

ಯೋಗ ಪದ್ಧತಿಯಲ್ಲಿ ಉಸಿರಿಗೆ ಅನೇಕ ಆಯಾಮಗಳಿವೆ. ಕೋಪದಲ್ಲಿರುವಾಗ ಒಂದು ರೀತಿಯಲ್ಲಿ, ಸಂತೋಷದಲ್ಲಿದ್ದಾಗ ಮತ್ತೊಂದು ರೀತಿಯಲ್ಲಿ ಉಸಿರಾಡುತ್ತೇವೆ. ನೀವು ಅನುಭವಿಸುವ ಪ್ರತಿಯೊಂದು ಭಾವನೆಗೂ, ನೀವು ನಿರ್ದಿಷ್ಟ ರೀತಿಯಲ್ಲಿ ಉಸಿರಾಡುತ್ತೀರಿ. ಸೂಕ್ಷ್ಮವಾಗಿ ಗಮನಿಸಿದಾಗ, ನೀವು ಹುಟ್ಟು ಹಾಕುವ ಪ್ರತಿಯೊಂದು ಆಲೋಚನೆಗೂ, ವಿಭಿನ್ನ ರೀತಿಯ ಉಸಿರನ್ನು ಹೊಂದಿರುತ್ತೀರಿ; ಪ್ರತಿಯೊಂದು ವಸ್ತುವಿಗೂ, ವಿಭಿನ್ನ ರೀತಿಯ ಉಸಿರನ್ನು ಹೊಂದಿರುತ್ತೀರಿ. ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ, ಸೂಕ್ಷ್ಮ ರೀತಿಯಲ್ಲಿ, ನಿಮ್ಮ ಉಸಿರು ನಿಮ್ಮ ಅನುಭವದ ಪ್ರತಿಯೊಂದು ಅಂಶವನ್ನು, ವಿಶೇಷವಾಗಿ ಮಾನಸಿಕ ಏರುಪೇರುಗಳನ್ನು ಪ್ರತಿಬಿಂಬಿಸುತ್ತದೆ. ನಾನು ನಿಮ್ಮ ಉಸಿರನ್ನು ಆಳವಾಗಿ ಗಮನಿಸಿದರೆ, ನಿಮ್ಮ ಭೂತ, ವರ್ತಮಾನ ಮತ್ತು ಭವಿಷ್ಯವನ್ನು ಹೇಳಬಲ್ಲೆ, ಏಕೆಂದರೆ ನಿಮ್ಮ ಅಸ್ತಿತ್ವದ ಮಾದರಿಯು ನಿಮ್ಮ ಉಸಿರಿನಲ್ಲಿ ಸ್ಪಷ್ಟವಾಗಿ ಬರೆಯಲ್ಪಟ್ಟಿದೆ.
ಯೋಗ ಪದ್ಧತಿಯಲ್ಲಿ, ಉಸಿರನ್ನು ಕೂರ್ಮ ನಾಡಿ ಎಂದು ಕರೆಯಲಾಗುತ್ತದೆ. ಉಸಿರು ನಿಮ್ಮನ್ನು ನಿಮ್ಮ ದೇಹಕ್ಕೆ ಬಂಧಿಸುವ ಸೂತ್ರವಾಗಿದೆ. ನಾನು ನಿಮ್ಮ ಉಸಿರನ್ನು ತೆಗೆದುಹಾಕಿದರೆ, ನೀವು ಮತ್ತು ನಿಮ್ಮ ದೇಹ ಬೇರೆಯಾಗುತ್ತೀರಿ. ಕೂರ್ಮ ನಾಡಿ ಕೇವಲ ಗಾಳಿಯ ಮಾರ್ಗವಲ್ಲ. ಜನರಿಗೆ ಅವರ ಉಸಿರನ್ನು ಗಮನಿಸಲು ಹೇಳಿದರೆ, ಹೆಚ್ಚಿನ ಜನರು ಉಸಿರನ್ನು ಅನುಭವಿಸುವುದಿಲ್ಲ, ಅವರು ಗಾಳಿಯ ಚಲನೆಯಿಂದ ಉಂಟಾಗುವ ಸಂವೇದನೆಗಳನ್ನು ಮಾತ್ರ ಅನುಭವಿಸುತ್ತಾರೆ. ಕೂರ್ಮ ನಾಡಿ ಈ ಸಂವೇದನೆಗಳನ್ನಾಗಲೀ ಅಥವಾ ಎದೆ ಅಥವಾ ಡಯಾಫ್ರಮ್ ಚಲನೆಯನ್ನಾಗಲೀ ಸೂಚಿಸುವುದಿಲ್ಲ. ಇದು ಉಸಿರೇ ಆಗಿದೆ.
