ಕರ್ಮಗಳಲ್ಲಿ ಅನಾಸಕ್ತನೇ ಯೋಗಾರೂಢ

Geethe
Published on

ಕರ್ಮಗಳಲ್ಲಿ ಅನಾಸಕ್ತನೇ ಯೋಗಾರೂಢ ಶ್ರೀ ಭಗವಾನುವಾಚ

ಅನಾಶ್ರಿತಃ ಕರ್ಮಫಲಂ ಕಾರ್ಯಂ ಕರ್ಮ ಕರೋತಿ ಯಃ |

ಸ ಸಂನ್ಯಾಸೀ ಚ ಯೋಗೀ ಚ ನ ನಿರಗ್ನಿರ್ನ ಚಾಕ್ರಿಯಃ || 6.1

ಗೀತೆಯನ್ನು ಉಪದೇಶಿಸುವಾಗ ಶ್ರೀಕೃಷ್ಣ ಅತ್ಯುನ್ನತ ಯೋಗಭೂಮಿಕೆಯಿಂದ ಮಾತನಾಡುತ್ತಿದ್ದನು. ‘ಯಾವನು ಕರ್ಮಫಲವನ್ನು ಆಶ್ರಯಿಸದೆ, ಮಾಡಬೇಕಾದ ಕರ್ಮ(ಕರ್ತವ್ಯ)ವನ್ನು ಮಾಡುವನೋ ಅವನೇ ಸಂನ್ಯಾಸಿ ಹಾಗೂ ಯೋಗಿ; ಅಗ್ನಿಯಿಲ್ಲದವನೂ, ಕ್ರಿಯಾರಹಿತನೂ ಅಲ್ಲ.’

ಪಾತಂಜಲ ಯೋಗಸೂತ್ರಗಳ ಸಂಗ್ರಹ ಆರನೇ ಅಧ್ಯಾಯದಲ್ಲಿ ಇದೆಯೆನ್ನಬಹುದು. ‘ನಿರಗ್ನಿ’ ಎಂದರೆ ಅಗ್ನಿಯನ್ನು ಇಡದಿರುವುದು. ವೈದಿಕ ಯಜ್ಞಕ್ಕಾಗಿ ಅಗ್ನಿಯನ್ನು ಇಟ್ಟುಕೊಂಡವರು ‘ಸಅಗ್ನಿ’ಗಳು. ನಿರಗ್ನಿಯೆಂದರೆ ಸಂನ್ಯಾಸಿ. ಅಗ್ನಿಯಿಟ್ಟುಕೊಂಡು ಅಗ್ನಿಹೋತ್ರ ಮಾಡುವವನು ಸಂನ್ಯಾಸಿಯಾಗಲು ನಿಶ್ಚಯಿಸಿದಾಗ ಅಗ್ನಿಯನ್ನು ತ್ಯಜಿಸಬೇಕು. ಅವನು ಮನಸ್ಸಿನಲ್ಲಿ ಪ್ರಾರ್ಥಿಸಿ, ತನ್ನಲ್ಲಿರುವ ಅಗ್ನಿಗಳನ್ನು ಒಳಗೆ ಸೆಳೆದುಕೊಳ್ಳುವನು. ಆಗ ಅವನಲ್ಲಿದ್ದ ಅಗ್ನಿ ಸಾಮಾನ್ಯ ಅಗ್ನಿಯಾಗುವುದು. ನಂತರ ಅದನ್ನು ನದಿ ಅಥವಾ ಬಾವಿಯಲ್ಲಿ ವಿಸರ್ಜಿಸಬೇಕು. ಅಂದು ಸಂನ್ಯಾಸಿಗಳು ಅಗ್ನಿಯನ್ನು ಮುಟ್ಟಬಾರದೆಂಬ ಸಂಪ್ರದಾಯವಿತ್ತು. ಒಬ್ಬ ನಿರಗ್ನಿ ಸಮಾಜಕ್ಕೆ ಉಪಕಾರವಾಗುವ ಕೆರೆ, ಬಾವಿ, ಮರಗಳ ತೋಪು ಮಾಡುವ ಜನೋಪಯೋಗಿ ಕೆಲಸಗಳನ್ನು ‘ಇಷ್ಟಾಪೂರ್ತ’ ಎನ್ನುವರು. ‘ಇಷ್ಟ’ ಎಂದರೆ ವೈದಿಕ ಯಜ್ಞಯಾಗಾದಿಗಳು. ‘ಪೂರ್ತಾ’ ಎಂದರೆ ಸಮಾಜಕ್ಕೆ ಕ್ಷೇಮವಾಗುವ ಸೇವಾಕಾರ್ಯ.

