ಕೃಷಿ ಚಾವಡಿ; ಲಾಭಕ್ಕಲ್ಲ, ಆಪತ್ತಿಗಾಗುವ ಅರಣ್ಯ ಕೃಷಿ

FOREST
Published on
  • ಅರಣ್ಯ ಕೃಷಿಯಲ್ಲಿ ಬಳಸಬಹುದಾದ ವಿವಿಧ ಜಾತಿಯ ಮರಗಳ ಬಗ್ಗೆ ಮಾಹಿತಿ ಕೊಡಿ. ಮಧ್ಯಮಾವಧಿ ಮತ್ತು ದೀರ್ಘಾವಧಿಗಳಲ್ಲಿ ಬೆಳೆಯುವ ವಾಣಿಜ್ಯ ಬೆಳೆಯಾಗಿ ಬೆಳೆಸುವ ಪ್ರಮುಖ ತಳಿಗಳು ಅವುಗಳ ಪೋಷಣೆ, ಮಾರಾಟ, ಬೆಲೆ ಮುಂತಾದವುಗಳ ಮಾಹಿತಿ ಕೊಡಿ. ಈಗಾಗಲೇ ಅರಣ್ಯ ಕೃಷಿಯಲ್ಲಿ ತೊಡಗಿರುವ ರೈತರ ಮತ್ತು ಸಂಸ್ಥೆಗಳ ಮಾಹಿತಿಯೂ ಬೇಕು.

| ಶ್ರೇಯಸ್ ಚನ್ನಪಟ್ಟಣ

- ಅರಣ್ಯ ಕೃಷಿಯಲ್ಲಿ ಇಂದು ಸುಮಾರು 36 ಜಾತಿಯ ಸಸ್ಯಗಳು ಅರಣ್ಯ ನರ್ಸರಿಗಳಲ್ಲಿ ದೊರೆಯುತ್ತವೆ. ಅವುಗಳಲ್ಲಿ ಪ್ರಮುಖವಾದವು ತೇಗ, ಮತ್ತಿ, ನಂದಿ, ಹುಣಾಲು, ಬೀಟೆ, ಶ್ರೀಗಂಧ, ಮಹಾಗನಿ, ಸಿಲ್ವರ್​ಓಕ್, ಹೆಬ್ಬೇವು, ರಕ್ತಚಂದನ, ವಿವಿಧ ರೀತಿಯ ಬಿದಿರು, ನೆಲ್ಲಿ, ನೇರಳೆ, ಶಿವಣೆ, ಚಂದಕಲು ಹೀಗೆ ಅನೇಕ. ಅವುಗಳಲ್ಲಿ ಹೆಚ್ಚಿನವರಿಗೆ ನಾಟವಾಗುವ ಮರಗಳ ಬಗ್ಗೆ ಮಾತ್ರ ಆಸಕ್ತಿ.

ಅಂದರೆ ಯಾವುದೇ ಮರಗಳು ಅವರಿಗೆ ಜೀವಿಯ ರೀತಿ ಕಾಣಿಸುವುದಿಲ್ಲ. ಫರ್ನೀಚರ್​ಗಳು, ರಿಪು-ಪಕಾಸಿಗಳ ತರಹ ಹಣದ ಗಿಡದಂತೆ ಕಾಣಿಸುತ್ತದೆ. ಹೀಗೆ ಅಂದುಕೊಂಡು ಅವುಗಳನ್ನು ನೀರು ಗೊಬ್ಬರ ಕೊಟ್ಟು ಬೆಳೆಸಲು ಹೊರಡುತ್ತಾರೆ. ಅಂದರೆ ಸಹಜವಾಗಿ ಬೆಳೆಯಬೇಕಾಗಿರುವುದು ಕೃಷಿಯಾಗಿ ಬದಲಾಗುತ್ತದೆ.

ಆಗ ಅವುಗಳ ನೈಸರ್ಗಿಕ ತಾಕತ್ತು ಹೋಗುತ್ತದೆ. ಈಗ ಎಲ್ಲೆಲ್ಲೂ ಹೆಬ್ಬೇವಿಗೆ ರೋಗಗಳು ದಾಳಿ ಇಡುತ್ತಿವೆ. ಬೋರರ್​ಗಳು ತಿಂದು ತೇಗುತ್ತಿವೆ. ಅದೇ ರೀತಿ ತೇಗಕ್ಕೂ ದುರ್ದೆಶೆ ಬಂದಿದೆ. ಒಟ್ಟಾರೆ ಏಕಬೆಳೆ ಮಾಡಿದರೆ ಇದೆಲ್ಲಾ ಸಾಮಾನ್ಯ. ಹೀಗಿರುವಾಗ ಎಷ್ಟೋ ಜನ ಇದನ್ನೇ ಮಾಡುತ್ತಿದ್ದಾರೆ ಎನ್ನುವಿರಾ? ಅವರೆಲ್ಲಾ ಹಣಕ್ಕಾಗಿ ಮಾಡುತ್ತಿದ್ದಾರೆಯೇ ವಿನಾ ಪರಿಸರದ ಕ್ಷೇಮಕ್ಕಾಗಿ ಅಲ್ಲ.

