ಕಿರಿಕ್​ ಟು ಕಿರಿಕ್​ ಪಾರ್ಟಿ-2...

Kirik 26 Feb 20
Published on

ಬೆಂಗಳೂರು: ಯಾರಾದರೂ ತಮ್ಮತ್ತ ಕಲ್ಲುಗಳನ್ನು ಎಸೆದರೆ ಅದನ್ನೇ ತಮ್ಮ ಮುಂದಿನ ಸಾಧನೆಗೆ ಮೆಟ್ಟಿಲನ್ನಾಗಿಸಿಕೊಳ್ಳಬೇಕು ಎಂಬ ಮಾತಿದೆ. ಸದ್ಯಕ್ಕೆ ಅದನ್ನು ಅಕ್ಷರಶಃ ನಿಜವಾಗಿಸಿಕೊಂಡವರು ಯಾರೆಂದರೆ, ಅದಕ್ಕೆ ಉತ್ತರ ‘ಅವನೇ..’; ಅರ್ಥಾತ್ ರಕ್ಷಿತ್ ಶೆಟ್ಟಿ. ಕಳೆದ ಕೆಲಕಾಲದಿಂದ ಕೆಲವರು ತಮ್ಮ ವಿರುದ್ಧ ಮಾಡುತ್ತಿರುವ ಮಸಲತ್ತಿನ ಕುರಿತ ಯೋಚನಾಲಹರಿಯಲ್ಲಿದ್ದ ರಕ್ಷಿತ್​ಗೆ, ‘ಕಿರಿಕ್ ಪಾರ್ಟಿ 2’ ಮಾಡುವ ಐಡಿಯಾ ಹೊಳೆದಿದೆಯಂತೆ.

ಮೂರು ವರ್ಷಗಳ ಹಿಂದೆ ಎಂದರೆ 2016ರ ಡಿಸೆಂಬರ್​ನಲ್ಲಿ ತೆರೆ ಕಂಡಿದ್ದ ತಮ್ಮ ‘ಕಿರಿಕ್ ಪಾರ್ಟಿ’ ಸಿನಿಮಾದ ಸೀಕ್ವೆಲ್ ರೀತಿಯಲ್ಲಿ ‘ಕಿರಿಕ್ ಪಾರ್ಟಿ 2’ ಮೂಡಿ ಬರಲಿದೆ ಎಂದು ಅವರು ತಿಳಿಸಿದ್ದಾರೆ. ಅಂದಹಾಗೆ ಈ ‘ಕಿರಿಕ್ ಪಾರ್ಟಿ 2’ಗೆ ಪ್ರೇರಣೆಯೇ ಕಿರಿಕ್. ಹಾಗಂತ ಅವರು ಈ ಹಿಂದೆ ಮಾಡಿರುವ ಸಿನಿಮಾ ಸ್ಫೂರ್ತಿಯಲ್ಲ. ಬದಲಿಗೆ, ಆ ‘ಕಿರಿಕ್ ಪಾರ್ಟಿ’ಯಲ್ಲಿನ ‘ಹೇ ಹೂ ಆರ್ ಯೂ..’ ಹಾಡಿನ ಸಂಬಂಧ ಕಾಪಿರೈಟ್ ಕಾಯ್ದೆ ಅನ್ವಯ ‘ಲಹರಿ ರೆಕಾರ್ಡಿಂಗ್ ಕಂಪನಿ’ ಹೂಡಿರುವ ಮೊಕದ್ದಮೆಯೇ ಈ ‘ಕಿರಿಕ್ ಪಾರ್ಟಿ 2’ಗೆ ಪ್ರೇರಣೆ. ಮೂರು ವರ್ಷಗಳ ಹಿಂದೆ ಆ ಕೇಸ್​ನಲ್ಲಿ ಜಯ ಸಿಕ್ಕಿದ್ದರೂ ಮತ್ತೆ ಅದೇ ವಿಷಯದ ಸಂಬಂಧ ಇತ್ತೀಚೆಗೆ ಮತ್ತೆ ಕೇಸ್ ದಾಖಲಿಸಿ ಕಿರಿಕ್ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ರಕ್ಷಿತ್​ಗೆ ಈ ಸೀಕ್ವೆಲ್ ಐಡಿಯಾ ಹೊಳೆದಿದೆ. ‘ಸಿನಿಮಾ ಬಿಡುಗಡೆ ಮುನ್ನ ಕೇಸ್ ಹಾಕಿ ಕಿರಿಕ್ ಮಾಡುವ ಪ್ರಕರಣಗಳ ಹಿನ್ನೆಲೆಯಲ್ಲಿ ಒಂದೆಳೆ ಕಥೆ ಹೊಳೆದಿದ್ದು, ಚಿತ್ರಕಥೆ ರಚಿಸಲು ಸಿದ್ಧತೆ ನಡೆಸಿದ್ದು, ಶೀಘ್ರದಲ್ಲೇ ಸ್ಕ್ರಿಪ್ಟ್ ಪೂರ್ಣಗೊಳ್ಳಲಿದೆ. ಇದಕ್ಕೂ ‘ಕಿರಿಕ್ ಪಾರ್ಟಿ’ ತಂಡವೇ ಕೆಲಸ ಮಾಡಲಿದೆ. ರಿಷಬ್ ಶೆಟ್ಟಿ ನಿರ್ದೇಶನ, ಸಂಯುಕ್ತಾ ಹೆಗಡೆ ನಾಯಕಿಯರಲ್ಲಿ ಒಬ್ಬರಾಗಿರಲಿದ್ದಾರೆ. ನಾಯಕನಾಗಿ ನಾನೇ ಅಭಿನಯಿಸಲಿದ್ದೇನೆ’ ಎಂದಿರುವ ರಕ್ಷಿತ್, ಹೆಚ್ಚಿನ ಮಾಹಿತಿ ಸದ್ಯದಲ್ಲೇ ಹಂಚಿಕೊಳ್ಳಲಾಗುವುದು ಎಂದಿದ್ದಾರೆ.

ಇತ್ತೀಚೆಗೆ ನಡೆಯುತ್ತಿರುವ ಘಟನೆಗಳನ್ನೇ ಆಧರಿಸಿ ‘ಕಿರಿಕ್ ಪಾರ್ಟಿ 2’ ಮಾಡಲಾಗುವುದು. ಸಿನಿಮಾ ಬಿಡುಗಡೆಗೂ ಮುನ್ನ ಕೇಸ್ ಹಾಕಿ ಕಿರಿಕ್ ಮಾಡಿರುವಂಥ ಘಟನೆಗಳೇ ಈ ಚಿತ್ರದ ಕಥೆಗೆ ಸ್ಫೂರ್ತಿ | ರಕ್ಷಿತ್ ಶೆಟ್ಟಿ ನಟ-ನಿರ್ದೇಶಕ-ನಿರ್ಮಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net