ನಿರಗ್ನಿಯಾಗಿ ಕರ್ಮ ಮಾಡದವನು ಯೋಗಿಯಲ್ಲ. ತನ್ನ ಪಾಲಿಗೆ ಬಂದ ಕೆಲಸವನ್ನು ಮೊದಲಿಗೆ ಕೆಟ್ಟ, ದುಷ್ಟಕರ್ಮಗಳನ್ನು ಬಿಟ್ಟು, ಸಕಾಮಕರ್ಮಗಳನ್ನೂ ತೊರೆದಿದ್ದಾನೆ. ಮೋಕ್ಷದ ಅಪೇಕ್ಷಿಯಾದ ಇವನು ತನ್ನ ಕಾರ್ಯವಾದ ಕರ್ತವ್ಯಕರ್ಮಗಳನ್ನು ಮಾಡುತ್ತಿದ್ದಾನೆ. ಆದರೆ ಇಲ್ಲಿ ಇವನು ಮನಸ್ಸಿನಲ್ಲಿ ಮಾಡುತ್ತಿರುವ ಕರ್ಮಗಳ ಫಲ ತನಗೆ ಬೇಡವೆಂದು ಸಂಕಲ್ಪಿಸಿದ್ದಾನೆ. ಕರ್ಮಫಲಕ್ಕಾಗಿ ಕರ್ಮ ಮಾಡುವ ಪ್ರವೃತ್ತಿ ಬಿಟ್ಟು ಕರ್ಮ ಮಾಡುತ್ತಿದ್ದಾನೆ. ಆದ್ದರಿಂದ ಇವನನ್ನು ಸಂನ್ಯಾಸಿಯೆಂದೂ, ಯೋಗಿಯೆಂದೂ ಕರೆಯಬೇಕು. ಸಾಮಾನ್ಯನಾಗಿ ಸಂನ್ಯಾಸಿಗಳನ್ನು ಸಂನ್ಯಾಸಿಯೆಂದು, ಕರ್ಮಯೋಗವನ್ನು ಅಭ್ಯಾಸ ಮಾಡುತ್ತಿರುವ ಗೃಹಸ್ಥನಿಗೆ ಯೋಗಿ ಎನ್ನುತ್ತೇವೆ. ಸಂನ್ಯಾಸಿಯ ಮುಖಲಕ್ಷಣ ವೈರಾಗ್ಯ. ಕರ್ಮಫಲ ಬಿಟ್ಟು ಕರ್ಮ ಮಾಡುವವನಲ್ಲಿ ಸಂನ್ಯಾಸಿಯಲ್ಲಿನ ತ್ಯಾಗ, ವೈರಾಗ್ಯ ಲಕ್ಷಣಗಳು ಇವನಲ್ಲಿಯೂ ಇವೆಯಾದ್ದರಿಂದ ಇವನು ಸಂನ್ಯಾಸಿ. ಯೋಗಿಯ ಮುಖ್ಯ ಲಕ್ಷಣವೆಂದರೆ ಯೋಚನೆ, ಭಾವನೆಗಳಿಂದ ಮುಕ್ತನಾಗಿರುವುದು. ಅರ್ಥಾತ್ ಮನದಲ್ಲಿ ಅತ್ಯಂತ ಉತ್ತಮ ಶಾಂತಿ ಲಭಿಸಿರಬೇಕು. ಮನಸ್ಸಿನಲ್ಲಿ ಏಳುವ ಯೋಚನೆಯ ಅಲೆಗಳನ್ನು ನಿರೋಧಿಸುವುದೇ ಯೋಗ ಎನ್ನುವನು ಪತಂಜಲಿ. ಕರ್ಮಫಲ ಬಿಟ್ಟಿರುವವನ ಮನಸ್ಸಿನಲ್ಲಿ ದ್ವಂದ್ವವಿರದೆ ಶಾಂತಿ ಸಮಾಧಾನಗಳಿಂದ ಅವನು ಇರುವನು. ಇದು ಯೋಗಿಯ ಲಕ್ಷಣವಾದ್ದರಿಂದ ಇವನೂ ಯೋಗಿಯೇ. ಕರ್ಮಫಲ ತೊರೆದು ವೈರಾಗ್ಯ ಹೊಂದಿರುವ ಕಾರಣ ಮನಸ್ಸಿನಲ್ಲಿ ಹೊಯ್ದಾಟವಿಲ್ಲದ ಶಾಂತನೇ ಸಂನ್ಯಾಸಿ ಹಾಗೂ ಯೋಗಿ ಎರಡೂ ಆಗಿದ್ದಾನೆ. ಮೇಲ್ನೋಟಕ್ಕೆ ಕಾಣುವ ನಿರಗ್ನಿ ಹಾಗೂ ಕ್ರಿಯಾರಹಿತನು ಸಂನ್ಯಾಸಿ ಹಾಗೂ ಯೋಗಿ ಎರಡೂ ಅಲ್ಲ. ಆಸೆ ಆಕಾಂಕ್ಷೆಗಳಿಲ್ಲದೆ ಕರ್ಮಫಲ ತೊರೆದು ಅಗ್ನಿಹೋತ್ರಾದಿ ಮಾಡುತ್ತಿದ್ದರೂ ಇವನೇ ಶಾಸ್ತ್ರೆೊಕ್ತದಂತೆ ನಿಜವಾದ ಸಂನ್ಯಾಸಿ, ಯೋಗಿ.

