ಕೃಷಿ ಚಾವಡಿ| ದೇಸೀ ಹಸುಗಳ ಸಂರಕ್ಷಣೆ ಕುರಿತ ಕಾಳಜಿ...

desi cow
Published on
ದೇಸೀ ಹಸು ಸಿಕ್ಕುವುದು ಸ್ವಲ್ಪ ಶ್ರಮದಾಯಕ. ಕೆಲವು ಪ್ರಮುಖ ವ್ಯಕ್ತಿಗಳ ಪ್ರಯತ್ನ ಇಲ್ಲದಿದ್ದರೆ ಇಂದು ನೋಡಲೂ ಸಹಾ ನಾಟೀ ಹಸುಗಳು ಸಿಗುತ್ತಿರಲಿಲ್ಲ. ಗೋವು ಎಂದರೆ ಅಂಗಡಿಗೆ ಹೋಗಿ ದುಡ್ಡು ಕೊಟ್ಟು ಸಾಮಾನು ತಂದಂತೆ ಅಲ್ಲ. ಅದರದೇ ಆದ ರೀತಿ ರಿವಾಜುಗಳು ಇವೆ. ರೈತರು ಖುಷಿಗಾಗಿ, ಮರ್ಯಾದೆಗಾಗಿ, ದೇವರೆನ್ನುವ ಭಾವದಿಂದ ಕೆಲವೊಮ್ಮೆ ಶೋಕಿಗಾಗಿ ಸಹಾ ಸಾಕುತ್ತಿದ್ದಾರೆ. ಕಳೆದು ಹಾಕಿದ್ದೀವಿ, ನಾಶ ಮಾಡಿದ್ದೀವಿ, ಮತ್ತೆ ಅಭಿವೃದ್ದಿ ಮಾಡೋಣ. ಅದಕ್ಕಾಗಿ ಸಹನೆ, ತಾಳ್ಮೆ ಹಾಗೂ ಸಂಯಮ ಇರಬೇಕು ಅಷ್ಟೆ. ಎಮ್ ಓದಿದ ಮೆಡಿಕಲ್ ಕಾಲೇಜ್ ಪ್ರೊಫೆಸರ್ ಒಬ್ರು ಸ್ವತಃ ಕೃಷಿಕರು, ಸ್ಥಳೀಯರು ಅವರಿಗೂ ಮಗುವಿನ ಹಾಲಿಗೆ ಹಸು ಬೇಕಾಗಿದೆ, ಸಿಕ್ತಾ ಇಲ್ಲ.

| ಕೆ ಜಿ ಅನಂತರಾವ್ ಕೆರೆಗೋಡು, ಮಂಡ್ಯ, ಹಳ್ಳೀಕಾರ್, ಮಲ್ನಾಡ್ ಗಿಡ್ಡ, ಮಹದೇಶ್ವರ ಬೆಟ್ಟ, ಅಮೃತ್ ಮಹಲ್ ಮುಂತಾದ ದೇಸೀ ಗೋವು ಸಂರಕ್ಷಕ.

ನಿಮ್ಮ ಪತ್ರದಲ್ಲಿ ದೇಸಿ ಹಸುಗಳ ಬಗ್ಗೆ ಕಳಕಳಿ ಇದೆ. ಕೃಷಿಚಾವಡಿ ಇರುವುದೇ ಚರ್ಚೆಗಾಗಿ. ನೀವಂದಂತೆ ಎಲ್ಲಾ ವಾದಗಳನ್ನು ವಿವಿಧ ಕೋನಗಳಿಂದ ನೋಡಬೇಕೆನ್ನುವುದು ಸರಿಯಾದ ನಡೆ. ನನಗೂ ಅನೇಕ ಪ್ರಶ್ನೆಗಳು ಕಾಡುತ್ತವೆ. ಮಂಡ್ಯದ ನೀರಾವರಿ ಅಂದರೆ ಚಾನೆಲ್ ನೀರನ್ನು ಬಳಸುವ ರೈತರು ಒಮ್ಮೆಯೂ ಚಾನೆಲ್ ಇಲ್ಲದ, ತಮ್ಮದೇ ತಾಲ್ಲೂಕಿನ ಬಡತನದಲ್ಲೇ ಇರುವ ರೈತರ ಬದುಕನ್ನು ಯಾಕೆ ನೂರು ವರ್ಷಗಳಾದರೂ ಅವಲೋಕಿಸಿಲ್ಲ? ಇದು ಮಂಡ್ಯಕ್ಕಷ್ಟೇ ಸೀಮಿತವಲ್ಲ. ನಾವು ಪ್ರತಿಯೊಂದರಲ್ಲೂ ಪೊ›ಫೆಶನಲ್ ಆಗಿದ್ದೇವೆ. ಕಮಶಿಯಲ್ ಆಗಿದ್ದೇವೆ.

