

ಆ ಮನೆ ಖಾಲಿಯಾದಾಗ ಮುರಳಿ ಬಾಡಿಗೆದಾರರಿಗಾಗಿ ಹುಡುಕತೊಡಗಿದರು. ಆಗ ಅಕ್ಷಯ್ (28) ಎನ್ನುವ ಅವಿವಾಹಿತ ಯುವಕ ಆ ಮನೆಯನ್ನು ಬಾಡಿಗೆಗೆ ಕೇಳಿಕೊಂಡು ಬಂದ. ತಾವು ಅವಿವಾಹಿತರಿಗೆ ಬಾಡಿಗೆ ಕೊಡುವುದಿಲ್ಲವೆಂದು ಮುರಳಿ ಅವನಿಗೆ ಖಡಾಖಂಡಿತವಾಗಿ ತಿಳಿಸಿದರೂ ಆತ ಸುಮ್ಮನಿರಲಿಲ್ಲ. ‘ನಾನು ಇನ್ನೊಂದು ವರ್ಷದ ಒಳಗೆ ಮದುವೆ ಮಾಡಿಕೊಳ್ಳುತ್ತೇನೆ, ಮಾಡಿಕೊಳ್ಳದಿದ್ದರೆ ನೀವು ನನ್ನನ್ನು ಮನೆಯಿಂದ ಬಿಡಿಸಿ’ ಎಂದ ಅಕ್ಷಯ್, ತಾನು ಒಂದು ವರ್ಷದ ಬಾಡಿಗೆಯನ್ನೂ ಕೂಡಲೇ ಕೊಡಲೊಪ್ಪಿದ. ಮುರಳಿ ಎಷ್ಟು ನಿರಾಕರಿಸಿದರೂ ಆತ ಸುಮ್ಮನಾಗಲಿಲ್ಲ. ಕಡೆಗವರು ಅವನಿಗೆ ತಮ್ಮ ಮನೆಯನ್ನು ಬಾಡಿಗೆಗೆ ಕೊಟ್ಟರು.
ಸ್ಪುರದ್ರೂಪಿಯಾಗಿದ್ದ ಅಕ್ಷಯ್ ಉತ್ತಮ ವಾಗ್ಮಿಯೂ ಆಗಿದ್ದ. ಆತ ತಿಂಗಳಿಗೆ 15 ದಿನಗಳ ಕಾಲ ರಾತ್ರಿಯ ಶಿಫ್ಟ್ ಡ್ಯೂಟಿ ಮಾಡುತ್ತಿದ್ದ. ಬೆಳಗಿನ ಸುಮಾರು 6 ಗಂಟೆಗೆ ಮನೆಗಾಗಮಿಸಿ ಮಲಗಿಬಿಡುತ್ತಿದ್ದ. ಮಧ್ಯಾಹ್ನವೆದ್ದು ತಾನೇ ಅಡಿಗೆ ಮಾಡಿಕೊಂಡು ಊಟ ಮಾಡಿ ವೈಯಕ್ತಿಕ ಕೆಲಸದಲ್ಲಿ ನಿರತನಾಗಿರುತ್ತಿದ್ದ. ಕೆಲವು ದಿನಗಳ ನಂತರ ಆತ ಮುರಳಿಯವರ ಮೊಮ್ಮಕ್ಕಳನ್ನು ಪರಿಚಯ ಮಾಡಿಕೊಂಡು ಸಂಜೆ ಅವರಿಬ್ಬರನ್ನೂ ತನ್ನ ಮನೆಗೆ ಕರೆದು ಅವರೊಡನೆ ಆಟವಾಡುತ್ತಿದ್ದ.
