ಅರ್ಥ ವ್ಯವಸ್ಥೆಗೂ ಕೊರೊನಾ ಕಾಟ!

KORONA
Published on

ಚೀನಾದಲ್ಲಿ ಹಾವಳಿ ಎಬ್ಬಿಸಿರುವ ಕರೊನಾ ವೈರಸ್ ಅಲ್ಲಿನ ಆರೋಗ್ಯ ವ್ಯವಸ್ಥೆ ಮೇಲೆ ಮಾತ್ರವಲ್ಲ, ಆರ್ಥಿಕತೆಯ ಮೇಲೆಯೂ ದುಷ್ಪರಿಣಾಮ ಉಂಟು ಮಾಡುತ್ತಿದೆ. ಬರೀ ಚೀನಾದ ಆರ್ಥಿಕತೆಯಲ್ಲ, ಇಡೀ ಜಗತ್ತಿನ ಅರ್ಥವ್ಯವಸ್ಥೆಗೂ ಪೆಟ್ಟು ಕೊಡಲಾರಂಭಿಸಿದೆ. ಯಾವ್ಯಾವ ಕ್ಷೇತ್ರಗಳ ಮೇಲೆ ಅದರ ಪ್ರಭಾವವಾಗುತ್ತಿದೆ? ಯಾವ್ಯಾವ ದೇಶದವರು ನಷ್ಟ ಅನುಭವಿಸುತ್ತಿದ್ದಾರೆ? ಇಲ್ಲಿದೆ ಒಂದು ಅವಲೋಕನ.

ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ಹರಡುತ್ತ, ಚೀನಾದಲ್ಲಿ ಈಗಾಗಲೇ 250ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಕರೊನಾ ವೈರಸ್ ಜಾಗತಿಕ ಅರ್ಥವ್ಯವಸ್ಥೆಯ ಮೇಲೂ ತನ್ನ ಕರಿನೆರಳು ಚಾಚಲಾರಂಭಿಸಿದೆ. ಹಿಂದೊಮ್ಮೆ ಸಾರ್ಸ್ ಹಾವಳಿಯಿಂದ ವಿಶ್ವ ಮಾರುಕಟ್ಟೆ ಅನುಭವಿಸಿದ ಹಿನ್ನಡೆಗಿಂತ ಹೆಚ್ಚಿನ ನಷ್ಟವನ್ನು ಕರೊನಾ ಉಂಟು ಮಾಡಬಹುದೆಂಬ ಕಳವಳ ವ್ಯಕ್ತವಾಗತೊಡಗಿದೆ.

ಷೇರು ಮಾರುಕಟ್ಟೆ ಕೂಡ ಕರೊನಾ ಹಾವಳಿ ಆರಂಭವಾದಾಗಿನಿಂದ ಸಾಕಷ್ಟು ಏಳುಬೀಳು ಅನುಭವಿಸುತ್ತಿದೆ. ಈ ವೈರಸ್​ನಿಂದ ನಿಜಕ್ಕೂ ಎಲ್ಲೆಲ್ಲಿ ಏನೇನಾಗುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬುದರ ಸ್ಪಷ್ಟ ಚಿತ್ರಣ ಸಿಗುವವರೆಗೂ ಷೇರು ಮಾರುಕಟ್ಟೆ ಇದೇ ರೀತಿ ವರ್ತಿಸುತ್ತಿರುತ್ತದೆ.

