

ಕಾರ್ತಿಕ ಮಾಸದ ವಿಶೇಷವೇ ಗೌರಿ ಹುಣ್ಣಿಮೆ. ನಮ್ಮ ನಾಡಿನ ಗ್ರಾಮೀಣ ಸೊಗಡನ್ನು ಪ್ರತಿನಿಧಿಸುವ, ಹೆಣ್ಣು ಮಕ್ಕಳಿಗೆ ಸಂಭ್ರಮ ತರುವ ಹಬ್ಬ ಇದು. ಕೃಷಿ ಪ್ರಧಾನ ಕುಟುಂಬಗಳು ತಾವು ಬೆಳೆಯುವ ಬೆಳೆ ಸಮೃದ್ಧವಾಗಿ ಬರಲೆಂದು ಆಚರಿಸುವ ಹಬ್ಬ. ಗೌರಿಯನ್ನು ಪಾರ್ವತಿಯ ಪ್ರತಿರೂಪವಾಗಿ ಪೂಜಿಸಲಾಗುತ್ತದೆ. ಶಿವನ ಅರ್ಧಾಂಗಿ ಪಾರ್ವತಿ ದೇವಿಗೆ ಜಾನಪದ ಸಂಪ್ರದಾಯದಂತೆ ಗ್ರಾಮೀಣ ಮಹಿಳೆಯರು ಕೃತಜ್ಞತೆ ಸಲ್ಲಿಸುವ ಹಬ್ಬ ಇದಾಗಿದೆ. ಬಂಧುಗಳ ನಡುವಿನ ಬಾಂಧವ್ಯ ಗಟ್ಟಿಯಾಗಲೆಂದು ಆಚರಿಸುವ ಗೌರಿ ಹಬ್ಬ ಎಲ್ಲ ಅರ್ಥಗಳಲ್ಲಿ ಸಂಭ್ರಮದ ಹಬ್ಬವಾಗಿದೆ. ಕಾರ್ತಿಕ ಮಾಸದ ಹುಣ್ಣಿಮೆಯ ದಿನದಂದು ಗೌರಮ್ಮನನ್ನು ಮನೆ ಮನೆಗಳಲ್ಲಿ ಪ್ರತಿಷ್ಠಾಪಿಸಿ ಆಚರಿಸುವ ಸಂಪ್ರದಾಯ ಪುರಾತನ ಕಾಲದಿಂದಲೂ ಇದೆ. ಗೌರಿ ಹುಣ್ಣಿಮೆ ಪ್ರಾರಂಭವಾಗುವ ಕೆಲವು ದಿನಗಳ ಮೊದಲೇ ಮಣ್ಣಿನಿಂದ ಅಥವಾ ಕಟ್ಟಿಗೆಯಿಂದ ಸಿದ್ಧಪಡಿಸಿದ ಗೌರಮ್ಮನ ವಿಗ್ರಹವನ್ನು ತಂದು, ಮನೆಯಲ್ಲಿ ಪ್ರತಿಷ್ಠಾಪಿಸಿ ಗೌರಿಯ ರೂಪದಲ್ಲಿರುವ ಪಾರ್ವತಿದೇವಿಯನ್ನು ಮತ್ತು ಜೊತೆಗೆ ಶಿವನನ್ನು ಆಹ್ವಾನಿಸಿ ಪೂಜಿಸಲಾಗುತ್ತದೆ.