ಯಂ ಸಂನ್ಯಾಸಮಿತಿ ಪ್ರಾಹುಃ ಯೋಗಂ ತಂ ವಿದ್ಧಿ ಪಾಂಡವ |

ನ ಹ್ಯಸಂನ್ಯಸ್ತಸಂಕಲ್ಪೋ ಯೋಗೀ ಭವತಿ ಕಶ್ಚನ || 6.2

ಹಿಂದಿನ ಶ್ಲೋಕದ ಭಾವನೆಯೇ ಈ ಶ್ಲೋಕದಲ್ಲಿ ಭಿನ್ನವಾಗಿ ಬಿಂಬಿಸಲ್ಪಟ್ಟಿದೆ. ‘ಎಲೈ ಅರ್ಜುನ, ಯಾವುದನ್ನು ಸಂನ್ಯಾಸವೆಂದು ಹೇಳುವರೋ (ಶ್ರುತಿ ಸ್ಮೃಗಳನ್ನು ಬಲ್ಲವರು) ಅದನ್ನೇ ಯೋಗವೆಂದು ತಿಳಿ; ಏಕೆಂದರೆ ಸಂಕಲ್ಪವನ್ನು ತ್ಯಾಗ ಮಾಡದಿರುವ ಯಾವನೂ ಯೋಗಿಯಾಗಿರಲಾರನು.’

