

ಯಾವುದೇ ಕಾರ್ಯಕ್ರಮಗಳಿಗೆ ಹೋದರೂ, ಭಾರತಕ್ಕೆ ಬಂದರೂ, ಬೆಂಗಳೂರು ಭಾರತದ ಹೆಮ್ಮೆ ಎನ್ನುವ ಮಾತುಗಳನ್ನಾಡಿದ್ದರು. ಇವರು ಒಮ್ಮೆ ತಮ್ಮ ದೇಶದ ಬ್ಯಾಕ್ ಟು ಸ್ಕೂಲ್ ಎನ್ನುವ ಕಾರ್ಯಕ್ರಮದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ At a time when other countries are competing with us like never before, when students around the world in Beijing or Bangalore, are working harder than ever, and doing better than ever, your success in school is not just going to determine your success, its going to determine America's success in the 21st century ಎಂದು ಹೇಳುತ್ತಾರೆ. ಅಂದರೆ ಬೆಂಗಳೂರಿನ ಗತ್ತು ಇಡೀ ಪ್ರಪಂಚಕ್ಕೆ ಗೊತ್ತು ಎಂದರೆ ತಪ್ಪಾಗಲಾರದು.
ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದು ನಿಂತಿರುವ ಬೆಂಗಳೂರು, ಜಗತ್ತಿನ ಮಾಹಿತಿ ತಂತ್ರಜ್ಞಾನದ ಆಲದ ಮರವಾಗಿದೆ. ದೇಶದ ಯುವ ಉದ್ಯಮಿಗಳ ಕನಸಿನ ನಗರವಾಗಿ, ಜ್ಞಾನಕಾಶಿಯಾಗಿ, ಆರೋಗ್ಯದ ಧನ್ವಂತರಿಯಾಗಿ ರೂಪುಗೊಂಡಿದೆ. ಇಂತಹ ಊರಿನ ಬದಲಾವಣೆಯ ಭವಿಷ್ಯ ಸುಮಾರು 516 ವರ್ಷಗಳ ಹಿಂದೆ ಹುಟ್ಟಿತು. ಈ ಕಾರಣಕ್ಕೆ ನಾನು ಆರಂಭದಲ್ಲಿ ಒಬಾಮ ಅವರ ನಿದರ್ಶನ ನೀಡಿದೆ.
ನಮಗೆಲ್ಲರಿಗೂ ಇದು ಬೆಂದಕಾಳೂರಾದರೆ, ಪ್ರಪಂಚದ ಕಣ್ಣಿನಲ್ಲಿ ಗ್ರೇಟರ್ ಬೆಂಗಳೂರಾಗಿ ಬದಲಾಗುತ್ತಿದೆ. ಇದೆಲ್ಲದರ ಹಿಂದಿರುವ ಪ್ರೇರಕ ಶಕ್ತಿ, ಇತಿಹಾಸದಲ್ಲೆಂದೂ ಅಳಿಸಲಾಗದ ಅಜರಾಮರ ವ್ಯಕ್ತಿ. ಕಾಡುಮೇಡು, ಕಲ್ಲುಗುಂಡಿಗಳ ಒಡಲಾಗಿದ್ದ ಈ ಭೂಮಿಯಲ್ಲಿ ಕನಸನ್ನು ಬಿತ್ತಿ ಬೆಳೆದ ಯುಗಪುರುಷ, ನಾಡಪ್ರಭು ಕೆಂಪೇಗೌಡರು.
ಬೆಂಗಳೂರಿಗರಾದ ನಾವು ಮೂರು ‘ಓ’ ಗಳನ್ನು ಮರೆಯಬಾರದು ಎಂದು ನಾನು ಆಗಾಗ ಹೇಳುತ್ತಿರುತ್ತೇನೆ. ಮೊದಲು ಕೆಂಪೇಗೌಡರು, ಎರಡನೆಯವರು ಕೆಂಗಲ್ ಹನುಮಂತಯ್ಯ, ಮೂರನೆಯವರು ಎಸ್.ಎಂ.ಕೃಷ್ಣ. ಈ ಮೂವರ ಹೆಸರಿಲ್ಲದೇ ಬೆಂಗಳೂರನ್ನು ಕಲ್ಪಿಸಿಕೊಳ್ಳಲೂ ಆಗುವುದಿಲ್ಲ.
