

| ಸುನಂದಾ ರಾಯನಗೌಡ್ರ ಸವದತ್ತಿ, ಬೆಳಗಾವಿ ಜಿಲ್ಲೆ
ನಿಗದಿತ ಬೆಲೆ. ಉತ್ಕೃಷ್ಟ ಮಾಲು. ಹೀಗೆ ನೀವು ಸಹ ನಿರಂತರವಾಗಿ ಪೂರೈಸುವುದು ಅಥವಾ ನಿಮ್ಮಲ್ಲಿ ಇರುವಾಗ ನಿರಂತರವಾಗಿ ಬಯಸುವ ಗ್ರಾಹಕರಿಗೆ ತಲುಪಿಸುವುದು. ಇದನ್ನು ಮಾಡಿದರೆ ಮೊಟ್ಟೆಗಳಿಗೆ ನೀವು ಬಯಸುವ ಬೆಲೆ ಸಿಗುತ್ತದೆ. ಅದೇ ನೀವು ಸಂತೆಯಲ್ಲಿ ಮಾರಲು ಹೊರಟರೆ, ಸಂತೆಗೆ ಕಣ್ಣಿಲ್ಲ, ಹೃದಯವಿಲ್ಲ. ವಸ್ತುಗಳ ಮೌಲ್ಯ ಗೊತ್ತಿಲ್ಲ. ಅದು ಬೇಕಾಬಿಟ್ಟಿ ಬೆಲೆಗೆ ಕೇಳುತ್ತದೆ. ಹಾಗೇ ಅಗತ್ಯ ಇಲ್ಲದ ಕಂಪನಿಗಳಿಗೆ ಮಾರಲು ಹೋದರೂ ಇದೆಲ್ಲಾ ಸಹಜ. ಅವರು ಮೊದಲ ದರ್ಜೆಯನ್ನು ಮಾತ್ರ ಕೇಳತೊಡಗುತ್ತಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕೆವಿಕೆಯವರು ತಮ್ಮ ರೈತರಿಗೆ ತುಂಬಾ ವರ್ಷಗಳಿಂದ ನಾಟಿ ಕೋಳಿಗಳು ಮತ್ತು ಕಡಕ್ನಾಥ್ಗಳನ್ನು ಮಾರಾಟ ಮಾಡುತ್ತಿದ್ದಾರೆ. ಅವುಗಳ ಸಾಕಾಣಿಕೆ ಹಾಗೂ ಮಾರಾಟದ ಮಾಹಿತಿಯನ್ನೂ ನೀಡುತ್ತಾರೆ. ನೀವು ಅಲ್ಲಿನ ತಜ್ಞರಾದ ಡಾ. ಭರತ್ ಮತ್ತು ಡಾ. ಗಿರೀಶ್ ಅವರನ್ನು (9739916660) ಸಂರ್ಪಸಬಹುದು. ನಮ್ಮಲ್ಲಿನ್ನೂ ಕಡಕ್ನಾಥ್ ಅಷ್ಟು ಜನಪ್ರಿಯವಾಗಿಲ್ಲ.
ಕಪ್ಪು ಮಾಂಸವನ್ನು ಇಷ್ಟಪಟ್ಟು ತಿನ್ನುವವರು ತುಂಬಾ ಕಡಿಮೆ. ಕಪ್ಪು ಮೊಟ್ಟೆಯನ್ನು ನೋಡಿಯೇ ಆಚೆ ಹೋಗುತ್ತಾರೆ. ಬದಲಿಗೆ ನೀವೇ ಖುದ್ದಾಗಿ ಮನೆಮನೆಗಳಿಗೆ ಅದರ ರುಚಿ ತೋರಿಸಿ, ಅದರ ಔಷಧೀಯ ಮಹತ್ವ ವಿವರಿಸಿ. ಧಾರವಾಡ ಹಾಗೂ ಬೆಳಗಾವಿಯ ಸಾವಯವ ಸಂತೆಗಳಲ್ಲಿ ಭಾಗವಹಿಸಿ. ತಾಜಾ ಮೊಟ್ಟೆಗಳನ್ನು ನೀಡುವ ಭರವಸೆ ಕೊಡಿ. ಸರಬರಾಜು ಮಾಡುವ ಹೊಣೆ ವಹಿಸಿಕೊಂಡರೆ ನೀವು ಬಯಸುವ ಬೆಲೆ ಸಿಗಬಹುದು.
ಅಂಗನವಾಡಿಗಳಲ್ಲಿ ಮೊಟ್ಟೆಗಳನ್ನು ನೀಡುವ ಪದ್ದತಿ ಇದೆ. ಅದಕ್ಕಾಗಿ ಮೊಟ್ಟೆ ಸಪ್ಲೈಯರ್ಗಳನ್ನು ಸಂರ್ಪಸುತ್ತಾರೆ. ನೀವು ನಿಮ್ಮ ಪ್ರದೇಶಕ್ಕೆ ಮೊಟ್ಟೆ ಸಪ್ಲೈ ಮಾಡುವ ಜವಾಬ್ದಾರಿ ತೆಗೆದುಕೊಳ್ಳಬಹುದು. ಅದಕ್ಕಾಗಿ ನೀವು ಜಿಲ್ಲಾ ಹಾಗೂ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸಂರ್ಪಸ ಬೇಕಾಗುತ್ತದೆ.