ಗಾಳಿಯ ಮಾರ್ಗವಲ್ಲದೆ, ಜೀವವೇ ಆಗಿರುವ ಉಸಿರನ್ನು ಹೇಗೆ ನಿರ್ವಹಿಸುವುದೆಂದು ತಿಳಿದುಕೊಂಡರೆ, ನಿಮ್ಮನ್ನು ಈ ದೇಹಕ್ಕೆ ಸಂರ್ಪಸುವ ಆಯಾಮವು ಸ್ಪಷ್ಟವಾಗುತ್ತದೆ. ಇನ್ನೊಂದು ರೀತಿಯಲ್ಲಿ, ನೀವು ಉಸಿರಿನ ತಾಂತ್ರಿಕತೆಯ ಬಗ್ಗೆ ಪ್ರಜ್ಞಾಪೂರ್ವಕರಾದರೆ, ನಿಮ್ಮ ಬಟ್ಟೆಯಂತೆ ನಿಮ್ಮ ದೇಹವನ್ನು ನೀವೊಂದು ನಿರ್ದಿಷ್ಟ ಸ್ವಾತಂತ್ರ್ಯದಿಂದ ನಿರ್ವಹಿಸಬಹುದು. ನಿಮಗೆ ಅದು ಬೇಡವೆನಿಸಿದಾಗ, ಅದನ್ನು ಬದಿಗಿಡಬಹುದು.
ಯೋಗದಲ್ಲಿ, ಉಸಿರಿನ ಸುತ್ತ ಅಭಿವೃದ್ಧಿಪಡಿಸಲಾದ ಅಸಂಖ್ಯಾತ ಪ್ರಕ್ರಿಯೆಗಳಿವೆ. ಉಸಿರು ಜೀವಶಕ್ತಿಯ ಐದು ಆಯಾಮಗಳನ್ನು ನಿರ್ವಹಿಸುವ ಮಾಧ್ಯಮವಾಗುತ್ತದೆ. ಜೀವಶಕ್ತಿಯು ಐದು ವಿಭಿನ್ನ ರೂಪಗಳಲ್ಲಿ ವ್ಯಕ್ತವಾಗುತ್ತದೆ- ಒಂದನ್ನು ‘ಪ್ರಾಣವಾಯು’ ಎಂದು ಕರೆಯಲಾಗುತ್ತದೆ, ಇದು ಉಸಿರು ಮತ್ತು ಆಲೋಚನಾ ಪ್ರಕ್ರಿಯೆಯನ್ನು ನಿರ್ವಹಿಸುತ್ತದೆ. ಉಸಿರು ಮತ್ತು ಆಲೋಚನಾ ಪ್ರಕ್ರಿಯೆ ನೇರವಾಗಿ ಸಂಪರ್ಕ ಹೊಂದಿವೆ, ಏಕೆಂದರೆ ಪ್ರಾಣವಾಯು ಎರಡನ್ನೂ ನಿರ್ವಹಿಸುತ್ತದೆ. ಉಸಿರು ಎಷ್ಟು ನಿಯಂತ್ರಿತ ಮತ್ತು ಕ್ರಮಬದ್ಧವಾಗಿದೆಯೋ ಅದರ ಪ್ರಕಾರ ಮನಸ್ಸಿನ ಚಟುವಟಿಕೆಯನ್ನು ಕ್ರಮಗೊಳಿಸಬಹುದು. ಉದಾಹರಣೆಗೆ, ನೀವು ಭಯಭೀತರಾದಾಗ ಅಥವಾ ಆತಂಕಗೊಂಡಾಗ, ಉಸಿರು ಇದ್ದಕ್ಕಿದ್ದಂತೆ ಕಿರಿದಾಗುತ್ತದೆ. ಅದು ತೀವ್ರ ಪರಿಸ್ಥಿತಿಯಾಗಿರುವುದರಿಂದ ಅದನ್ನು ಗಮನಿಸುತ್ತೀರಿ, ಆದರೆ ಪ್ರತಿ ಕ್ಷಣದಲ್ಲೂ ನಡೆಯುವ ಸೂಕ್ಷ್ಮ ವಿಷಯಗಳು ಹೆಚ್ಚಿನ ಜನರ ಗಮನಕ್ಕೆ ಬರುವುದಿಲ್ಲ. ‘ಪ್ರಾಣಾಯಾಮ’ ಎಂಬ ಒಂದು ಸಂಪೂರ್ಣ ವಿಜ್ಞಾನವಿದೆ. ಪ್ರಾಣ ಎಂದರೆ ಜೀವಶಕ್ತಿ, ಯಾಮ ಎಂದರೆ ನಿಯಂತ್ರಣ ಅಥವಾ ಪ್ರಭುತ್ವ ಪಡೆಯುವುದು.
