

| ರಾಯಣ್ಣ ಆರ್.ಸಿ. ಬೆಳಗಾವಿ
ಹವಾಮಾನ ವೈಪರೀತ್ಯ, ಮಹಾಮಾರಿ ಕರೊನಾ ಸೇರಿ ಮುಂತಾದ ಪ್ರತಿಕೂಲ ವಾತಾವರಣದ ನಡುವೆಯೂ ಈ ವರ್ಷ ದೇಶದ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಹಂಗಾಮನ್ನು ಪೂರ್ಣಗೊಳಿಸಿವೆ. ಮತ್ತೊಂದೆಡೆ ಅನೇಕ ರಾಜ್ಯಗಳಲ್ಲಿ ಕಬ್ಬು ಬೆಳೆಗಾರರು ತಾವು ಬೆಳೆದ ಕಬ್ಬಿನ ಬೆಳೆಗೆ ಎಫ್ಆರ್ಪಿ(ಫೇರ್ ಆಂಡ್ ರೇಮ್ಯುನ್ರೇಟಿವ್ ಪ್ರೖೆಸ್)ನೀಡಬೇಕು ಎಂಬ ಹೋರಾಟ ಕೂಡ ಇನ್ನೂ ಜೀವಂತವಾಗಿಯೇ ಇದೆ. ದೇಶಾದ್ಯಂತ ಪ್ರಸಕ್ತ ಸಾಲಿನ (2020-21)ಕಬ್ಬು ನುರಿಸುವ ಹಂಗಾಮಿನಲ್ಲಿ 502 ಸಕ್ಕರೆ ಕಾರ್ಖಾನೆಗಳು 258.68 ಲಕ್ಷ ಟನ್ ಸಕ್ಕರೆ ಉತ್ಪಾದನೆ ಮಾಡಿವೆ. ಕಳೆದ ವರ್ಷ 457 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸಿದ್ದವು. ಆದರೆ ಈ ವರ್ಷ ಹೆಚ್ಚುವರಿಯಾಗಿ 45 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಿವೆ. ಅಲ್ಲದೆ. ಈ ವರ್ಷ ಕಬ್ಬು ಹುಲುಸಾಗಿ ಬೆಳೆದಿರುವುದರಿಂದ ಕಳೆದ ವರ್ಷಕ್ಕಿಂತ 42.55 ಲಕ್ಷ ಟನ್ ಅಧಿಕ ಸಕ್ಕರೆ ಉತ್ಪಾದನೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ (2020ರ ಮಾ.15ಕ್ಕೆ) 216.86 ಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗಿತ್ತು.
2021ರ ಮಾ.15ಕ್ಕೆ ದೇಶದ ಬಹುತೇಕ ರಾಜ್ಯಗಳಲ್ಲಿ ಕಬ್ಬು ನುರಿಸುವ ಹಂಗಾಮು ಕೊನೆಯ ಹಂತ ತಲುಪಿದ್ದು, ಈಗಾಗಲೆ 171 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಹಂಗಾಮನ್ನು ಪೂರ್ಣಗೊಳಿಸಿವೆ. ಇನ್ನೂ 331 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವುದನ್ನು ಮುಂದುವರಿಸಿವೆ.
ಮಹಾರಾಷ್ಟ್ರ ರಾಜ್ಯವು 2021ರ ಮಾ.15ಕ್ಕೆ 95.05 ಲಕ್ಷಟನ್ ಸಕ್ಕರೆ ಉತ್ಪಾದಿಸಿದೆ. ಕಳೆದ ವರ್ಷ ಇದೇ ಅವಧಿಗೆ 55.85 ಲಕ್ಷ ಟನ್ ಸಕ್ಕರೆ ಉತ್ಪಾದಿಸಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ 38.20 ಲಕ್ಷ ಟನ್ ಅಧಿಕ ಸಕ್ಕರೆ ಉತ್ಪಾದಿಸುವ ಮೂಲಕ ದೇಶಕ್ಕೆ ನಂ.1 ಸ್ಥಾನದಲ್ಲಿದೆ. ಸಾಂಗಲಿ, ಕೊಲ್ಲಾಪುರ, ಸಾತಾರ ಭಾಗಗಳಲ್ಲಿ ಇನ್ನೂ ಕಬ್ಬು ನುರಿಸುವುದನ್ನು ಸಕ್ಕರೆ ಕಾರ್ಖಾನೆಗಳು ಮುಂದುವರಿಸಿದ್ದು, ಏ.15ಕ್ಕೆ ಮುಗಿಯುವ ನಿರೀಕ್ಷೆಯಿದೆ. ಸೊಲ್ಲಾಪುರ ಭಾಗದಲ್ಲಿಯೂ ಈ ಬಾರಿ ಕಬ್ಬಿನ ಫಸಲು ಚೆನ್ನಾಗಿ ಬಂದಿದೆ. ಉತ್ತರ ಪ್ರದೇಶದಲ್ಲಿ ಈ ವರ್ಷ 120 ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಿದ್ದು, 84.25 ಲಕ್ಷ ಟನ್ ಸಕ್ಕರೆ ಉತ್ಪಾದನೆ ಮಾಡಿವೆ. ಈ ಪೈಕಿ 18 ಸಕ್ಕರೆ ಕಾರ್ಖಾನೆಗಳು ಈಗಾಗಲೆ ಹಂಗಾಮನ್ನು ಪೂರ್ಣಗೊಳಿಸಿವೆ. ಕಳೆದ ವರ್ಷ ಇದೇ ಅವಧಿಗೆ 87.16 ಲಕ್ಷ ಟನ್ ಸಕ್ಕರೆ ಉತ್ತರ ಪ್ರದೇಶದಲ್ಲಿ ಉತ್ಪಾದನೆಯಾಗಿತ್ತು.
ಕರ್ನಾಟಕದಲ್ಲಿ 2021ರ ಮಾ.18ಕ್ಕೆ 66 ಸಕ್ಕರೆ ಕಾರ್ಖಾನೆಗಳು 4.37 ಕೋಟಿ ಮೆಟ್ರಿಕ್ ಟನ್ ಕಬ್ಬು ನುರಿಸಿ, 41.84 ಲಕ್ಷ ಟನ್ ಸಕ್ಕರೆ ಉತ್ಪಾದಿಸಿವೆ. ಈಗಾಗಲೆ ಬಹುತೇಕ ಸಕ್ಕರೆ ಕಾರ್ಖಾನೆಗಳು ಹಂಗಾಮನ್ನು ಮುಗಿಸಿವೆ. ನಾಲ್ಕು ಸಕ್ಕರೆ ಕಾರ್ಖಾನೆಗಳು ಮಾತ್ರ ಇನ್ನೂ ಕಾರ್ಯನಿರ್ವಹಿಸುತ್ತಿವೆ. ಕಳೆದ ವರ್ಷ(2020) ರಾಜ್ಯದ 63 ಸಕ್ಕರೆ ಕಾರ್ಖಾನೆಗಳು 33.35 ಲಕ್ಷ ಟನ್ ಸಕ್ಕರೆ ಉತ್ಪಾದಿಸಿದ್ದವು.
ವಿಶ್ವಾದ್ಯಂತ ಹೆಚ್ಚುತ್ತಿರುವ ಸಕ್ಕರೆ ಬಳಕೆ
ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ನಗರೀಕರಣ ಮತ್ತು ಬದಲಾಗುತ್ತಿರುವ ಜನರ ಆಹಾರ ಪದ್ಧತಿ ಅವಲೋಕಿಸಿದರೆ ದೇಶದಲ್ಲಿ ಸಕ್ಕರೆ ಬಳಕೆ ಪ್ರಮಾಣ ಮುಂದಿನ ಐದು ವರ್ಷಗಳಲ್ಲಿ 290 ಲಕ್ಷ ಟನ್ಗಳಿಗಿಂತಲೂ ಅಧಿಕವಾಗಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ ಅಂದಾಜು ಮಾಡಿದೆ. ವಿಶ್ವದ ಒಟ್ಟಾರೆ ಸಕ್ಕರೆ ಬಳಕೆ ಪ್ರಮಾಣ 1687.30 ಲಕ್ಷ ಟನ್ಗಳಷ್ಟಿದೆ. ಈ ಪೈಕಿ ಭಾರತ ಶೇ.15 ದೊಡ್ಡ ಪಾಲನ್ನು ಹೊಂದುವ ಮೂಲಕ ಅತಿ ಹೆಚ್ಚು ಸಕ್ಕರೆ ಬಳಕೆ ಮಾಡುವ ದೇಶವಾಗಿ ಭಾರತ ಹೊರಹೊಮ್ಮಿದೆ. ದೇಶದ ಸಕ್ಕರೆ ಬಳಕೆ ಪ್ರತಿವರ್ಷ ಸರಾಸರಿ ಶೇ.2 ಪ್ರಮಾಣದಲ್ಲಿ ಏರಿಕೆಯಾಗುತ್ತಲಿದೆೆ. ಸದ್ಯ ವರ್ಷಕ್ಕೆ 290 ಲಕ್ಷ ಟನ್ ಸಕ್ಕರೆ ಬಳಕೆಯಾಗುತ್ತಿದೆ. 2021-22ರ ವೇಳೆಗೆ 320 ಲಕ್ಷ ಟನ್ಗಳಿಗೆ ತಲುಪಲಿದೆ ಎಂದು ವರದಿ ತಿಳಿಸಿದೆ. ಬದಲಾಗುತ್ತಿರುವ ಆಹಾರ ಪದ್ಧತಿ, ಆಹಾರ ಸಂಸ್ಕರಣಾ ವಲಯದಲ್ಲಿ ವಿಪರೀತ ಸಿಹಿ ಬಳಕೆಯಿಂದಾಗಿ ದೇಶದ ಒಟ್ಟಾರೆ ಸಕ್ಕರೆ ಬಳಕೆ ಪ್ರಮಾಣ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಕೃಷಿ ಪ್ರದೇಶದಲ್ಲಿ ಕಬ್ಬು ಬೆಳೆಯಬೇಕಿದೆ. ಜತೆಗೆ, ಅಧಿಕ ಇಳುವರಿಯ ಕಬ್ಬು ಬೆಳೆಯುವ ಮೂಲಕ ಸಕ್ಕರೆ ಉತ್ಪಾದನೆ ಯನ್ನು ಹೆಚ್ಚಿಸಬೇಕಾದ ಅಗತ್ಯವಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ ಅಭಿಪ್ರಾಯಪಟ್ಟಿದೆ.