ಜಮೀನಿನ ಸುತ್ತ ಬೆಳೆಯುವ ಅರಣ್ಯ ಮರಗಳು
| ಪ್ರದೀಪ್ ಅಗಡಿ
ನೀವು ಅರಣ್ಯ ಸಸ್ಯಗಳನ್ನು ಕೃಷಿ ಮಾಡಲು ಹೊರಟಿದ್ದೀರಿ. ಆದರೆ ಅವುಗಳನ್ನು ವಾಣಿಜ್ಯ ಉದ್ದೇಶಕ್ಕೆ ಬೆಳೆಸುವ ತೀರ್ಮಾನ ಮಾಡಿದ್ದೀರಿ. ಇದು ಒಂದು ಮಹಾ ವಿರೋಧಾಭಾಸ. ಅರಣ್ಯ ಕೃಷಿಯಲ್ಲಿ ಮರಗಳನ್ನು ಕಡಿಯದೇ ಉಪ ಉತ್ಪನ್ನಗಳ ಪ್ರಯೋಜನವನ್ನು ಪಡೆದುಯುವುದು ಮುಖ್ಯ ಉದ್ದೇಶ. ಅಂದರೆ ನಮ್ಮ ಹೊಲ ಅಥವಾ ಜಮೀನು ಅರಣ್ಯದ ಮರಗಳಿಂದ ತುಂಬಿದ್ದರೆ ಅಲ್ಲಿ ಜೀವಿ ವೈವಿಧ್ಯಗಳು ಹೆಚ್ಚುತ್ತವೆ. ನೆಲ ಫಲವತ್ತಾಗುತ್ತದೆ. ನೀರಿನ ಮಟ್ಟ ಮೇಲಕ್ಕೆ ಬರುತ್ತದೆ. ತಾಪಮಾನ ಕಡಿಮೆಯಾಗುತ್ತದೆ.
ಸಾಕಷ್ಟು ಪ್ರಾಣಿ ಪಕ್ಷಿಗಳು ತಾವಾಗಿಯೇ ಬರುತ್ತವೆ. ಕೃಷಿ ಬೆಳೆಗಳ ಪೀಡೆಗಳ ನಿಯಂತ್ರಣವಾಗುತ್ತದೆ. ಗಿಡಮರಗಳ ಧರಕೆಲೆಗಳು ಅಲ್ಲಿಯೇ ಉದುರುತ್ತವೆ. ನೆಲಕ್ಕೆ ಮುಚ್ಚಿಗೆ ಸಿಕ್ಕು ಸೂಕ್ಷ್ಮಜೀವಿಗಳ ಹೆಚ್ಚಳವಾಗುತ್ತದೆೆ. ಹೀಗೆ ನಾನಾ ರೀತಿಯ ಪ್ರಯೋಜನಗಳನ್ನು ಕೃಷಿ ಅರಣ್ಯ ಸಸ್ಯಗಳನ್ನು ನೆಡುವುದರಿಂದ ಪಡೆಯಬಹುದು. ಆದರೆ ನಿಮಗೆ ಅವೆಲ್ಲಾ ಬೇಕಾಗಿಲ್ಲ. ಅಂದರೆ ನಿಮಗೆ ಬೇಕಾಗಿರುವುದು ಪ್ಲಾಂಟೇಶನ್ ಬೆಳೆಗಳು.
ಒಂದು ಹಂತಕ್ಕೆ ಬರುತ್ತಿರುವಂತೆ ಅವುಗಳನ್ನು ಕಡಿದು ಮಾರಾಟ ಮಾಡುವುದು ನಿಮ್ಮ ಉದ್ದೇಶ. ಕೃಷಿ ಭೂಮಿಯಿಂದ ನಮಗೆ ಸಾಕಷ್ಟು ಫಲ ಸಿಗುತ್ತಿದೆ. ಪ್ರತಿಫಲ ಬಯಸದೇ ನೀಡುತ್ತಿರುವ ಭೂತಾಯಿಗೆ ನಾವು ಒಂದಿಷ್ಟು ಮರಳಿ ಕೊಡಬೇಕಾದ್ದು ಕರ್ತವ್ಯ. ಆದರೆ ನಮ್ಮ ಬಯಕೆ ಅನಂತ.