ಹಾಗಿದ್ದರೆ ಏನು ಮಾಡಬಹುದು ಎನ್ನುವ ಪ್ರಶ್ನೆ ಕಾಡುತ್ತದೆ. ಹೆಚ್ಚು ವಾಣಿಜ್ಯಿಕ ಸಸ್ಯಗಳನ್ನು ಹಾಕಿ. ಅವುಗಳೊಂದಿಗೆ ಹಣ್ಣುಗಳನ್ನು ಕೊಡುವ, ಕಡಿಯದ ಮರಗಳನ್ನೂ ಬೆಳೆಸಿ. ಇದನ್ನೇ ಬಳ್ಳಾರಿಯ ಕವಿತಾ ಮಿಶ್ರ ಹೇಳುವುದು; ಜಮಖಂಡಿಯ ಅಶೋಕ ತುಂಗಳ ಮಾಡಿದ್ದು; ಕೊಪ್ಪಳದ ಬಳೂಟಗಿಯವರು ಯೋಚಿಸಿದ್ದು. ಅವರು ಬೆಳೆಸುವ ಸಲುವಾಗಿ ಅರಣ್ಯ ಸಸ್ಯಗಳನ್ನು ನೆಟ್ಟರು, ಕಡಿಯಲು ಅಲ್ಲ. ಮುಂದೆ ಅವು ಅಪಾರವಾದ ಆದಾಯವನ್ನು ಕೊಡುತ್ತದೆ ಎಂದಾದರೂ ಅದನ್ನು ಕಡಿಯುವುದೇ ಉದ್ದೇಶವಲ್ಲ. ಮೊದಲು ಬೆಳೆಯಲಿ; ಆಮೇಲೆ ಆಪತ್ತು ಬಂದರೆ ಡೆಪಾಸಿಟ್ ಬಿಡಿಸಿಕೊಳ್ಳೋಣ ಎಂದೇ ಅವರೆಲ್ಲಾ ಹೇಳುವುದು.

‘ಅವರೆಲ್ಲಾ ಶ್ರೀಮಂತರು, ಕಡಿಯದಿದ್ದರೂ ನಡೆಯುತ್ತದೆ. ನಾವೇನು ಮಾಡಬೇಕು’ ಎನ್ನುತ್ತಾರೆ ಕೆಲವರು. ಮೊದಲೇ ಹೇಳಿದಂತೆ ಹಣ ಸಂಪಾದನೆಯೇ ಮಾರ್ಗವಾದರೆ ಹಣ ನೀಡುವ ಮರಗಳನ್ನಷ್ಟೇ ಬೆಳೆಯುವುದೂ ಒಂದು ಜೂಜು. ನೀವು ಅದನ್ನು ಸಾಕಬೇಕಾಗುತ್ತದೆ. ಬೆಳೆಸಬೇಕಾಗುತ್ತದೆ. ಅವುಗಳಿಗೆ ನೀರು, ಆಹಾರ ನೀಡಬೇಕಾಗುತ್ತದೆ. ಯಾವುದೇ ರೋಗ ಬರದಂತೆ ಪೊರೆಯಬೇಕಾಗುತ್ತದೆ. ನೀವು ಹೊಟ್ಟೆಗೆ ಹಾಕಿದಂತೆ ಅವು ಬೆಳೆಯುತ್ತಾ ಹೋಗುತ್ತವೆ ಎಂದುಕೊಳ್ಳಬೇಡಿ.

