

ಭೂ ಸುಧಾರಣಾ ಕಾಯ್ದೆಯ ಮೂಲಕ ಉಳುವವರೇ ಭೂಮಿ ಒಡೆಯರು ಎಂಬ ಐಸಿಹಾಸಿಕ ಹಾಗೂ ಕ್ರಾಂತಿಕಾರಕ ಕಾನೂನು ತಂದರು. ಇದರಿಂದ ಲಕ್ಷಾಂತರ ಬಡವರಿಗೆ ಭೂಮಿ ಸಿಕ್ಕುವಂತಾಯಿತು. ಈಗ ಆ ಕಾನೂನು ಅರಸು ಆಶಯಕ್ಕೆ ವಿರುದ್ಧವಾಗಿ ಬದಲಾಗುತ್ತಿರುವುದು ನೋವಿನ ಸಂಗತಿಯೂ ಹೌದು.
ದೇವರಾಜ ಅರಸು ನನ್ನನ್ನು ರಾಜಕೀಯಕ್ಕೆ ಕರೆತಂದರೆಂದು ಈ ಮಾತನ್ನು ಹೇಳುತ್ತಿಲ್ಲ. ಅವರಿಗಿದ್ದ ದೂರದೃಷ್ಟಿ, ಚಿಂತನಾಶೀಲತೆ, ಗಟ್ಟಿಯಾದ ನಾಯಕತ್ವ, ಬಡವರ ಹಾಗೂ ತಳ ಸಮುದಾಯದ ಜನರ ಬಗ್ಗೆ ಇದ್ದ ಕಾಳಜಿ, ಯಾವುದೇ ಪ್ರಚಾರ ಇಲ್ಲದೆ ಮಾಡಿದ ಸಾಮಾಜಿಕ ಕ್ರಾಂತಿ ಇವೆಲ್ಲವನ್ನೂ ಹತ್ತಿರದಿಂದ ನೋಡಿದ ನಂತರವಷ್ಟೇ ಅವರನ್ನು ಆ ಸ್ಥಾನದಲ್ಲಿಟ್ಟು ನೋಡುತ್ತಿದ್ದೇನೆ.
ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ 1915 ಆಗಸ್ಟ್ 20ರಂದು ಜನಿಸಿದ ಅರಸು ಮೈಸೂರು ಒಡೆಯರ ವಂಶಸ್ಥರು. ಆದರೆ ಅವರೆಂದು ರಾಜ ಮನೆತನದ ಸೆಳೆತಕ್ಕೆ ಸಿಲುಕಲಿಲ್ಲ. ಅವರು ಹಳ್ಳಿಯಲ್ಲಿ ಕೃಷಿಕರಾದರು. ಹಸುಗಳನ್ನು ಸಾಕಿ ಹಾಲು ಕರೆದು ಹೈನುಗಾರಿಕೆ ನಡೆಸಿದರು. ಮೈಸೂರು ಭಾಗದ ಜನ ಅರಸು ಅವರನ್ನು ಪ್ರೀತಿಯಿಂದ ‘ಬುದ್ದಿ’ ಎಂದೇ ಕರೆಯುತ್ತಿದ್ದರು. ರಾಜ್ಯದ ರಾಜಕಾರಣ, ಸಾಮಾಜಿಕ ಸ್ಥಿತಿಯನ್ನು ಅರಸು ಅವರಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡ ಬೇರೊಬ್ಬ ನಾಯಕನನ್ನು ಕಾಣುವುದು ಸಾಧ್ಯವಿಲ್ಲ.
ದೀರ್ಘಾವಧಿ ಸಿಎಂ: 1952 ರಿಂದ 80ರ ತನಕ ಅರಸು ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದರು. ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದ ದಾಖಲೆ ಸಹ ಅವರದ್ದೇ.
ಅರಸು ಸಾಧನೆಗಳು: ದೇವರಾಜ ಅರಸು ಅವರನ್ನು ನೆನಪಿಸಿಕೊಂಡ ಕೂಡಲೇ ಅವರ ಸಾಧನೆಗಳು ನಮ್ಮ ಕಣ್ಣೆದುರು ತೆರೆದುಕೊಳ್ಳುತ್ತವೆ. ಸಾಧನೆಗಳು ಮಾತನಾಡಬೇಕು ಎಂಬ ನುಡಿಯನ್ನು ನೆನಪಿಸುತ್ತವೆ.
