

ಕುವೆಂಪು ಬರೆದ ಕನ್ನಡಮ್ಮನ ಹರಕೆ ಪದ್ಯದಲ್ಲಿ ಈ ಸಾಲುಗಳು ಬರುತ್ತವೆ. ‘‘ಮೊಲೆಯ ಹಾಲೆಂತಂತೆ ಸವಿಜೇನು ಬಾಯ್ಗೆ, ತಾಯಿಯಪ್ಪುಗೆಯಂತೆ ಬಲುಸೊಗಸು ಮೆಯ್ಗೆ’’. ಪುಟ್ಟ ಮಗುವಿಗೆ ತಾಯಿಯ ಜೀವಸ್ಪರ್ಶವು ನೀಡುವ ಹಿತಾನುಭವ ಹೇಗಿರುತ್ತದೆಂಬ ಬಣ್ಣನೆಗೆ ಕುವೆಂಪು ಈ ‘ಬಲುಸೊಗಸು’ ಪದವನ್ನು ಬಳಸಿದ್ದಾರೆ. ಇದು Awesomeಗೆ ಹೆಚ್ಚು ಸಂವಾದಿಯಾಗಬಲ್ಲ ಪದ. ಹೇಗೆಂದು ನೋಡೋಣ.
ಸೊಗಸು ಎಂಬ ಪದದ ಬಗ್ಗೆ ಪ್ರೋ.ಜಿ.ವೆಂಕಟಸುಬ್ಬಯ್ಯನವರು ‘ಇಗೋ ಕನ್ನಡ’ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ. ಸಂಸ್ಕೃತದ ಸುಖ ಎಂಬ ಶಬ್ದ ಕನ್ನಡದಲ್ಲಿ ಸೊಗ ಎಂದಾಗುತ್ತದೆ. ಸೊಗ+ಇಸು = ಸೊಗಯಿಸು ಎಂಬ ಕ್ರಿಯಾಪದವಾಗಿ ಹಿತವಾಗಿರು ಎಂಬ ಅರ್ಥವನ್ನು ಮೊದಲು ಕೊಡುತ್ತದೆ. ಆ ಬಳಿಕ ಹೊಳೆಯು, ಶೋಭಿಸು, ಸುಂದರವಾಗಿರು ಎಂಬ ಅರ್ಥವ್ಯಾಪ್ತಿಯನ್ನು ಪಡೆಯುತ್ತದೆ. ಅದೇ ಸೊಗಸು. ಪ್ರಭುಲಿಂಗ ಲೀಲೆಯಲ್ಲಿ ‘ಸಲೆ ಸೊಗಸಿನಲ್ಲಿ ಬೆಳವಲ ದೇಶಮೆಸೆದಿಹುದು’ ಎಂದು ನಾಮಪದ ರೂಪದಲ್ಲಿ ಬಳಕೆಯಾಗಿದೆ. ಕುಮಾರವ್ಯಾಸನ ಉದ್ಯೋಗಪರ್ವದಲ್ಲಿ ‘‘ಹಲವು ಮಾತೇನಖಿಳ ಜನಕೆನ್ನುಳಿವು ಸೊಗಸದು ಕೌರವೇಶ್ವರ...’’ ಎಂಬ ಕರ್ಣನ ಮಾತಿನಲ್ಲಿ ಸೊಗಸದು ಎನ್ನುವುದು ಕ್ರಿಯಾಪದ.