ಒಂದು ದೃಷ್ಟಿಯಲ್ಲಿ ಸಂನ್ಯಾಸ ಹಾಗೂ ಯೋಗ ಎರಡೂ ಬೇರೆ ಬೇರೆಯಾದುದು. ಶರೀರ ಪೋಷಣೆಗೆ ಮಾತ್ರ ಕರ್ಮ ಮಾಡುತ್ತ, ಉಳಿದೆಲ್ಲ ಕರ್ಮತ್ಯಾಗ ಮಾಡಿದವನು ಸಂನ್ಯಾಸಿ. ತಾನು ಮಾಡುವ ಕರ್ಮಗಳಲ್ಲಿ ಎಲ್ಲ ಫಲ, ಆಸೆ, ಆಕಾಂಕ್ಷೆಗಳನ್ನು ತೊರೆದವನು ಯೋಗಿ. ಸಂನ್ಯಾಸದಲ್ಲಿ ಕರ್ಮಫಲ ತ್ಯಾಗ ಮಾಡಿದ್ದರಿಂದ ಮನಸ್ಸು ಶಾಂತವಾಗಿ ಯೋಗ ಸ್ಥಿತಿಯಲ್ಲಿರುವುದು. ಆದ್ದರಿಂದ ಸಂನ್ಯಾಸವನ್ನೇ ಯೋಗವೆಂದೂ ತಿಳಿಯಬೇಕು. ಸಂನ್ಯಾಸದಲ್ಲಿ ಕರ್ಮವನ್ನು, ಫಲದ ಸಂಕಲ್ಪವನ್ನು (ಕರ್ಮದ ಉದ್ದೇಶ) ತ್ಯಾಗ ಮಾಡಬೇಕು. (ಸಂಕಲ್ಪವಿಲ್ಲದೆ ಯಾವುದೇ ಕರ್ಮ ನಡೆಯದು) ಆದರೆ ಕರ್ಮಯೋಗದಲ್ಲಿ ಫಲದ ಸಂಕಲ್ಪವನ್ನು ಮಾತ್ರ ತ್ಯಾಗ ಮಾಡಬೇಕು. ಸಂಕಲ್ಪತ್ಯಾಗವು ಸಂನ್ಯಾಸಕ್ಕೂ ಮತ್ತು ಕರ್ಮಯೋಗಕ್ಕೂ ಸಾಮಾನ್ಯವಾಗಿದೆ. ಈ ದೃಷ್ಟಿಯಿಂದ ಸಂನ್ಯಾಸವೇ ಯೋಗವೆಂದು ಹೇಳಿದೆ. ಇಲ್ಲಿ ಆಧ್ಯಾತ್ಮಿಕ ಜೀವನ ಹಾಗೂ ಮೋಕ್ಷದ ಚಿಂತನೆ ನಡೆದಿದೆ. ಸಂನ್ಯಾಸ ಹಾಗೂ ಯೋಗ ಎರಡರ ಉದ್ದೇಶವೂ ಮೋಕ್ಷವೇ ಆಗಿದೆ. ಸಂನ್ಯಾಸಿ ಅಥವಾ ಯೋಗಿಯಾಗಲು ಸಂಕಲ್ಪತ್ಯಾಗ ಅತ್ಯವಶ್ಯಕ. ಸಂಕಲ್ಪ ಬಿಡದಿದ್ದವನು ಯಾರೇ ಆದರೂ ಯೋಗಿಯಾಗಲಾರನು. ಭಗವಂತ ಇಲ್ಲಿ ಕರ್ಮಯೋಗವನ್ನು ಶ್ಲಾಘಿಸುತ್ತಿರುವನು. ಕರ್ಮಯೋಗವನ್ನು ಸಂನ್ಯಾಸದ ಮಟ್ಟಕ್ಕೇರಿಸಿದಾಗ ಸಂನ್ಯಾಸದ ಹಾಗೂ ಯೋಗದ ಬಗ್ಗೆ ಗೌರವ, ಶ್ರದ್ಧೆಗಳು ಹೆಚ್ಚುತ್ತವೆ. ಆದ್ದರಿಂದಲೇ ಪರಮಾತ್ಮ ಇಲ್ಲಿ ಸಂನ್ಯಾಸ ಹಾಗೂ ಕರ್ಮಯೋಗದಲ್ಲಿನ ಸಾಮಾನ್ಯ ಅಂಶವನ್ನು ಗುರುತಿಸಿ ತೋರಿಸುತ್ತಿದ್ದಾನೆ. ಅದೇ ಸಂಕಲ್ಪ ತ್ಯಾಗ ಅರ್ಥಾತ್ ವೈರಾಗ್ಯ. ಸಂನ್ಯಾಸದಲ್ಲಿ ಕರ್ಮವಿದೆ, ಫಲದಾಸೆಯಿಲ್ಲ. ಯೋಗದಲ್ಲಿ ಕರ್ಮವಿದೆ (ನಿಷ್ಕಾಮ) ಫಲದಾಸೆಯಿಲ್ಲ. ಇವೆರಡು ಸಂನ್ಯಾಸದ ಪ್ರತ್ಯೇಕ ದೃಷ್ಟಿಕೋನಗಳು.