ಈ ದಿನದಂದು ಗೌರಿಯ ವಿಗ್ರಹಕ್ಕೆ ವಿಶೇಷವಾಗಿ ಅವರೆ ಹೂವು, ಚೆಂಡು ಹೂವು ಮತ್ತು ಉತ್ತರಾಣಿ ಕಡ್ಡಿಗಳಿಂದ ಸುಂದರವಾಗಿ ಅಲಂಕರಿಸಲಾಗುತ್ತದೆ. ಸಕ್ಕರೆ ಆರತಿ ಈ ಹಬ್ಬದ ವಿಶೇಷ. ವಿವಿಧ ಗಾತ್ರ ಮತ್ತು ವಿನ್ಯಾಸದ ಸಕ್ಕರೆ ಗೊಂಬೆಗಳನ್ನು ತಯಾರಿಸಿ, ತಟ್ಟೆಗಳಲ್ಲಿಟ್ಟು ಅದರ ಜೊತೆಗೆ ದೀಪಗಳನ್ನು ಇಟ್ಟು ಗೌರಮ್ಮನ ವಿಗ್ರಹಕ್ಕೆ ಆರತಿ ಮಾಡಲಾಗುತ್ತದೆ. ಗೋದಿ ಹಿಟ್ಟು, ಮೈದಾ ಹಿಟ್ಟು, ಅರಶಿಣದ ಪುಡಿಯ ಮಿಶ್ರಣಕ್ಕೆ ಹಾಲು ಬೆರೆಸಿ ಕಣಕದ ದೀಪದ ಬಟ್ಟಲಗಳನ್ನು ತಯಾರಿಸಿ ಅದರಲ್ಲಿ ದೀಪ ಬೆಳಗಿಸಿ ಆರತಿ ಮಾಡಿ ಬೆಳಗುವುದು ಈ ದಿನದ ವಿಶೇಷ ಆಚರಣೆಗಳಲ್ಲಿ ಒಂದಾಗಿದೆ. ಹುಣ್ಣಿಮೆಯ ದಿನ ಗೌರಮ್ಮನನ್ನು ಎಲ್ಲಾ ವೈಭವಗಳಿಂದ ಪೂಜಿಸಿ, ಸಾಯಂಕಾಲದ ಸಮಯದಲ್ಲಿ ನದಿ, ಕೆರೆ ದಂಡೆಗೆ ತೆಗೆದುಕೊಂಡು ಹೋಗಿ ವಿದಾಯ ನೀಡಲಾಗುತ್ತದೆ.
ಪುರಾಣದಲ್ಲಿ ಉಲ್ಲೇಖ: ಕಾರ್ತಿಕ ಮಾಸದ ಈ ಗೌರಿ ಹುಣ್ಣಿಮೆಯಂದು ಕೃತ್ತಿಕಾ ನಕ್ಷತ್ರ ಸೇರಿದ್ದರೆ ಆ ದಿನದಂದು ಕಾರ್ತಿಕೇಯನ ದರುಶನ ಪಡೆಯಬೇಕೆಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಕಾರ್ತಿಕೇಯನ ದರುಶನ ಭಾಗ್ಯದಿಂದ ಏಳು ಜನ್ಮಗಳಲ್ಲಿಯೂ ಧನಿಕನಾಗಿ, ಜ್ಞಾನವಂತನಾಗಿ ಜನಿಸುವರೆಂದು ಹೇಳಲಾಗಿದೆ. ಈ ಹುಣ್ಣಿಮೆಯಂದು ಸಂಪದ್ರಾಯಬದ್ಧವಾಗಿ ಎತ್ತನ್ನು ಗೋವಿಗೆ ವಿವಾಹ ಮಾಡಿಸಿದರೆ ಪಿತೃದೇವತೆಗಳು ಸಂತುಷ್ಟಿ ಹೊಂದುವರು ಎಂಬ ಪ್ರತೀತಿ ಇದೆ. ಅಲ್ಲದೆ ಅಶ್ವಮೇಧ ಯಾಗ ಮಾಡಿದಷ್ಟು ಫಲ ದೊರೆಯುತ್ತದೆ. ಕಾರ್ತಿಕ ಮಾಸದ ಈ ಪೂರ್ಣಿಮೆಯಂದು ಶ್ರೀ ವೇದವ್ಯಾಸರ ಪೂಜೆಗೆ ಪ್ರಶಸ್ತವಾದ ದಿನ. ವೇದವ್ಯಾಸರ ಪ್ರತಿಮೆಯಲ್ಲಿ ‘ತನ್ನೋ ವ್ಯಾಸೋ ಪ್ರಜೋದಯಾತ್’ ಎನ್ನುವ ಮಂತ್ರದಿಂದ ಆಹ್ವಾನಿಸಿ ಪೂಜಿಸಲಾಗುತ್ತದೆ. ಅಂದು ಶ್ರೀಮನ್ನಾರಾಯಣನು ಮತ್ಸಾ್ಯವತಾರಿಯಾಗಿ ಅವತರಿಸಿದ ದಿನವಾದ್ದರಿಂದ ಮತ್ಸ್ಯ ಜಯಂತಿಯಾಗಿಯೂ ಆಚರಿಸಲ್ಪಡುತ್ತದೆ.