ಹೀಗೆಯೇ ಒಂದು ಸಂಜೆ ಅಕ್ಷಯ್ನ ಮನೆಯಲ್ಲಿದ್ದ ತನ್ನ ಮಕ್ಕಳನ್ನು ಕರೆತರಲು ರಶ್ಮಿ ಅಲ್ಲಿಗೆ ಹೋದಾಗ ಅಕ್ಷಯ್ ಅವಳ ಹೆಚ್ಚಿನ ಪರಿಚಯ ಮಾಡಿಕೊಂಡ. ತನ್ನ ಮಾತುಗಳ ಮೂಲಕವೇ ರಶ್ಮಿಯನ್ನು ಚುಂಬಕದಂತೆ ಆಕರ್ಷಿಸಿದ. ಮುಂದಿನ ದಿನಗಳಲ್ಲಿ ತನ್ನ ಮಕ್ಕಳನ್ನು ಕರೆತರುವ ನೆಪದಲ್ಲಿ ರಶ್ಮಿ ಅವನ ಮನೆಗೆ ಹೋಗಿ ಅವನೊಡನೆ ಬಹಳ ಸಮಯ ಹರಟೆ ಹೊಡೆಯಲಾರಂಭಿಸಿದಳು. ದಿನಗಳೆದಂತೆ ಅವರಿಬ್ಬರ ನಡುವೆ ದೈಹಿಕ ಸಂಪರ್ಕವೂ ಏರ್ಪಟ್ಟಿತು. ರಶ್ಮಿಯ ನಡವಳಿಕೆಯನ್ನು ಸೂಕ್ಷವಾಗಿ ಗಮನಿಸಿದ್ದ ಅವಳ ಅತ್ತೆ ಮನೋರಮಾ ಅಕ್ಷಯ್ನ ಮನೆಗೆ ಮಕ್ಕಳನ್ನು ಕರೆತರುವ ನೆವದಲ್ಲಿ ಹೋಗಬಾರದೆಂದು ತಾಕೀತು ಮಾಡಿದರು. ಇದಲ್ಲದೆ ಅವರು ಪ್ರತಿ ಸಂಜೆಯೂ ರಶ್ಮಿಯ ಚಲನವಲನಗಳನ್ನೇ ಸೂಕ್ಷ್ಮವಾಗಿ ಗಮನಿಸತೊಡಗಿದರು. ಹೀಗಾಗಿ ರಶ್ಮಿ ಮತ್ತು ಅಕ್ಷಯ್ ಸಂಧಿಸಲು ಸಾಧ್ಯವಾಗುತ್ತಲೇ ಇರಲಿಲ್ಲ. ಇದರಿಂದ ರಶ್ಮಿ ತನ್ನ ಅತ್ತೆಯ ಮೇಲೆ ಆಕ್ರೋಶಗೊಂಡಿದ್ದಳು.
ಏತನ್ಮಧ್ಯೆ ಒಂದು ದಿನ ಅಕ್ಷಯ್ ಮುರಳಿಯವರನ್ನು ಭೇಟಿ ಮಾಡಿ, ‘ನನ್ನ ಕಚೇರಿಗೆ ಸಹಪಾಠಿಯೊಬ್ಬ ಬಂದು ಸೇರಿದ್ದಾನೆ. ಆತನಿಗೆ ಮದುವೆಯಾಗಿದ್ದು ತನ್ನ ಮಕ್ಕಳ ಶಾಲೆಯ ಟಮ್ರ್ ಮುಗಿಯುವ ತನಕ ಅವನು ಕುಟುಂಬವನ್ನು ಇಲ್ಲಿಗೆ ಕರೆತರುವ ಹಾಗಿಲ್ಲ. ಹೀಗಾಗಿ ನೀವು ಒಪ್ಪಿದರೆ 3 ತಿಂಗಳ ಕಾಲ ಅವನನ್ನು ನನ್ನ ಮನೆಯಲ್ಲಿಟ್ಟುಕೊಂಡಿರುವೆ. ಬೇಕಾದರೆ ಹೆಚ್ಚಿನ ಬಾಡಿಗೆಯನ್ನೂ ಕೊಡುವೆ’ ಎಂದ. ಮನೋರಮಾರ ಸಲಹೆ ಕೇಳಿದ ಬಳಿಕ, ಮುರಳಿ ಒಪ್ಪಿಗೆಯನ್ನಿತ್ತರು. ಮುಂದಿನ ವಾರದಿಂದಲೇ ಅಕ್ಷಯ್ನ ಗೆಳೆಯ ಸುಧೀರ್ ಅವನ ಜತೆ ವಾಸಿಸಲಾರಂಭಿಸಿದ. ಸುಧೀರ್ನ ಮತ್ತು ಅಕ್ಷಯ್ನ ಕಚೇರಿಯ ಸಮಯ ಬೇರೆ ಬೇರೆಯಾಗಿದ್ದು ವೀಕೆಂಡ್ಗಳಲ್ಲಿ ಮಾತ್ರ ಅವರಿಬ್ಬರೂ ಒಟ್ಟಾಗಿ ಮನೆಯಲ್ಲಿರುತ್ತಿದ್ದರು.