ಆರುರುಕ್ಷೋಮುನೇರ್ಯೋಗಂ ಕರ್ಮ ಕಾರಣಮುಚ್ಯತೇ |

ಯೋಗಾರೂಢಸ್ಯ ತಸ್ಯೈವ ಶಮಃ ಕಾರಣಮುಚ್ಯತೇ || 6.3

‘ಯೋಗವನ್ನು ಹೊಂದಬೇಕೆಂದು ಇಚ್ಛಿಸುವ ಮುನಿಗೆ (ಕರ್ಮಯೋಗಕ್ಕೆ ಪ್ರಯತ್ನಿಸುತ್ತಿರುವವನು) ನಿಷ್ಕಾಮ ಕರ್ಮವು (ಕರ್ಮಯೋಗ) ಸಾಧನವೆಂದು ಹೇಳಲ್ಪಡುತ್ತದೆ; ಯೋಗಾರೂಢನಾದ ಆ ಮುನಿಗೆ ಶಮವು (ಕರ್ಮಪರಿತ್ಯಾಗ, ಕಾಮ್ಯಕರ್ಮಗಳು ಕಡಿಮೆಯಾದಷ್ಟೂ ಚಿತ್ತ ಸಮಾಧಾನವು ಹೆಚ್ಚುತ್ತದೆ. ) ಸಾಧನವೆಂದು ಹೇಳಲ್ಪಡುತ್ತದೆ. ’

