

ಕಳೆದ ವಾರವಷ್ಟೇ ನನ್ನ ಮಗಳ ಮದುವೆ ಆಯ್ತು. ಮದುವೆ ಹಿಂದಿನ ದಿನ ಮಂಟಪಕ್ಕೆ ಬೇಕಾಗಿರೋ ವಸ್ತುಗಳನ್ನೆಲ್ಲ ಪ್ಯಾಕ್ ಮಾಡ್ತಾ ಇದ್ವಿ. ಪ್ಯಾಕಿಂಗ್ ಎಲ್ಲ ಮುಗೀತು. ನನ್ನ ಪತ್ನಿ ಅರ್ಚನಾ, ಮಗಳು ನಿಹಾರಿಕಾ, ಮಗ ಅರ್ಜುನ್ ಎಲ್ಲರಿಗೂ ನಾನು ಹೇಳಿದ್ದು ಒಂದೇ ಮಾತು-‘ಎಲ್ಲವೂ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ನಡೆಯುತ್ತೆ. ಒಂದು ವೇಳೆ ಸಣ್ಣ-ಪುಟ್ಟ ತಪು್ಪಗಳಾದರೆ, ಅದನ್ನು ತಾಳ್ಮೆಯಿಂದ ತೆಗೆದುಕೊಳ್ಳಿ. ಯಾರಾದರೂ ಏನಾದರೂ ಕಮೆಂಟ್ ಮಾಡಬಹುದು. ಅದಕ್ಕೆ ನಿಮ್ಮ ಮೂಡ್ ಹಾಳುಮಾಡಿಕೊಳ್ಳಬೇಡಿ. ಮದುವೆ ಮುಗಿಯುವವರೆಗೂ ನಾನು ಒಳ್ಳೆಯ ಮೂಡ್ನಲ್ಲಿ ಇರುತ್ತೀನಿ ಅಂತ ನಿರ್ಧಾರ ಮಾಡಿ’ ಎಂದು.
ಯಾವತ್ತೇ ಆಗಲೀ, ಎಂಥದ್ದೇ ಸನ್ನಿವೇಶವಿರಲಿ, ನಮ್ಮ ಮೂಡ್ ಮತ್ತು ನಮ್ಮ ಮನಸ್ಸಿನ ಸ್ಥಿತಿಯನ್ನು ನಾವು ನಿರ್ಧರಿಸಬೇಕು. ಅದು ಬಹಳ ಮುಖ್ಯ. ನಮ್ಮ ಪ್ರತಿ ಭಾವನೆಯನ್ನು ಹೊರಗಿನ ಪ್ರಪಂಚ ನಿರ್ಧರಿಸೋಕೆ ಶುರು ಮಾಡಿದರೆ, ಪ್ರತಿದಿನ ನರಕ ಆಗಿಬಿಡುತ್ತದೆ. ಅದೇ ನಮ್ಮ ಮೂಡ್ ನಮ್ಮದೇ ಹಿಡಿತದಲ್ಲಿದ್ದರೆ ಪ್ರತಿಕ್ಷಣ ಸಂತೋಷವಾಗಿರಬಹುದು. ಅದಕ್ಕೇ ಹೇಳಿದ್ದು ನಮ್ಮ ಮೂಡ್ ನಮ್ಮ ಆಯ್ಕೆಯಾಗಿರಬೇಕು ಅಂತ. ಹೊರಗಿನ ಪ್ರಪಂಚದ ಟೀಕೆ-ಟಿಪ್ಪಣಿ, ಫೇಸ್ಬುಕ್ ಲೈಕ್, ಇನ್ನೊಬ್ಬರ ಅನವಶ್ಯಕ ಅಭಿಪ್ರಾಯ ನಮ್ಮ ಮೂಡನ್ನು ಯಾವತ್ತೂ ನಿರ್ಧರಿಸಬಾರದು.
