿ ಮಾಡಿ ಅವುಗಳಿಗೆ ಶೇಂಗಾ ಹೊಟ್ಟು, ಮೆಕ್ಕೆ ಜೋಳ, ಬಿಳಿ ಜೋಳ ಗಣಕಿ ಪುಡಿ, ನೀರಿನಲ್ಲಿ ಜೋಳದ ಹಿಟ್ಟು, ಹಿಟ್ಟಿನಲ್ಲಿ ಉಪ್ಪು ಮಿಶ್ರಣ ಮಾಡಿಕೊಡುತ್ತಾರೆ. ಇದರಿಂದ ಟಗರುಗಳು ಉತ್ತಮ ಬೆಳವಣಿಗೆಯಾಗುತ್ತವೆ. ಹೀಗೆ ಏಳೆಂಟು ತಿಂಗಳು ಬೆಳೆಸಿದ ಮೇಲೆ ಟಗರುಗಳನ್ನು ಮಾರಾಟ ಮಾಡುತ್ತಾರೆ. ಈ ವರ್ಷ ಟಗರುಗಳನ್ನು ಬೆಂಗಳೂರಿಗೆ ಕಳಿಸಿ ಒಂದು ಟಗರಿಗೆ 24,200 ರೂ.ನಂತೆ ಮಾರಾಟ ಮಾಡಿದ್ದಾರೆ. ಹೀಗಾಗಿ ಎಲ್ಲ ಖರ್ಚು- ವೆಚ್ಚ ತೆಗೆದು ಒಂದು ಟಗರಿಗೆ ಸರಾಸರಿ 9ರಿಂದ 10 ಸಾವಿರ ರೂ. ಆದಾಯ ಬಂದಿದೆ. ಇದರ ಜತೆಗೆ ಒಂದು ಸಲದ ಟಗರು ಸಾಕಣೆಯಿಂದ ಅಂದಾಜು 10ರಿಂದ 12 ಟ್ರ್ಯಾಕ್ಟರ್ ಗೊಬ್ಬರ ಸಿಗುತ್ತದೆ. ತಮ್ಮದೇ 40 ಎಕರೆ ಜಮೀನು ಇರುವುದರಿಂದ ಆ ಗೊಬ್ಬರವನ್ನು ಜಮೀನಿಗೆ ಬಳಕೆ ಮಾಡುತ್ತಾರೆ. ಹೊರಗಡೆ ಅದನ್ನು ಮಾರಾಟ ಮಾಡಿದರೆ ಅದಕ್ಕೂ ಅಂದಾಜು 50 ಸಾವಿರ ರೂ. ಸಿಗುತ್ತದೆ. ‘‘ನನಗೆ ಈ ಟಗರು ಸಾಕಣೆಯಿಂದ ಒಳ್ಳೆಯ ಆದಾಯ ಬರುತ್ತಿದೆ. ಮುಂಬರುವ ದಿನಗಳಲ್ಲಿ ಟಗರುಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವ ಗುರಿ ಹೊಂದಿದ್ದೇನೆ’’ ಎನ್ನುತ್ತಾರೆ ರಾಜುಗೌಡ.

ನಮ್ಮದು ಕೃಷಿ ಕುಟುಂಬ ವಾಗಿದ್ದರೂ ನನಗೆ ಈ ಟಗರು ಸಾಕಾಣಿಕೆ ಹೊಸದು. ನಾನು ಉದ್ಯೋಗ ಮಾಡುತ್ತಿದ್ದ ಕಂಪನಿಯಿಂದ ವಿದೇಶಕ್ಕೆ ಪ್ರವಾಸ ಹೋಗಿದ್ದೆ. ಅಲ್ಲಿ ಕುರಿ ಸಾಕಣೆ ಕಂಡು ನಾನೂ ಇದನ್ನು ಮಾಡಬೇಕು ಎಂದು ನಿರ್ಧರಿಸಿ, ಊರಿಗೆ ಬಂದೆ. ಆರಂಭದಲ್ಲಿ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತಾದರೂ ಬಳಿಕ ಒಪ್ಪಿದರು. ಈಗ ಇದರಲ್ಲಿ ನನಗೆ ಖುಷಿ ಇದೆ.| ರಾಜುಗೌಡ ಹನಮಗೌಡ ಟಗರು ಸಾಕಣೆ ಮಾಡುತ್ತಿರುವ ಇಂಜಿನಿಯರ್ರಾಜುಗೌಡರು ಬೆಂಗಳೂರು ಬಿಟ್ಟು ಊರಿಗೆ ಬಂದರು. ನಮ್ಮಲ್ಲಿಗೆ ಬಂದು ಈ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಆರಂಭದಲ್ಲಿ ಲಾಸ್ ಆದರೂ ಛಲಬಿಡದೇ ಮುಂದುವರಿದು, ಇದೀಗ ಯಶಸ್ವಿ ಆಗಿದ್ದಾರೆ. ಇವರ ಟಗರು ಸಾಕಾಣಿಕೆ ಹಲವರಿಗೆ ಮಾದರಿಯಾಗಿದೆ.| ಯಲ್ಲಪ್ಪ ಕುರಿ ಚಿಂತಕಮಲದಿನ್ನಿ ಟಗರು ಸಾಕಣೆದಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net