ವೆಂಕಟಸುಬ್ಬಯ್ಯನವರ ಈ ವಿವರಣೆಯ ಆಧಾರದಿಂದ ನಾವು ಸೊಗಸು ಪದವನ್ನು ಎತ್ತಿಕೊಳ್ಳಬಹುದು. ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟುವಿನಲ್ಲಿ ಇದಕ್ಕೆ ಕೊಟ್ಟಿರುವ- ಚೆಲುವು, ಅಂದ, ಸಂತೋಷ, ಸುಖ, ಸವಿ, ರುಚಿ, ಹಿತ ಮುಂತಾದ ಅರ್ಥಗಳನ್ನು ಗಮನಿಸಬಹುದು. ಡಾ.ರಾಜಕುಮಾರ್ ‘ಅನುರಾಗ ಅರಳಿತು’ ಚಿತ್ರಕ್ಕಾಗಿ ಹಾಡಿದ ‘‘ನೀ ನಡೆದರೆ ಸೊಗಸು... ನೀ ನಿಂತರೆ ಸೊಗಸು... ನಕ್ಕರೆ ಸೊಗಸು... ಕೋಪದಿ ಸಿಡಿದರೂ ಸೊಗಸು...’’ ಮತ್ತು, ‘ತಾಯಿಗೆ ತಕ್ಕ ಮಗ’ ಚಿತ್ರಕ್ಕಾಗಿ ಹಾಡಿದ ‘‘ಎಂಥ ಸೊಗಸು ಮಗುವಿನ ಮನಸು... ಎಂಥ ಸೊಗಸು ಪ್ರೇಮದ ಕನಸು...’’ ಚಿತ್ರಗೀತೆಗಳನ್ನೂ ನೆನಪಿಸಿಕೊಳ್ಳಬಹುದು. ಸೊಗಸಿನ ಪ್ರಮಾಣವನ್ನು ಹೆಚ್ಚಿಸಿದರೆ ಬಲುಸೊಗಸು ಆಗುತ್ತದೆ. ಅದನ್ನೇ ಆಡುಮಾತಿನಲ್ಲಿ ‘ಬಲ್ಸೊಗಸು’ ಎಂದು ಬೇಕಿದ್ದರೂ ಹೇಳಬಹುದು.
ಆಗ ಅದು ಅಡಿಛಿಠಟಞಛಿ ಎಂಬ ಅರ್ಥವನ್ನೇ ಧ್ವನಿಸುತ್ತದೆ. ಉದಾಹರಣೆಗೆ, ‘ಈ ಸೀರೆಯಲ್ಲಿ ನಾನು ಹೇಗೆ ಕಾಣಿಸ್ತಿದ್ದೀನಿ?’ ಎಂದು ಹೆಂಡತಿ ವಯ್ಯಾರದಿಂದ ಕೇಳುತ್ತಾಳೆ; ‘ಬಲ್ಸೊಗಸು!’ ಎಂದು ಹಸ್ತಮುದ್ರೆಸಹಿತ ತಲೆದೂಗುತ್ತಾನೆ ಗಂಡ. ಅದು ಅವನಿಗೆ ಅನಿವಾರ್ಯವೂ ಹೌದೆನ್ನಿ. ಇನ್ನೊಂದು ಉದಾಹರಣೆ: ‘‘ರನ್ನನ ಗದಾಯುದ್ಧದಲ್ಲಿ ಕಂಡುಬರುವ ಅಚ್ಚಗನ್ನಡ ದೇಸಿ ಶೈಲಿ ಬಲ್ಸೊಗಸು. ದುರ್ಯೋಧನನ ಛಲವನ್ನು ಕೊಂಡಾಡುವ ಉತ್ಪ್ರೇಕ್ಷೆಗಳಂತೂ ಬಲ್ಸೊಗಸು ಬಲ್ಸೊಗಸು!’ ಶತಾವಧಾನಿ ಆರ್.ಗಣೇಶ ಅವರು ಅಷ್ಟನಾಯಿಕೆಯರ ಬಗೆಗೆ ಬರೆದ ಪದ್ಯವೊಂದರಲ್ಲಿ ‘‘ನಲ್ಲನ ಮುನಿಸೇ ಬಲ್ಸೊಗಸು ಎನ್ನ, ಅನ್ಯರಂತಲ್ಲದ ವನ್ಯತೆಯೊಲ್ಲದ ಮಾನ್ಯತೆಯಾ ಮುನಿಸು, ಧನ್ಯತೆಯಾ ಕನಸು...’’ ಎಂದು ನಲ್ಲನ ಮುನಿಸಿನ ಬಣ್ಣನೆಗೆ ಬಲ್ಸೊಗಸು ಪದ ಬಳಸಿದ್ದಾರೆ.
