

ಟೀಕಾಲಾಲ್ ಟಪ್ಲೂ ಪಕ್ಕಾ ರಾಷ್ಟ್ರೀಯವಾದಿಯಾಗಿದ್ದವರು. ಕಾಶ್ಮೀರ ಮತ್ತು ಇಸ್ಲಾಮೀ ಭಯೋತ್ಪಾದನೆ ನಡುವೆ ಬಲವಾದ ಅಡ್ಡಗೋಡೆಯಾಗಿ ನಿಂತವರು. ಪರಿವಾರವನ್ನು ದೆಹಲಿಯಲ್ಲಿ ಬಿಟ್ಟು ಬದಲಾಗುತ್ತಿರುವ ಕಾಶ್ಮೀರದ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನಕ್ಕೆಂದೇ ಊರಿಗೆ ಮರಳಿದವರು. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎನ್ನುವ ವಿಚಾರದಲ್ಲಿ ಅವರು ಒಂದಿನಿತೂ ಗೊಂದಲಕ್ಕೆ ಒಳಗಾದವರಲ್ಲ. ಕೇಳುಗರ ಮನಸ್ಸನ್ನೇ ತನ್ನೆಡೆಗೆ ಸೆಳೆಯಬಲ್ಲಷ್ಟು ಪ್ರಭಾವೀ ವಕ್ತೃತ್ವ ಅವರದ್ದು. ಶ್ರೇಷ್ಠ ವಕೀಲರು ಕೂಡ. ಬಡರೈತರು, ಇತರ ಕುಶಲಕರ್ವಿುಗಳು ಯಾವುದಾದರೂ ವಿಚಾರವನ್ನು ತೆಗೆದುಕೊಂಡು ಅವರ ಬಳಿ ಬಂದರೆ ಅನೇಕ ಬಾರಿ ನಯಾಪೈಸೆಯನ್ನೂ ತೆಗೆದುಕೊಳ್ಳದೆ ನ್ಯಾಯಾಲಯದಲ್ಲಿ ಅವರಿಗಾಗಿ ಬಡಿದಾಡುತ್ತಿದ್ದರು. ಅವರ ಈ ಸೇವೆ ಹಿಂದೂಗಳಿಗೆ ಮಾತ್ರವಲ್ಲ, ಅಲ್ಲಿದ್ದ ಮುಸಲ್ಮಾನರಿಗೂ ವಿಸ್ತಾರಗೊಂಡಿತ್ತು. ಹೀಗಾಗಿಯೇ ಅವರನ್ನು ಕಂಡರೆ ಜಾತಿ, ಜನಾಂಗಗಳ ಭೇದವಿಲ್ಲದೇ ಎಲ್ಲರಿಗೂ ಪ್ರೀತಿ.
1989ರ ಸೆಪ್ಟೆಂಬರ್ 12ರಂದು ಚಿಂಕ್ರಾಲ್ ಮೊಹಲ್ಲಾದ ಅವರ ಮನೆಯ ಮೇಲೆ ಇದ್ದಕ್ಕಿದ್ದಂತೆ ದಾಳಿ ಮಾಡಿದ ಭಯೋತ್ಪಾದಕರು ಮನಸೋ ಇಚ್ಛೆ ಗುಂಡು ಹಾರಿಸಲಾರಂಭಿಸಿದರು. ಟಪ್ಲೂ ಹೆದರದೆ ಭಯೋತ್ಪಾದಕರನ್ನು ಮುಕ್ತವಾಗಿ ಎದುರಿಸಲು ನಿಂತರು. ಅತ್ತಲಿಂದ ಹಾರಿದ ಗುಂಡು ಅವರನ್ನು ಸೀಳಿಬಿಟ್ಟಿತ್ತು. ಟಪ್ಲೂ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದರು. ಇದು ಇಡಿಯ ಕಾಶ್ಮೀರಕ್ಕೆ ಸಹಿಸಲಾಗದ ಆಘಾತವಾಗಿತ್ತು. ಕಾಶ್ಮೀರವೇ ಅವರಿಗೆ ಕಣ್ಣೀರಿನ ವಿದಾಯ ಹೇಳಿತ್ತು. ಅಂದಿನ ದಿನಗಳಲ್ಲಿ ಕೇದಾರ್ನಾಥ್ ಸಹನಿ, ಎಲ್.ಕೆ ಆಡ್ವಾಣಿಯಂತಹ ಬಿಜೆಪಿಯ ಘಟಾನುಘಟಿ ನಾಯಕರು ಶವಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯ ಮುಸಲ್ಮಾನರು ಇನ್ನೂ ಮಾನಸಿಕವಾಗಿ ಹಾಳಾಗಿರದ ಕಾಲ, ಹೀಗಾಗಿ ಶವಯಾತ್ರೆಯಲ್ಲಿ ಅವರೂ ಇದ್ದರು. ಭಯೋತ್ಪಾದಕರ ಅಟ್ಟಹಾಸ ಕಡಿಮೆಯಾಗಿರಲಿಲ್ಲ.