ಅವುಗಳ ಜೀನ್ ಇನ್ನೂ ಬದಲಾಗಿಲ್ಲ. ಅಥವಾ ಅವುಗಳನ್ನು ಹೈಬ್ರೀಡ್ ಸಹ ಮಾಡಲಾಗಿಲ್ಲ. ಹೈಬ್ರೀಡ್ ಮಾಡಿದವು ವೇಗವಾಗಿ ಬೆಳೆಯುವುದು ಸಹಜ. ಆದರೆ ಅರಣ್ಯದಿಂದ ತಂದು ಬೆಳೆಸಿದ ದೇಸೀ ಗಿಡಗಳು ತಮ್ಮದೇ ಆದ ಸಮಯ ತೆಗೆದುಕೊಳ್ಳುತ್ತವೆ. ಉದಾಹರಣೆಗೆ, ಮಂಡಗದ್ದೆಯ ಬಳಿಯ ರಂಗಪ್ಪಗೌಡರು ಈಗ್ಗೆ 50 ವರ್ಷಗಳ ಹಿಂದೆ ನೆಟ್ಟಿದ್ದ ಶ್ರೀಗಂಧದ ಗಿಡಗಳು ಇಂದು ಬೆಳೆದು ನಿಂತಿವೆ. ಆದರೆ ಅದನ್ನು ಬೆಳೆಸಿದ ಗೌಡರು ಇಂದು ಇಲ್ಲ. ಇದ್ದವರಿಗೆ ಅದನ್ನು ಕಾಪಾಡಿಕೊಳ್ಳುವುದೇ ದೊಡ್ಡ ಕಷ್ಟವಾಗಿದೆ.

ನೀವು ಕೇಳಿದಂತೆ 10-12 ವರ್ಷಗಳಲ್ಲಿ ಕಡಿಯಬಹುದಾದ ಮರಗಳು ಇಲ್ಲ. ಆದರೆ ಹೆಬ್ಬೇವು, ನೀಲಗಿರಿ, ಪಲ್ಲೆಟ್, ಸಿಲ್ವರ್​ಓಕ್, ಶಿವಣೆ ಮುಂತಾದವುಗಳನ್ನು ಪೋಲ್​ಗಳಾಗಿ ಬಳಸಲಾಗುತ್ತದೆ. ಅದಕ್ಕೂ ಬೆಲೆ ಇದೆ. ಮಹಾಗನಿ, ತೇಗ, ಎಲ್ಲಾ ಜಾತಿಯ ಬಿದಿರು ಮುಂತಾದವುಗಳು ಬೆಳೆಯಲು 25 ವರ್ಷಗಳಾದರೂ ಬೇಕು. ಇನ್ನು ಶ್ರೀಗಂಧ, ರಕ್ತಚಂದನ ಬೆಳೆದು ಚೇಗು ಬರಲು 30 ವರ್ಷಗಳಾದರೂ ಬೇಕು. ನಿಮ್ಮ ಮುಂದಿನ ತಲೆಮಾರಿಗೆ ದಕ್ಕುತ್ತದೆ.

ಯಾವುದೇ ಅರಣ್ಯ ನರ್ಸರಿಗಳನ್ನು ಸಂರ್ಪಸಿದರೆ ಅಲ್ಲಿರುವ ಸಸ್ಯಗಳನ್ನು ನೋಡಿ, ಅತಿ ಚಿಕ್ಕದಾದ ಗಿಡಗಳನ್ನು ಕೊಳ್ಳಬೇಡಿ. ಬೇರು ಚೆನ್ನಾಗಿ ಬಂದಿರುವ ಸಸ್ಯಗಳನ್ನು ಆರಿಸಿಕೊಳ್ಳಿ. ಒಂದೆರಡು ವರ್ಷದ ಗಿಡವಾದರೂ ಒಳ್ಳೆಯದು. ಇನ್ನು ಖಾಸಗಿ ನರ್ಸರಿಗಳಲ್ಲಾದರೆ ತಳಿ ವಿಚಾರಿಸಿ, ಬೇರುಗಳನ್ನು ನೋಡಿ, ಬೆಳವಣಿಗೆ, ರೋಗಗಳು ಇವೆಯಾ ಎಂಬುದನ್ನೆಲ್ಲ ಗಮನಿಸಿ. ಒಟ್ಟಾರೆ ಮಿಶ್ರ ಕೃಷಿ ಮಾಡಿ.

ಕಳೆಗಳಿಂದಲೇ ಕಳೆಯ ನಿಮೂಲನೆ ಸಾಧ್ಯ

  • ಕಾಫಿ ತೋಟದಲ್ಲಿ ಪ್ರಾರಂಭದಲ್ಲಿ ಹುಲ್ಲು ಮತ್ತು ಇತರ ಕಳೆಗಳನ್ನು ನಿಯಂತ್ರಿಸಲು ಆಗುವ ಖರ್ಚು ಅಪಾರ. ಇವುಗಳ ಜೈವಿಕ ನಿಯಂತ್ರಣ ಸಾಧ್ಯವೇ? ನೆಲಕ್ಕೆ ಸಾವಯವ ಗೊಬ್ಬರವನ್ನು ನೀಡಬಲ್ಲ ಮತ್ತು ಕಳೆಗಳನ್ನು ನಿಯಂತ್ರಿಸುವ ನೆಲ ಹಬ್ಬು ಬಳ್ಳಿಗಳು ಇವೆಯಾ? ಇದ್ದರೆ ಎಲ್ಲಿ ಸಿಗುತ್ತವೆ, ಅದರ ಸಾಧಕಬಾಧಕಗಳನ್ನು ತಿಳಿಸಿ.