ಯಾಕೆಂದರೆ ಚೀನಾ ಸಣ್ಣ ರಾಷ್ಟ್ರವಲ್ಲ. ಅದು ಜಗತ್ತಿನ ಎರಡನೇ ಅತಿ ದೊಡ್ಡ ಅರ್ಥವ್ಯವಸ್ಥೆಯನ್ನು ಹೊಂದಿರುವ ದೇಶ. ವಿಶ್ವದ ಪ್ರಮುಖ ಉತ್ಪಾದನಾ ತಾಣ. ಅಂತಾರಾಷ್ಟ್ರೀಯ ಪೂರೈಕೆ ಸರಪಳಿಯಲ್ಲಿ ಅದರ ಪಾತ್ರ ಅತ್ಯಂತ ಮಹತ್ವದ್ದು. ಹಾಗಾಗಿ ಚೀನಾ ಸೀನಿದರೆ ಸಾಕು, ಜಾಗತಿಕ ಮಾರುಕಟ್ಟೆಗೆ ನೆಗಡಿಯ ಭಯ ಕಾಡತೊಡಗುತ್ತದೆ. ಅಮೆರಿಕ, ಪಶ್ಚಿಮ ಯೂರೋಪ್ ಒಳಗೊಂಡು ದೇಶದ ಎಲ್ಲ ಪ್ರಮುಖ ದೇಶಗಳೂ ಚೀನಾ ಜತೆ ಸಕ್ರಿಯ ವ್ಯಾಪಾರ ಸಂಬಂಧ ಇಟ್ಟುಕೊಂಡಿರುವುದರಿಂದ ಈ ಭಯ ಕೂಡ ಸಕಾರಣವಾಗಿದೆ.

ಕರೊನಾ ಹಾವಳಿಯಿಂದ ಚೀನಾದ ಆರ್ಥಿಕ ಬೆಳವಣಿಗೆ ಪ್ರಸಕ್ತ ತ್ರೖೆಮಾಸಿಕದಲ್ಲಿ ಶೇಕಡ 1ರಷ್ಟು ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ. ಹಣದ ಲೆಕ್ಕದಲ್ಲಿ ಹೇಳಬೇಕೆಂದರೆ 136 ಶತಕೋಟಿ ಡಾಲರ್ ನಷ್ಟ. ಚೀನಾದಲ್ಲಿ ಚಾಂದ್ರಮಾನ ಹೊಸ ವರ್ಷದ ಆಚರಣೆಯ ಅಂಗವಾಗಿ ಈಗಾಗಲೇ ಹಲವು ಕಂಪನಿಗಳು ಉತ್ಪಾದನೆಗೆ ಬಿಡುವು ನೀಡಿದ್ದವು.

ಹಾಗಾಗಿ ಸದ್ಯದ ಮಟ್ಟಿಗೆ ಅಂತಾರಾಷ್ಟ್ರೀಯ ಪೂರೈಕೆ ಸರಪಳಿ ಮೇಲೆ ಅಷ್ಟೇನೂ ಪರಿಣಾಮವಾಗಿಲ್ಲ. ಆದರೆ ಹೊಸ ವರ್ಷದ ರಜೆ ಮುಗಿದ ಮೇಲೂ ಅಲ್ಲಿ ಕಾರ್ಖಾನೆಗಳು ರೀಓಪನ್ ಆಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಕಾರ್ವಿುಕರು ಕೆಲಸಕ್ಕೆ ತೆರಳಲು ಉತ್ಸುಕರಾಗಿದ್ದರೂ ಸಂಚಾರ ನಿರ್ಬಂಧಗಳು ಜಾರಿಯಲ್ಲಿರುವುದು ಅಡ್ಡಿ ಉಂಟು ಮಾಡಬಹುದು.

ವಿವಿಧ ಕಂಪನಿಗಳ ಸ್ಥಿತಿಗತಿ: ಕಳೆದ ತ್ರೖೆಮಾಸಿಕದಲ್ಲಿ ದಾಖಲೆ ವಹಿವಾಟು ದಾಖಲಿಸಿರುವ ಐಫೋನ್ ಕಂಪನಿ, ಈ ತ್ರೖೆಮಾಸಿಕದಲ್ಲಿ ಆ ಮಟ್ಟಿನ ವಹಿವಾಟು ನಡೆಯುವ ಆಸೆಯನ್ನೇ ಇಟ್ಟುಕೊಂಡಿಲ್ಲ. ಇಂತಹ ಅನಿಶ್ಚಿತತೆಗೆ ಕರೊನಾ ವೈರಸ್ ಕಾರಣ. ಆಪಲ್​ನ ಆದಾಯದ ಪ್ರಮುಖ ಮೂಲವಾಗಿರುವ ಐಫೋನ್​ಗಳು ಉತ್ಪಾದನೆಯಾಗುವುದೇ ಚೀನಾದಲ್ಲಿ.