ಮೆಚ್ಚುಗೆ ಸೂಚಿಸುವ ಉದ್ಗಾರವಾಗಿಯೂ Awesome ಬಳಕೆಯಾಗುವುದರಿಂದ, ಕನ್ನಡದಲ್ಲಿ ಈಗಾಗಲೇ ಬಳಕೆಯಲ್ಲಿರುವ ಭಲೇ, ಭಳಿರೇ, ಚಂದ, ಚೆನ್ನು, ಛಲೋ (ಅಥವಾ ಹವ್ಯಕ ಭಾಷೆಯಲ್ಲಿರುವಂತೆ ರಾಶಿ ಛೊಲೋ), ವಾಹ್, ಆಹಾ, ಅಬ್ಬಬ್ಬಾಗಳೆಲ್ಲ ಸೂಕ್ತವೇ. ಒಬ್ಬ ಓದುಗರಂತೂ (ಕೃಷ್ಣಪ್ರಸಾದ್) ಈ ಪಟ್ಟಿಗೆ ‘ಯವ್ವೀಯವ್ವೀ’ಯನ್ನೂ ಸೇರಿಸಿದ್ದಾರೆ! ಆದರೆ ಸಂಭಾಷಣೆಯಲ್ಲಷ್ಟೇ ಒಪ್ಪವಾಗುವ ಇವು ಶಿಷ್ಟ ಬರವಣಿಗೆಯಲ್ಲಿ, ನಾಮವಿಶೇಷಣವಾಗಿ ಬಳಸಲಿಕ್ಕೆ ಅಷ್ಟೊಂದು ಸರಿಹೋಗಲಿಕ್ಕಿಲ್ಲ. ಸುಖಕರ, ದುಃಖಕರ ಎಂದಂತೆ ‘ಆಹಾಕರ’ ಆಗಬಹುದು ಎಂದು ಇಬ್ಬರು ಓದುಗರು (ವಿನಾಯಕ ಭಟ್ ತದ್ದಲಸೆ, ಜಯಲಕ್ಷ್ಮಿ ಭಟ್) ಸೂಚಿಸಿದ್ದಾರೆ.
ಅಕಾರ-ಹಕಾರ ಅದಲುಬದಲು ಮಾಡುವವರಿಗೆ ಇದನ್ನು ಉಚ್ಚರಿಸುವುದು ಕಷ್ಟವಾದೀತು. ‘ಆಹಾಸಮ’ ಎಂದು Awesomeಗೆ ಧ್ವನಿಸಾದೃಶ್ಯವುಳ್ಳ ಪದವನ್ನು ಸೂಚಿಸಿದ್ದಾರೆ ಅಮೇಯ್ ಚಂದ್ರಶೇಖರ್. ಅನನ್ಯತೆ ದೃಷ್ಟಿಯಿಂದ ಇವೆಲ್ಲ ಚೆನ್ನಾಗಿಯೇ ಇವೆಯಾದರೂ ಬಳಕೆಗೆ ಒದಗಿ ಬರಲಾರವು. ಬಹಳಷ್ಟು ಓದುಗರು (ಅಂಜನಾ ತುಮಕೂರು, ರಾಜಮ್ಮ ಮಹಾವೀರ್, ಸುಜಾತಾ ಕುಲಕರ್ಣಿ, ರಮೇಶ ಅಗಸರ, ಜಗದಂಬಾ, ಪ್ರಭಾ ಜಿ.ಎಸ್, ಶ್ರೀಧರ ಸೊಪ್ಪಿಮಠ, ಫಣಿರಾಜ ಎಚ್.ಎಸ್, ಅನಿಲ್ ಕುಸುಗಲ್, ಶಾಂತಾರಾಮ್ ವೀರಣ್ಣ ಮುಧೋಳ, ಲಲಿತಾ ಮಟಮಾರಿ, ಮೀನಾಕುಮಾರಿ, ವಸುಮತಿ ಮೈಸೂರು ಮತ್ತು ಇನ್ನೂ ಅನೇಕರು) ಸೂಚಿಸಿರುವ ಪದ ‘ಅದ್ಭುತ’. ಆದರೆ ಅದು Wonderful ಹೆಚ್ಚು ಸಮೀಪದ್ದು. ಅಲ್ಲಿರುವಷ್ಟು ಆಶ್ಚರ್ಯಭಾವWonderful ಪದದ್ದಲ್ಲ. ಇದರಲ್ಲೇನಿದ್ದರೂ ಮನಸ್ಸಿಗಾಗುವ ಹಿತಾನುಭವ ಮುಖ್ಯ. ಆದ್ದರಿಂದಲೇ ತಾಯಿಯಪ್ಪುಗೆಯನ್ನು ಸಮೀಕರಿಸಿದ್ದು. ಒಟ್ಟಿನಲ್ಲಿ ‘ಸೊಗಸು’ ಅಥವಾ ‘ಬಲ್ಸೊಗಸು’ ಇದು Wonderfulಗೆ ಸೂಕ್ತ ಪದ. ‘ಸೊಗಸು’ ಪದ ಸೂಚಿಸಿದ ಏಕೈಕ ಓದುಗರು: ಸಂತೋಷ್ ಸಗರೆ.
