ಜ್ಞಾನಕ್ಕೆ ಜಾತಿ-ಮತದ ಹಂಗಿಲ್ಲ: ಮನೋಲ್ಲಾಸ

Manollasa
Published on
| ಡಾ. ಕೆ.ಪಿ. ಪುತ್ತೂರಾಯ

ಒಮ್ಮೆ ಒಬ್ಬ ಬಾಲಕ ಗುರುಕುಲಕ್ಕೆ ಬಂದು ಗುರುಗಳಿಗೆ ಹೇಳುತ್ತಾನೆ. ‘ಗುರುಗಳೇ, ನನಗೆ ಇಲ್ಲಿಯ ಗುರುಕುಲ ವಾತಾವರಣ ತುಂಬಾ ಹಿಡಿಸಿದೆ; ಇಲ್ಲೇ ಇದ್ದು ವಿದ್ಯಾಭ್ಯಾಸ ಮಾಡಬೇಕೆಂದೂ ಅನಿಸಿದೆ, ನನಗೂ ವಿದ್ಯೆ ಹೇಳಿಕೊಡುವಿರಾ?’ ಉತ್ತರವಾಗಿ ಗುರುಗಳು ‘ಅದಕ್ಕೇನಂತೆ ಆಗಲಿ’ ಎಂದವರೇ ಸ್ವಾಭಾವಿಕವಾದ ಪ್ರಶ್ನೆಯೊಂದನ್ನು ಕೇಳಿದರು- ‘ಅಂದ ಹಾಗೆ ನಿನ್ನ ಗೋತ್ರ ಯಾವುದಪ್ಪಾ?’ ಆ ಹುಡುಗನ ಬಳಿ ಉತ್ತರವಿಲ್ಲವಾಗಿತ್ತು. ಕಾರಣ ಅವನಿಗೆ ಅವನ ಹುಟ್ಟಾಗಲಿ, ಗೋತ್ರವಾಗಲಿ ಯಾವುದೆಂದು ಗೊತ್ತಿರಲಿಲ್ಲ. ಆ ಬಾಲಕ ಅಲ್ಲಿಂದ ಹೊರಟು ಮನೆ ಸೇರಿದವನೇ ಅಮ್ಮನ ಬಳಿ ನಡೆದ ವೃತ್ತಾಂತವನ್ನೆಲ್ಲಾ ಹೇಳಿಕೊಂಡು ‘ನನ್ನ ಗೋತ್ರ ಯಾವುದೆಂಬುದನ್ನು ಹೇಳಮ್ಮ’ ಎಂದು ಒತ್ತಾಯಿಸಿದ.

ಪ್ರಾಮಾಣಿಕಳಾಗಿದ್ದ ಆ ತಾಯಿ ನುಡಿದಳು, ‘ನಿಜ ಹೇಳಬೇಕೆಂದರೆ ನಿನ್ನ ಅಪ್ಪ ಯಾರೂಂತ ನನಗೂ ಗೊತ್ತಿಲ್ಲ ಮಗೂ, ಅಂದ ಮೇಲೆ ನಿನ್ನ ಗೋತ್ರ ಯಾವುದೆಂಬುದನ್ನು ಹೇಗೆ ಹೇಳಲಿ? ನನ್ನ ಅಮ್ಮನ ಗೋತ್ರವೇ ನನ್ನ ಗೋತ್ರವೆಂದು ಗುರುಗಳಿಗೆ ಹೇಳು.’ ಇದನ್ನೇ ಹೇಳಿದ ಆ ಬಾಲಕ ಬ್ರಾಹ್ಮಣ ಮುನಿಯ ಆಶ್ರಮದಲ್ಲಿ ವಿದ್ಯಾಭ್ಯಾಸ ಪಡೆದು ಮುಂದೇ ಜಗತ್ತೇ ಒಪ್ಪಿಕೊಂಡ ಮಹಾಮುನಿಯಾಗುತ್ತಾನೆ. ಅವನೇ ಸತ್ಯಕಾಮಾ ಜಾಬಾಲ. ತನ್ನ ಜಾತಿಯೇ ಗೊತ್ತಿಲ್ಲದವನು ಮಹಾಜ್ಞಾನಿಯಾದುದು, ಜ್ಞಾನ ಜಾತ್ಯಾಧಾರಿತವಲ್ಲವೆಂಬುದನ್ನು ಸ್ಪಷ್ಟಪಡಿಸುತ್ತದೆ. ವೇದಗಳನ್ನು ವಿಂಗಡಿಸಿದ ಮಹರ್ಷಿ ವೇದವ್ಯಾಸರು ಮೇಲ್ಜಾತಿಯ ಕುಲದಲ್ಲಿ ಜನಿಸಿದವರಲ್ಲ; ಅಂಬಿಗರ ಸ್ತ್ರೀಗೆ ಹುಟ್ಟಿದವರು. ರಾಮಾಯಣವನ್ನು ಬರೆದ ವಾಲ್ಮೀಕಿ ಮಹರ್ಷಿ ಹಿಂದುಳಿದ ವರ್ಗಕ್ಕೆ ಸೇರಿದ ವ್ಯಾಧ. ಕವಿರತ್ನ ಕಾಳಿದಾಸ ಮತ್ತು ಸಂತ ಕನಕದಾಸರು, ಜಾತಿಯಲ್ಲಿ ಕುರುಬರು. ಆದಿ ಶಂಕರಾಚಾರ್ಯರ ಜ್ಞಾನವ್ಯಾಪ್ತಿಯನ್ನು ಹೆಚ್ಚಿಸಿದವನು, ಓರ್ವ ಚಾಂಡಾಲ. ಸಂತ ಕಬೀರದಾಸರು ಹಾಗೂ ಸಂತ ಶಿಶುನಾಳ ಷರೀಫರು ಮುಸ್ಲಿಂ ಸಮುದಾಯಕ್ಕೆ ಸೇರಿದವರು.