ಕೆಲವೇ ದಿನಗಳಲ್ಲಿ ಶ್ರೀನಗರದ ಹರಿಸಿಂಗ್ ಮಾರ್ಗದಲ್ಲಿ ನಿವೃತ್ತ ನ್ಯಾಯಾಧೀಶ ಎನ್.ಕೆ ಗಂಜು ಅವರನ್ನು ನಿರ್ದಾಕ್ಷಿಣ್ಯವಾಗಿ ಗುಂಡಿಟ್ಟು ಕೊಲ್ಲಲಾಯಿತು. ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದ ಆ ಶವದ ಪಕ್ಕಕ್ಕೆ ಹಿಂದೂಗಳು ಹೋಗುವುದಿರಲಿ ಮುಸಲ್ಮಾನರು ಹೋಗಲೂ ಹೆದರುತ್ತಿದ್ದರು. ಟೀಕಾಲಾಲ್ ಟಪ್ಲೂ ತೀರಿಕೊಂಡಾಗ ಸ್ನೇಹದ ಭಾವನೆ ಇನ್ನೂ ಹಸಿಯಾಗಿತ್ತಲ್ಲ, ಅದೀಗ ಪೂರ್ಣ ಸತ್ತಿತ್ತು. ಸಂಜೆಯ ವೇಳೆಗೆ ಪೊಲೀಸರು ಬಂದು ಶವವನ್ನು ಸತ್ತ ನಾಯಿಯನ್ನು ಎಳಕೊಂಡು ಹೋಗುವಂತೆ ಸೆಳೆದೊಯ್ದರು, ಅವರೊಬ್ಬ ನಿವೃತ್ತ ನ್ಯಾಯಾಧೀಶರು ಎನ್ನವುದನ್ನೂ ಮರೆತು! ಟೀವಿಗಳಲ್ಲಿ ಮತ್ತೆ ಮತ್ತೆ ಈ ದೃಶ್ಯಗಳನ್ನು ನೋಡಿದ ಕಾಶ್ಮೀರದ ಮುಸಲ್ಮಾನ ಜಿಹಾದಿನಿಂದ ಉನ್ಮತ್ತನಾಗಿ ಬಡಬಡಿಸಲಾರಂಭಿಸಿದ. ಮಧ್ಯಯುಗೀನ ಅನಾಗರಿಕ ಜನಾಂಗದ ಕ್ರೌರ್ಯ ಬುದ್ಧಿ ಅವನ ಮೇಲೀಗ ಆವಾಹನೆಗೊಂಡಿತ್ತು. ಮುಂದೆ ಕೆಲ ದಿನಗಳಲ್ಲಿ, ಮುಸಲ್ಮಾನರ ನಡುವೆಯೂ ಸಾಕಷ್ಟು ಖ್ಯಾತಿ ಪಡೆದಿದ್ದ ವಕೀಲ ಪಿ.ಎನ್ ಭಟ್ರ ತಲೆ ಭಯೋತ್ಪಾದಕರ ಗುಂಡಿನ ಸುರಿಮಳೆಗೆ ಸಿಡಿದು ಚೂರಾಗಿ ಹೋಗಿತ್ತು. ಹಿಂದು-ಹಿಂದೆಯೇ ದೂರದರ್ಶನ ಕೇಂದ್ರದ ನಿರ್ದೇಶಕರಾದ ಶ್ರೀಲಸ್ಸಾ ಕೌಲ್ರನ್ನು ಅವರ ಮನೆಯ ಹೊರಗೆ ಬರ್ಬರವಾಗಿ ಸಾಯಿಸಲಾಯ್ತು. ಅವರು ರಾತ್ರಿ ಕರ್ತವ್ಯ ಮುಗಿಸಿ ಇಷ್ಟು ಹೊತ್ತಿಗೆ ಮರಳಿ ಬರುತ್ತಾರೆ ಎಂಬ ಮಾಹಿತಿಯನ್ನು ಭಯೋತ್ಪಾದಕರಿಗೆ ಒದಗಿಸಿದ್ದು ಅವರ ಸಹೋದ್ಯೋಗಿಗಳೇ ಎಂಬುದು ಗುಟ್ಟಾಗಿ ಉಳಿಯಲಿಲ್ಲ. ಶಾಂತಿಯ ಪಂಥ ಎಂದು ತಮ್ಮ ತಾವು ಕರೆದುಕೊಳ್ಳುವ ಈ ಮಂದಿ ಈಗ ಜೊತೆಗಾರರ ಸಾವನ್ನು ಬಯಸುವ, ಅದರಲ್ಲಿ ಪಾಲು ಪಡೆಯುವ ಮತ್ತು ಸಂಭ್ರಮಿಸುವ ಹಂತಕ್ಕೆ ಹೋಗಿಬಿಟ್ಟಿದ್ದರು. ರಾಜ್ಯಪಾಲರಿಗೆ ಆಪ್ತ ಸಹಾಯಕರಾಗಿದ್ದ ಆರ್.ಎನ್ ಹಂಡು ವಾಹನ ಹತ್ತುತ್ತಿರುವಾಗಲೇ ಭಯೋತ್ಪಾದಕರ ಗುಂಡಿಗೆ ಬಲಿಯಾದರು. ತರುಣ ಇಂಜಿನಿಯರ್ ಬಿ.ಕೆ ಗಂಜುವಿನ ಕಥೆ ಭಯಾನಕವಾದದ್ದು. ಭಯೋತ್ಪಾದಕರು ಬಂದುದನ್ನು ಅರಿತ ಆತ ಇದ್ದಿಲಿನ ಡಬ್ಬವೊಂದನ್ನು ಹೊಕ್ಕಿ ಕುಳಿತಿದ್ದ. ಆತ ಸಿಗದೇ ಬರಿಗೈಯಲ್ಲಿ ಹೊರಟಿದ್ದ ಭಯೋತ್ಪಾದಕರಿಗೆ ಪಕ್ಕದ ಮನೆಯ ಮುಸಲ್ಮಾನರೇ ಇದ್ದಿಲಿನ ಡಬ್ಬಿಯತ್ತ ಕೈಮಾಡಿ ತೋರಿದರು. ಮನಸೋ ಇಚ್ಛೆ ಅದರ ಮೇಲೆ ದಾಳಿ ಮಾಡಿದ ಭಯೋತ್ಪಾದಕರು ತಪ್ಪಿಸಿಕೊಳ್ಳಲೂ ದಾರಿ ಇಲ್ಲದೇ ಕೆಟ್ಟ ಸ್ಥಿತಿಯಲ್ಲಿ ಗಂಜು ಪ್ರಾಣಬಿಟ್ಟಿದ್ದಾನೆ ಎಂಬುದನ್ನು ಖಾತ್ರಿ ಪಡಿಸಿಕೊಂಡಿದ್ದರು. ಸರ್ಕಾರಿ ನೌಕರಿಯಿಂದ ನಿವೃತ್ತರಾದ ನಂತರವೂ ಇಸ್ಲಾಮಿಕ್ ಶಾಲೆಯಲ್ಲಿ ಪ್ರೀತಿಯಿಂದ ಪಾಠ ಮಾಡುತ್ತಿದ್ದ ಪ್ರೊಫೆಸರ್ ನೀಲ್ಕಾಂತ್ ಲಾಲಾ ಭಯೋತ್ಪಾದಕರ ಅಟ್ಟಹಾಸಕ್ಕೆ ಬಲಿಯಾದರು. ಅವರ ಶಿಷ್ಯರೂ ಕಣ್ಣೀರಿಟ್ಟಿದ್ದು ಅನುಮಾನ. ಪ್ರೊಫೆಸರ್ ಕೆ.