ಪ್ರಾಣದ ಇನ್ನೊಂದು ಆಯಾಮವೆಂದರೆ ‘ಸಮಾನ ವಾಯು,’ ಇದು ದೇಹದಲ್ಲಿನ ಉಷ್ಣವನ್ನು ನಿರ್ವಹಿಸುತ್ತದೆ. ಸಾಮಾನ್ಯವಾಗಿ ಇದನ್ನು ಶಾಖ ಎಂದು ಕರೆಯಲಾಗುತ್ತದೆ, ಆದರೆ ಇದು ಜ್ವರದಂಥ ಶಾಖವಲ್ಲ. ಥರ್ವಮೀಟರ್ನಿಂದ ಪರೀಕ್ಷಿಸಿದರೆ, ದೇಹದ ತಾಪಮಾನ ಸಾಮಾನ್ಯವಾಗಿರುತ್ತದೆ. ‘ಉಷ್ಣ’ ಎಂದರೆ ದೇಹವು ಬಿಸಿಯಾಗಿರುವಂತೆ ಅನುಭವವಾಗುವ ಒಂದು ನಿರ್ದಿಷ್ಟ ಮಟ್ಟದ ಶಾಖ. ಸಮಾನ ವಾಯುವಿನ ಮೇಲೆ ಸ್ವಲ್ಪ ಪ್ರಭುತ್ವ ಪಡೆದರೆ, ಯಾವುದೇ ಗುಣ ಸ್ವಭಾವವಿರುವ ಎಲ್ಲ ದೀರ್ಘಕಾಲಿಕ ಕಾಯಿಲೆಗಳನ್ನು ಸುಲಭವಾಗಿ ನಿಯಂತ್ರಿಸಬಹುದು.
ಕೆಲವು ಸಾಂಪ್ರದಾಯಿಕ ವೈದ್ಯ ಪದ್ಧತಿಗಳಲ್ಲಿ, ಸಾಂಪ್ರದಾಯಿಕ ವೈದ್ಯರಿಗೆ ಮೂಲಭೂತ ಅವಶ್ಯಕತೆಯೆಂದರೆ ಸಮಾನ ವಾಯುವಿನ ಮೇಲಿನ ಪ್ರಭುತ್ವ. ಇಂದು ಸಾಂಪ್ರದಾಯಿಕ ಔಷಧಗಳು ಹಿಂದಿನಂತೆ ಕೆಲಸ ಮಾಡದಿರಲು ಕಾರಣವೆಂದರೆ, ಅವು ವ್ಯಕ್ತಿನಿಷ್ಠ ಸ್ವಭಾವದ್ದಾಗಿವೆ- ಔಷಧವನ್ನು ನೀಡುವ ವ್ಯಕ್ತಿಯು ಔಷಧದಷ್ಟೇ ಮುಖ್ಯ. ಇದು ಅಲೋಪಥಿ ವ್ಯವಸ್ಥೆಗೆ ಅರ್ಥವಾಗದ ವಿಷಯ. ಏಕೆಂದರೆ ಅಲೋಪಥಿ ಸಂಪೂರ್ಣವಾಗಿ ರಾಸಾಯನಿಕ ಸ್ವಭಾವದ್ದಾಗಿದೆ. ವೈದ್ಯರು ಇನ್ನು ನಿಮಗೆ ನೇರವಾಗಿ ಔಷಧ ನೀಡುವುದಿಲ್ಲ. ಅವರು ಚೀಟಿ ಬರೆಯುತ್ತಾರೆ ಮತ್ತು ಬೇರೆ ಯಾರೋ ಔಷಧ ನೀಡುತ್ತಾರೆ. ಆದರೆ ಸಾಂಪ್ರದಾಯಿಕ ಔಷಧದಲ್ಲಿ, ಅದನ್ನು ನೀಡುವ ವ್ಯಕ್ತಿಯು ಹೆಚ್ಚು ಮುಖ್ಯ. ಏಕೆಂದರೆ ಔಷಧ ಕೇವಲ ನಿರ್ದಿಷ್ಟ ಶಕ್ತಿ ಪ್ರಕ್ರಿಯೆಯನ್ನು ತಲುಪಿಸುವ ಮಾಧ್ಯಮವಾಗಿ ಬಳಸಲ್ಪಡುತ್ತದೆ.