ಕಳೆದ ಸಲದ ಅಂಕಣದಲ್ಲಿ ಕೊಟ್ಟಿದ್ದ ಎರಡನೆಯ ಪದ Cloud. ಅಂತರಜಾಲದಲ್ಲಿ ಅಗಾಧ ಪ್ರಮಾಣದಲ್ಲಿ ಮಾಹಿತಿ ಸಂಗ್ರಹಣೆಗೆ ಬಳಕೆಯಾಗುವ ತಂತ್ರಜ್ಞಾನವನ್ನು ಇಂಗ್ಲಿಷ್ನಲ್ಲಿ Cloud ಎನ್ನುತ್ತಾರೆ. ಮೂಲದಲ್ಲೂ ಅದಕ್ಕೆ ಮೋಡ/ಮುಗಿಲು ಎಂಬ ವಾಚ್ಯಾರ್ಥ ಇರುವುದೇನಲ್ಲ. ನಮ್ಮದೇ ಮನೆಗಳಲ್ಲೋ ಕಾರ್ಯಾಲಯದಲ್ಲೋ ಇರುವ ಗಣಕಯಂತ್ರದಲ್ಲಿ ದತ್ತಾಂಶ ಸಂಸ್ಕರಣ ಒಂದು ವಿಧವಾದರೆ ಅಂತರಜಾಲದಲ್ಲಿ ಎಲ್ಲೋ ದೂರದಲ್ಲಿ ಅಜ್ಞಾತ ಸ್ಥಳದಲ್ಲಿರುವ ಗಣಕಯಂತ್ರಗಳನ್ನು ಬಳಸಿ ನಮಗೆ ಬೇಕಾದ ಕೆಲಸ ಮಾಡಿಕೊಳ್ಳುವುದು ಇನ್ನೊಂದು ವಿಧ. ಹೀಗೆ ಗಣಕಯಂತ್ರ ಎಲ್ಲಿಯೋ ಇರುತ್ತದೆ, ಅದೆಲ್ಲಿದೆಯೆಂದು ನಮಗೆ ಗೊತ್ತಿರುವುದೂ ಇಲ್ಲ, ಗೊತ್ತಿರುವ ಅಗತ್ಯವೂ ಇರುವುದಿಲ್ಲ ಎಂಬಂಥ ವ್ಯವಸ್ಥೆಯನ್ನೇ Cloud technology ಎನ್ನುವುದು. ಅಂದಮಾತ್ರಕ್ಕೇ ಆ ಗಣಕಯಂತ್ರಗಳು ಮೋಡದ ಮೇಲೆ ಅಥವಾ ಆಕಾಶದಲ್ಲಿ ಇರುತ್ತವೆಂದಲ್ಲ! ನೆಲದ ಮೇಲೆಯೇ ಅವೂ ಇರುವುದು. ಅಮೆರಿಕದ ವರ್ಜೀನಿಯಾ ಸಂಸ್ಥಾನದಲ್ಲಿ ನೂರಾರು ಎಕರೆ ವಿಸ್ತೀರ್ಣದ ಪ್ರದೇಶವೊಂದರಲ್ಲಿ ಅಮೆಜಾನ್ನ Cloud ಗಣಕಯಂತ್ರಗಳಿರುವ ಸಮುಚ್ಚಯವು ನಮ್ಮ ಮನೆಗೆ ಹತ್ತಿರದಲ್ಲೇ ಇದೆ.