ಎಲ್ ಗಂಜು ಅವರನ್ನಂತೂ ವಿದ್ಯಾರ್ಥಿಗಳೇ ಅಪಹರಿಸಿ ತಲೆಕಡಿದು ಝೀಲಂ ನದಿಗೆ ಎಸೆದರು. ಅವರ ಹೆಂಡತಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಯ್ತು! ಹೇಳುತ್ತ ಹೋದರೆ ಅದು ತೀರದ ಕಥೆ. ಶಾಲಾ ಶಿಕ್ಷಕಿ ಗಿರಿಜಾ ಸಂಬಳ ಪಡೆದು ಮರಳುತ್ತಿರುವಾಗ ಆಕೆಯನ್ನು ಅಪಹರಿಸಿದ ದುಷ್ಟರು ವಿಕೃತವಾಗಿ ಬಲಾತ್ಕರಿಸಿ ಮರಕೊಯ್ಯುವ ಯಂತ್ರದ ಮೂಲಕ ಆಕೆಯನ್ನು ಸೀಳಿಯೇಬಿಟ್ಟರು. ಇಲ್ಲಿಗೆ ನಿಲ್ಲಿಸುವುದು ಒಳಿತು. ಏಕೆಂದರೆ ಕೇಳುತ್ತ ಹೋದಂತೆ ಮುಸಲ್ಮಾನರ ಬರ್ಬರ ಮುಖಚರ್ಯುಗಳು ಕಣ್ಣೆದುರು ಬರಲಾರಂಭಿಸುತ್ತವೆ. ತಾವು ಮಾಡುವ ಈ ಎಲ್ಲ ಕೆಲಸಗಳಿಗೂ ಮತಗ್ರಂಥವನ್ನೇ ಆಧಾರವಾಗಿರಿಸಿಕೊಂಡು ಪ್ರತಿಯೊಬ್ಬನ ಸಾವಿನ ನಂತರವೂ ಘೊಷಣೆ ಕೂಗಿದವರು ಅವರು. ಇಂದಿಗೂ ಯಾರನ್ನಾದರೂ ಕೊಂದೊಡನೆ ಅಥವಾ ಕೊಲ್ಲುವ ಮುನ್ನ ಹೀಗೆಯೇ ಕೂಗುತ್ತಾರೆ. ಕಾಶ್ಮೀರದ ಪಂಡಿತರಿಗೆ ಈ ಘೊಷಣೆ ನಿದ್ದೆಕಣ್ಣಿನಲ್ಲೂ ಎಬ್ಬಿಸುವಂಥದ್ದಾಗಿತ್ತು. ‘ನಿಮ್ಮ ನಿಮ್ಮ ಪತ್ನಿಯರನ್ನು ನಮಗಾಗಿ ಬಿಟ್ಟು, ನೀವು ಜಾಗ ಖಾಲಿ ಮಾಡಿ’ ಎಂಬ ಮಸೀದಿಯ ಘೊಷಣೆಗಳು ಅವರಲ್ಲಿರುವ ಎದೆಗಾರಿಕೆಯನ್ನು ನುಂಗಿಹಾಕಿಬಿಟ್ಟಿದ್ದವು. ಕೊನೆಗೂ ಎದುರಿಸಲು ಯಾವ ಬಲವೂ ಇಲ್ಲದೇ ಸರ್ಕಾರಗಳ ಬೆಂಬಲವೂ ಇಲ್ಲದೇ ಪಂಡಿತರು ಮಾತೃಭೂಮಿಯನ್ನು ಬಿಟ್ಟು ಓಡಿದರು.