ನಾನು ಯಾವುದೇ ದೇಶಕ್ಕೆ ಹೋದರೂ ಅಲ್ಲಿನ ನಗರಯೋಜನೆ, ಕಟ್ಟಡ ವಿನ್ಯಾಸಗಳನ್ನು ಕುತೂಹಲದಿಂದ ತಿಳಿದುಕೊಳ್ಳುತ್ತೇನೆ. ಈ ಕಾರಣಕ್ಕೆ ಫೋಟೊಗಳನ್ನು ತೆಗೆದುಕೊಳ್ಳುತ್ತಿರುತ್ತೇನೆ. ತಂತ್ರಜ್ಞಾನ ಇಲ್ಲದ ಕಾಲದಲ್ಲಿ ಕೆಂಪೇಗೌಡರು ವಿಜ್ಞಾನ, ಯೋಜನೆ, ಮತ್ತು ಜನರ ಜೀವನದ ದೃಷ್ಟಿಯಿಂದ ಬೆಂಗಳೂರನ್ನು ಕಟ್ಟಿದ್ದರು ಎಂಬುದು ಸೋಜಿಗದ ಸಂಗತಿ.
ಭಾರತದ ಮೊದಲ ಸಂಘಟಿತ ಟೌನ್ ಪ್ಲ್ಯಾನಿಂಗ್ ಕೆಂಪೇಗೌಡರ ಕೊಡುಗೆ. ನಗರದ ಕೆ.ಆರ್. ಮಾರುಕಟೆಯಲ್ಲಿನ ಸಂಘಟಿತ ವ್ಯವಸ್ಥೆ ಕೆಂಪೇಗೌಡರ ದೂರದೃಷ್ಟಿಗೆ ಸಾಕ್ಷಿ. ಜನರ ವೃತ್ತಿಗೆ ತಕ್ಕಂತೆ ಪೇಟೆಗಳನ್ನು ರೂಪಿಸಿದರು. ಅಕ್ಕಿಪೇಟೆ, ಕುಂಬಾರಪೇಟೆ, ಬಳೇಪೇಟೆ, ಮೇದಾರಪೇಟೆ, ತರಗುಪೇಟೆ, ಅರಳೆಪೇಟೆ, ಚಿಕ್ಕಪೇಟೆ ಸೇರಿದಂತೆ 70ಕ್ಕೂ ಹೆಚ್ಚು ಪೇಟೆಗಳನ್ನು ನಿರ್ವಿುಸಿದರು. ಇವು ಕೇವಲ ರಸ್ತೆ-ಕಟ್ಟಡಗಳಲ್ಲ. ಬದಲಾಗಿ ಒಂದು ಸಂಘಟಿತ ಜೀವನ ಶೈಲಿಯನ್ನು ಉಳಿಸುವ ಯೋಜನೆ. ಕೆಂಪೇಗೌಡರು ಕೇವಲ ಒಬ್ಬ ರಾಜರಾಗಿರಲಿಲ್ಲ, ಅವರು ಜ್ಞಾನಿ, ದಾರ್ಶನಿಕರಾಗಿದ್ದರು. ಇಲ್ಲಿನ ಮಾರುಕಟ್ಟೆ ಶೈಲಿಗೆ ದೇಶ-ವಿದೇಶದ ವ್ಯಾಪಾರಿಗಳು, ಕಾರ್ವಿುಕರು ಆಕರ್ಷಿತರಾದರು.