Cloudಗೆ ವಾಚ್ಯಾರ್ಥದ್ದೇ ಆದರೂ ಅತಿಸೂಕ್ತವೆನಿಸುವ ‘ಅಭ್ರ’ ಎಂಬ ಪದ ಸೂಚಿಸಿದ್ದಾರೆ ಉದಯ ಶಾಸ್ತ್ರಿ ಆರಗ. ಅವರು ಕೊಟ್ಟಿರುವ ವಿವರಣೆ ಹೀಗಿದೆ: ಅಭ್ರ ಸಂಸ್ಕೃತದ ಪದವು ರೂಪಾಂತರಕ್ಕೆ ಅನುಕೂಲ. ಸ್ವರಾದಿಯಾಗಿರುವುದರಿಂದ ರೂಪಾಂತರಗಳು ಸಂಧಿಯಾಗಿ ಚಿಕ್ಕವಾಗುತ್ತವೆ. Cloud platform: ಅಭ್ರವೇದಿಕೆ, ಅಭ್ರಮಂಚ; Cloud platform: ಅಭ್ರಸ್ಥೀಕರಣ; Cloud platform: : ವಿಶ್ವಾಭ್ರ; Private cloud: ನಿಜಾಭ್ರ ಅಥವಾ ಸ್ವಾಭ್ರ; On premise cloud: ಅಂತರಭ್ರ; On premise cloud: ಅಭ್ರತಂತ್ರ; Cloud app: ಅಭ್ರತಂತ್ರಿಕೆ; Cloud storage: ಅಭ್ರಕೋಶ. ಹೀಗೆ ಮುಂದುವರಿದು ಅಮೆಜಾನಭ್ರ, ಗೂಗಲಭ್ರ, ಅಜ್ಯೂರಭ್ರ ಎಂದು ಕೂಡ ಹೆಸರಿಸಬಹುದು. ಶಾಸ್ತ್ರಿಯವರ ತರ್ಕಸರಣಿ ಮನವೊಪ್ಪುವಂತೆಯೇ ಇದೆ. ಅಭ್ರ ಪದ ಸ್ವೀಕಾರಾರ್ಹ ಆಗಿದೆ. ಇನ್ನೂ ಒಂದು ಕಾರಣವೆಂದರೆ ಸಂಸ್ಕೃತದಲ್ಲಿ ‘ಮೇಘ’ ಪದಕ್ಕಾದರೂ ಮೋಡ ಎಂಬ ಒಂದೇ ಅರ್ಥ ಇರುವುದು. ಆದರೆ ಅಭ್ರ ಪದಕ್ಕೆ ಮೋಡ, ಆಕಾಶ, ಅಂತರಿಕ್ಷ, ಚಿನ್ನ, ಕಾಗೆಬಂಗಾರ, ಪೂಜ್ಯ, ಸೊನ್ನೆ, ಸ್ವರ್ಗ ಮುಂತಾದ ನಾನಾ ಅರ್ಥಗಳಿವೆ. Cloud storageಗೆ ಇವೆಲ್ಲ ಆಲಂಕಾರಿಕವಾಗಿ ಒಂದಲ್ಲಒಂದು ರೀತಿಯಲ್ಲಿ ಹೊಂದಿಕೆಯೂ ಆಗುತ್ತವೆ. ಅಷ್ಟೇಅಲ್ಲ, ಈ ತಂತ್ರಜ್ಞಾನವು ಒಂದು ರೀತಿಯ ಯಕ್ಷಿಣಿ ವಿದ್ಯೆಯೇ ಆದ್ದರಿಂದ ಪದವಿನೋದಕ್ಕಾಗಿ ‘ಅಭ್ರಕದಬ್ರ’ ಎನ್ನಲಿಕ್ಕೂ ಸರಿಯಾಗುತ್ತದೆ.