ಟೆಸ್ಲಾ ಕಂಪನಿ ಇತ್ತೀಚೆಗೆ ಶಾಂಘೈನಲ್ಲಿ ತನ್ನ ಘಟಕ ಆರಂಭಿಸಿದ್ದು, ವೈರಸ್ ಹಾವಳಿಯಿಂದಾಗಿ ಉತ್ಪಾದನೆ ವಿಳಂಬವಾಗುವ ಸಾಧ್ಯತೆ ಇದೆ. ಜರ್ಮನಿಯ ವಾಹನ ಬಿಡಿಭಾಗಗಳ ಉತ್ಪಾದನಾ ಕಂಪನಿ ರಾಬರ್ಟ್ ಬಾಷ್ ಕೂಡ ಚೀನಾದ ವುಹಾನ್ ನಗರದಲ್ಲಿಯೇ ಎರಡು ಘಟಕಗಳನ್ನು ಹೊಂದಿದೆ. ಅವು ಸದ್ಯಕ್ಕಂತೂ ಪುನರಾರಂಭವಾಗುವ ಲಕ್ಷಣಗಳಿಲ್ಲ. ಜಪಾನ್​ನ ಟೊಯೊಟಾ ಕೂಡ ಚೀನಾದಲ್ಲಿರುವ ತನ್ನ ಘಟಕದಲ್ಲಿ ಉತ್ಪಾದನೆ ನಿಲ್ಲಿಸಿ ತಿಂಗಳಾಗುತ್ತ ಬಂತು. ಮೆಕ್​ಡೊನಾಲ್ಡ್ಸ್, ಸ್ಟಾರ್​ಬಕ್ಸ್ ಸಹ ಅಲ್ಲಿರುವ ನೂರಾರು ಮಳಿಗೆಗಳನ್ನು ಮುಚ್ಚಿವೆ.

ಪ್ರವಾಸ ರದ್ದುಗೊಳಿಸಿದ ಜನ: ಚಾಂದ್ರಮಾನ ಹೊಸ ವರ್ಷ ಚೀನಾದಲ್ಲಿ ರಜಾ ದಿನಗಳ ಕಾಲ. ಜನರು ಪ್ರವಾಸಕ್ಕೆ ಹೋಗುವ ಸಮಯ. ಒಂದು ಅಂದಾಜಿನ ಪ್ರಕಾರ, 70 ಲಕ್ಷಕ್ಕಿಂತಲೂ ಹೆಚ್ಚು ಜನ ವಿದೇಶಗಳಿಗೆ ಪ್ರವಾಸ ಹೋಗುವ ಯೋಜನೆ ಮಾಡಿಕೊಂಡಿದ್ದರು. ಅದರಲ್ಲಿ ಶೇಕಡ 60ರಷ್ಟು ಮಂದಿ ಅನಿವಾರ್ಯವಾಗಿ ತಮ್ಮ ಪ್ರವಾಸ ರದ್ದುಗೊಳಿಸಿದ್ದಾರೆ.

ಲುಫ್ತಾನ್ಸಾ, ಬ್ರಿಟಿಷ್ ಏರ್​ವೇಸ್, ಏರ್ ಕೆನಡಾ, ಅಮೆರಿಕನ್ ಏರ್​ಲೈನ್ಸ್ ಸೇರಿದಂತೆ ಜಗತ್ತಿನ ಪ್ರಮುಖ ವಿಮಾನಯಾನ ಕಂಪನಿಗಳೆಲ್ಲವೂ ಚೀನಾಕ್ಕೆ ತಮ್ಮ ಸೇವೆಯನ್ನು ಸ್ಥಗಿತಗೊಳಿಸಿವೆ. ಹಾಗಾಗಿ ಕರೊನಾ ವೈರಸ್​ನ ಸಮಸ್ಯೆ ಕೇವಲ ಕೆಲವರ ಪ್ರಾಣಹಾನಿಗೆ ಸಂಬಂಧಿಸಿದ್ದಲ್ಲ. ಸೋಂಕಿನ ವ್ಯಾಪಕತೆಯಿಂದಾಗಿ ಸಂಚಾರ ಸಾರಿಗೆ, ದೈನಂದಿನ ವಹಿವಾಟು ಹೀಗೆ ಎಲ್ಲ ಕ್ಷೇತ್ರಗಳ ಮೇಲೂ ದುಷ್ಪರಿಣಾಮವಾಗುತ್ತಿದೆ.