ಅರಸು ಭ್ರಷ್ಟಾಚಾರಿಯಲ್ಲ: ದೇವರಾಜ ಅರಸು ಅವರನ್ನು ‘ಭ್ರಷ್ಟಾಚಾರಿ’ ಎಂಬಂತೆ ಚಿತ್ರಿಸುವ ಕೆಲಸ ಮೊದಲಿನಿಂದಲೂ ನಡೆಯುತ್ತಿದೆ. ಆದರೆ ವಾಸ್ತವದಲ್ಲಿ ಅರಸು ಭ್ರಷ್ಟರಲ್ಲ. ವೈಯಕ್ತಿಕವಾಗಿ ಅವರು ಹಣ ಮಾಡಿದವರಲ್ಲ ಎಂಬ ವಾಸ್ತವ ಅವರ ನಿಧನದ ನಂತರವೇ ಅರಿವಾಗಿದ್ದು. ಅವರ ಪತ್ನಿ ವರ್ಗಾವಣೆ ವಿಚಾರದಲ್ಲಿ ಪ್ರಭಾವ ಬೀರುತ್ತಾರೆ ಎಂಬ ಮಾಹಿತಿ ಸಿಕ್ಕಕೂಡಲೇ ಅಧಿಕಾರಿಗಳನ್ನು ಕರೆದು ಎಚ್ಚರಿಕೆ ನೀಡಿದ್ದನ್ನು ಕಂಡಿದ್ದೇನೆ. ರಾಜಕಾರಣದ ಹಣ ರಾಜಕಾರಣಕ್ಕೆ ಬಳಸಬೇಕು ಎಂಬುದು ಅವರ ನಂಬಿಕೆ.
ಅರಸು ಯಾವತ್ತೂ ಕುಟುಂಬ ರಾಜಕಾರಣ ಮಾಡಿದವರಲ್ಲ. ಅಳಿಯ ಅಥವಾ ಮಕ್ಕಳನ್ನು ಅವರು ಬದುಕಿರುವ ತನಕ ರಾಜಕೀಯಕ್ಕೆ ತರಲಿಲ್ಲ. ಅರಸು ಪ್ರಭಾವದಿಂದ ಕಾಂಗ್ರೆಸ್ ಸೇರ್ಪಡೆ: ನಾನು ಇಂದಿರಾ ಗಾಂಧಿ ವಿರೋಧಿ ರಾಜಕಾರಣ ಮಾಡಿಕೊಂಡು ಬಂದವನು. ಆದರೆ ಅರಸು ಬಗ್ಗೆ ವಿಶೇಷ ಒಲವು. 1978ರಲ್ಲಿ ಕಾಂಗ್ರೆಸ್ ಇಬ್ಭಾಗವಾಯಿತು. ಮಡಿಕೇರಿ ಶಾಸಕರಾಗಿದ್ದ ಬೆಳ್ಳಿಯಪ್ಪ, ರೆಡ್ಡಿ ಕಾಂಗ್ರೆಸ್ ಸೇರಿದ್ದರು. ನನ್ನ ಬಗ್ಗೆ ಮಾಹಿತಿ ಪಡೆದಿದ್ದ ಅರಸು ಮಡಿಕೇರಿಗೆ ಬಂದಾಗ ಆರ್.ಗುಂಡೂರಾವ್ ಮತ್ತು ಎಫ್.ಎಂ.ಖಾನ್ ಮೂಲಕ ನನ್ನನ್ನು ಕರೆಸಿ ಕಾಂಗ್ರೆಸ್ ಸೇರಿ ಚುನಾವಣೆಗೆ ಸ್ಪರ್ಧಿಸುವಂತೆ ಮನವಿ ಮಾಡಿದರು. ನನ್ನ ತಂದೆ ಚೆಂಗಪ್ಪ ಹಾಗೂ ಇತರ ಗೆಳೆಯರೊಂದಿಗೆ ಚರ್ಚೆ ಮಾಡಿ ಕೊನೆಗೆ ಒಪ್ಪಿಕೊಂಡೆ. ಸದನದಲ್ಲಿ ನನ್ನ ಭಾಷಣಗಳನ್ನು ಕೇಳುತ್ತಿದ್ದ ಅವರು ಮೆಚ್ಚುಗೆ ಸೂಚಿಸುತ್ತಿದ್ದರು. ಸಿಬಿಐಗೆ ರಾಜ್ಯದಲ್ಲಿ ತನಿಖೆಗೆ ಇದ್ದ ಮುಕ್ತ ಅವಕಾಶವನ್ನು ಅರಸು ರದ್ದು ಮಾಡಿದರು. ಅದನ್ನು ಸಮರ್ಥನೆ ಮಾಡಿ ನಾನು ಮಾಡಿದ ಭಾಷಣ ಅವರನ್ನು ಸೆಳೆದಿತ್ತು. ಮುಂದೆ ನನ್ನನ್ನು ಅರಣ್ಯ ಮಂತ್ರಿ ಮಾಡಿದರು. ಇದನ್ನೂ ಓದಿ: ರಾಜಧರ್ಮ ರಾಜನೀತಿ: ಕೇರಳವೇ, ನಿನಗಾಗಿ ಅಳುವವರು ಎಷ್ಟು ಜನ?