ಒಂದು ದಿನ ತನ್ನ ಅತ್ತೆ-ಮಾವ ಮನೆಯಲ್ಲಿಲ್ಲದಿರುವ ಸಮಯವನ್ನು ನೋಡಿಕೊಂಡು ರಶ್ಮಿ ಅಕ್ಷಯ್ನ ಮನೆಗೆ ಹೋದಳು. ಆಗ ಸುಧೀರ್ ಮನೆಯಲ್ಲಿರಲಿಲ್ಲ. ಬಹಳ ದಿನಗಳ ಕಾಲ ತಮ್ಮಿಬ್ಬರ ನಡುವೆ ದೈಹಿಕ ಸಂಪರ್ಕವಾಗಿರದಿದ್ದರಿಂದ ಇಬ್ಬರೂ ಸೆಕ್ಸ್ನಲ್ಲಿ ತೊಡಗಿದರು. ಏತನ್ಮಧ್ಯೆ ತಮ್ಮ ಕೆಲಸವನ್ನು ಬೇಗನೇ ಮುಗಿಸಿ ಮನೆಗೆ ಮರಳಿದ ಮನೋರಮಾ ಮನೆಯಲ್ಲಿ ಸೊಸೆಯನ್ನು ಕಾಣದೆ ಸಂಶಯದ ಮೇರೆಗೆ ಮಹಡಿಯ ಮನೆಗೆ ಹೋಗಿ ಬಾಗಿಲು ತಟ್ಟಿದರು. ಬಾಗಿಲನ್ನು ಅಕ್ಷಯ್ ತೆರೆದಾಗ ತನ್ನ ಅಸ್ತವ್ಯಸ್ತ ಬಟ್ಟೆಗಳನ್ನು ಸರಿಪಡಿಸಿಕೊಂಡು ರಶ್ಮಿ ಅವನ ಬೆಡ್ರೂಮ್ಂದ ಹೊರಬಂದಳು. ಅವಳ ಸ್ಥಿತಿಯನ್ನು ಕಂಡ ಕೂಡಲೇ ಮನೋರಮಾಗೆ ಪರಿಸ್ಥಿತಿಯ ಅರಿವಾಯಿತು.
‘ಅಮ್ಮಾ ದಯವಿಟ್ಟು ಈ ವಿಷಯವನ್ನು ನನ್ನ ಪತಿಗಾಗಲೀ, ಮಾವನವರಿಗಾಗಲೀ ತಿಳಿಸಬೇಡಿ. ನೀವು ತಿಳಿಸಿದರೆ ನಾನು ನೇಣುಹಾಕಿಕೊಳ್ಳುವೆ. ಇನ್ನು ಮುಂದೆ ಮೇಲಿನ ಮನೆಗೆ ಹೋಗುವುದಿಲ್ಲ’ ಎಂದು ಪ್ರಮಾಣ ಮಾಡಿದಳು. ತನ್ನ ಮಗ ಮತ್ತು ಮೊಮ್ಮಕ್ಕಳ ಭವಿಷ್ಯದ ಕಾರಣ ಮನೋರಮಾ ಈ ವಿಷಯವನ್ನು ಯಾರಿಗೂ ತಿಳಿಸಲಿಲ್ಲ. ಆದರೆ ಅಕ್ಷಯ್ನನ್ನು ಬೇಗನೇ ತಮ್ಮ ಮನೆಯಿಂದ ಬಿಡಿಸಬೇಕೆಂಬ ನಿರ್ಧಾರವನ್ನು ಮಾಡಿದಳು. ಈ ಘಟನೆಯ ನಂತರ ರಶ್ಮಿ ಹಾಗೂ ಅಕ್ಷಯ್ನ ಮಿಲನ ನಿಂತೇ ಹೋಯಿತು. ಅದನ್ನು ಆಕೆ ತಾಳದಾದಳು. ಒಂದು ದಿನ ಆಕೆ ಗುಟ್ಟಾಗಿ ಅಕ್ಷಯ್ನನ್ನು ಭೇಟಿಯಾಗಿ, ‘ನನ್ನ ಅತ್ತೆಯಿರುವುದರಿಂದಲೇ ನಮ್ಮಿಬ್ಬರ ಮಿಲನಕ್ಕೆ ತೊಂದರೆಯಾಗುತ್ತಿದೆ, ಏನಾದರೂ ಮಾಡಿ ನನ್ನ ಅತ್ತೆಯನ್ನು ಕೊಲ್ಲೋಣ’ ಎಂದಳು. ಆತ ಅದಕ್ಕೊಪ್ಪಿ ಕೆಲದಿನಗಳ ನಂತರ ನಿದ್ರೆ ಬರಿಸುವ ಹತ್ತು ಮಾತ್ರೆಗಳನ್ನು ಅವಳಿಗೆ ತಂದುಕೊಟ್ಟು, ‘ಇದನ್ನು ಪುಡಿ ಮಾಡಿ ನಿನ್ನ ಅತ್ತೆಯ ಊಟಕ್ಕೆ ಬೆರೆಸು. ಆಕೆ ನಿದ್ರೆಗೆ ಜಾರಿದಾಗ ನನಗೆ ತಿಳಿಸು. ನಾನು ಮುಂದಿನ ಕೆಲಸ ನೋಡುತ್ತೇನೆ’ ಎಂದ.