ಆಸೆಗೆ ಮಿತಿಯೇ ಇಲ್ಲ. ಬದುಗಳ ಹಾಗೂ ಬೇಲಿಯ ಸಾಲಿನಲ್ಲಿ 3-4 ವರ್ಷಗಳಿಗೆ ಫಲ ನೀಡುವ ಸಸ್ಯಗಳೆಂದರೆ ಔಷಧೀಯ ಸಸ್ಯಗಳು. ಉದಾಹರಣೆಗೆ ಸಲೇಶಿಯಾ. ಇವುಗಳನ್ನು ನೀವು ನೆಟ್ಟು ಒಂದಿಷ್ಟು ನೀರು ನೀಡಿದರೆ ಚೆನ್ನಾಗಿ ಬೆಳೆದು ಮೂರೇ ವರ್ಷಗಳಿಗೆ ಫಸಲು ಬರುತ್ತದೆ. ಔಷಧೀಯ ಸಸ್ಯಗಳನ್ನು ಬೈಬ್ಯಾಕ್ ಮಾಡಿಕೊಳ್ಳುತ್ತಿರುವ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಳ್ಳಬಹುದು. ಅನ್ಯಥಾ ಯಾವುದೇ ಅರಣ್ಯ ಸಸ್ಯಗಳು 4-5 ವರ್ಷಗಳಿಗೆ ಕಟಾವಿಗೆ ಬರುವುದಿಲ್ಲ. ಹೆಬ್ಬೇವು ಪ್ರಾರಂಭದಲ್ಲಿ ಬೇಗ ಬೆಳೆದರೂ ಕಟಾವಿಗೆ ಬರಲು 10 ವರ್ಷ ಬೇಕು.
ನೀವು ಸಿಲ್ವರ್ ಹಾಗೂ ಹೆಬ್ಬೇವು ಎರಡನೆ ಆದ್ಯತೆಯಾಗಿ ಬೆಳೆಯಬಹುದು. ಉಳಿದಂತೆ ಸಾಗವಾನಿ, ಶ್ರೀಗಂಧ, ಬರ್ವ ಬಿದಿರು, ರಕ್ತ ಚಂದನ, ಸೀಮೆ ಬಿದಿರು, ಮಹಾಗನಿ ಮುಂತಾದವುಗಳನ್ನು ಬಹುವಾರ್ಷಿಕ ಬೆಳೆಯಾಗಿ ಬೆಳೆಯಬಹುದು. ನಿಮ್ಮ ನೆಲ ಫಲವತ್ತಾಗಿದ್ದರೆ ಯಾವುದೇ ಅರಣ್ಯ ಸಸ್ಯಗಳು ಬೇಗ ಬೆಳೆಯುತ್ತವೆ. ಫಲವತ್ತಾಗಿಲ್ಲದಿದ್ದರೆ ಅತಿಯಾಗಿ ರಾಸಾಯನಿಕಗಳನ್ನು ಬಳಸಿ ಬರಡಾಗಿದ್ದರೆ ಇವುಗಳಿಗೂ ನೀವು ನೀರು ಗೊಬ್ಬರಗಳನ್ನು ಕೊಡಬೇಕಾಗುತ್ತದೆ. ಆದರೂ ಯಾವುದೇ ಅರಣ್ಯ ಸಸ್ಯಗಳು ನಾಲ್ಕೈದು ವರ್ಷಗಳಿಗೆ ನಾಟಾ ಉದ್ದೇಶಕ್ಕೆ ಸಿಗುವುದಿಲ್ಲ.
7 ವರ್ಷಗಳಿಗೆ ಕಡಿಯಲು ಬರುವ ಮರಗಳು ಕೇವಲ ಪೋಲ್ಗಳಾಗಿ ಬಳಸುವುದನ್ನು ನೋಡಿದ್ದೇನೆ. ಮರಗಳು ನಾಟಾ ಆಗುವ ಹಂತಕ್ಕೆ ಬರಲು 30-40 ವರ್ಷ ಬೇಕು. ಶ್ರೀಗಂಧ, ರಕ್ತಚಂದನಗಳಂತೂ ವಿಪರೀತ ರಕ್ಷಣೆ ಬೇಡುತ್ತವೆ. ಕಟಾವು ಮಾಡುವ ಹಂತದಲ್ಲಿ ಅರಣ್ಯ ಭಕ್ಷಕರಿಂದ ಸಮಸ್ಯೆ ಎದುರಿಸಬೇಕಾಗುತ್ತದೆ. ಏನೇ ಆಗಲಿ ಅರಣ್ಯ ಗಿಡಗಳನ್ನು ನೆಡಿ. ಫಸಲು ಯಾವಾಗ ಬೇಕಾದರೂ ಬರಲಿ. ಅವು ಉಪಕಾರ ಮಾಡುತ್ತಲೇ ಇರುತ್ತವೆ.
ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ. ಒಂದಿಷ್ಟು ಹಣ್ಣಿನ ಗಿಡಗಳನ್ನು ನೆಡಿ. ನೇರಳೆ, ನೆಲ್ಲಿ, ಹುಣಸೆ, ಪೇರಲೆ, ಸೀತಾಫಲ, ಮಾವು, ಅಂಜೂರ, ಗೇರು ಇವೆಲ್ಲಾ ನಿರಂತರ ಆದಾಯ ಕೊಡುತ್ತವೆ. ನೆಡುವ ಮೊದಲೇ ಕಡಿಯುವ ಆಲೋಚನೆ ಬಿಡಿ. ಬೆಳೆಸುವ ಯೋಚನೆ ಮಾಡಿ. ನೆಲ-ಜಲ ಸಮೃದ್ಧಿಯಾದರೆ ಬದುಕೂ ಸಮೃದ್ಧವಾಗುತ್ತದೆ.