ಕುಸಿಯುತ್ತಿರುವ ಜಿಡಿಪಿಯನ್ನು ಹಿಡಿದು ನಿಲ್ಲಿಸಲು, ಮೇಲಕ್ಕೆ ಎತ್ತರಿಸಲು ಭಾರತದಂತಹ ಒಂದು ‘ದೊಡ್ಡ ಮಾರುಕಟ್ಟೆ’ ಹರಸಾಹಸ ಪಡುತ್ತಿರುವುದನ್ನು ವಿಶ್ವದ ಆರ್ಥಿಕತೆ ಕಳವಳದ ಕಣ್ಣುಗಳಿಂದ ನೋಡುತ್ತಿರುವಾಗಲೇ ಚೀನಾ ಇಂಥದೊಂದು ಗಂಭೀರ ಸಮಸ್ಯೆಗೆ ಸಿಲುಕಿಕೊಂಡಿದೆ. ಇದರಿಂದ ವಿಶ್ವ ಮಾರುಕಟ್ಟೆಯ ತಲೆನೋವು ದ್ವಿಗುಣಗೊಂಡಂತಾಗಿದೆ.

ಕಂಪನಿ ಸಭೆಗಳಲ್ಲಿ ಇದರದೇ ಮಾತು!

ವಿವಿಧ ದೇಶಗಳಲ್ಲಿ ಬೇರೆ ಬೇರೆ ಪ್ರಮುಖ ಕಂಪನಿಗಳ ನಿಯಮಿತ ಸಭೆಗಳಲ್ಲಿಯೂ ಕರೊನಾ ಕುರಿತ ಆತಂಕ ವ್ಯಕ್ತವಾಗಿದೆ. ಅಮೆರಿಕವೊಂದರಲ್ಲೇ ಆಪಲ್ ಐಫೋನ್, ಮೆಕ್​ಡೊನಾಲ್ಡ್ಸ್, ಸ್ಟಾರ್​ಬಕ್ಸ್​ನಂತಹ ಮೂವತ್ತು ಕಂಪನಿಗಳ ಇತ್ತೀಚಿನ ಸಭೆಗಳಲ್ಲಿ ‘ಕರೊನಾ ವೈರಸ್’ ಎಂಬ ಪದ ಪದೇಪದೆ ಕಾಣಿಸಿಕೊಂಡಿದೆ ಎನ್ನುತ್ತದೆ ಸಿಎನ್​ಬಿಸಿ ಸುದ್ದಿಸಂಸ್ಥೆಯ ವಿಶ್ಲೇಷಣೆ.

ಯಾವ್ಯಾವ ಕಂಪನಿಗಳು ಏನು ಮಾಡುತ್ತಿವೆ?

ಕರೊನಾ ವೈರಸ್ ಸೋಂಕು ಚೀನಾದಲ್ಲಿ ಈಗಾಗಲೇ ಸುಮಾರು 10 ಸಾವಿರ ಜನಕ್ಕೆ ಹರಡಿ ಭಯ ಹುಟ್ಟಿಸಿದೆ. ಚೀನಾದಲ್ಲಿ ವಹಿವಾಟು ಹೊಂದಿರುವ ಆಪಲ್, ಫೇಸ್​ಬುಕ್, ಟಿಕ್​ಟಾಕ್, ಸ್ಯಾಮ್ಸಂಗ್ ಮತ್ತಿತರ ಜಗತ್ತಿನ ಪ್ರಮುಖ ಕಂಪನಿಗಳು ತಮ್ಮ ನೌಕರರ ಹಿತದೃಷ್ಟಿಯಿಂದ ಹಲವು ಕ್ರಮಗಳನ್ನು ಈಗಾಗಲೇ ಕೈಗೊಂಡಿವೆ. ಯಾವ ಕಂಪನಿ ಏನು ಕ್ರಮ ಕೈಗೊಂಡಿದೆ? ಇಲ್ಲಿದೆ ವಿವರ.

