ಕೃಷ್ಣನೇ ನಾರಾಯಣ

Krishna is Narayana
Krishna is Narayana
Published on
ಶ್ರೀಕೃಷ್ಣ ಪರಮಾತ್ಮ ಶೃಗಾಲವಾಸುದೇವನನ್ನು ಸಂಹರಿಸಿ ಬರುತ್ತಿರುವಾಗ ಭೀಷ್ಮಕ ರಾಜ ರುಕ್ಮಿಣಿಯ ಸ್ವಯಂವರವನ್ನು ಮಾಡುತ್ತಿರುವ ವಾರ್ತೆ ಬಂದಿದೆ. ಆ ವಾರ್ತೆಯನ್ನು ಕೇಳಿ ಸಾಲ್ವ, ಶಿಶುಪಾಲ, ಪೌಂಡ್ರಕವಾಸುದೇವ, ಜರಾಸಂಧ ಎಲ್ಲರೂ ಕುಂಡಿನಪುರಕ್ಕೆ ಹೊರಟಿದ್ದಾರೆ.
ಆ ಸಂದರ್ಭದಲ್ಲಿ ಶ್ರೀಕೃಷ್ಣ ಗರುಡನನ್ನು ಸ್ಮರಿಸಿದ್ದಾನೆ. ಹಿಂದೆ ಇದೇ ಗೋಮಂತ ಪರ್ವತದಲ್ಲಿ ಶ್ರೀಕೃಷ್ಣ ಬಲರಾಮನ ಜೊತೆಗೆ ವಿಹಾರ ಮಾಡುತ್ತಿರುವಾಗ ಒಮ್ಮಿಂದೊಮ್ಮೆಲೆ ಗರುಡ ಬಂದು ಕೃಷ್ಣನ ತಲೆಯ ಮೇಲೆ ವಜ್ರ ಹಾಗೂ ರತ್ನ ಖಚಿತವಾದ ದೊಡ್ಡದಾದ ಕಿರೀಟವನ್ನು ಇಡುತ್ತಾನೆ. ಎಲ್ಲಿಂದ ಬಂದ ಏಕೆ ಬಂದ ಏಕೆ ಈ ಕಿರೀಟ ಇಟ್ಟದ್ದು ಏಕೆ ಎನ್ನುವುದಕ್ಕೆ ಹಿಂದೆ ನಡೆದ ಕಥೆಯನ್ನು ಭಾಗವತ ನೆನಪಿಸುತ್ತದೆ. ವೈಕುಂಠದಲ್ಲಿ ಎರಡು ಸ್ಥಾನಗಳು. ಒಂದು ಮುಕ್ತ ಸ್ಥಾನ ಇನ್ನೊಂದು ಅಮುಕ್ತ ಸ್ಥಾನ. ಮುಕ್ತ ಸ್ಥಾನದೊಳಗೆ ಯಾರಿಗೂ ಪ್ರವೇಶ ಇಲ್ಲ. ಮೋಕ್ಷವನ್ನು ಹೊಂದದೇ ಇರುವವರು, ಮುಂದೆ ಮುಕ್ತರಾಗುವವರು ಇರುವ ಸ್ಥಾನವೇ ಅಮುಕ್ತಸ್ಥಾನ.
ಅಲ್ಲಿಗೆ ಒಮ್ಮೆ ಬಲಿರಾಜ ಬಂದಿದ್ದ. ಅಸುರಾವೇಶದಿಂದ ಬಲಿಗೆ ಒಂದು ಕೆಟ್ಟ ವಿಚಾರ ಬಂತು. ದೇವರು ಹಾಗು ದೇವತೆಗಳು ನಿದ್ರೆ ಮಾಡಿದಂತೆ ನಟನೆ ಮಾಡುತ್ತಿರುವ ಸಂದರ್ಭದಲ್ಲಿ ದೇವರ ತಲೆಯ ಮೇಲಿರುವ ರತ್ನ ವಜ್ರಖಚಿತವಾದ ಕಿರೀಟವನ್ನು ಕದ್ದುಕೊಂಡು ಹೊರಟ. ದೇವರು ಗೊತ್ತಿ್ತ್ಲಂತೆ ನಟಿಸಿದ. ಗರುಡ ಮಾತ್ರ ಬಲಿಯನ್ನು ಬಿಡಲಿಲ್ಲ.
ಬೆನ್ನು ಹತ್ತಿದ. ಅವನ ಜೊತೆಗೆ ಯುದ್ಧವಾಡಿ ಸೋಲಿಸಿ ಕಿರೀಟವನ್ನು ತಿರುಗಿ ದೇವರ ತಲೆಯ ಮೇಲೆ ಇಡಬೇಕು ಎಂದು ಬರುತ್ತಿದ್ದ. ನಡುವೆ ಶ್ರೀಕೃಷ್ಣ ಗರುಡನನ್ನು ಸ್ಮರಿಸಿದ. ಗೋಮಂತ ಪರ್ವತದಲ್ಲಿ ಕೃಷ್ಣನ ಭೇಟಿಯಾಯಿತು. ಇಲ್ಲಿಯೇ ಕೃಷ್ಣನ ತಲೆಯ ಮೇಲೆ ಕಿರೀಟವನ್ನು ಇಟ್ಟು ಬಿಟ್ಟ. ಇಲ್ಲಿ ಕಿರೀಟ ಇಟ್ಟದ್ದಕ್ಕೆ ಮೂಲರೂಪದಲ್ಲಿ ಕಿರೀಟ ಇಲ್ಲದೇ ಹೋಯಿತು ಎಂದಲ್ಲ, ಏಕಕಾಲಕ್ಕೆ ಎರಡೂ ರೂಪಗಳ ತಲೆಯ ಮೇಲೆ ಕಿರೀಟ ಸರಿಯಾಗಿ ಕುಳಿತಿದೆ ಎಂದು ಮಧ್ವಾಚಾರ್ಯರು ವರ್ಣಿಸುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net