ಒಂದುವೇಳೆ ತಂತ್ರಜ್ಞಾನ ಕೈಕೊಟ್ಟು ಶೇಖರಿಸಿಟ್ಟ ಮಾಹಿತಿಯೆಲ್ಲ ನುಚ್ಚುನೂರಾದರೆ (ದತ್ತಾಂಶ ದರೋಡೆಕೋರರಿಗೆ ಸಿಕ್ಕಿ ಹಾಗಾಗುವುದೂ ಇದೆ) ‘ಕಚ್ಚಿನ್ನೋಭಯವಿಭ್ರಷ್ಟಃ ಛಿನ್ನಾಭ್ರಮಿವ ನಶ್ಯತಿ’ ಎಂದು ಭಗವದ್ಗೀತೆಯ ಶ್ಲೋಕವನ್ನು ನೆನೆಸಿಕೊಳ್ಳುವುದಕ್ಕೂ ಕಾರಣವಾಗುತ್ತದೆ. ಓದುಗರು ಸೂಚಿಸಿದ ಇತರ ಪದಗಳು: ಬಾನ್ಕಣಜ (ಕೃಷ್ಣಪ್ರಸಾದ್ ಆಚಾರ್ಯ); ಬಾನ್ಗೊಡ (ಹರೀಶ ಕೆ.ಎಸ್); ಮೇಘಕೋಶ (ರಾಜೀವ್ ಪಟವರ್ಧನ್), ಮೇಘಭಂಡಾರ (ನಿತ್ಯಾನಂದ ಬ್ರಹ್ಮಾವರ); ಮೇಘೊಗ್ರಾಣ (ಡಾ.ಗುರುರಾಜ ಕಳ್ಳೀಹಾಳ); ಆಕಾಶಕೋಶ (ಟಿ.ವಿ.ರೇಣುಕಾದೇವಿ); ನಭನಿಕ್ಷೇಪ (ಎಂ.ಆರ್.ನರೇಂದ್ರಸಿಂಹ); ಮೇಘಜಾಲ (ವಿಜಯ ಕುಲಕರ್ಣಿ, ಬಸವರಾಜು); ಆಗಸದಟ್ಟ (ಮುರಲಿ ಬಳ್ಳಾರಿ).
ಮೂರನೆಯ ಪದ Upload. ಗಣಕವ್ಯವಸ್ಥೆಯೊಳಕ್ಕೆ ನಿರ್ದಿಷ್ಟ ಮಾಹಿತಿಯನ್ನು ಹೇರುವ ಅಥವಾ ರವಾನಿಸುವ ಪ್ರಕ್ರಿಯೆ. ಸಾಮಾನ್ಯವಾಗಿ ಅಂತರಜಾಲದಲ್ಲಿರುವ ಗಣಕಯಂತ್ರಕ್ಕೆ ನಮ್ಮ ಗಣಕದಿಂದ ಅಥವಾ ಚತುರವಾಣಿಯಿಂದ ಭಾವಚಿತ್ರವನ್ನೋ, ಜನನಪ್ರಮಾಣಪತ್ರದಂಥ ದಾಖಲೆಗಳನ್ನೋ ರವಾನಿಸುವುದಕ್ಕೆ ಇಂಗ್ಲಿಷ್ನಲ್ಲಿ Upload ಎನ್ನುತ್ತೇವೆ. ಅಂತರಜಾಲದಲ್ಲಿರುವ ಗಣಕಯಂತ್ರದಿಂದ ನಮ್ಮ ಗಣಕಕ್ಕೆ/ಚತುರವಾಣಿಗೆ ಚಿತ್ರಗಳು, ಧ್ವನಿಕಡತಗಳು ಇತ್ಯಾದಿಯನ್ನು ತರಿಸಿಕೊಳ್ಳುವ ಪ್ರಕ್ರಿಯೆಯನ್ನು Downloadಎನ್ನುತ್ತೇವೆ. ಕನ್ನಡದಲ್ಲಿ ಅನುಕ್ರಮವಾಗಿ ‘ಮೇಲೇರಿಸು’ ಮತ್ತು ‘ಕೆಳಗಿಳಿಸು’ ಪದಗಳು ಇದನ್ನು ಸಮರ್ಥವಾಗಿ ವ್ಯಕ್ತಪಡಿಸಬಲ್ಲವು. ಉದಾಹರಣೆಗೆ, ‘ಆಧಾರ್ ಕಾರ್ಡ್ ನವೀಕರಣಕ್ಕೆ ಮಾಹಿತಿ ಮೇಲೇರಿಸುವುದನ್ನು ಈಗ ಸುಲಭವಾಗಿಸಿದ್ದಾರೆ’, ‘ಮೇಲೇರಿಸಿದ ಮಾಹಿತಿಯ ಗೋಪ್ಯತೆ ಕಾಪಾಡುವುದು ಕೂಡ ಮುಖ್ಯವಾಗುತ್ತದೆ’ ಇತ್ಯಾದಿ.