ಮದುವೆ ಊಟವನ್ನು ಎಲ್ಲರೂ ಆಹಾ, ಓಹೋ ಅಂತಿರಬೇಕಾದರೆ, ಯಾರೋ ಒಬ್ಬರು ‘ಅದು ಸರಿ ಇಲ್ಲ, ಇದಕ್ಕೆ ಉಪು್ಪ ಬೇಕಿತ್ತು, ಮತ್ತೊಂದಕ್ಕೆ ಸಕ್ಕರೆ ಕಡಿಮೆ ಆಯಿತು’ ಅಂತ ಕೊರಗಬಹುದು. ಆ ಒಬ್ಬರ ಕಾಮೆಂಟ್ನಿಂದ ನಿಮ್ಮ ಮೂಡ್ ಹಾಳು ಮಾಡಿಕೊಳ್ಳುವುದರಲ್ಲಿ ಪ್ರಯೋಜನವಿಲ್ಲ. ಎರಡನೇ ಬೆರಳಿನಿಂದ ತಪು್ಪ ತೋರಿಸುವವರನ್ನು ನೋಡಿ ಬೇಸರಿಸಿಕೊಳ್ಳುವ ಬದಲು, ಹೆಬ್ಬೆಟ್ಟಿನಿಂದ ಥಂಬ್ಸ್ಅಪ್ ತೋರಿಸುವವರ ಬಗ್ಗೆ ಗಮನ ಕೊಡಿ. ಹಾಗಂತ, ದೂರುವವರನ್ನು ಸಂಪೂರ್ಣವಾಗಿ ಕಡೆಗಣಿಸುವುದು ಸಹ ಸರಿಯಲ್ಲ. ಒಂದು ವೇಳೆ ಅವರು ಹೇಳುವ ದೂರಿನಲ್ಲಿ ನಿಜವಿದ್ದರೆ, ಅದರಿಂದ ಸಮಸ್ಯೆ ಆಗುವಂತಿದ್ದರೆ ತಕ್ಷಣ ತಿದ್ದಿಕೊಳ್ಳಿ. ಹಾಗಂತ ಮೂಡ್ ಹಾಳು ಮಾಡಿಕೊಂಡರೆ, ನಿಮ್ಮ ಇಡೀ ದಿನ ಹಾಳಾಗುತ್ತದೆ ಎಂಬುದನ್ನ ಮಾತ್ರ ಮರೆಯಬೇಡಿ.
ಮೂಡ್ ಚೆನ್ನಾಗಿದ್ದರೆ ಕೆಲಸ ಆರಾಮಾಗಿ ಮುಗಿಯುವುದಷ್ಟೇ ಅಲ್ಲ, ವೇಗವಾಗಿಯೂ ಆಗುತ್ತದೆ. ಅದೇ ಕೆಟ್ಟ ಮೂಡ್ನಲ್ಲಿ ಕೆಲಸ ಮಾಡಿದರೆ ಅದರಲ್ಲಿ ತಪು್ಪಗಳೇ ಹೆಚ್ಚಾಗುತ್ತವೆ. ಏಕಾಗ್ರತೆ ಸಹ ಕಡಿಮೆಯಾಗುತ್ತದೆ. ಹಾಗಂತ ಇಡೀ ದಿನ ಒಳ್ಳೆಯ ಮೂಡ್ನಲ್ಲೇ ಇರುವುದು ಕಷ್ಟ. ಬೆಳಿಗ್ಗೆ ಖುಷಿಯಾಗಿ ಉತ್ಸಾಹದಿಂದ ಕಾರಿಂದ ಇಳಿದು ವೇವ್ ಮಾಡುವ ಹೀರೋಯಿನ್ ಮಧ್ಯಾಹ್ನದ ಹೊತ್ತಿಗೆ ಮೇಕಪ್ವ್ಯಾನ್ ಮೇಲೆ ಸಿಕ್ಕಾಪಟ್ಟೆ ರೇಗಿ ರಂಪ ಮಾಡೋದನ್ನ ನೋಡಿದ್ದೀನಿ. ಸಂಜೆ ಯಾವುದೋ ಕಾರಣಕ್ಕೆ ಗುರ್ಗುರ್ ಅಂತ ಸೆಟ್ನ ಬಿಟ್ಟು ಹೋದ ಹೀರೋ, ರಾತ್ರಿ ಪಾರ್ಟಿಯಲ್ಲಿ ಖುಷಿಯಾಗಿ ಡಾನ್ಸ್ ಮಾಡಿ ನಗುನಗುತ್ತಾ ಜೋಕ್ಸ್ ಮಾಡೋದನ್ನ ನೋಡಿದ್ದೀನಿ. ಹಾಗಾಗಿ, 10 ನಿಮಿಷಗಳಿಗೊಮ್ಮೆ ನಮ್ಮ ಮೂಡ್ ಬದಲಾಗುತ್ತಿರುತ್ತದೆ. ಆದರೆ, ‘ನನ್ನ ಮೂಡ್ನ ಮಾಲೀಕ ನಾನು’ ಎಂಬ ಮಂತ್ರವನ್ನು ಮಾತ್ರ ಮರೆಯಬೇಡಿ.
ನಿಮ್ಮನ್ನು ಒಳ್ಳೆಯ ಮೂಡ್ನಲ್ಲಿ ಇಡುವ ವ್ಯಕ್ತಿ, ವಿಷಯ, ವಾತಾವರಣವನ್ನು ಆಯ್ಕೆ ಮಾಡಿಕೊಳ್ಳಿ. ಕೆಲವರು ಯಾವಾಗಲೂ ಕಾಲೆಳೆಯುತ್ತಿರುತ್ತಾರೆ. ಪ್ರತಿ ನಡೆಯಲ್ಲೂ ತಪು್ಪ ಕಂಡುಹಿಡಿಯುತ್ತಿರು ತ್ತಾರೆ. ನೀವೆಷ್ಟೇ ಒಳ್ಳೆಯ ಕೆಲಸ ಮಾಡಿದರೂ ಒಪು್ಪವುದಿಲ್ಲ. ಅಂಥವರ ಜತೆಗೆ ನೀವು ಯಾಕಿರಬೇಕು? ಇನ್ನೂ ಕೆಲವರು ನಿಮ್ಮನ್ನು ತುಂಬಾ ಪ್ರೀತಿಸುವವರು ಇರುತ್ತಾರೆ. ನಿಮ್ಮ ಹೆಜ್ಜೆಹೆಜ್ಜೆಗೂ ಪ್ರೋತ್ಸಾಹ ನೀಡುತ್ತಿರುತ್ತಾರೆ. ಅಂಥವರು ಪಕ್ಕದಲ್ಲಿ ಇದ್ದರೆ, ಮೂಡ್ ತನ್ನಿಂತಾನೇ ಚೆನ್ನಾಗಿರುತ್ತದೆ. ಇದಕ್ಕೆ ಮನುಷ್ಯರೇ ಆಗಬೇಕೆಂದಿಲ್ಲ, ಒಂದು ನಾಯಿಮರಿ ಇದ್ದರೂ ಖುಷಿಯಾಗಿರುತ್ತೀರಿ. ಅಷ್ಟೇ ಅಲ್ಲ, ನೀವು ಇಷ್ಟ ಪಡುವಂತಹ ಕೆಲಸ ಸಿಕ್ಕರೆ, ನೀವು ಸಂಪೂರ್ಣವಾಗಿ ತೊಡಗಿಸಿಕೊಳ್ಳು ವಂತಹ ಪ್ರಾಜೆಕ್ಟ್ ಸಿಕ್ಕರೆ ಮೂಡ್ ಆಟೋಮ್ಯಾಟಿಕ್ ಆಗಿ ಚೆನ್ನಾಗಿರುತ್ತದೆ.