ನಿಮ್ಮೊಳಗೆ ಒಂದು ನಿರ್ದಿಷ್ಟ ಮಟ್ಟದ ಸಮಾನ ವಾಯುವನ್ನು ಉತ್ಪತ್ತಿ ಮಾಡಿದ ನಂತರ, ನಿಮ್ಮ ಸ್ಪರ್ಶ ಮತ್ತು ಉಪಸ್ಥಿತಿಯೇ ಗುಣಪಡಿಸುವಂತಹದ್ದಾಗಿರುತ್ತದೆ. ಒಂದು ನಿರ್ದಿಷ್ಟ ಸ್ಥಳದಲ್ಲಿದ್ದು, ಕೆಲವು ಸರಳವಾದ ಸಂಗತಿಗಳನ್ನು ಅನುಸರಿಸುವ ಮೂಲಕ ತಮ್ಮ ಕಾಯಿಲೆಗಳಿಂದ ಹೊರಬಂದ ಲಕ್ಷಾಂತರ ಜನರು ನಮ್ಮಲ್ಲಿದ್ದಾರೆ. ಪ್ರಾಣದ ಮುಂದಿನ ಆಯಾಮವನ್ನು ‘ಉದಾನ’ ಎಂದು ಕರೆಯಲಾಗುತ್ತದೆ. ಉದಾನದ ಮೇಲೆ ನಿರ್ದಿಷ್ಟ ಪ್ರಭುತ್ವ ಹೊಂದಿದರೆ, ದೇಹ ಹಗುರವಾಗುತ್ತದೆ ಮತ್ತು ಗುರುತ್ವಾಕರ್ಷಣೆಗೆ ಕಡಿಮೆ ಒಳಗಾಗುತ್ತದೆ. ಇದರರ್ಥ ಸರ್ಕಸ್ ಪ್ರದರ್ಶನದಂತೆ ಗಾಳಿಯಲ್ಲಿ ತೇಲುವುದು ಅಥವಾ ಹಾರಾಡುವುದಲ್ಲ. ಗುರುತ್ವಾಕರ್ಷಣೆಗೆ ಕಡಿಮೆ ಒಳಗಾದರೆ, ದಿನಚರಿಯನ್ನು ನಡೆಸಲು ಬಹಳ ಕಡಿಮೆ ಶಕ್ತಿ ಬೇಕಾಗುತ್ತದೆ. ಬಹಳ ಕಡಿಮೆ ನಿದ್ರೆ ಸಾಕಾಗುತ್ತದೆ ಮತ್ತು ವಿಶ್ರಾಂತಿಯಿಲ್ಲದೆ ದಿನಗಟ್ಟಲೆ ಯಾವುದೇ ರೀತಿಯ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವು ಸಹಜ ಪ್ರಕ್ರಿಯೆಯಾಗುತ್ತದೆ. ಏಕೆಂದರೆ ದೇಹವನ್ನು ಎಳೆದುಕೊಂಡು ಹೋಗುವ ಅಗತ್ಯವಿರುವುದಿಲ್ಲ. ನಿಮ್ಮ ಅನುಭವದಲ್ಲಿ, ದೇಹವು ಬಹಳ ಹಗುರವಾಗುತ್ತದೆ.