ಅದಾದಮೇಲೆ ಕಾಶ್ಮೀರಕ್ಕೆ ಮರಳಬಹುದು ಎನ್ನುವ ಅವರ ಕನಸು ಸತ್ತೇಹೋಗಿತ್ತು. ಈಗ ಮತ್ತೆ ಆಸೆ ಜಾಗೃತವಾಗಿದೆ. ಕೇಂದ್ರ ಸರ್ಕಾರ ತಂದಿರುವ ಯೋಜನೆಗಳು, ಕಾಶ್ಮೀರ ಪುನರ್ನಿರ್ವಣ ಮಾಡುವ ಅವರ ಕಲ್ಪನೆಗಳು ಒಂದಷ್ಟು ಭರವಸೆಯನ್ನಂತೂ ಹುಟ್ಟಿಸಿವೆ. ಆದರೆ ರಾಜಕಾರಣಿಗಳನ್ನು ನಂಬುವುದು ಬಲುಕಷ್ಟ. ಹೀಗಾಗಿಯೇ ಪಂಡಿತರು ಏಕಾಏಕಿ ಧೈರ್ಯ ಮಾಡಿ ಮರಳಿ ಹೋಗಲಾರರು. ಅವರಿಗೆ ಆತ್ಮವಿಶ್ವಾಸ ತುಂಬುವಲ್ಲಿ ಅನೇಕ ಕೆಲಸಗಳು ಆಗಬೇಕಿವೆ. ಸರ್ಕಾರ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಇಟ್ಟಾಗಲೆಲ್ಲ ಭಯೋತ್ಪಾದಕರು ಹೆದರಿಸುವ ನಿಟ್ಟಿನಲ್ಲಿ ಎರಡು ಹೆಜ್ಜೆ ಮುಂದಿಡುತ್ತಾರೆ. ಕಾಶ್ಮೀರ ಅಗ್ನಿಕುಂಡ ಎಂಬುದನ್ನು ಸಾಬೀತುಮಾಡಲು ಸೈನಿಕರ ಕೊಲೆ ನಡೆಸುತ್ತಲೇ ಇರುತ್ತಾರೆ. ಈಗಂತೂ ಅದು ಸಾಧ್ಯವಾಗದೆಂದು ಅರಿವಾದಾಗ ಬೀದಿ ಬದಿಯ ಅಂಗಡಿಯವರನ್ನು ಕೊಲ್ಲಲಾರಂಭಿಸಿದ್ದಾರೆ. ಅದನ್ನೆದುರಿಸಲು ನಮಗಿರುವುದು ಎರಡೇ ಮಾರ್ಗ. ಒಂದು- ಯಾವ ಪ್ರತಿಕ್ರಿಯೆಯನ್ನೂ ತೋರದೇ ಶಾಂತವಾಗಿದ್ದುಬಿಡುವುದು, ಆ ಮೂಲಕ ಭಯೋತ್ಪಾದಕರನ್ನು ಆಂತರಿಕವಾಗಿ ಬೆಳೆಯಲು ಬಿಡುವುದು. ಇನ್ನೊಂದು- ಆಕ್ರಮಣಕಾರಿಯಾಗಿ ಮುನ್ನುಗ್ಗಿ ಬಡಿದೇಬಿಡುವುದು. ಸರ್ಕಾರ ಎರಡನೆಯ ಆಯ್ಕೆಯನ್ನು ತನ್ನದಾಗಿಸಿಕೊಂಡಿದೆ. ಕಳೆದ ಒಂದು ವರ್ಷದಲ್ಲಿ 44 ಪ್ರಮುಖ ಉಗ್ರಗಾಮಿಗಳನ್ನೂ ಸೇರಿದಂತೆ ನೂರಕ್ಕೂ ಹೆಚ್ಚು ಕಾರ್ಯಾಚರಣೆಯಲ್ಲಿ 182 ಉಗ್ರಗಾಮಿಗಳನ್ನು ಕೊಂದು ಬಿಸಾಡಿದೆ. ಡಿಜಿಪಿ ದಿಲ್ಬಾಗ್ ಸಿಂಗ್ ಅವರ ಹೇಳಿಕೆಯ ಪ್ರಕಾರ 134 ತರುಣರು ಭಯೋತ್ಪಾದಕರ ತಂಡವನ್ನು ಸೇರಿಕೊಂಡಿದ್ದು ಅವರಲ್ಲಿ 72 ಜನರನ್ನು ಕೊಲ್ಲಲಾಗಿದೆ, 22 ಜನರನ್ನು ಬಂಧಿಸಲಾಗಿದೆ. ಈ ವರ್ಷ ಒಳನುಸುಳುವಿಕೆ ತೀವ್ರಪ್ರಮಾಣದಲ್ಲಿ ಕಡಿಮೆಯಾಗಿದ್ದು ಕೇವಲ 34 ಮಂದಿ ಭಯೋತ್ಪಾದಕರು ಗಡಿದಾಟಿರುವ ಮಾಹಿತಿ ಬಂದಿದೆ. ಕಳೆದ ವಾರವಂತೂ 24 ಗಂಟೆಯಲ್ಲಿ ಒಂಬತ್ತು ಭಯೋತ್ಪಾದಕರನ್ನು ಕೊಂದಿದ್ದು ದಾಖಲೆಯಾಗಿತ್ತು.