ಒಂದೊಳ್ಳೆಯ ಮೂಡ್ಗೆ ಬೇಕಾಗಿರುವುದು ನಿಮ್ಮ ಮೇಲೆ ಅಕ್ಕರೆ ಇರುವಂತಹ, ಪ್ರೀತಿಸುವಂತಹ ಒಂದು ಹೃದಯ ಅಷ್ಟೇ. ಒಂದು ಪಕ್ಷ, ಆ ಹೃದಯ ಹೊರಗಿನ ಪ್ರಪಂಚದಲ್ಲಿ ನಿಮಗೆ ಸಿಗಲಿಲ್ಲ ಎಂದರೆ, ನಿಮ್ಮ ಹೃದಯವನ್ನು ನಂಬಿ. ಏಕೆಂದರೆ, ನೀವು ಸಾಧಾರಣ ಅಲ್ಲ. ನಿಮ್ಮಲ್ಲಿ ಅಪಾರವಾದ ಶಕ್ತಿ ಇದೆ. ಆ ಶಕ್ತಿಯನ್ನು ಕೆಟ್ಟ ಮೂಡ್ನಿಂದ ಕುಗ್ಗಿಸಬೇಡಿ. ಒಳ್ಳೆಯ ಮೂಡ್ಗಿಂತ ಪ್ರಭಾವಿ ಇಂಧನ ಇನ್ನೊಂದಿಲ್ಲ. ಹಾಗಾಗಿ ನಿಮ್ಮ ಮೂಡ್ ಅನ್ನು ಸದಾ ನಿಮ್ಮ ಹಿಡಿತದಲ್ಲಿಟ್ಟುಕೊಳ್ಳಿ.
ಎಲ್ಲ ಸರಿ, ಕೆಟ್ಟ ಮೂಡ್ನಿಂದ ಒಳ್ಳೆಯ ಮೂಡ್ಗೆ ಶಿಫ್ಟ್ ಆಗುವುದು ಹೇಗೆ ಎಂಬ ಪ್ರಶ್ನೆ ಬಂದೇ ಬರುತ್ತದೆ. ಈ ವಿಷಯದಲ್ಲಿ ನನಗೆ ಗೊತ್ತಿರುವ ಕೆಲವು ವಿಷಯ ಹೇಳ್ತೀನಿ. ಪ್ರಮುಖವಾಗಿ, ನಮ್ಮ ಆಸೆಗಳು ಮತ್ತು ನಿರೀಕ್ಷೆಗಳ ಮೇಲೆ ಈ ಮೂಡ್ಗಳು ಅವಲಂಬಿಸಿರುತ್ತವೆ. ನಾವೇನೋ ಆಸೆ ಪಟ್ಟಿರುತ್ತೀವಿ ಅಥವಾ ನಿರೀಕ್ಷೆ ಮಾಡಿರುತ್ತೀವಿ. ಅದು ಕೈಗೂಡದಿದ್ದಾಗ ಮೂಡ್ ಔಟ್ ಆಗ್ತೀವಿ. ಕೆಲವೊಮ್ಮೆ ಮನಸ್ಸಿಗೆ ಸಂಬಂಧ ಇಲ್ಲದೆ, ಆರೋಗ್ಯ ಸಮಸ್ಯೆಗಳಿಂದ ಮೌಡ್ ಔಟ್ ಆಗುವ ಸಾಧ್ಯತೆ ಇದೆ. ನನ್ನ ಮೇಕಪ್ವ್ಯಾನ್ ಬಾಬು ಒಂದು ಕಾಲದಲ್ಲಿ ಎಲ್ಲರ ಮೇಲೂ ರೇಗಾಡುತ್ತಿದ್ದ. ಯಾಕೆ ಹೀಗಾಡ್ತಿದ್ದಾನೆ ಅಂತ ನೋಡಿದಾಗ, ಅವನಿಗೆ ಶುಗರ್ ಸಮಸ್ಯೆ ಇರುವುದು ಗೊತ್ತಾಯಿತು. ಅದು