ಗೂಗಲ್ ಚೀನಾ, ಹಾಂಗ್​ಕಾಂಗ್ ಮತ್ತು ತೈವಾನ್​ನಲ್ಲಿರುವ ತನ್ನ ಕಚೇರಿಗಳನ್ನು ಗೂಗಲ್ ಈಗಾಗಲೇ ತಾತ್ಕಾಲಿಕವಾಗಿ ಮುಚ್ಚಿದೆ.

ಫೇಸ್​ಬುಕ್ ಚೀನಾದಲ್ಲಿ ಸಿಲುಕಿಕೊಂಡಿರುವ ತನ್ನ ನೌಕರರು ಮನೆಯಲ್ಲಿದ್ದುಕೊಂಡೇ ಕಚೇರಿಯ ಕೆಲಸ ಕಾರ್ಯಗಳನ್ನು ಮಾಡಬಹುದು ಎಂದು ಫೇಸ್​ಬುಕ್ ಅನುಮತಿ ಕೊಟ್ಟಿದೆ. ಚೀನಾದೊಳಗೇ ಸಂಚರಿಸುವುದಿದ್ದರೂ ಎಚ್ಚರ ವಹಿಸುವಂತೆ, ಅನಗತ್ಯ ಸಂಚಾರಗಳನ್ನು ತಪ್ಪಿಸುವಂತೆ ನೌಕರರಿಗೆ ಕಿವಿಮಾತು ಹೇಳಿದೆ.

ಅಲಿಬಾಬಾ ಫೆಬ್ರವರಿ 2ಕ್ಕೆ ಕೊನೆಗೊಳ್ಳುವ ಚಾಂದ್ರಮಾನ ಹೊಸ ವರ್ಷದ ರಜೆಯ ನಂತರವೂ ಕಚೇರಿಗೆ ಬರುವ ಅವಶ್ಯಕತೆ ಇಲ್ಲ; ಮನೆಯಿಂದಲೇ ಕೆಲಸ ಮಾಡಿ ಎಂದು ಅಲಿಬಾಬಾ ಕಂಪನಿ ತನ್ನ ನೌಕರರಿಗೆ ತಿಳಿಸಿದೆ.

ಆಪಲ್ ಐಫೋನ್ ಮತ್ತಿತರ ಉತ್ಪಾದನೆಗಳನ್ನು ಹೊಂದಿರುವ ಈ ಕಂಪನಿ, ಚೀನಾದ ವಿವಿಧ ಭಾಗಗಳಲ್ಲಿರುವ ಮಳಿಗೆಗಳನ್ನು ಈಗಾಗಲೇ ಮುಚ್ಚಿದೆ. ವೈರಸ್ ಸೋಂಕು ಜಾಸ್ತಿ ಇಲ್ಲದ ಪ್ರದೇಶಗಳಲ್ಲಿಯೂ ಮಳಿಗೆಗಳ ಕಾರ್ಯಾವಧಿಯನ್ನು ಕೆಲವು ಗಂಟೆಗಳಷ್ಟು ಕಾಲ ತಗ್ಗಿಸಿದೆ. ನೌಕರರು ಪ್ರಯಾಣ ಮಾಡುವುದಕ್ಕೂ ನಿರ್ಬಂಧ ಹೇರಿದೆ.

ಟಿಕ್​ಟಾಕ್ ಕನಿಷ್ಠ ಇನ್ನು 14 ದಿನಗಳ ಕಾಲ ಸ್ವಇಚ್ಛೆಯಿಂದಲೇ ಮನೆಯೊಳಗಿರುವಂತೆ, ಯಾವುದೇ ಕಾರಣಕ್ಕೂ ಎಲ್ಲಿಗೂ ಪ್ರಯಾಣ ಮಾಡದಿರುವಂತೆ ಟಿಕ್​ಟಾಕ್ ಮಾಲೀಕ ಬೈಟೆಡನ್ಸ್ ತಮ್ಮ ನೌಕರರಿಗೆ ತಾಕೀತು ಮಾಡಿದ್ದಾರೆ.