ಯೋಗಿಯಾಗಲು ನಿಷ್ಕಾಮ ಕರ್ಮಯೋಗ, ಇದರ ಮೂಲಕ ಯೋಗಿಯಾದವನು ಜ್ಞಾನಮಾರ್ಗಕ್ಕೆ ಸಿದ್ಧನಾಗಿದ್ದಾನೆ. ಇದಕ್ಕೆ ಮನಃಶಾಂತಿಯೇ (ಸಂನ್ಯಾಸವೆಂದೂ ಹೇಳುವರು) ಕಾರಣವಾಗಿದೆ. ಇವನಿಗೆ ಸಂನ್ಯಾಸದಿಂದ, ಮತ್ತೊಬ್ಬನಿಗೆ ಕರ್ಮಯೋಗದಿಂದ ಯೋಗಾರೂಢತ್ವ ದೊರೆತಿದೆ. ಧ್ಯಾನಯೋಗದ ಮೆಟ್ಟಿಲನ್ನು ಹತ್ತಿ ಮುಂದೆ ಸಾಗಬೇಕೆಂದು ಇಚ್ಛಿಸಿದ ಸಾಧಕಯೋಗಿಯು ಮೊದಲಿಗೆ ಫಲದಾಸೆಯಿಲ್ಲದೆ ನಿಷ್ಕಾಮಕರ್ಮ ಮಾಡುವನು. ಎರಡನೆಯದಾಗಿ ತನ್ನ ಕರ್ಮವನ್ನು ಈಶ್ವರಾರ್ಪಣ ಬುದ್ಧಿಯಿಂದ ಪರಮಾತ್ಮನಿಗೆ ನೈವೇದ್ಯವೆಂದು ಅರ್ಪಣಾಭಾವದಿಂದ ಮಾಡುವನು. ಇದರಿಂದ ಮನಸ್ಸು ಶುದ್ಧವಾಗಿ ಯೋಗಾರೂಢನಾಗಿ ಮೇಲೇರಲು ಬೇಕಾದ ಶಕ್ತಿ, ಯೋಗ್ಯತೆಗಳನ್ನು ಪಡೆಯುವುದು. ಮನಸ್ಸು ಜ್ಞಾನಯೋಗಕ್ಕೆ ಸಿದ್ಧವಾಗುವುದು. ಈ ಸಾಧನೆಯಿಂದ ಯೋಗದ ಚರಮಸೀಮೆ ತಲುಪಿದವನಿಗೆ ಮುಕ್ತಿ ಪಡೆಯಲು ಜ್ಞಾನೋದಯವಾಗಲು ‘ಶಮ’ ಎಂದರೆ ಸರ್ವಕರ್ಮಸಂನ್ಯಾಸ ಮಾಡಲೇಬೇಕು. ಚಿತ್ತಶುದ್ಧಿಯಾದ ನಂತರ ಜ್ಞಾನಯೋಗದ ಸಂನ್ಯಾಸಮಾರ್ಗ ಸ್ವೀಕರಿಸಿ ತನ್ಮೂಲಕ ಮೋಕ್ಷ ಪಡೆಯಬೇಕು. ಮೊದಲನೇ ಮೆಟ್ಟಿಲು ಕರ್ಮಯೋಗ, ಎರಡನೇ ಮೆಟ್ಟಿಲು ಜ್ಞಾನಯೋಗ. ಕರ್ಮಯೋಗದಿಂದ ಮೊದಲನೆಯದಿಲ್ಲದೆ ಎರಡನೆಯದು ಸಾಧ್ಯವಿಲ್ಲ. ಇದು ಶ್ರೀಶಂಕರರ ನಿಶ್ಚಿತ ಅಭಿಮತ. ಯೋಗಾರೂಢನಾದವನು ಮುಕ್ತಿಗಾಗಿ ಸರ್ವಕರ್ಮಸಂನ್ಯಾಸ ಮಾಡಲೇಬೇಕು.

ಯದಾ ಹಿ ನೇಂದ್ರಿಯಾರ್ಥೇಷು ನ ಕರ್ಮಸ್ವನುಷಜ್ಜತೇ |

ಸರ್ವಸಂಕಲ್ಪಸಂನ್ಯಾಸೀ ಯೋಗಾರೂಢಸ್ತದೋಚ್ಯತೇ || 6.4

ಯೋಗಾರೂಢತ್ವ ದೊರೆತಿರುವ ಕಾರಣದ ವಿವರಣೆ ಈ ಶ್ಲೋಕದಲ್ಲಿದೆ. ‘ಯಾವಾಗ (ಈ ಯೋಗಿಯು) ಇಂದ್ರಿಯವಿಷಯಗಳಲ್ಲಿ (ಮತ್ತು) ಕರ್ಮಗಳಲ್ಲಿ ಆಸಕ್ತನಾಗುವುದಿಲ್ಲವೋ, ಯಾವಾಗ ಸರ್ವಸಂಕಲ್ಪಗಳನ್ನು ತ್ಯಾಗ ಮಾಡುವನೋ ಆಗ ಯೋಗಾರೂಢನೆಂದು (ಯೋಗಸಿದ್ಧಿಯನ್ನು ಪಡೆದುಕೊಂಡವನು) ಹೇಳಲ್ಪಡುತ್ತಾನೆ. ’