ದೇಹವು ಮುಂದೆ ತೇಲಿಕೊಂಡು ಹೋಗುವಂತಿರಬೇಕು, ಅದನ್ನು ಎಳೆದುಕೊಂಡು ಹೋಗಬಾರದು ಎಂದು ಯೋಗ ಪದ್ಧತಿಯಲ್ಲಿ ಹೇಳಲಾಗುತ್ತದೆ. ಅದನ್ನು ಎಳೆದುಕೊಂಡು ಹೋಗುತ್ತಿದ್ದರೆ, ಯಾವಾಗಲೂ ವಿಶ್ರಾಂತಿಯನ್ನು ಹುಡುಕುತ್ತಿರುತ್ತೀರಿ. ಅದು ತೇಲುವ ರೀತಿಯಲ್ಲಿದ್ದರೆ, ಚಟುವಟಿಕೆಗಳನ್ನು ಎದುರು ನೋಡುತ್ತೀರಿ. ಮೂಲತಃ, ಇದು ಒಬ್ಬರ ಜೀವನದ ಚೈತನ್ಯವನ್ನು ಅದ್ಭುತವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಮುಂದಿನ ಆಯಾಮವೆಂದರೆ ಅಪಾನ. ಉಸಿರಿನೊಂದಿಗೆ ಕೆಲವು ಪ್ರಕ್ರಿಯೆಗಳನ್ನು ಮಾಡಿದರೆ, ಮಾತು ಹೊರಬರುವ ರೀತಿಯು ತಾನಾಗಿಯೇ ಬದಲಾಗುತ್ತದೆ. ಸಮಾಜದಲ್ಲಿ ನಿಮ್ಮ ಪರಿಣಾಮಕಾರಿತ್ವವು, ನಿಮ್ಮಲ್ಲಿರುವ ವಿಚಾರವನ್ನು ಸ್ಪಷ್ಟವಾಗಿ ತಿಳಿಸುವ ನಿಮ್ಮ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ನಿಮ್ಮ ಧ್ವನಿ (ಮಾತುಗಳು) ನಿರ್ದಿಷ್ಟವಾದ ಏರಿಳಿತಗಳನ್ನು ಹೊಂದಿದ್ದರೆ, ನೀವು ಮಾತನಾಡುವಾಗ ಜನರು ತಾವಾಗಿಯೇ ಗಮನ ಕೊಡುತ್ತಾರೆ. ಬೇರೆ ರೀತಿಯ ಏರಿಳಿತಗಳನ್ನು ಹೊಂದಿದ್ದರೆ, ಯಾಕೆಂದು ತಿಳಿಯದೆಯೇ, ಜನರು ನಿಮ್ಮನ್ನು ವಿರೋಧಿಸುತ್ತಾರೆ.