ಅಂತೆಯೇ ಒಂದು ಗುರುವಾರದ ಮಧ್ಯಾಹ್ನ ರಶ್ಮಿ ನಿದ್ರೆ ಮಾತ್ರೆಗಳನ್ನು ಪುಡಿ ಮಾಡಿ ಅದನ್ನು ರಾಗಿ ಮುದ್ದೆಯಲ್ಲಿ ಬೆರೆಸಿ ತನ್ನ ಅತ್ತೆಗೆ ಊಟಕ್ಕೆ ಬಡಿಸಿದಳು. ಊಟವಾದ ಹತ್ತೇ ನಿಮಿಷಗಳಲ್ಲಿ ಮನೋರಮಾ ಗಾಢ ನಿದ್ದೆಗೆ ಜಾರಿದರು. ಆ ನಂತರ ರಶ್ಮಿ ತನಗೆ ಬ್ಯಾಂಕಿನಲ್ಲಿ ಕೆಲಸವಿರುವುದಾಗಿ ಮುರಳಿಗೆ ಹೇಳಿ ಅವರನ್ನು ತನ್ನೊಡನೆ ಬ್ಯಾಂಕಿಗೆ ಕರೆದೊಯ್ದಳು. ಮನೆ ಬಿಡುವ ಮೊದಲು ಆಕೆ ವಾಟ್ಸ್ಯಾಪ್ನಲ್ಲಿ ಅಕ್ಷಯ್ಗೆ ‘ಅತ್ತೆ ಒಬ್ಬಳೇ ಇದ್ದಾಳೆ’ ಎಂಬ ಸಂದೇಶವನ್ನು ಕಳಿಸಿದಳು. ಮನೆಯನ್ನು ಬಿಡುವ ಮೊದಲು ಆಕೆ ಹಿಂಬಾಗಿಲ ಅಗಳಿಯನ್ನು ತೆರೆದಿಟ್ಟಿದ್ದಳು. ನಂತರ ಅಕ್ಷಯ್ ತನ್ನ ಗೆಳೆಯ ಮೋಹನ್ನ ಜತೆ ಮನೋರಮಾ ಮಲಗಿದ್ದ ಕೋಣೆಗೆ ಹೋಗಿ ಗಾಢನಿದ್ರೆಯಲ್ಲಿದ್ದ ಮನೋರಮಾರ ಮುಖಕ್ಕೆ ದಿಂಬೊಂದನ್ನು ಬಲವಾಗಿ ಮುಚ್ಚಿ ಅವರನ್ನು ಕೊಂದ. ನಂತರ ಇಬ್ಬರೂ ಆಕೆಯ ಶವವನ್ನು ಬಾತ್ರೂಂಗೆ ತಂದು ಅಲ್ಲಿ ಮಲಗಿಸಿ ಮನೆಯಿಂದ ಹೊರಟುಹೋದರು.
