ಬಿಜೆಪಿ ನಾಯಕರ ಮಕ್ಕಳಿಗೇಕೆ ಧರ್ಮ ರಕ್ಷಣೆಯ ಹೊಣೆ ಇಲ್ಲ: ಕೆಪಿಸಿಸಿ

BJP Congress
Published on

ಬೆಂಗಳೂರು: ಗೋ ಸಾಗಾಣೆ ವೇಳೆ ವ್ಯಕ್ತಿ ಅನುಮಾನಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್​ ಕೆರೆಹಳ್ಳಿ ಹಾಗೂ ಆತನ ನಾಲ್ಕು ಸಹಚರರನ್ನು ಬಂಧಿಸಿರುವ ಕುರಿತು ರಾಜ್ಯ ಕಾಂಗ್ರೆಸ್​ ಟ್ವೀಟ್​ ಮಾಡಿದ್ದು ಬಿಜೆಪಿ ನಾಯಕರ ಮಕ್ಕಳು ಏಕೆ ಗೋರಕ್ಷಣೆಗೆ ಹೋಗುವುದಿಲ್ಲ ಎಂದು ಪ್ರಶ್ನಿಸಿದೆ.

ಇದರಲ್ಲಿ ಯಾರಾದರೂ ಒಬ್ಬೇ ಒಬ್ಬ ಬಿಜೆಪಿ ನಾಯಕರ ಮಕ್ಕಳಿದ್ದಾರಾ. ಬಿಜೆಪಿ ನಾಯಕರ ಮಕ್ಕಳು ಏಕೆ ಗೋರಕ್ಷಣೆಗೆ ಹೋಗುವುದಿಲ್ಲ ಅವರಿಗೇಕೆ ಧರ್ಮ ರಕ್ಷಣೆಯ ಹೊಣೆ ಇಲ್ಲ. ತಮ್ಮ ಮಕ್ಕಳನ್ನು ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಕಳಿಸಿ, ಉದ್ಯಮಿಗಳನ್ನಾಗಿಸುವ ಬಿಜೆಪಿ ನಾಯಕರು ಇತರರ ಮಕ್ಕಳನ್ನು ಪ್ರಚೋದಿಸಿ ಜೈಲಿಗೆ ಕಳಿಸುತ್ತದೆ ಎಂದು ಕಿಡಿಕಾರಿದೆ.

ಸಾತನೂರಿನಲ್ಲಿ ಜಾನುವಾರು ವ್ಯಾಪಾರಿಯನ್ನು ಹತ್ಯೆಗೈದ ತಂಡವು ₹2 ಲಕ್ಷಕ್ಕೆ ಬೇಡಿಕೆ ಇಟ್ಟಿರುವ ಸಂಗತಿ FIRನಲ್ಲಿದೆ. ಉದ್ಯೋಗ ಸೃಷ್ಟಿಯ ಬದಲು ಹಫ್ತಾ ವಸೂಲಿ ಗ್ಯಾಂಗನ್ನು ಸೃಷ್ಟಿ ಮಾಡಿದೆ ಸರ್ಕಾರ. ಈ ಹಫ್ತಾ ವಸೂಲಿಗೆ ಗೋರಕ್ಷಣೆ ಎಂಬ ಹೆಸರಿಟ್ಟು ಬಿಜೆಪಿಯೇ ರಕ್ಷಣೆಗೆ ನಿಂತಿತ್ತೇ. ಈ ವಸೂಲಿಯಲ್ಲಿ ಯಾವ್ಯಾವ ಮಂತ್ರಿಗೆ ಎಷ್ಟೆಷ್ಟು ಪಾಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್​ ಕಮಿಟಿ ಬಿಜೆಪಿ ವಿರುದ್ಧ ಟ್ವೀಟ್​ ಮಾಡಿ ಹರಿಹಾಯ್ದಿದೆ.

ಮಾರ್ಚ್​ 31ರಂದು ಸಾತನೂರು ಬಳಿ ಕ್ಯಾಂಟರ್​ನಲ್ಲಿ ಸಾಗಿಸಲಾಗುತ್ತಿದ್ದ ಜಾನುವಾರುಗಳನ್ನು ಪುನೀತ್​ ಕೆರೆಹಳ್ಳಿ ಮತ್ತು ಸಹಚರರು ರಕ್ಷಣೆ ಮಾಡಿದ್ದರು. ಏಪ್ರಿಲ್​​ 1ರಂದು ಕನಕಪುರದ ಸಾತನೂರಿನಲ್ಲಿ ಮಂಡ್ಯ ಜಿಲ್ಲೆ ಗುತ್ತಲು ನಿವಾಸಿ ಇದ್ರಿಸ್​ ಪಾಷಾ ಅನುಮಾನಸ್ಪದವಾಗಿ ಮೃತಪಟ್ಟಿದ್ದರು. ಮೃತರ ಸಹೋದರ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net