ಇವೆಲ್ಲವೂ ಕಾಶ್ಮೀರಕ್ಕೆ ಹೊಸ ರೂಪ ತಂದುಕೊಡುವಲ್ಲಿ ನಿಸ್ಸಂಶಯವಾಗಿ ಸಹಕರಿಸಲಿದೆ. ಜೊತೆಗೆ ಬದಲಾಗುತ್ತಿರುವ ಗಡಿ ರಾಷ್ಟ್ರಗಳ ಸ್ಥಿತಿಯನ್ನೂ ಗಮನದಲ್ಲಿರಿಸಿಕೊಂಡು ನಾವು ತೀವ್ರವಾಗಿ ಮುನ್ನಡೆಯಲೇಬೇಕಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಜಯಭೇರಿಯನ್ನು ಕಂಡು ಕುಣಿದಾಡುತ್ತಿದ್ದ ಪಾಕಿಸ್ತಾನ ಈಗ ನಿಜಕ್ಕೂ ಸಂಕಟಕ್ಕೊಳಗಾಗಿದೆ. ತೆಹರೀಕ್-ಎ-ತಾಲಿಬಾನ್ ಎಂಬ ಪಾಕಿಸ್ತಾನೀ ಸಂಘಟನೆ ಪಾಕಿಸ್ತಾನದ ವಿರುದ್ಧವೇ ಈಗ ತಿರುಗಿ ಬಿದ್ದಿದೆ. ಸೈನ್ಯದೊಂದಿಗೆ ಒಪ್ಪಂದ ನಡೆಸಿಕೊಳ್ಳುವ ಎಲ್ಲ ಪ್ರಯತ್ನವೂ ವ್ಯರ್ಥವಾದ ಮೇಲೆ ಅದು ಪಾಕಿಸ್ತಾನೀ ಸೈನಿಕರ ಕಗ್ಗೊಲೆಗೆ ಕೈ ಹಾಕಿದೆ. ಪ್ರತಿನಿತ್ಯ ಕಾಶ್ಮೀರದಲ್ಲಿ ಹೇಗೆ ಭಯೋತ್ಪಾದಕರ ಸಾವಿನ ವರದಿಗಳು ಬರುತ್ತವೆಯೋ ಹಾಗೆಯೇ ಪಾಕಿಸ್ತಾನದಿಂದ ಅಲ್ಲಿನ ಸೈನಿಕರ ಸಾವಿನ ವರದಿಗಳೂ ಬರುತ್ತಲೇ ಇವೆ. ಜೊತೆಗೇ ಅಲ್ಲಿನ ಭಯೋತ್ಪಾದಕ ಸಂಘಟನೆ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಗಡಿಬೇಲಿಯನ್ನು ಕತ್ತರಿಸಿ ಎಸೆದು ಈ ಭೂಭಾಗ ಅಫ್ಘಾನಿಸ್ತಾನಕ್ಕೆ ಸೇರಿದ್ದು ಎಂದು ವಾದಿಸಲು ಶುರುಮಾಡಿದೆ. ಪಾಕಿಸ್ತಾನ ಹೇಗೆ ಭಾರತದ ಗಡಿಯನ್ನು ಬದಲಾಯಿಸಿ ಸಂಭ್ರಮಿಸುತ್ತಿತ್ತೋ ಈಗ ಪಾಕಿಸ್ತಾನದ ಗಡಿಯೂ ಅದೇ ರೀತಿ ಬದಲಾಗುತ್ತಿದೆ. ಪಾಕಿಸ್ತಾನ ಹೇಗೆ ನಮ್ಮ ಭೂಭಾಗವನ್ನು ಆಕ್ರಮಿಸಿಕೊಂಡು ತಮ್ಮದ್ದೇ ಎಂದು ವಾದಿಸುತ್ತಿತ್ತೋ ಈಗ ಅದಕ್ಕೂ ಅದೇ ಶಾಸ್ತಿಯಾಗುತ್ತಿದೆ. ಹೇಗೆ ನಮ್ಮ ಸೈನಿಕರನ್ನು