ಇಂದ್ರಿಯಗಳಿಗೆ ಬೇಕಾದ ವಿಷಯವಸ್ತುಗಳಲ್ಲಿ ಸಾಮಾನ್ಯವಾಗಿ ತೊಡಗುವ ಮನಸ್ಸು ಅವುಗಳನ್ನು ಅನುಭವಿಸಿ ಬಂಧನದಲ್ಲಿ ಬೀಳುವುದು. ಇದಕ್ಕೆ ವಿರುದ್ಧವಾಗಿ ಇಂತಹ ಸಂದರ್ಭಗಳಲ್ಲಿ ಮನಸ್ಸನ್ನು ತಡೆದು, ಅವುಗಳಲ್ಲಿ ಮನಸ್ಸು ಅಂಟಿಕೊಳ್ಳದಂತೆ ಮಾಡಲು ಎಲ್ಲ ಸಂಕಲ್ಪಗಳನ್ನೂ ತ್ಯಾಗಮಾಡಬೇಕು. ಒಮ್ಮೆ ಬೇಡವೆಂದದ್ದು ಮತ್ತೆ ಬರಬಹುದು. ಆದ್ದರಿಂದ ಯಾವುದು ಯಾವಾಗಲೂ ಬೇಡವೆಂಬುದೇ ಸರ್ವಸಂಕಲ್ಪತ್ಯಾಗ, ಎಂದರೆ ಆಸೆಗಳನ್ನು ಮೂಲದಲ್ಲಿಯೇ ತಡೆದು ಬಿಸಾಡುವುದು. ಸಂಕಲ್ಪವು ಅನುಭವಕ್ಕೆ ದಾರಿ, ಎಲ್ಲ ಸಂಕಲ್ಪಗಳನ್ನು ಮಾಡದಿರುವುದೇ ಅನನುಭವಕ್ಕೆ ದಾರಿಯಾಗುವುದು. ಈ ಸಾಧನೆ ಮಾಡಿದವನೇ ಯೋಗಾರೂಢನು. ಸಂಕಲ್ಪ ತ್ಯಜಿಸದಿದ್ದರೆ ಮತ್ತೆ ಮತ್ತೆ ಜಾರುವ ಸಂಭವವಿರುವುದು. ಮನಸ್ಸಿನ ಎಲ್ಲ ಕಾಮಗಳನ್ನೂ ತೊರೆದಾಗ ತಾನಾಗಿಯೇ ಕರ್ಮಸಂನ್ಯಾಸ ಬರುವುದು. ಸರ್ವಸಂಕಲ್ಪಗಳನ್ನು ತ್ಯಜಿಸುವುದರಿಂದ ಮನಸ್ಸು ಕಿಂಚಿತ್ತೂ ಅಲುಗಾಡದೆ ಶಾಂತವಾಗಿರುವುದು. ವಿಷಯವಸ್ತುಗಳ ಪ್ರವೃತ್ತಿಯನ್ನು ಗೆಲ್ಲಲು ಸಂಕಲ್ಪವನ್ನು ಗೆಲ್ಲಬೇಕು. ಜೀವನ್ಮುಕ್ತ ವಿವೇಕದಲ್ಲಿಯೂ ಇದೇ ವಿಚಾರವನ್ನು ಆಗ್ರಹಪೂರ್ವಕವಾಗಿ ಹೇಳಿರುವರು. ಸಂಕಲ್ಪ ಬಿಟ್ಟವನನ್ನೇ ದೃಢ ವೈರಾಗ್ಯಶಾಲಿಯನ್ನೇ ಯೋಗಾರೂಢನೆಂದು ಕರೆಯುವರು.

(ನಿರೂಪಣೆ: ರಾಮಾಯಣ ಸುರೇಶ್​ಕುಮಾರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net