ಕೆಂಪೇಗೌಡರ ಜ್ಞಾನ ಕೇವಲ ಮಾರುಕಟ್ಟೆಗೆ ಸೀಮಿತವಾಗಿರಲಿಲ್ಲ, ಅವರು ಪರಿಸರದ ರಕ್ಷಕರಾಗಿದ್ದರು. ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ 260 ಕೆರೆಗಳನ್ನು ನಿರ್ವಿುಸಿದ್ದಾನೆ ಎಂದರೆ ವಿಶ್ವದಾಖಲೆಯೇ ಸರಿ. ನಾವು ಈಗ ‘ಮಳೆ ನೀರು ಸಂಗ್ರಹ’ ಎಂದು ಮಾತನಾಡುತ್ತಿದ್ದೇವೆ. ಏತ ನೀರಾವರಿ ಎಂದು ಬೃಹತ್ ಪಂಪ್ಗಳನ್ನು ಜೋಡಿಸಿ ನೀರನ್ನು ಒಂದು ಊರಿನಿಂದ ಇನ್ನೊಂದು ಊರಿಗೆ ವಿತರಿಸುತ್ತಿದ್ದೇವೆ. ಯಾವುದೇ ತಂತ್ರಜ್ಞಾನ ಇಲ್ಲದ ಕಾಲದಲ್ಲಿ ಕೇವಲ ಗುರುತ್ವಾಕರ್ಷಣೆಯ ಬಲದಿಂದಲೇ ಒಂದು ಕೆರೆಯಿಂದ ಇನ್ನೊಂದು ಕೆರೆಗೆ ನೀರು ಹರಿಯುವ ಜಾಲ ರೂಪಿಸಿದವರು ಕೆಂಪೇಗೌಡರು.
ಅವರದು ಎಲ್ಲರನ್ನು ಒಳಗೊಂಡ ಆಡಳಿತ. ಇದಕ್ಕೆ ಶೈವ, ವೈಷ್ಣವ ಎಂಬ ಭೇದವಿಲ್ಲದೆ ಅವರು ನಿರ್ವಿುಸಿರುವ ದೇವಾಲಯಗಳೇ ಸಾಕ್ಷಿ. 130 ದೇವಸ್ಥಾನಗಳನ್ನು ನಿರ್ವಿುಸಿದ್ದು ಅವರ ಧರ್ಮಸಹಿಷ್ಣತೆಗೆ ಮತ್ತೊಂದು ಉದಾಹರಣೆ. ಕೋಟೆ ಆಂಜನೇಯ, ಶ್ರೀ ವಿನಾಯಕಸ್ವಾಮಿ, ಚಿಕ್ಕಬಸವಣ್ಣ (ಈಗ ಬೆಳ್ಳಿ ಬಸವಣ್ಣ, ಮಕ್ಕಳ ಬಸವಣ್ಣ), ದೊಡ್ಡ ಬಸವಣ್ಣ, ದೊಡ್ಡ ಆಂಜನೇಯ, ಗವಿಗಂಗಾಧರೇಶ್ವರ, ಮಲ್ಲಿಕಾರ್ಜುನ, ಮಾವಳ್ಳಿ ಮಾರಮ್ಮ, ದೊಡ್ಡ ಮಾವಳ್ಳಿಯ ಬಿಸಿಲುಮಾರಮ್ಮ ದೇವಸ್ಥಾನಗಳು ನಮ್ಮ ಮುಂದಿರುವ ಮಾದರಿಗಳು. ಬೆಂಗಳೂರು ಕರಗ ಸೌಹಾರ್ದತೆ ಈಗಲೂ ಇರುವ ಜೀವಂತ ಸಾಕ್ಷಿ.