| ವಸಂತಕುಮಾರ್ ಭದ್ರಗೊಳ, ತಿತಿಮತಿ

- ಯಾವುದೇ ತೋಟ ಕಟ್ಟುವಾಗಲೂ ಈ ರೀತಿಯ ಸಮಸ್ಯೆಗಳು ಸಾಮಾನ್ಯ. ಅದಕ್ಕಾಗಿಯೇ ಮುಚ್ಚಿಗೆ ಮಾಡುವ ಮೂಲಕ ಕಳೆಗಳ ನಿಯಂತ್ರಣ ಮಾಡುವುದು ಪದ್ಧತಿ. ಕಳೆಗಳು ಶತ್ರುಗಳಲ್ಲ. ಅವುಗಳ ನಿಯಂತ್ರಣವೂ ಸುಲಭ ಅಲ್ಲ. ಯಾಕೆಂದರೆ ಅವು ಯಾವುದೇ ಅನ್ನಾಹಾರ ಬೇಡದೆ ಹುಟ್ಟಿದವುಗಳು. ಬೆಳೆದವುಗಳು. ಸಮೂಲ ಅಂದರೆ ಬೇರು ಸಹಿತ ಕಿತ್ತು ತೋಟದಿಂದ ದೂರ ಎಸೆಯಬೇಕು. ಅಥವಾ ಸುಡಬೇಕು. ಅಥವಾ ಗೊಬ್ಬರವಾಗಿ ಮಾಡಬೇಕು. ಆದರೂ ಅವು ಎಂದೋ ಸುರಿಸಿದ ಬೀಜಗಳು ಮತ್ತೆ ಹುಟ್ಟಿ ಬೆಳೆದು ಸವಾಲೊಡ್ಡುತ್ತವೆ.

ಹೀಗಾಗಿ ಕಳೆಗಳನ್ನು ಕಳೆಗಳಿಂದಲೇ ನಿಮೂಲನೆ ಮಾಡಿದರೆ ಗೆಲುವು ಸಾಧ್ಯ. ಅದಕ್ಕಾಗಿ ನೀವು ವೆಲ್ವೆಟ್ ಬೀನ್ ಬಳ್ಳಿಗಳನ್ನು ಹಬ್ಬಿಸಬಹುದು. ಕಾಫಿ ತೋಟವಾದ್ದರಿಂದ ಇವುಗಳನ್ನು ಮೊದಲಿಗೆ ಹಬ್ಬಿಸುವಾಗ ಸ್ವಲ್ಪ ನಿಗಾ ವಹಿಸಬೇಕಾಗಬಹುದು. ಒಮ್ಮೆ ಹಬ್ಬತೊಡಗಿದರೆ ಅಲ್ಲಿರುವ ಎಲ್ಲಾ ಕಳೆಗಳನ್ನೂ ನುಂಗಿಹಾಕುತ್ತದೆ. ಕೆಳಗೆ ಬಿದ್ದ ಎಲೆಗಳು ಗೊಬ್ಬರವಾಗುತ್ತವೆ.