ದೇಸೀ ತಳಿಗಳನ್ನು ಉಳಿಸಬೇಕು ಎನ್ನುವುದು ನಿಜವೇ ಆದರೂ ಹಾಲು ಕೊಡುವ ಹಸುಗಳ ಬೆಲೆ ಬಡವರ ಕೈಗೆ ಎಟುಕುತ್ತದೆಯೇ? ಹಾಲನ್ನು ಬಡವರು ಕೊಳ್ಳಲು ಸಾಧ್ಯವೇ? ಶ್ರೀಮಂತರಿಗೋಸ್ಕರವೇ ಅವೆಲ್ಲಾ ಇದೆ ಎಂದಾದರೆ ದೇಶದಲ್ಲಿರುವ ಹೆಚ್ಚಿನ ಬಡವರು ಏನು ಮಾಡಬೇಕು? ದೇಸೀ ಹಸುಗಳು, ಹಾಲು, ತುಪ್ಪ ಎಲ್ಲವೂ ಇಂದು ಮಾರಾಟದ ವಸ್ತುಗಳೇ ಅಲ್ಲವೇ? ವಿನಿಮಯ ಪದ್ದತಿ ಎಲ್ಲಾದರೂ ಉಂಟೇ? ಓರ್ವ ಸಾವಯವ ಬದುಕನ್ನೇ ನಡೆಸುತ್ತಿದ್ದೇನೆ, ಯಾರಾದರೂ ನನ್ನ ಗಿರ್ ಕರುಗಳನ್ನು ಸಾಕುವವರಿದ್ದರೆ ಉಚಿತವಾಗಿ ಕೊಡುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದ ಕೃಷಿಕರೊಬ್ಬರ ಮನೆಗೆ ಹಸು ಸಾಕುತ್ತೇನೆಂದು ಬಯಸಿದ ಬಡ ಕುಟುಂಬದ ಹುಡುಗನೊಬ್ಬನನ್ನು ಕಳಿಸಿದೆ. ಆತ ತನ್ನ ಬಳಿ ಇರುವ ಹಸುಗಳು, ಹುಲ್ಲು ಬೆಳೆಯುವ ಪ್ರದೇಶ, ಕಾಡು ಮುಂತಾದ ಎಲ್ಲಾ ವಿವರಗಳನ್ನು ಕೊಟ್ಟ ಮೇಲೂ ಕರುವಿನ ಸಂಗತಿ ಬಂದಾಗ 40 ಸಾವಿರಕ್ಕೆ ಹೋಗುವ ಕರುಗಳು ಇವು, ನಿಮಗೋಸ್ಕರ 20 ಸಾವಿರಕ್ಕೆ ಕೊಡುತ್ತೇನೆ ಎಂದರು. ಹೋಗಲಿ ಯಾರಿಗಾದರೂ ಆಸಕ್ತರಿಗೆ ಕೊಡುವುದಿರಲಿ, ಎರಡು ಮೂರು ಕರು ಇದೆ ಎಂದು ಮಗಳ ಮನೆಗೆ ಒಂದು ಹಸುವನ್ನು ಕಳಿಸುವ ರೂಢಿಯಾದರೂ ಇದೆಯಾ? ಅಥವಾ ಮಗಳು ಅದನ್ನು ಸಾಕಿ, ಸಲಹುವಂತೆ ನಾವು ಅವಳನ್ನು ಬೆಳೆಸುತ್ತಿದ್ದೇವಾ? ಅವಳಿಗೆ ಈ ಜಂಜಾಟಗಳೆಲ್ಲಾ ಬೇಡವೆಂದು ಕಾಸ್ಮೋಪಾಲಿಟನ್ ಸಿಟಿಗೆ ಕಳಿಸುತ್ತಿದ್ದೇವಾ?