ಅವನ ಮೂಡ್ ಅನ್ನು ಅಪ್ಸೆಟ್ ಮಾಡುತ್ತಿತ್ತು. ಅದೇ ತರಹ ಇನ್ನೊಬ್ಬರು ಬಿ12 ವಿಟಮಿನ್ ಕಡಿಮೆ ಇದ್ದದರಿಂದ ಮೂಡ್ನಲ್ಲಿ ಆಗಾಗ ಬದಲಾವಣೆ ಆಗುತ್ತಿತ್ತು. ಹಾಗಾಗಿ ಬರೀ ಮಾನಸಿಕವಷ್ಟೇ ಅಲ್ಲ, ದೈಹಿಕವಾಗಿಯೂ ಏನಾದರೂ ಸಮಸ್ಯೆ ಇದ್ದಾಗ ಮೂಡ್ಔಟ್ ಆಗುವ ಸಾಧ್ಯತೆ ಇದೆ. ಆ ತರಹದ ಕಾರಣಗಳಿಲ್ಲ ಅಂದರೆ, ಆಗ ನೀವು ಈ ರೀತಿ ಸರಿಪಡಿಸಿಕೊಳ್ಳಬಹುದು.
ನಿಮಗೆ ಇಷ್ಟವಾದ ಕ್ರೀಡೆ ಅಥವಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ನಿಮಗೆ ಇಷ್ಟವಾದ ಅಡುಗೆ ಮಾಡಿ, ಇಸ್ತ್ರಿ ಮಾಡಿ, ಶೂ ಪಾಲಿಶ್ ಮಾಡಿಕೊಳ್ಳಿ, ಯೋಗ, ಕಸರತ್ತು... ಹೀಗೆ ಏನಾದರೂ ಮಾಡಿ. ಇದರಿಂದ ಖಂಡಿತಾ ನಿಮ್ಮ ಮೂಡ್ ಬದಲಾಗುತ್ತದೆ. ಹಲವರ ಮೂಡ್ನ್ನು ಅಧ್ಯಾತ್ಮ, ಧ್ಯಾನ ಸರಿಮಾಡಿದ್ದನ್ನು ನಾನು ನೋಡಿದ್ದೀನಿ. ಇದೆಲ್ಲದರ ಜತೆಗೆ, ಒಂದು ಕ್ಷಣ ನಿಮ್ಮನ್ನು ಮರೆತು, ಇನ್ನೊಬ್ಬರಿಗೆ ಸಹಾಯ
ಮಾಡಿ. ಚೆನ್ನಾಗಿ ನಿದ್ದೆ ಮಾಡಿ, ಒಳ್ಳೆಯ ನಿದ್ದೆಯಿಂದ ಇನ್ನಷ್ಟು ರಿಫ್ರೆಶ್ ಆಗುತ್ತೀರಿ. ಯಾವುದಾದರೂ ದಾರಿ ಹುಡುಕಿ... ಒಟ್ಟಿನಲ್ಲಿ ಒಳ್ಳೆಯ ಮೂಡ್ನಲ್ಲಿರಿ.
ಈ ಹೊಸ ವರ್ಷ ನಿಮ್ಮನ್ನು ಒಳ್ಳೆಯ ಮೂಡ್ನಲ್ಲಿ ಇರಿಸಲಿ ಎಂಬುದು ನನ್ನ ಹಾರೈಕೆ. ನಿಮ್ಮ ಮೂಡ್ ಸದಾ ನಿಮ್ಮ ಹಿಡಿತದಲ್ಲಿರಲಿ. ಕಷ್ಟ, ಆದರೆ ಅಸಾಧ್ಯವಲ್ಲ.
(ಲೇಖಕರು ನಟ, ನಿರ್ದೇಶಕ)