ಮೇಲೆ ಹಸುರಾಗಿದ್ದು ಮಣ್ಣಿನ ತೇವಾಂಶವನ್ನು ರಕ್ಷಿಸುತ್ತದೆ. ಕಾಫಿ ಹರಡಿಕೊಂಡು ಬೆಳೆದ ಮೇಲೆ ಇದಕ್ಕೆ ಬೆಳಕು ಸರಿಯಾಗಿ ಸಿಕ್ಕದಿದ್ದರೆ ತಾನಾಗಿಯೇ ಸಾಯುತ್ತಾ ಹೋಗುತ್ತದೆ. ರಬ್ಬರ್ ಬೆಳೆಯುವವರು ಇದನ್ನು ತಮ್ಮ ತೋಟದಲ್ಲಿ ಬೆಳೆಸುತ್ತಿದ್ದರು. ಆದರೆ ಯಾರಾದರೂ ಕಿಡಿಗೇಡಿಗಳು ತೋಟಕ್ಕೆ ಬೆಂಕಿ ಕೊಟ್ಟರೆ ಇವು ಮೊದಲು ಹತ್ತಿಕೊಂಡು ಉರಿಯುವ ಪ್ರಯುಕ್ತ ಕ್ರಮೇಣ ಇದನ್ನು ದೂರ ಮಾಡಿದರು. ಕಾಡಿಗೆ ಬೆಂಕಿ ಹತ್ತಿಕೊಂಡರೂ ಇದರ ಮೇಲೆ ಕಿಡಿ ಬಿದ್ದರೆ ಹೊತ್ತಿಕೊಂಡು ಉರಿಯುವುದುಂಟು. ಇದೆಲ್ಲಾ ತಿಳಿದೂ ಬೀಜ ಬೇಕಿದ್ದವರು ಸಂರ್ಪಸಿ; ರಾಘವ- 9448923773, ರವಿಶಂಕರ ದೊಡ್ಡಮಾಣಿ- 8547245304.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಮುಳ್ಳಿಲ್ಲದ ನಾಚಿಕೆಮುಳ್ಳಿನ ತಳಿಯನ್ನು ಅಭಿವೃದ್ಧಿಪಡಿಸಿದೆ. ಇದನ್ನು ಅಲ್ಪ ಪ್ರಮಾಣದಲ್ಲಿ ಮೇವಾಗಿ ಸಹ ಬಳಸಬಹುದಂತೆ. ಇದೂ ನಿಧಾನವಾಗಿ ಇಡೀ ತೋಟವನ್ನೇ ಆಕ್ರಮಿಸಿಕೊಳ್ಳುತ್ತದೆ. ಬೇರೆ ಕಳೆಗಳು ಹುಟ್ಟದಂತೆ ನೋಡಿಕೊಳ್ಳುತ್ತದೆ. ಮುಳ್ಳಿಲ್ಲದ ಕಾರಣ ತೋಟದಲ್ಲಿ ಓಡಾಡಲು ತೊಂದರೆಯಾಗದು. ಕಾಫಿ ಗಿಡಗಳು ಬೆಳೆದಂತೆ ಇದು ತಾನಾಗಿಯೇ ಮಾಯವಾಗುತ್ತದೆ.

ಉಳಿದಂತೆ ಗೋಳಿಸೊಪ್ಪಿನ ಬೀಜಗಳು, ತ್ರಿಸಂಕರ ತಳಿಯ ಹುಲ್ಲು, ಕುದುರೆ ಮೆಂತೆ ಸೊಪ್ಪಿನ ಬೀಜಗಳು, ಸೆಣಬು, ಡಯಂಚಾ ಇವುಗಳನ್ನೆಲ್ಲಾ ಮಳೆಗಾಲದಲ್ಲಿ ನೀವೇ ಬಿತ್ತನೆ ಮಾಡುತ್ತಿದ್ದರೆ ಚೆನ್ನಾಗಿ ಏಳುತ್ತವೆ. ಬೇಸಿಗೆ ಬರುತ್ತಿದ್ದಂತೆ ಇವೆಲ್ಲಾ ಸಾಯುತ್ತವೆ. ಅಲ್ಲಿಯೇ ಗೊಬ್ಬರವಾಗುತ್ತವೆ. ಇವುಗಳನ್ನು ನೀವು ಕೃಷಿ ಇಲಾಖೆಯಲ್ಲಿ ಪಡೆದುಕೊಳ್ಳಬಹುದು. ಹೊಸ ತೋಟವಾಗಿದ್ದರೆ ನೀವು ಅತ್ತಿ ಬೀಜಗಳನ್ನು ಅಥವಾ ಗಿಡಗಳನ್ನು ಮತ್ತು ನುಗ್ಗೆ ಬೀಜಗಳನ್ನು ಬಿತ್ತನೆ ಮಾಡಿ. ನುಗ್ಗೆ ಸೊಪ್ಪಿಗೂ ಇಂದು ಬೆಲೆ ಇದೆ.

ನುಗ್ಗೆ ಗಿಡದಡಿಯಲ್ಲಿ ಯಾವ ಕಳೆಗಳೂ ಏಳುವುದಿಲ್ಲ. ಅತ್ತಿ ಮುಂದೆ ಮರವಾದಂತೆ ಕಾಫಿಗೂ ನೆರಳು ಮತ್ತು ಅತ್ತಿ ಮರದ ಮೇಲೆ ಕೂರುವ ಹಕ್ಕಿಗಳು ಹುಳುಗಳನ್ನು ತಿಂದು ಬೋರರ್​ನಿಂದ ರಕ್ಷಣೆ ಕೊಡುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net