ಬೆಳಗಾವಿ ಜಿಲ್ಲೆ ರಾಜ್ಯಕ್ಕೆ ನಂ.1
ರಾಜ್ಯದಲ್ಲಿಯೇ ಸಕ್ಕರೆ ಉತ್ಪಾದನೆಯಲ್ಲಿ ಬೆಳಗಾವಿ ಜಿಲ್ಲೆ ರಾಜ್ಯಕ್ಕೆ ನಂ.1 ಸ್ಥಾನದಲ್ಲಿದೆ. ಈ ವರ್ಷ ಜಿಲ್ಲೆಯ 26 ಕಾರ್ಖಾನೆಗಳು 1.80 ಕೋಟಿ ಮೆಟ್ರಿಕ್ ಟನ್ ಕಬ್ಬು ನುರಿಸಿ, 19.05 ಲಕ್ಷ ಟನ್ ಸಕ್ಕರೆ ಉತ್ಪಾದನೆ ಮಾಡಿದ್ದು, ರಾಜ್ಯದ ಸರಾಸರಿ ಸಕ್ಕರೆ ಇಳುವರಿ 11.69 ಇದೆ. ರಾಜ್ಯದ ಸಕ್ಕರೆ ಕಾರ್ಖಾನೆಗಳ ಇಳುವರಿಯನ್ನು ಅವಲೋಕಿಸಿದಾಗ, ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಬೇಡಿಕಿಹಾಳದಲ್ಲಿರುವ ವೆಂಕಟೇಶ್ವರ ಪವರ್ ಪ್ರಾಜೆಕ್ಟ್ ಸಕ್ಕರೆ ಕಾರ್ಖಾನೆಯೂ 12.11 ಇಳುವರಿ ಪಡೆಯುವ ಮೂಲಕ ರಾಜ್ಯದಲ್ಲಿ ನಂ.1 ಸ್ಥಾನದಲ್ಲಿದೆ. ಬಾಗಲಕೋಟೆ ಜಿಲ್ಲೆ ಸಕ್ಕರೆ ಉತ್ಪಾದನೆಯಲ್ಲಿ ದ್ವೀತಿಯ ಸ್ಥಾನದಲ್ಲಿದೆ. ಬಾಗಲಕೋಟೆಯ 10 ಕಾರ್ಖಾನೆಗಳು 1.16 ಕೋಟಿ ಮೆಟ್ರಿಕ್ ಟನ್ ಕಬ್ಬು ನುರಿಸಿ, 10.20 ಲಕ್ಷ ಟನ್ ಸಕ್ಕರೆ ಉತ್ಪಾದಿಸಿವೆ. ಮುಧೋಳ ತಾಲೂಕು ಉತ್ತುರ ಗ್ರಾಮದಲ್ಲಿರುವ ಇಂಡಿಯನ್ ಕೇನ್ ಪಾವರ್ ಲಿ. ಕಾರ್ಖಾನೆಯೂ 19.90 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ, 2.21ಲಕ್ಷ ಟನ್ ಸಕ್ಕರೆ ಉತ್ಪಾದಿಸುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದೆ. ಬೆಳಗಾವಿ ಜಿಲ್ಲೆಯ ಅಥಣಿ ಶುಗರ್ಸ್ ಕಾರ್ಖಾನೆ 13.82 ಮೆಟ್ರಿಕ್ ಟನ್ ಕಬ್ಬು ನುರಿಸಿ, 1.58 ಲಕ್ಷ ಟನ್ ಸಕ್ಕರೆ ಉತ್ಪಾದಿಸಿ ದ್ವೀತಿಯ ಸ್ಥಾನದಲ್ಲಿದೆ.