ಸುಮಾರು ಒಂದು ಗಂಟೆಯ ತರುವಾಯ ರಶ್ಮಿ ಮತ್ತು ಮುರಳಿ ಮನೆಗೆ ಮರಳಿದರು. ಕರೆಗಂಟೆಯನ್ನು ಎಷ್ಟು ಬಾರಿಸಿದರೂ ಬಾಗಿಲು ತೆರೆಯದಾದಾಗ ಮುರಳಿ ತಮ್ಮ ಕೀಲಿಕೈ ಮೂಲಕ ಬಾಗಿಲು ತೆರೆದರು. ಇಬ್ಬರೂ ಮನೆಯೊಳಗೆ ಹೋದಾಗ ಮನೋರಮಾ ಬಚ್ಚಲು ಮನೆಯ ಬಳಿ ಬಿದ್ದದ್ದನ್ನು ಕಂಡು ಗಾಬರಿಯಾದರು. ವೈದ್ಯರನ್ನು ಕರೆಸಿದರು. ಮನೋರಮಾ ಸತ್ತಿರುವುದಾಗಿ ವೈದ್ಯರು ಹೇಳಿದರು. ತನ್ನ ಅತ್ತೆ ಹೃದಯಾಘಾತವಾಗಿ ಸತ್ತಿರಬಹುದಲ್ಲವೇ ಎಂದು ಅವರನ್ನು ರಶ್ಮಿ ಕೇಳಿದಾಗ ಅವರು ಹೌದೆಂದರು. ಅವರ ಬಳಿ ಮರಣದ ಸರ್ಟಿಫಿಕೇಟ್ ಬರೆಸಿಕೊಂಡ ರಶ್ಮಿ ಎಲ್ಲರಿಗೂ ತನ್ನ ಅತ್ತೆಗೆ ಹಾರ್ಟ್ ಅಟ್ಯಾಕ್ ಆಗಿ ಸತ್ತಳೆಂಬ ಸುದ್ದಿ ಕೊಟ್ಟಳು. ಅದೇ ಸಂಜೆ ಕುಟುಂಬದವರು ಮನೋರಮಾಳ ಶವವನ್ನು ಸ್ಮಶಾನದಲ್ಲಿ ಹೂತರು.
ಕೆಲಕಾಲಾನಂತರ ಅಕ್ಷಯ್ನ ಜತೆ ವಾಸ ಮಾಡುತ್ತಿದ್ದ ಸುಧೀರ್ಗೆ ಮನೋರಮಾಳ ಕೊಲೆಯಲ್ಲಿ ತನ್ನ ಗೆಳೆಯ ಮತ್ತು ರಶ್ಮಿಯ ಕೈವಾಡ ಇರಬಹುದೆಂಬ ಸಂದೇಹ ಬಂತು. ಏಕೆಂದರೆ ರಶ್ಮಿಯ ಜತೆ ತನ್ನ ಸಂಬಂಧವಿರುವುದಾಗಿ ಅಕ್ಷಯ್ ಅವನಿಗೆ ಹೇಳಿದ್ದ. ಇದಲ್ಲದೆ ಮನೋರಮಾ ಮರಣದ ನಂತರ ಅವನ ನಡವಳಿಕೆಯೇ ಬದಲಾಗಿತ್ತು. ತನ್ನ ಗೆಳೆಯನ ವರ್ತನೆಯ ಬಗ್ಗೆ ಹೇಸಿಗೆ ಹೊಂದಿದ ಸುಧೀರ್, ರಶ್ಮಿ ಮತ್ತು ಅಕ್ಷಯ್ರ ಸಂಬಂಧದ ಬಗ್ಗೆ ರಶ್ಮಿಯ ಪತಿ ಮಂಜುನಾಥನಿಗೆ ಮಾಹಿತಿಯಿತ್ತು ‘ನಿನ್ನ ತಾಯಿಯ ಮರಣದ ಬಗ್ಗೆಯೂ ನನಗೆ ಅವರಿಬ್ಬರ ಮೇಲೆಯೇ ಸಂಶಯವಿದೆ’ ಎಂದ.
‘ಗುಟ್ಟಾಗಿ ಅಕ್ಷಯ್ನ ಮೊಬೈಲ್ ಫೋನನ್ನು ಪರಿಶೀಲಿಸಿ ಏನಾದರೂ ಸುಳಿವು ಸಿಗಬಹುದೇನೊ ನೋಡು’ ಎಂದು ಮಂಜುನಾಥ ಅವನಿಗೆ ಸೂಚಿಸಿ ತನ್ನ ಪತ್ನಿಯ ಮೊಬೈಲ್ ನಂಬರನ್ನು ಅವನಿಗೆ ಕೊಟ್ಟ. ಮಾರನೆಯ ದಿನ ಅಕ್ಷಯ್ ಗಾಢನಿದ್ರೆಯಲ್ಲಿದ್ದಾಗ ಅವನ ಮೊಬೈಲ್ ಫೋನನ್ನು ಗಮನಿಸಿದ ಸುಧೀರ್. ಅಕ್ಷಯ್ ಮತ್ತು ರಶ್ಮಿಯ ನಡುವೆ ನಡೆದಿದ್ದ ವಾಟ್ಸ್ಯಾಪ್ ಚಾಟ್ಗಳನ್ನು ಓದಿದ. ಅದರ ಮೂಲಕ ಅವನಿಗೆ ಅವರಿಬ್ಬರ ನಡುವಿನ ಸಂಬಂಧವು ಖಾತ್ರಿಯಾಯಿತು. ಮನೋರಮಾ ಸತ್ತ ದಿನ ಮಧ್ಯಾಹ್ನದ 2 ಗಂಟೆಗೆ ‘ನಾನು ಈಗ ನನ್ನ ಮಾವನ ಜೊತೆ ಹೊರಗೆ ಹೋಗುತ್ತಿದ್ದೇನೆ, ಮನೆಯಲ್ಲಿ ಅತ್ತೆಯೊಬ್ಬರೇ ಇದ್ದಾರೆ’ ಎಂಬ ಸಂದೇಶವನ್ನು ರಶ್ಮಿಯು ಅಕ್ಷಯ್ಗೆ ಕಳಿಸಿದ್ದ ಸಂದೇಶವನ್ನು ಓದಿದ ಸುಧೀರ್, ಕೂಡಲೇ ಅದರ ಫೋಟೋ ತೆಗೆದುಕೊಂಡು ಅದನ್ನು ಮಂಜುನಾಥನಿಗೆ ತೋರಿಸಿದ.