ಕೊಲ್ಲುತ್ತಿದ್ದರೋ ತನ್ನ ಸೈನಿಕರನ್ನೂ ಅದೇ ರೀತಿ ಬಲಿವೇದಿಯ ಮೇಲೆ ನಿಲ್ಲಿಸಿಕೊಂಡಿದೆ. ಯಾವ ಗತಿ ಕಾಶ್ಮೀರದ ಪಂಡಿತರಿಗಾಯ್ತೋ ತಾಲಿಬಾನ್ಗಳ ಕೈಯ್ಯಲ್ಲಿ ಪಾಕಿಸ್ತಾನೀಯರೂ ಅದನ್ನೇ ಇದಿರುನೋಡುವ ಕಾಲ ದೂರವಿಲ್ಲ. ಕ್ರೌರ್ಯ ಕ್ರೌರ್ಯವನ್ನೇ ಉಂಟು ಮಾಡುವುದೇ ಹೊರತು ಶಾಂತಿಯನ್ನು ಹುಟ್ಟಿಸಲು ಸಾಧ್ಯವಿಲ್ಲ. ಇದಕ್ಕೆ ಇಸ್ಲಾಮೀ ಜಗತ್ತು ಸಮರ್ಥವಾದ ಉದಾಹರಣೆ.
ಸರಳಾ ಟಪ್ಲೂ ಸಾವಿನ ಸುದ್ದಿ ಕೇಳಿದಾಗ ಇವಿಷ್ಟೂ ಒಮ್ಮೆ ನೆನಪಾಯ್ತು. ಇಂದಿಗೂ ಜಮ್ಮುವಿನ ಜಗತಿ ಕಾಲನಿಯಲ್ಲಿ ಪುಟ್ಟ-ಪುಟ್ಟ ಮನೆಗಳಲ್ಲಿ ವಾಸ ಮಾಡುತ್ತಿದ್ದ ಕಾಶ್ಮೀರಿ ಪಂಡಿತರ ಆಕ್ರಂದನ ಕೇಳಿದರೆ ಕರುಳು ಚುರ್ ಎನ್ನುತ್ತದೆ. ಅವರ ಹೃದಯ ವಿದ್ರಾವಕ ಇತಿಹಾಸ ಮತ್ತು ಅಷ್ಟೇ ಸಂಕಟಮಯ ವರ್ತಮಾನ ಭಯ ಹುಟ್ಟಿಸುತ್ತದೆ. ಭವಿಷ್ಯವಾದರೂ ಬಂಗಾರವಾಗಲಿ ಎಂದು ಹಾರೈಸಬಹುದಷ್ಟೇ. ಸಂತೋಷದ ಸುದ್ದಿ ಎಂದರೆ ಕಾಶ್ಮೀರದಲ್ಲಿ ಯಾರು ಬೇಕಾದರೂ ಜಮೀನು ಕೊಳ್ಳಬಹುದು ಎಂಬ ಕಾನೂನನ್ನು ಸರ್ಕಾರ ಜಾರಿಗೆ ತಂದಿದೆ. ನಮ್ಮಲ್ಲೂ ರಿಯಲ್ ಎಸ್ಟೇಟ್ನ ಖಯಾಲಿ ಇರುವ ಮಂದಿ ಸಾಕಷ್ಟಿದ್ದಾರೆ. ಮಕ್ಕಳು, ಮೊಮ್ಮಕ್ಕಳಿಗೆಂದು ಬೆಂಗಳೂರಿನಲ್ಲಿ ಜಮೀನು ಕೊಳ್ಳುವ ಬದಲು ಕಾಶ್ಮೀರದಲ್ಲೇ ಒಂದುಷ್ಟು ಜಾಗ ಕೊಳ್ಳುವಂತಾಗಲಿ. ಪಂಡಿತರ ನೋವು ನೀಗಲು ಹೋರಾಟ ಅವರೊಬ್ಬರೇ ಮಾಡಬೇಕೆಂದಿಲ್ಲ. ಅವರ ಜೊತೆಗೆ ನಾವೂ ನಿಲ್ಲಲು ಬೇಕಾದ ವ್ಯವಸ್ಥೆ ರೂಪುಗೊಳ್ಳುತ್ತಿದೆ, ಜೊತೆಯಾಗೋಣ.
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)