1978ರಲ್ಲಿ ಚಿಕ್ಕಮಗಳೂರು ಕ್ಷೇತ್ರ ಇಂದಿರಾ ಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡುವಲ್ಲಿ ಅರಸು ಹೋರಾಟವನ್ನು ಹತ್ತಿರದಿಂದ ಕಂಡಿದ್ದೇನೆ. ಆದರೆ ಆ ನಂತರ ಇಂದಿರಾ ಬಳಿಯಲ್ಲಿ ಅರಸು ವಿರುದ್ಧ ಕೆಲವರು ಚಾಡಿ ಹೇಳುವವರು ಹೆಚ್ಚಾದರು. ಅರಸು ಪರವಾಗಿ ಯಾರು ಮಾತನಾಡುವವರೇ ಇಲ್ಲದಂತಾಯಿತು. ಇದರ ಫಲ ಇಬ್ಬರ ನಡುವೆ ಅಂತರ ಹೆಚ್ಚಾಯಿತು. ಪರಿಣಾಮ ಆರ್.ಗುಂಡೂರಾವ್ ಸಿಎಂ ಆದರು. ಅರಸು ಬಹಳ ನಂಬಿದ್ದ ಎಚ್.ಸಿ.ಶ್ರೀಕಂಠಯ್ಯ, ಎಸ್.ಎಂ. ಯಾಹ್ಯರಂತವರು ದೂರವಾದರು. ಗುಂಡೂರಾವ್ ನನಗೂ ಅವರೊಂದಿಗೆ ಸೇರುವಂತೆ ಆಹ್ವಾನಿಸಿದರು. ಆದರೆ ನಾನು ಅವರೊಂದಿಗೆ ಹೋಗದೇ ಅರಸು ಜತೆಯಲ್ಲಿ ಉಳಿದೆ. ಕಾಂಗ್ರೆಸ್ ಯು ಜನತಾ ಪಕ್ಷದೊಂದಿಗೆ ಲೋಕಸಭೆಗೆ ಸ್ಪರ್ಧಿಸಿತ್ತು. ಆದರೆ ಜನತಾ ಪಕ್ಷ ಸೋಲು ಅನುಭವಿಸಿತು. ರಾಜ್ಯದಲ್ಲಿಯೂ ಸೋಲು ಅನುಭವಿಸಿತು. ಅದರ ಪರಿಣಾಮ ನೈತಿಕ ಹೊಣೆ ಹೊತ್ತು ಅರಸು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಅಂತಹ ಬದ್ಧತೆ ಅವರದು.
ರಾಜ್ಯದ ನೆಲ, ಜಲ, ಸಂಸ್ಕೃತಿಯನ್ನು ಅರಸು ಅವರಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡವರು ಮತ್ತೊಬ್ಬರಿಲ್ಲ. ಕ್ರಾಂತಿರಂಗ ಅವರ ಕಲ್ಪನೆಯ ಕೂಸು. ಆದರೆ 1983ರ ಚುನಾವಣೆಗೆ ಮುನ್ನ ಅಂದರೆ 1982ರಲ್ಲಿ ಅರಸು ತೀರಿ ಹೋದರು. ಇಲ್ಲದಿದ್ದರೆ ರಾಜ್ಯದಲ್ಲಿ ಜನತಾ ಪಕ್ಷವೇ ಕ್ರಾಂತಿರಂಗದಲ್ಲಿ ವಿಲೀನವಾಗುತ್ತಿತ್ತೋ ಏನೋ? ಅರಸು ಅವರೇ ಕಾಂಗ್ರೆಸೇತರ ಮೊದಲ ಮುಖ್ಯಮಂತ್ರಿ ಆಗಿರುತ್ತಿದ್ದರು ಎಂಬುದು ನನ್ನ ಅಭಿಪ್ರಾಯ. ಇದನ್ನೂ ಓದಿ: ವಿಶ್ವಗುರು: ರಾಮರಾಜ್ಯ ಭ್ರಾಮಕ ಕಲ್ಪನೆಯಲ್ಲ!
ಅಧಿಕಾರ ಇಲ್ಲದಿದ್ದರೂ ಅರಸು ಬಳಿಯಲ್ಲಿ ಜನ ಇರುತ್ತಿದ್ದರು. ನಿಜವಾದ ಜನನಾಯಕರಿಗೆ ಇರುವ ಅರ್ಹತೆ ಅದು. ಅಂತಹ ನಾಯಕರೊಂದಿಗೆ ಕೆಲಸ ಮಾಡಿದ್ದು ನನ್ನ ಪುಣ್ಯ.
(ಲೇಖಕರು ರಾಜ್ಯದ ಮಾಜಿ ಕಾನೂನು ಸಚಿವರು)