ದಾವಣಗೆರೆಯ ಮಲ್ಲನಾಯಕನ ಹಳ್ಳಿಯ ರಾಘವರವರು ಸಹಜ ಕೃಷಿಯನ್ನು ಅರ್ಥಾತ್ ಸಹಜ ಬದುಕನ್ನು ಅಳವಡಿಸಿಕೊಂಡವರು. ಅವರು ಇಂದು ಹಾಲು, ಹಾಲಿನ ಉತ್ಪನ್ನಗಳನ್ನೇ ಬಿಟ್ಟಿದ್ದಾರೆ. ಅವರ ಪತ್ನಿ ಅದು ನಮ್ಮ ಆಹಾರವಲ್ಲ ಎನ್ನುತ್ತಾರೆ. ಸಹಜಕೃಷಿಯಲ್ಲಿ ನಮಗೆ ಗೊಬ್ಬರವೇ ಬೇಕಿಲ್ಲ ಎನ್ನುತ್ತಾರೆ. ಹೀಗೆ ಪ್ರತಿಪಾದನೆ ಮಾಡುವ ದೊಡ್ಡ ಗುಂಪೇ ಇದೆ. ಅವರ ಪ್ರಕಾರ ಪ್ರಕೃತಿಯ ಒಪ್ಪಿಗೆ ಇಲ್ಲದೇ ನಾವು ಯಾವುದನ್ನೇ ಆದರೂ ನಾಶ ಮಾಡಲು ಸಾಧ್ಯವಿಲ್ಲ. ಅಥವಾ ಬೆಳೆಸುತ್ತಿದ್ದೇವೆ ಎನ್ನುವುದೂ ಸಹ ಭ್ರಮೆ. ಪ್ರತಿಯೊಬ್ಬರದೂ ತಮ್ಮ ಉಳಿವಿಗಾಗಿ ನಡೆಸುತ್ತಿರುವ ಹೋರಾಟ ಮಾತ್ರ. ಯಾವುದೇ ವ್ಯಕ್ತಿಯ ನಡವಳಿಕೆಗೆ ಕಾರಣ ಆ ವ್ಯಕ್ತಿಯ ಕುಟುಂಬ, ಆ ವ್ಯಕ್ತಿಯು ಬದುಕುತ್ತಿರುವ ಸಮಾಜ, ಆ ವ್ಯಕ್ತಿಯು ವಾಸ ಮಾಡುತ್ತಿರುವ ಊರು, ಆ ವ್ಯಕ್ತಿಯ ವ್ಯಾಪ್ತಿಯಲ್ಲಿರುವ ಗ್ರಾಮ, ಆ ವ್ಯಕ್ತಿಯ ರಾಜ್ಯ ಮತ್ತು ದೇಶಗಳು ಹಾಗೂ ದೇಶಕಾಲಗಳೂ ಆಗಿರುತ್ತವೆ. ಇದನ್ನೇ ಪರಿಸರ ಎಂದೂ ಅತ್ಯಂತ ಪ್ರಖ್ಯಾತ ಸಮಾಜೋ-ಮಾನವಿಕ ಶಾಸ್ತ್ರಜ್ಞರಾಗಿದ್ದ ಡಾ| ಎಮ್ ಎನ್ ಶ್ರೀನಿವಾಸ್ ಹೇಳುತ್ತಾರೆ.

ನಮ್ಮವರು ಅಮೇರಿಕಾಕ್ಕೆ ಹೋದರೂ ಅಲ್ಲಿಯವರಂತಾಗದೇ, ನಮ್ಮ ಸಂಪ್ರದಾಯಗಳನ್ನು ಬಿಡದೇ ಒಂತರಾ ಅತಂತ್ರರಂತೆ ಬದುಕಲೂ ಸಹ ಇದೇ ಡೆಫಿನೇಶನ್ ಕಾರಣ. ಇಂತಹ ಜನ ನಮ್ಮ ದೇಶದಲ್ಲೂ, ರಾಜ್ಯದಲ್ಲೂ ಇದ್ದಾರೆ. ನೀವು ಹೇಳಿದ ಪ್ರಮುಖರು ಇಂತಹವರಿಗೆಲ್ಲಾ ತರಬೇತಿ ಕೊಟ್ಟು ಪಶುಪಾಲನೆಗೆ ಹಚ್ಚಿದರೆ ದೇಶದ ಆರ್ಥಿಕತೆ ಸುಸ್ಥಿರವಾಗುವುದರಲ್ಲಿ ಸಂಶಯವಿಲ್ಲ. ಏನೇ ಇರಲಿ ನೀವು ಬದುಕುತ್ತಿರುವ ವಿಷಮುಕ್ತ ಜೀವನವನ್ನು ನಿಮ್ಮೂರಲ್ಲಿ ಹತ್ತು ಜನಕ್ಕೆ ಹಬ್ಬಿಸಿ. ನಿಮ್ಮಲ್ಲಿ ಬೆಳೆದ ವಸ್ತುಗಳನ್ನು ಹಣಕ್ಕೆ ವಿನಿಮಯ ಮಾಡಿಕೊಳ್ಳದೇ ವಸ್ತುಗಳೊಂದಿಗೆ ಮಾಡಿಕೊಳ್ಳಿ. ನಿಮಗಿರುವ ಕೌಶಲ್ಯಗಳನ್ನು (ಉದಾಹರಣೆಗೆ ಮಲೆನಾಡು ಗಿಡ್ಡದ ಹಾಲು ಹಿಂಡುವ ಕೌಶಲ್ಯ) ಹಂಚಿ ದ್ವಿಗುಣವಾಗಿಸಿ. ಆಗ ನೀವೇ ಹೇಳಿದ ಪ್ರಖ್ಯಾತರ ಉದ್ದೇಶ ಸಾರ್ಥಕವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net