ಆಗ ಮಂಜುನಾಥ್ ಸಮೀಪದ ಪೊಲೀಸ್ ಠಾಣೆಗೆ ಹೋಗಿ ತನ್ನ ತಾಯಿಯ ಸಾವಿನ ಬಗ್ಗೆ ತನಗೆ ಸಂಶಯ ಇರುವುದಾಗಿ ಲಿಖಿತ ದೂರು ನೀಡಿದ. ಅದರ ಮೇರೆಗೆ ರಶ್ಮಿಯನ್ನು ಪೊಲೀಸ್ ಠಾಣೆಗೆ ಕರೆಸಿ ತೀವ್ರವಾಗಿ ವಿಚಾರಿಸಿದಾಗ ಸತ್ಯ ಹೊರಬಿತ್ತು. ಅಕ್ಷಯ್ ಮತ್ತು ಮೋಹನ್ನನ್ನು ವಿಚಾರಿಸಿದಾಗ ಅವರು ತಾವೇ ಕೊಲೆ ಮಾಡಿದ್ದಾಗಿ ಒಪ್ಪಿದರು. ನಂತರ ಹೂತಿದ್ದ ಶವವನ್ನು ಹೊರತೆಗೆಸಿ ಅದರ ಪೋಸ್ಟ್ ಮಾರ್ಟಂ ಮಾಡಿಸಲಾಯಿತು. ಮೃತಳ ಹಯಾಯ್್ಡ ಮೂಳೆ ಮುರಿದಿರುವುದಾಗಿ ವೈದ್ಯರು ತಿಳಿಸಿ ಕತ್ತು ಹಿಸುಕಿದ ಕಾರಣದಿಂದ ಮನೋರಮಾಳ ಸಾವಾಗಿದೆ ಎಂದು ವರದಿ ನೀಡಿದರು. ಏತನ್ಮಧ್ಯೆ ಮಂಜುನಾಥ ರಶ್ಮಿಯನ್ನು ತನ್ನ ಮನೆಯಿಂದ ಹೊರಹಾಕಿದ. ಮೂವರೂ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಮಾಡಲಾಯಿತು. ಪ್ರಕರಣವು ಕೇವಲ ಸಾಂರ್ದಭಿಕ ಸಾಕ್ಷ್ಯಗಳ ಮೇಲೆ ಅವಲಂಬಿತವಾಗಿದ್ದ ಕಾರಣ ಆರೋಪಿಗಳೆಲ್ಲರೂ ಬಿಡುಗಡೆ ಹೊಂದಿದರು. ‘ಬಳ್ಳಿಯ ಬೆಲೆವೆಣ್ಣು ಒಳ್ಳಿತೆಂದೆನಬೇಡ, ಬಳ್ಳಿ ಹೆಮ್ಮರನ ಬಿಗಿದಪ್ಪಿ ಮತ್ತೊಂದಕ್ಕಲ್ಲಾಡುವಂತೆ ಸರ್ವಜ್ಞ’ ಎನ್ನುವಂತೆ ಒಳ್ಳೆಯ ಹೆಣ್ಣೆಂದು ರಶ್ಮಿಯನ್ನು ತಂದುಕೊಂಡ ಕಾರಣ ಮುರಳಿಯವರ ಹೆಮ್ಮರದಂತಹ ಕುಟುಂಬವೇ ದುಃಖಕ್ಕೀಡಾಯಿತು.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)