ಅಂತೆಯೇ ಜ್ಞಾನವೆಂಬುದು ವಯೋಧಾರಿತವೂ ಅಲ್ಲ. ಕೇವಲ 32 ವರುಷಗಳಲ್ಲಿ ಆದಿ ಶಂಕರಾಚಾರ್ಯರು ಜಗದ್ಗುರುಗಳಾಗಿಲ್ಲವೇ? ಬರೇ 39 ವರುಷ ಬಾಳಿದ ಸ್ವಾಮಿ ವಿವೇಕಾನಂದರು ವಿಶ್ವವನ್ನೇ ಬೆರಗುಗೊಳಿಸಿದ ವೀರ ಸನ್ಯಾಸಿಯಾಗಿಲ್ಲವೇ? ‘ನಧರ್ಮವೃದ್ಧೇಷು ವಯಃ ಸಮೀಕ್ಷ ತೇ’ ಎಂಬ ಕಾಳಿದಾಸನ ಮಾತಿನಂತೆ ಜ್ಞಾನಕ್ಕೂ ವಯಸ್ಸಿಗೂ ಸಂಬಂಧವಿಲ್ಲ. ಮಗು ತನ್ನ ತಾಯಿಯಿಂದ ಅನೇಕ ವಿಚಾರಗಳನ್ನು ತಿಳಿದುಕೊಂಡಂತೆ, ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಜಾಣ ತಾಯಿ ಮಕ್ಕಳಿಂದಲೂ ಕಲಿತುಕೊಳ್ಳುತ್ತಾಳೆ. ರೋಗಿಯು ವೈದ್ಯನಿಂದ ಮಾಹಿತಿ ಪಡೆದುಕೊಂಡಂತೆ ವೈದ್ಯನೂ ಚಿಕಿತ್ಸಾ ವಿಧಾನದ ಕುರಿತಾಗಿ ರೋಗಿಯಿಂದ ಬಹಳಷ್ಟು ಸಂಗತಿಗಳನ್ನು ತಿಳಿದುಕೊಳ್ಳುತ್ತಾನೆ. ಒಟ್ಟಿನಲ್ಲಿ ಜ್ಞಾನ ಸಂಪಾದಿಸಲು ಸ್ಥಾನಮಾನಗಳು ಅಡ್ಡಿಯಾಗದು.

ತಾತ್ಪರ್ಯವಿಷ್ಟೆ: ಜ್ಞಾನಕ್ಕೆ ಸೀಮೆ ಇಲ್ಲ; ಜಾತಿ-ಮತ-ವೃತ್ತಿ-ವಯಸ್ಸುಗಳ ಬಂಧನವಿಲ್ಲ. ರತ್ನಾಕರವರ್ಣಿ ಹೇಳಿದಂತೆ ‘ಜ್ಞಾನವಿಲ್ಲದೆ ಭೋಗಿಸುವ ಭೋಗಿ ಭವರೋಗಿ; ಜ್ಞಾನದಿಂದ ಭೋಗಿಸುವ ಭೋಗಿ ಯೋಗಿ’. ಧನವನ್ನು ನಾವೇ ರಕ್ಷಿಸಬೇಕಾಗುತ್ತದೆ. ಆದರೆ ಜ್ಞಾನವು ನಮ್ಮನ್ನೇ ರಕ್ಷಿಸುತ್ತದೆ. ಈ ಸತ್ಯವನ್ನರಿತೇ ಹಿಂದಿನವರು ಹೇಳಿದರು ‘ಜ್ಞಾನವೇ ನಮ್ಮ ಸೊತ್ತಾಗಲಿ ಸಂಪತ್ತಾಗಲಿ’.

(ಲೇಖಕರು ವಾಗ್ಮಿ, ಸಾಹಿತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net