ಎಲ್​ಜಿ ಕಂಪನಿ ಎಲ್​ಜಿ ಡಿಸ್ಪೆ್ಲೕ, ಎಲ್​ಜಿ ಎಲೆಕ್ಟ್ರಾನಿಕ್ಸ್, ಎಲ್​ಜಿ ಕೆಮಿಕಲ್ಸ್ ಮುಂತಾದ ಅಂಗಸಂಸ್ಥೆಗಳನ್ನು ಹೊಂದಿರುವ ಎಲ್​ಜಿ ಕಂಪನಿ ತನ್ನ ನೌಕರರು ಚೀನಾಕ್ಕೆ ಪ್ರಯಾಣಿಸುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ.

ಸ್ಯಾಮ್ಸಂಗ್ ಕರೊನಾ ವೈರಸ್ ಸೋಂಕು ಹೆಚ್ಚಾಗಿರುವ ಹುಬೈ ಪ್ರಾಂತ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಕನಿಷ್ಠ 7 ದಿನಗಳ ಕಾಲ ಮನೆಯಲ್ಲೇ ಇರಲು ಸ್ಯಾಮ್ಸಂಗ್ ಕಂಪನಿ ಅನುಮತಿ ನೀಡಿದೆ.

ಸಿ ಟ್ರಿಪ್ ಆನ್​ಲೈನ್ ಬುಕಿಂಗ್ ಕಂಪನಿ ಸಿ ಟ್ರಿಪ್ ತಾನು ಇದುವರೆಗೆ ಮಾಡಿರುವ ಜನವರಿ 22ರಿಂದ ಫೆಬ್ರವಿರಿ 8ರವರೆಗಿನ ಹೋಟೆಲ್ ಮತ್ತು ವಿಮಾನ ಬುಕಿಂಗ್​ಗಳನ್ನು ರದ್ದುಪಡಿಸಿ, ಗ್ರಾಹಕರಿಗೆ ಹಣ ಮರುಪಾವತಿ ಮಾಡುತ್ತಿದೆ.

ಸಾರ್ಸ್​ನಿಂದಲೂ ಹೀಗಾಗಿತ್ತು...

ಹಿಂದೆ 2002-03ರಲ್ಲಿ ಸಾರ್ಸ್ ಹಾವಳಿ ತಲೆದೋರಿದಾಗಲೂ ಹೀಗೆಯೇ ಆಗಿತ್ತು. (ಸಾರ್ಸ್​ನ ವಿಸõತ ರೂಪ- ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್. ಆಗ ಅದಕ್ಕೆ ಚೀನಾದಲ್ಲಿ ಸುಮಾರು 800 ಜನ ಬಲಿಯಾಗಿದ್ದರು. ಅದರಿಂದ ಜಾಗತಿಕ ಅರ್ಥವ್ಯವಸ್ಥೆಗೆ ಒಟ್ಟು 33 ಶತಕೋಟಿ ಡಾಲರ್ ನಷ್ಟವಾಗಿತ್ತು.

ರೂಪಾಯಿಯಲ್ಲಿ ಅಂದಾಜು ಎರಡೂಕಾಲು ಲಕ್ಷ ಕೋಟಿ! 2003ರಲ್ಲಿ ವಿಶ್ವದ ಜಿಡಿಪಿ ಶೇಕಡ 1ರಷ್ಟು ಕುಸಿದಿತ್ತು. 2002ಕ್ಕೆ ಹೋಲಿಸಿದರೆ ಈಗ ಜಾಗತಿಕ ಆರ್ಥಿಕತೆಯಲ್ಲಿ ಚೀನಾದ ಪಾಲು ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ಆದ್ದರಿಂದ ಆಗ ಆದದ್ದಕ್ಕಿಂತಲೂ ಹೆಚ್ಚಿನ ಹಾನಿ ಈಗ ಸಂಭವಿಸಬಹುದು ಎಂಬುದು ವಿಶ್ಲೇಷಕರ ಅಭಿಮತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net