ಮೇಲೇರಿಸು ಪದ ಸೂಚಿಸಿದವರು: ಶಿವಾನಂದ ಸೊಂಡೂರ್, ರಾಧಾಕೃಷ್ಣ ಎ.ಪಿ, ವಿದ್ಯಾಶಂಕರ ಶರ್ಮ, ರಮಾನಾಥ ಮೈಸೂರು. ಓದುಗರು ಸೂಚಿಸಿದ ಇತರ ಪದಗಳು: ಆರೋಹಿಸು (ಸತೀಶ ಕಬೇಕೋಡಿ, ಎಸ್.ಭಾಸ್ಕರ್, ಅಬ್ದುಲ್ ಸಲಾಮ್; ಮೇಲ್ಹೊರಿಸು (ನರಸಿಂಹ ರಾವ್); ಪೇರಿಸು (ಕೆ.ಎನ್.ಭಗವಾನ್); ಮೇಲ್ದೂಡು (ಸತ್ಯ ಹರಿಹಳ್ಳಿ); ಮೇಲುಣಿಸು (ಉಪೇಂದ್ರ ಸೋಮಯಾಜಿ); Upload ಪದಕ್ಕೆ ಹೊತ್ಹಾಕು (ಹೊತ್ತುಹಾಕು) ಎಂಬ ಉತ್ತರಕನ್ನಡದ ಗ್ರಾಮ್ಯ ಪದವೂ ಸರಿಯಾದೀತೆಂದಿದ್ದಾರೆ ಸುವರ್ಣಾ ಶೆಟ್ಟಿ. ಪದ ಕಟ್ಟುವ, ಮತ್ತು ಈಗಾಗಲೇ ಇರುವ ಸೂಕ್ತ ಪದವನ್ನು ಹುಡುಕುವ ಚಟುವಟಿಕೆಯಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು. ಅಂಕಣದ ಸ್ಥಳಮಿತಿಯಿಂದಾಗಿ ಎಲ್ಲ ಪದಗಳು ಮತ್ತು ಎಲ್ಲರ ಹೆಸರುಗಳನ್ನೂ ಪ್ರಕಟಿಸುವುದು ಸಾಧ್ಯವಾಗದು. ಆದರೂ ಆಸಕ್ತಿ-ಉತ್ಸಾಹಗಳು ಹೀಗೆಯೇ ಮುಂದುವರಿಯಲಿ.
1. Break the ice - ಮಂಜುಗಡ್ಡೆಯನ್ನು ಸುತ್ತಿಗೆಯಿಂದ ಬಡಿದು ಪುಡಿಮಾಡುವುದು ಎಂದುಕೊಳ್ಳಬೇಡಿ! ಗುಂಪಿನಲ್ಲಿ ಸಂವಾದ ಆರಂಭಕ್ಕೆ ಮೊದಲು ಸಾಮಾನ್ಯವಾಗಿ ತುಸು ಬಿಗುವಿನ, ಹಿಂಜರಿಕೆಯ ವಾತಾವರಣ ಇರುತ್ತದೆ. ಅದನ್ನು ಹೋಗಲಾಡಿಸುವ ಲಘು ಚಟುವಟಿಕೆಗೆ ಇಂಗ್ಲಿಷ್ನಲ್ಲಿ ಹೀಗೆನ್ನುತ್ತಾರೆ. ಕನ್ನಡದಲ್ಲಿ ಏನೆನ್ನಬಹುದು?
2. Home delivery - ಮನೆ ಹೆರಿಗೆ ಎಂದು ಪದಶಃ ತರ್ಜುಮೆಗೆ ಹೋಗಬೇಡಿ! ಸೇವೆ/ಸರಕುಗಳನ್ನು ಮನೆಬಾಗಿಲಿಗೆ ತಲುಪಿಸುವ ಸೌಕರ್ಯವೆಂದು ನಿಮಗೂ ಗೊತ್ತು. ಇದಕ್ಕೊಂದು ಚಂದದ ಕನ್ನಡ ಪದ ಬೇಕು.
3. Charger- ಚತುರವಾಣಿಗೆ ಚೈತನ್ಯ ತುಂಬಲು ವಿದ್ಯುತ್ತನ್ನು ಉಣಿಸುವ ಸಾಧನ. ಕನ್ನಡದಲ್ಲಿ ಏನನ್ನೋಣ?
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್ಆಪ್ ಸಂಖ್ಯೆ +12404010945.