ಐದನೇ ಆಯಾಮವನ್ನು ವ್ಯಾನ ಎಂದು ಕರೆಯಲಾಗುತ್ತದೆ. ಇದು ದೇಹದ ಸಂರಕ್ಷಣಾತ್ಮಕ ಅಂಶ. ಶಾಂಭವಿ ಮಹಾಮುದ್ರಾ ಕ್ರಿಯೆಯನ್ನು ಅಭ್ಯಾಸ ಮಾಡುವ ಜನರ ಮೇಲೆ ಅನೇಕ ಅಧ್ಯಯನಗಳನ್ನು ಮಾಡಲಾಗಿದೆ. ಮೂರು ತಿಂಗಳ ಅಭ್ಯಾಸದ ನಂತರ ಜನರ ಮಿದುಳಿನ ಎಡ ಮತ್ತು ಬಲ ಭಾಗಗಳ ನಡುವಿನ ಸಾಮರಸ್ಯವು ಅದ್ಭುತವಾಗಿ ಹೆಚ್ಚಾಗಿರುವುದನ್ನು ಅಧ್ಯಯನವು ಕಂಡುಕೊಂಡಿದೆ. ಇದರರ್ಥ ಮಿದುಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ಆರಂಭಿಸುತ್ತಿದ್ದೀರಿ. ಇದು ಏಕೆಂದರೆ ಜೀವನದ ಪ್ರತಿ ಕ್ಷಣದಲ್ಲೂ, ಹಳೆಯ ಕೋಶಗಳು ಸಾಯುತ್ತವೆ ಮತ್ತು ಹೊಸ ಕೋಶಗಳು ರೂಪುಗೊಳ್ಳುತ್ತವೆ ಮತ್ತು ಸಂರಕ್ಷಣೆ ಬಹಳ ಉತ್ತಮವಾಗಿರುವುದರಿಂದ, ರೂಪುಗೊಳ್ಳುವ ಹೊಸ ಕೋಶಗಳ ಸಂಖ್ಯೆಯು ಸಾಯುವ ಹಳೆಯ ಕೋಶಗಳ ಸಂಖ್ಯೆಗೆ ಸಮನಾಗಿರುತ್ತದೆ.
ಇವು ದೇಹದ ವಿವಿಧ ಅಂಶಗಳನ್ನು ನಿರ್ವಹಿಸುವ ಪ್ರಾಣದ ಐದು ಆಯಾಮಗಳು. ಇವೆಲ್ಲಕ್ಕೂ, ಉಸಿರಿನ ಮೂಲಕ ಒಂದು ಮಾರ್ಗವಿದೆ. ಇದನ್ನು ಮಾಡಲು ಬೇರೆ ಮಾರ್ಗಗಳೂ ಇವೆ, ಆದರೆ ಅವು ಬಹಳ ಸಂಕೀರ್ಣವಾಗಿವೆ ಮತ್ತು ಹೆಚ್ಚಿನ ತಯಾರಿಯ ಅಗತ್ಯವಿರುತ್ತದೆ. ಪ್ರಾರಂಭಿಕ ಮಾರ್ಗವಾಗಿ ಜನರಿಗೆ ಉಸಿರು ಸುಲಭದ್ದಾಗಿದೆ. ನೀವೇ ಉಸಿರಾಡುತ್ತಿದ್ದೀರಿ ಎಂದು ಯೋಚಿಸುವುದು ಬಹಳ ಪ್ರಾಥಮಿಕವಾದುದು. ಭೌತಿಕ ಮಟ್ಟದಲ್ಲಿಯೂ, ನೀವು ಬಿಡುವ ಉಸಿರನ್ನು ಮರಗಳು ಹೀರುತ್ತವೆ ಮತ್ತು ಅವು ಬಿಡುವ ಉಸಿರನ್ನು ನೀವು ಹೀರುತ್ತೀರಿ. ಇದರರ್ಥ ನಿಮ್ಮ ಶ್ವಾಸಕೋಶದ ಅರ್ಧಭಾಗವು ಆ ಮರದ ಮೇಲೆ ನೇತಾಡುತ್ತಿದೆ. ಉಸಿರು ಸಂಪೂರ್ಣವಾಗಿ ನಿಮ್ಮ ಕ್ರಿಯೆಯಲ್ಲ. ಭೌತಿಕ ವ್ಯವಸ್ಥೆಯೊಳಗೆ ಇರುವುದಕ್ಕಿಂತ ಬಹಳ ದೊಡ್ಡದಾದುದು ನಮ್ಮ ಜೀವನ. ಭೌತಿಕ ದೇಹವು ಅದರ ಒಂದು ಭಾಗ ಮಾತ್ರ. ಉಳಿದ ಭಾಗವು ಎಲ್ಲೆಡೆ ನಡೆಯುತ್ತಿದೆ. ಆದ್ದರಿಂದ ಉಸಿರು ನಿಮ್ಮ ಬಗ್ಗೆ ಮಾತ್ರವಲ್ಲ, ಅದಕ್ಕೆ ಬ್ರಹ್ಮಾಂಡಕ್ಕೆ ಸಂಬಂಧಿತ ಪರಿಣಾಮಗಳಿವೆ.