ಕೆಂಪೇಗೌಡರು ಹುಟ್ಟಿ ಐದು ಶತಮಾನಗಳು ಕಳೆದು ಹೋಗಿವೆ. ಅವರು ಕಟ್ಟಿದ ಕೆರೆಗಳ ಮೂಲಕ ಕೋಟ್ಯಂತರ ಲೀಟರ್ ನೀರು ಹರಿದುಹೋಗಿದೆ. ಕೋಟ್ಯಂತರ ಕುಟುಂಬಗಳು ಬೆಳಕು ಕಂಡಿವೆ. ಕೆಂಪೇಗೌಡರು ಕಟ್ಟಿದ ಬೆಂಗಳೂರು ಜಿಲ್ಲೆಯವನು ನಾನು. ರಾಜ್ಯ ರಾಜಧಾನಿಯನ್ನು ಮತ್ತಷ್ಟು ಯೋಜಿತ ನಗರವನ್ನಾಗಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಕೆಂಪೇಗೌಡರ ಜ್ಞಾನದ ದಾರಿಯಲ್ಲಿ, ನಾವು ಶುದ್ಧ, ಹಸಿರು, ಶಕ್ತಿಶಾಲಿ ಬೆಂಗಳೂರನ್ನು ಕಟ್ಟುತ್ತೇವೆ ಎನ್ನುವುದು ನನ್ನ ಅಭಿಲಾಷೆ. ಈ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ಮುಂದಿನ ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಭವಿಷ್ಯವನ್ನಿಟ್ಟುಕೊಂಡು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಟನಲ್ ರೋಡ್, ಮೆಟ್ರೋ ವಿಸ್ತರಣೆ, ಬಿಜಿನೆಸ್ ಕಾರಿಡಾರ್, ಬ್ರ್ಯಾಂಡ್ ಬೆಂಗಳೂರಿಗೆ 2,228 ಕೋಟಿ ಮೀಸಲಿಟ್ಟಿದ್ದೇವೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ 1 ಲಕ್ಷ ಕೋಟಿ ರೂ. ಮೊತ್ತದ ಯೋಜನೆಗಳನ್ನು ರೂಪಿಸಿದೆ. ಕಾವೇರಿ 5ನೇ ಹಂತ ಪೂರ್ಣಗೊಳಿಸಿ ನಗರದ ನೀರಿನ ಬವಣೆ ತಪ್ಪಿಸಿದ್ದೇವೆ.
ಕನ್ನಡಿಗರ ಗೌರವದ ಸಂಕೇತವಾದ ಬೆಂಗಳೂರನ್ನು ಹಾಗೂ ಕೆಂಪೇಗೌಡರ ಇತಿಹಾಸವನ್ನು ಉಳಿಸಿ, ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಂದು ಸುಮನಹಳ್ಳಿಯಲ್ಲಿ ಕೆಂಪೇಗೌಡರ ಜಯಂತಿ ಅಂಗವಾಗಿ ಕೆಂಪೇಗೌಡರ ಭವನಕ್ಕೆ ಭೂಮಿಪೂಜೆ ನೆರವೇರಿಸಲಾಗುತ್ತಿದೆ. ಇಡೀ ಬೆಂಗಳೂರು ನಗರ ಹಾಗೂ ರಾಜ್ಯವು ಈ ಜಯಂತಿಯನ್ನು ಸಂಭ್ರಮಿಸುತ್ತಿದೆ. ಕೆಂಪೇಗೌಡರಿಗೆ ಸಂಬಂಧಿಸಿದ ಏಳು ಐತಿಹಾಸಿಕ ಸ್ಥಳಗಳಿಂದ ಪುರಜ್ಯೋತಿ ಹೊರಡಲಿದೆ. ನಾವೆಲ್ಲರೂ ಈ ಅಭಿವೃದ್ಧಿಯ ಜ್ಯೋತಿಯನ್ನು ಹಿಡಿಯೋಣ, ಕೆಂಪೇಗೌಡರ ಹಾದಿಯಲ್ಲಿ ನಡೆಯೋಣ. (ಲೇಖಕರು ರಾಜ್ಯದ ಉಪಮುಖ್ಯಮಂತ್ರಿ)